ಕಾರವಾರದ ಹಣಕೋಣ ಉದ್ಯಮಿ ವಿನಾಯಕ್ ನಾಯ್ಕ ಹತ್ಯೆ ಪ್ರಕರಣದಲ್ಲಿ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಪ್ರಮುಖ ಆರೋಪಿ ಗೋವಾದಲ್ಲಿಆತ್ಮಹತ್ಯೆ ಮಾಡಿಕೊಂಡಿದ್ದು, ಕುಟುಂಬದಲ್ಲಿನ ದ್ವೇಷಕ್ಕೆ ಎರಡು ಜೀವಗಳು ಬಲಿಯಾಗಿವೆ.
ಉತ್ತರ ಕನ್ನಡಜಿಲ್ಲೆಯ ಕಾರವಾರದ ಹಣಕೋಣದಲ್ಲಿ ಪುಣೆಯ ಉದ್ಯಮಿಯ ಭೀಕರ ಕೊಲೆ ನಡೆದ ಮೂರು ದಿನದಲ್ಲಿ ಖಾಕಿ ಪಡೆ ಆರೋಪಿಗಳ ಬೇಟೆಯಾಡಿದೆ. ಬಿಹಾರದ ಮೆಹೆಂದರ್ ಪುರ್ನ ಅಜ್ಮಲ್ ಜಾಬಿರ್ ,ಮಾಸುಮ್ ಮಂಜೂರ್ ,ಅಸ್ಸಾಂನ ಬರುವದಾಲ್ನಿ ಲಕ್ಷ್ ಜ್ಯೋತಿನಾಥ್ ಆರೋಪಿಗಳಾದರೆ ಪ್ರಮುಖ ಆರೋಪಿ ಉದ್ಯಮಿ ಗುರುಪ್ರಸಾದ್ ರಾಣೆ ಗೋವಾದಲ್ಲಿ ಮಾಂಡವಿ ನದಿಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಅಧಿಕಾರಿ ಎಂ.ನಾರಾಯಣ್ ಮಾಹಿತಿ ನೀಡಿದ್ದಾರೆ.
ಘಟನೆ ಏನು?
ಪುಣೆಯ ಉದ್ಯಮಿ ವಿನಾಯಕ ನಾಯ್ಕ ಹಾಗೂ ಗೋವಾದ ಉದ್ಯಮಿ ಗುರುಪ್ರಸಾದ್ ರಾಣೆ ಮೂಲತಃ ಕಾರವಾರದವರಾಗಿದ್ದು ಇಬ್ಬರೂ ಸಂಬಂಧಿಕರಾಗಿದ್ದರು. ಆದರೇ ಕೌಟುಂಬಿಕ ಕಲಹ ಇಬ್ಬರ ದಾಂಪತ್ಯ ಕೆಡುವಂತೆ ಮಾಡಿತ್ತು. ಇದಲ್ಲದೇ ವಿನಾಯಕ್ ನಾಯ್ಕ ಪತ್ನಿ ವೃಷಾಲಿಗೆ ವಿಚ್ಛೇದನ ನೀಡುವ ಹಂತಕ್ಕೆ ಹೋಗಿದ್ದು ಹಿರಿಯರ ಮಧ್ಯಸ್ಥಿಕೆಯಲ್ಲಿ ಸರಿಯಾಗಿತ್ತು.
