
ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ತಿಥಿ ಫಿಲಂನಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆಯುವ ಮೂಲಕ ಗಡ್ಡಪ್ಪ ಎಂದೇ ಖ್ಯಾತಿ ಗಳಿಸಿದ್ದ ಚನ್ನೇಗೌಡ ಇಂದು ನಿಧನರಾಗಿದ್ದಾರೆ.
ಅಂತಾರಾಷ್ಟ್ರೀಯ ಪ್ರಶಸ್ತಿ ವಿಜೇತ ಸಿನಿಮಾ ತಿಥಿ ಫಿಲಂನಲ್ಲಿ ತಮ್ಮ ಮನೋಜ್ಞ ಅಭಿನಯದ ಮೂಲಕ ಗಮನ ಸೆಳೆಯುವ ಮೂಲಕ ಗಡ್ಡಪ್ಪ ಎಂದೇ ಖ್ಯಾತಿ ಗಳಿಸಿದ್ದ ಚನ್ನೇಗೌಡ ಇಂದು ನಿಧನರಾಗಿದ್ದಾರೆ. ಮೃತರಿಗೆ 89 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಗಳನ್ನು ಹೊಂದಿದ್ದ ಗಡ್ಡಪ್ಪ ಇಂದು ಚಿಕಿತ್ಸೆ ಫಲಕಾರಿಯಾಗದೇ ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ್ದಾರೆ.
ಮಂಡ್ಯ ಜಿಲ್ಲೆ ನೊದೆಕೊಪ್ಪಲು ಗ್ರಾಮದ ನಿವಾಸಿಯಾಗಿದ್ದ ಚನ್ನೇಗೌಡರು ಅಸ್ತಮಾ ಮತ್ತು ಹೃದಯ ಸಂಬಂಧಿ ಕಾಯಿಲೆಗಳಿಂದ ಬಳಲುತ್ತಿದ್ದರು ಎನ್ನಲಾಗಿದೆ. ಅಲ್ಲದೇ ಕೆಲವು ದಿನಗಳ ಹಿಂದಷ್ಟೇ ಜಾರಿಬಿದ್ದಿದ್ದ ಚನ್ನೇಗೌಡರಿಗೆ ಸೊಂಟಕ್ಕೆ ಪೆಟ್ಟಾಗಿತ್ತು. ಇಂದು ತಮ್ಮ ಸ್ವಗ್ರಾಮದಲ್ಲಿಯೇ ಚನ್ನೇಗೌಡರು ನಿಧನ ಹೊಂದಿದ್ದಾರೆ. ಈ ಬಗ್ಗೆ ಚನ್ನೇಗೌಡರ ಸುಪುತ್ರಿ ಮಾಹಿತಿ ನೀಡಿದ್ದು ಇಂದು ಸಂಜೆ ಅವರ ಸ್ವಗ್ರಾಮದಲ್ಲಿಯೇ ಅಂತಿಮ ವಿಧಿವಿಧಾನಗಳು ನೆರವೇರಲಿದೆ.
ತಿಥಿ ಸಿನಿಮಾದ ಮೂಲಕ ಚಿತ್ರರಂಗದಲ್ಲಿ ಖ್ಯಾತಿ ಗಳಿಸಿದ್ದ ಚನ್ನೇಗೌಡರು ಗಡ್ಡಪ್ಪ ಎಂದೇ ಪ್ರತೀತಿ ಪಡೆದಿದ್ದರು. ಜಾನಿ ಮೇರಾ ನಾಮ್, ತರ್ಲೇ ವಿಲೇಜ್, ಹಳ್ಳಿ ಪಂಚಾಯ್ತಿ ಸೇರಿದಂತೆ ತಮ್ಮ ಇಳಿ ವಯಸ್ಸಿನಲ್ಲಿ ಒಟ್ಟೂ 8 ಸಿನಿಮಾಗಳಿಗೆ ಗಡ್ಡಪ್ಪ ಖ್ಯಾತಿಯ ಚನ್ನೇಗೌಡರು ಬಣ್ಣ ಹಚ್ಚಿದ್ದಾರೆ. ಗಡ್ಡಪ್ಪ ಅವರ ನಟನೆಯ ತಿಥಿ ಸಿನಿಮಾ ರಾಷ್ಟ್ರ ಅಂತಾರಾಷ್ಟ್ರೀಯ ಮಟ್ಟದ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದೆ. ಚನ್ನೇಗೌಡರ ನಿಧನಕ್ಕೆ ಕನ್ನಡ ಚಿತ್ರರಂಗ ಹಾಗೂ ಅವರ ಅಭಿಮಾನಿ ಬಳಗ ಸಂತಾಪ ಸೂಚಿಸಿದೆ.