ಆದರೆ ಈ ಕೌಟುಂಬಿಕ ಜಗಳ ಗೋವಾ ಉದ್ಯಮಿ ಗುರುಪ್ರಸಾದ್ ರಾಣೆಯ ಬದುಕನ್ನು ಹಾಳುಗೆಡಿಸಿತ್ತು. ಹೀಗಾಗಿ ಕಳೆದ ಆರು ತಿಂಗಳಿಂದ ತನ್ನ ಬಂಟರ ಮೂಲಕ ಹತ್ಯೆಗೆ ಸಂಚು ರೂಪಿಸಿದ್ದು, ತಾಯಿಯ ಶ್ರಾದ್ಧ ಹಾಗೂ ಊರಿನ ದೇವರ ಉತ್ಸವಕ್ಕೆ ಆಗಮಿಸಿದ್ದ ವಿನಾಯಕ್ ನಾಯ್ಕ ಮರಳಿ ಪುಣೆಗೆತೆರಳಲು ಸಿದ್ದರಾಗಿದ್ದಾಗ ಸೆ.22 ಭಾನುವಾರ ಮುಂಜಾನೆ ಸ್ವಿಫ್ಟ್ ಕಾರಿನ ಮೂಲಕ ಬಂದ ಮೂರು ಜನ ಮುಸುಕುದಾರಿಗಳು ಮನೆಗೆ ನುಗ್ಗಿ ಮಚ್ಚು ಮತ್ತು ರಾಡ್ನಿಂದ ವಿನಾಯಕ್ ನಾಯ್ಕ ಹತ್ಯೆ ಮಾಡಿದರು. ತಡೆಯಲು ಬಂದ ಆತನ ಪತ್ನಿ ವೃಷಾಲಿಗೆ ತಲೆಗೆ ರಾಡ್ನಿಂದ ಹೊಡೆದು ಹಲ್ಲೆ ಮಾಡಿ ಪರಾರಿಯಾಗಿದ್ದರು.
ಇದೀಗ ಮುಖ್ಯ ಆರೋಪಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಕೌಟುಂಬಿಕ ಕಲಹ ಇರುವುದರಿಂದ ಹಲವು ಆಯಾಮಗಳಲ್ಲಿ ತನಿಖೆ ಮುಂದುವರೆದಿದೆ ಎಂದು ಎಸ್ಪಿ ಎಂ.ನಾರಾಯಣ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.
ಕಾರ್ಕಳ:ಕ್ರೈಸ್ಟ್ ಕಿಂಗ್ ನಲ್ಲಿ ರಾಷ್ಟ್ರೀಯ ಹಿಂದಿ ದಿನಾಚರಣೆ
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರೀಯ ಹಿಂದಿ ದಿನಾಚರಣೆಯನ್ನು ಆಚರಿಸಲಾಯಿತು. ಹಿರಿಯಡ್ಕ ಸರಕಾರಿ ಪದವಿಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ಹಿಂದಿ ಶಿಕ್ಷಕ ಡಾ. ರವೀಂದ್ರ ಕುಮಾರ್ ಅವರು ಮುಖ್ಯ ಅತಿಥಿಗಳಾಗಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಈ ದೇಶದಲ್ಲಿ ಎಲ್ಲಾ ಭಾಷೆಗಳು ಶ್ರೇಷ್ಟವೇ, ಆದ್ದರಿಂದ ಭಾಷೆಗಳನ್ನು ದ್ವೇಷಿಸದೆ ಪ್ರೀತಿಸಬೇಕು. ಹಿಂದಿ ದೇಶದ ಪ್ರಮುಖ ಭಾಷೆಯಾದ ಕಾರಣ ಅದರ ಕಲಿಕೆಯ ಕಡೆಗೂ ಒತ್ತನ್ನು ನೀಡಬೇಕು” ಎಂದು ಹೇಳಿ ಹಿಂದಿ ಭಾಷೆ ಹುಟ್ಟಿ ಬೆಳೆದು ಬಂದ ರೀತಿ, ಹಿಂದಿಯ ಪ್ರಾಮುಖ್ಯತೆ, ಜೀವನದಲ್ಲಿ ಹಿಂದಿ ಭಾಷೆ ಅಳವಡಿಕೆಯ ಅಗತ್ಯತೆಗಳ ಕುರಿತು ತಿಳಿ ಹೇಳಿದರು.
ವೇದಿಕೆಯಲ್ಲಿ ಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಿದವು. ಹಿಂದಿ ಉಪನ್ಯಾಸಕಿ ಶ್ರೀಮತಿ ಶಾಹಿನಾ ಬಾನು ಅತಿಥಿಗಳನ್ನು ಪರಿಚಯಿಸಿದರೆ ಹಿಂದಿ ಶಿಕ್ಷಕಿ ಶಮೀನಾ ಅಮೀರ್ ಸ್ವಾಗತಿಸಿದರು. ಒಂಬತ್ತನೇ ತರಗತಿಯ ವಿದ್ಯಾರ್ಥಿನಿಯರಾದ ಲೆನಿಷಾ ಮಸ್ಕರೇನ್ಹಸ್ ಕಾರ್ಯಕ್ರಮ ನಿರೂಪಿಸಿ, ಝುಬೇದ ವಂದಿಸಿದರು.
ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿ(ರಿ.) ನಿಟ್ಟೆ, ಇದರ ವತಿಯಿಂದ ಸಮಾಜ ಕಲ್ಯಾಣಾರ್ಥವಾಗಿ ಶ್ರೀ ವಿಶ್ವಕರ್ಮ ಪೂಜಾ ಮಹೋತ್ಸವವು ಶ್ರೀ ಕಾಳಿಕಾಂಬಾ ಮಹಿಳಾ ಸೇವಾ ಸಮಿತಿ ಹಾಗೂ ವಿಶ್ವಕರ್ಮ ಯುವವೇದಿಕೆ ನಿಟ್ಟೆ ಇವರ ಸಹಭಾಗಿತ್ವದಲ್ಲಿ ನಿಟ್ಟೆ ಪ್ರಾಥಮಿಕ ಶಾಲೆಯ ನಿಟ್ಟೆ ರುಕ್ಮಿಣಿ ಅಡ್ಯಂತಾಯ ಸ್ಮಾರಕ ಸಭಾಭವನದಲ್ಲಿ, ಬೋಳಾ ಮಂಜುನಾಥ ಪುರೋಹಿತರ ಪೌರೋಹಿತ್ಯದಲ್ಲಿ, ಸಮಾರಂಭದ ಮುಖ್ಯ ಅತಿಥಿಗಳಾದ ಉಡುಪಿ ಹಾಗೂ ದ.ಕ ಜಿಲ್ಲೆಗಳ ವಿಶ್ವಕರ್ಮ ಒಕ್ಕೂಟದ ಅಧ್ಯಕ್ಷರಾದ ಮಧು ಆಚಾರ್ಯ ಮುಲ್ಕಿ ಹಾಗೂ ಅಖಿಲ ಕರ್ನಾಟಕ ವಿಶ್ವಕರ್ಮ ಸಮಾಜ ಮಂಗಳೂರು ವಿಭಾಗದ ಮಹಿಳಾ ಅಧ್ಯಕ್ಷರಾದ ಶ್ರೀಮತಿ ಆಶಾ ಉಮೇಶ್ ಗುರೂಜಿ ಉಪಸ್ಥಿತಿಯಲ್ಲಿ, ಸಮಿತಿಯ ಅಧ್ಯಕ್ಷರಾದ ಹರ್ಷವರ್ಧನ್ ಆಚಾರ್ಯ ನಿಟ್ಟೆ ಇವರ ಅಧ್ಯಕ್ಷತೆಯಲ್ಲಿ ವಿಜೃಂಭಣೆಯಿಂದ ನೆರವೇರಿತು. ಸಮಾರಂಭದಲ್ಲಿ ಖ್ಯಾತ ವಾಗ್ಮಿ, ಸಾಮಾಜಿಕ ಚಿಂತಕರು, ಬಹುಬೇಡಿಕೆಯ ನಿರೂಪಕರಾದ ಎನ್. ಆರ್. ದಾಮೋದರ ಶರ್ಮಾ ಬಾರ್ಕೂರು ಹಾಗೂ ನಿಟ್ಟೆ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿಯಾಗಿರುವ ಶ್ರೀಮತಿ ಪಿ. ಎನ್. ಶೋಭಾ ಆಚಾರ್ಯ ಇವರಿಗೆ “ಪ್ರೇರಣಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಸಮಿತಿಯ ವತಿಯಿಂದ 58 ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು. ನಿಟ್ಟೆ ವಿಶ್ವಕರ್ಮ ಸಂಘದ ಜೊತೆ ಸಮಾಜ ಸೇವೆಯಲ್ಲಿ ಕೈ ಜೋಡಿಸಿರುವ ಕೆಮ್ಮಣ್ಣು ತೆಂಕುಮನೆ ಶ್ರೀಮತಿ ರತ್ನಾವತಿ ಮತ್ತು ಶ್ರೀ ಮೋನಯ್ಯ ಆಚಾರ್ಯ ಇವರ ಸ್ಮರಣಾರ್ಥ ಇವರ ಮೊಮ್ಮಕ್ಕಳಿಂದ ಇಬ್ಬರು ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ “ವಿದ್ಯಾ ರತ್ನ” ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಪಾಲ್ಕೆ ಬಾಬುರಾಯ ಆಚಾರ್ಯ, ಅಣ್ಣಯ್ಯ ಆಚಾರ್ಯ, ಹರೀಶ್ಚಂದ್ರ ಮಾಸ್ಟ್ರ ಸದ್ವಿಚಾರಗಳನ್ನು ಉಲ್ಲೇಖ ಮಾಡಿ ದಾಮೊದರ ಶರ್ಮಾರು ನೀಡಿದ ಅದ್ಭುತ ಉಪನ್ಯಾಸ ನೆರೆದಿದ್ದ ಜನ ಸಮೂಹವನ್ನು ಮಂತ್ರ ಮುಗ್ದಗೊಳಿಸಿತು. ವಿಶ್ವಕರ್ಮ ಒಕ್ಕೂಟದ ಅಧ್ಯಕ್ಶರಾದ ಮಧು ಆಚಾರ್ಯರು ಮಾತನಾಡಿ ನಿಟ್ಟೆ ಸಮಿತಿಯವರು ವಿಶ್ವಕರ್ಮ ಪೂಜೆಯನ್ನು ಕೇವಲ ವಿಶ್ವಕರ್ಮರಿಗೆ ಸೀಮಿತವಾಗಿರಿಸದೆ, ಸಾರ್ವಜನಿಕರನ್ನು ಒಗ್ಗೂಡಿಸಿ ವಿಶ್ವಕರ್ಮ ಪೂಜೆಯನ್ನು ಮಾಡಿ ತೋರಿಸಿದ್ದಾರೆ, ಇದು ನಮ್ಮ ಎಲ್ಲರಿಗೂ ಮಾದರಿಯಾಗಿದೆ, ಎಲ್ಲದರಲ್ಲೂ ಹೊಸ ತನವನ್ನು ತರುವಲ್ಲಿ ಮುಂಚೂಣಿಯಲ್ಲಿರುವ ಸಂಘ ಎಂದರೆ ನಿಟ್ಟೆ ಸಂಘ ಎಂದು ನಿಟ್ಟೆ ಸಂಘದ ಕಾರ್ಯಕ್ಷಮತೆಗೆ ಮೆಚ್ಚುಗೆ ವ್ಯಕ್ತಪಡಿಸಿ, ಇದೇ ರೀತಿ ನಾವೆಲ್ಲರೂ ಒಗ್ಗಟ್ಟಾಗಿದ್ದು ಸನಾತನ ಧರ್ಮವನ್ನು ಉಳಿಸಬೇಕು ಹಿಂದೂ ಧರ್ಮವನ್ನು ಬೆಳೆ ಬೇಕು ಎಂದರು. ಸಮಿತಿಯ ಅಧ್ಯಕ್ಷರಾದ ಶ್ರೀ ಹರ್ಷವರ್ಧನ್ ಆಚಾರ್ಯ,ನಿಟ್ಟೆ ಮಾತನಾಡಿ ಸಮಿತಿಯ ಯಶಸ್ಸು ಒಬ್ಬ ಅಧ್ಯಕ್ಷ ಅಥವಾ ಕಾರ್ಯದರ್ಶಿಯ ಶ್ರಮದ ಫಲ ಮಾತ್ರ ಆಗಲು ಸಾಧ್ಯವಿಲ್ಲ, ಇದು ಎಲ್ಲಾ ಸದಸ್ಯರ ಶ್ರಮದ ಫಲ, ಸಮಾಜ ಸೇವೆಯೇ ನಿಟ್ಟೆ ವಿಶ್ವಕರ್ಮ ಸಂಘದ ಮುಖ್ಯ ಉದ್ದೇಶ, ಸಮಾಜ ಸೇವೆಯ ಸ್ಪಷ್ಟ ಗುರಿಯಿದೆ, ಬಡವ ಶ್ರೀಮಂತನೆಂಬ ಬೇಧವಿಲ್ಲ ಇಲ್ಲಿ ಸಮಾನತೆಯ ತತ್ವವಿದೆ, ಸಂಘದ ವ್ಯವಹಾರಗಳಲ್ಲಿ ನೂರು ಶೇಕಡಾ ಪಾರದರ್ಶಕತೆ ಇದೆ, ಮಿತ್ರ ಸಮುದಯಗಳೊಂದಿಗೆ ಸೌಹರ್ದತೆಯ ನಂಟಿದೆ ಇದೇ ನಮ್ಮ ಸಂಘದ ಶಕ್ತಿ, ಈ ಎಲ್ಲಾ ಕಾರಣಕ್ಕೆ ನಿಟ್ಟೆ ವಿಶ್ವಕರ್ಮ ಸಂಘ ಯಶಸ್ಸಿನ ಹಾದಿಯಲ್ಲಿದೆ ಎಂದರು.
ವಿಶ್ವಕರ್ಮ ಒಕ್ಕೂಟದ ಕೋಶಾಧಿಕಾರಿ ಜನಾರ್ಧನ ಎಸ್. ಆಚಾರ್ಯ, ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀ ಸತೀಶ್ ಆಚಾರ್ಯ, ನೆಕ್ಲಾಜೆ ಕಾಳಿಕಾಂಬಾ ದೇವಸ್ಥಾನದ ಮೊಕ್ತೇಸರುಗಳಾದ ಶ್ರೀ ರಾಮಚಂದ್ರ ಆಚಾರ್ಯ, ಶ್ರೀ ರವಿ ಆಚಾರ್ಯ, ಶ್ರಿ ಸುರೇಶ್ ಆಚಾರ್ಯ ನಿಟ್ಟೆ, ಶ್ರೀ ಹರೀಶ್ ಆಚಾರ್ಯ ನೆಲ್ಲಿಕಾರು, ಸಮಿತಿಯ ಗೌರವಾಧ್ಯಕ್ಷರಾದ ಶ್ರೀ ವಿಶ್ವನಾಥ ಆಚಾರ್ಯ ನಿಟ್ಟೆ, ಉಪಾಧ್ಯಕ್ಷರಾದ ಶ್ರೀ ಈಶ್ವರ್ ಬಡಿಗೇರ, ಶ್ರೀ ಕಾಳಿಕಾಂಬಾ ಮಹಿಳಾ ಸಮಿತಿಯ ಅಧ್ಯಕ್ಷರಾದ ಶ್ರೀಮತಿ ವತ್ಸಲಾ ಉಮೇಶ ಆಚಾರ್ಯ, ಗೌರವಾಧ್ಯಕ್ಷರಾದ ಶ್ರೀಮತಿ ವೀಣಾ ದಿವಾಕರ ಆಚಾರ್ಯ, ಉಪಾಧ್ಯಕ್ಷರಾದ ಶ್ರೀಮತಿ ಉದಯ ಸುಧಾಕರ ಆಚಾರ್ಯ, ಹಾಗೂ ಕಾರ್ಯದರ್ಶಿ ಆಶಾ ಜಯಾನಂದ ಆಚಾರ್ಯ, ವಿಶ್ವಕರ್ಮ ಯುವವೇದಿಕೆಯ ಅಧ್ಯಕ್ಷರಾದ ಶ್ರೀ ಪ್ರದೀಪ್ ಆಚಾರ್ಯ ಪರಪ್ಪಾಡಿ, ಉಪಾಧ್ಯಕ್ಷರಾದ ಸುಧೀರ್ ಆಚಾರ್ಯ ಕಲ್ಯಾ ಹಾಗೂ ವಿವಿಧ ವಿಶ್ವಕರ್ಮ ಸಂಘಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
ಶ್ರೀ ವಿಶ್ವಕರ್ಮ ಬ್ರಾಹ್ಮಣ ಸೇವಾ ಸಮಿತಿಯ ಕೋಶಾಧಿಕಾರಿ ಶ್ರೀ ಜಯಾನಂದ ಸ್ವಾಗತಿಸಿದರು, ಕಾರ್ಯದರ್ಶಿ ಶ್ರೀಧರ ಆಚಾರ್ಯ ಕೆಮ್ಮಣ್ಣು ವಾರ್ಷಿಕ ವರದಿಯನ್ನು ವಾಚಿಸಿದರು. ಪ್ರಸಾದ್ ಆಚಾರ್ಯ, ಕುಮಾರಿ ಶ್ರೇಯಾ, ಸೃಜಾ ಕಾರ್ಯಕ್ರಮ ನಿರೂಪಿಸಿದರು. ಶ್ರೀ ದಿವಾಕರ ಆಚಾರ್ಯ ಕೆಮ್ಮಣ್ಣು ವಂದಿಸಿದರು. ಧಾರ್ಮಿಕ ಸಭಾ ಕಾರ್ಯಕ್ರಮದ ಬಳಿಕ ಅನ್ನಸಂತರ್ಪಣೆ ಬಳಿಕ ನಿಟ್ಟೆ ಸಮಿತಿಯ ಯುವ ಕಲಾವಿದ ಪ್ರದೀಪ್ ಆಚಾರ್ಯ ಕೆಮ್ಮಣ್ಣು ಇವರ ಮೆಲೋಡಿ ಮ್ಯೂಸಿಕಲ್ ತಂಡ ಹಾಗೂ ಸಮಾಜ ಬಾಂಧವರಿಂದ ವಿವಿಧ ಮನೋರಂಜನೆಯ ಕಾರ್ಯಕ್ರಮಗಳೊಂದಿಗೆ ಸಂಜೆ 7 ಗಂಟೆಗೆ ಸಮಾರಂಭ ಸಂಪನ್ನಗೊಂಡಿತು.
ಕಾರ್ಕಳ:ಬಾಲ್ ಬ್ಯಾಡ್ಮಿಂಟನ್-ಎಸ್ ವಿ ಟಿ ಕನ್ನಡ ಮಾಧ್ಯಮ ಪ್ರೌಢಶಾಲೆಯ ಭಾರತಿ, ಜ್ಯೋತಿ, ಭೂಮಿಕಾ ವಿಭಾಗ ಮಟ್ಟಕ್ಕೆ ಆಯ್ಕೆ
ಶಾಲಾ ಶಿಕ್ಷಣ ಇಲಾಖೆ ಹಾಗೂ ವಿದ್ಯೇಶ ವಿದ್ಯಾಮಾನ್ಯ ನ್ಯಾಷನಲ್ ಹೈಸ್ಕೂಲ್ ಹೆರಾಡಿ ಇಲ್ಲಿ ನಡೆದ ಜಿಲ್ಲಾಮಟ್ಟದ ಪ್ರೌಢಶಾಲಾಬಾಲಕ – ಬಾಲಕಿಯರ ಬಾಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕಾರ್ಕಳದ ಎಸ್ ವಿ ಟಿ ವನಿತಾ ಪದವಿ ಪೂರ್ವ ಕಾಲೇಜಿನ ಕನ್ನಡ ಮಾಧ್ಯಮದ ಪ್ರೌಢಶಾಲೆಯ ಬಾಲಕಿಯರ ತಂಡ ದ್ವಿತೀಯ ಸ್ಥಾನವನ್ನು ಪಡೆದು ಕೊಂಡಿರುತ್ತಾರೆ.
ಈ ತಂಡದ ಬೆಸ್ಟ್ ಪ್ಲೇಯರ್ ಹತ್ತನೇ ತರಗತಿಯ ಭಾರತಿ, ಜ್ಯೋತಿ ಭೂಮಿಕಾ ವಿಭಾಗ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ.ಕ್ರೀಡಾಪಟುಗಳಿಗೆ ಕಾಲೇಜಿನ ದೈಹಿಕ ಶಿಕ್ಷಣ ಶಿಕ್ಷಕಿ ಪ್ರಿಯಾ ಪ್ರಭು ಹಾಗೂ ಕೋಚ್ ಕೀರ್ತನ್, ಶ್ರವಣ್ ,ಕುಮಾರಿ ಶ್ವೇತಾ ತರಬೇತಿ ನೀಡಿರುತ್ತಾರೆ.
ಸಾಧನೆಗೈದ ವಿದ್ಯಾರ್ಥಿಗಳನ್ನು ಕಾಲೇಜಿನ ಆಡಳಿತ ಮಂಡಳಿ, ಪ್ರಾಚಾರ್ಯರು ಹಿರಿಯ ಸಹ ಶಿಕ್ಷಕರು ಹಾಗೂ ಸಿಬ್ಬಂದಿ ವರ್ಗದವರು ಅಭಿನಂದಿಸಿರುತ್ತಾರೆ.
ಕಾರ್ಕಳ: ಶಟಲ್ ಬ್ಯಾಡ್ಮಿಂಟನ್ನಲ್ಲಿ ಕ್ರೈಸ್ಟ್ ಕಿಂಗ್ ನ ಕಿಯೋರಾ ಪಾಯಸ್ ಸತತ ಮೂರನೇ ಬಾರಿ ರಾಜ್ಯಮಟ್ಟಕ್ಕೆ ಆಯ್ಕೆ
ಕಾರ್ಕಳ: ಪದವಿಪೂರ್ವ ಶಿಕ್ಷಣ ಇಲಾಖೆ, ಉಡುಪಿ ಜಿಲ್ಲೆ, ಕರ್ನಾಟಕ ಸರಕಾರ ಹಾಗೂ ಎಮ್.ಜಿ.ಎಮ್ ಪದವಿಪೂರ್ವ ಕಾಲೇಜು ಉಡುಪಿ ಇವರ ಆಶ್ರಯದಲ್ಲಿ ನಡೆದ ಉಡುಪಿ ಜಿಲ್ಲಾ ಮಟ್ಟದ ಪದವಿಪೂರ್ವ ವಿಭಾಗದ ಬಾಲಕಿಯರ ಶಟಲ್ ಬ್ಯಾಡ್ಮಿಂಟನ್ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ನ ಪದವಿಪೂರ್ವ ಕಾಲೇಜಿನ ದ್ವಿತೀಯ ವಾಣ ಜ್ಯ ವಿಭಾಗದ ವಿದ್ಯಾರ್ಥಿನಿ ಕಿಯೋರಾ ಪಾಯಸ್ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾಳೆ. ಈ ಮೂಲಕ ಪದವಿಪೂರ್ವ ಶಿಕ್ಷಣ ಇಲಾಖೆಯ ಪಂದ್ಯಾಟದಲ್ಲಿ ಕಿಯೋರಾ ಪಾಯಸ್ ಸತತ ಮೂರನೇ ಬಾರಿಗೆ ರಾಜ್ಯಮಟ್ಟದ ಪಂದ್ಯಾಟಕ್ಕೆ ಆಯ್ಕೆಯಾದ ಹೆಗ್ಗಳಿಕೆ ಪಡೆದುಕೊಂಡoತಾಗಿದೆ.
ಕಾರ್ಕಳ-ಪಳ್ಳಿ-ಉಡುಪಿ ಮಾರ್ಗದಲ್ಲಿ ಸರಕಾರಿ ಬಸ್ಸಿಗೆ NSUI ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಮನವಿ
ಉಡುಪಿ- ಮೂಡುಬೆಳ್ಳೆ- ಪಳ್ಳಿ – ಕುಂಟಾಡಿ – ಕಾರ್ಕಳ ಮಾರ್ಗದಲ್ಲಿ ಬೆಳಿಗ್ಗೆ ಮತ್ತು ಸಾಯಂಕಾಲ ಶಾಲೆ, ಕಾಲೇಜು ಹಾಗು ಆಫೀಸು ಪ್ರಾರಂಭ ಹಾಗು ಬಿಡುವ ಸಮಯಕ್ಕೆ ಸರಿಯಾಗಿ ಸರಕಾರಿ ಬಸ್ಸುಗಳನ್ನು ಓಡಿಸಲು NSUI ಮಾಜಿ ಅಧ್ಯಕ್ಷ ದಿನಕರ ಶೆಟ್ಟಿ ಮನವಿ ಮಾಡಿದ್ದಾರೆ.ಇದರಿಂದ ವಿದ್ಯಾರ್ಥಿಗಳಿಗೆ ಹಾಗು ಸಾರ್ವಜನಿಕರಿಗೆ ತುಂಬಾ ಅನುಕೂಲವಾಗುತ್ತದೆ. ಇದರ ಬಗ್ಗೆ ಸಾರಿಗೆ ಇಲಾಖೆ ಗಮನ ಹರಿಸಬೇಕು ಎಂದು ಒತ್ತಾಯಿಸಿದ್ದಾರೆ.
ಈಗಾಗಲೆ ವಿಧಾನ ಪರಿಷತ್ ಸದಸ್ಯರಾದ ಮಂಜುನಾಥ್ ಭಂಡಾರಿಯವರಿಗೆ ಮನವಿ ಮಾಡಿದ್ದು ಅವರು ಹೆಚ್ಚಿನ ಮುತುವರ್ಜಿ ವಹಿಸಿ ಆದಷ್ಟು ಬೇಗ ಕಾರ್ಯರೂಪಕ್ಕೆ ಬರುವಲ್ಲಿ ಶ್ರಮಿಸುತ್ತಾರೆ ಎಂದು ನಂಬಿಕೆ ಇದೆ ಹಾಗು ಮಾಜಿ ಸಂಸದರಾದ ಜಯಪ್ರಕಾಶ್ ಹೆಗ್ಡೆಯವರ ಗಮನಕ್ಕೆ ಕೂಡ ತಂದಿದ್ದೇನೆ. ಸರಕಾರಿ ಬಸ್ಸು ಬರುವುದರಿಂದ ಆ ಭಾಗದ ಹೆಣ್ಣು ಮಕ್ಕಳಿಗೆ, ವಿದ್ಯಾರ್ಥಿನಿಯರಿಗೆ ಹಾಗು ಮಹಿಳೆಯರಿಗೆ ರಾಜ್ಯ ಸರಕಾರದ ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ, ಸರಕಾರಿ ಬಸ್ಸುಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣ ಸೌಲಭ್ಯವನ್ನು ಕೂಡ ಪಡೆಯಬಹುದು.ಆ ಭಾಗದ ಕೆಲಸಕ್ಕೆ ಹೋಗುವ ಮಹಿಳೆಯರಿಗೆ, ವಿದ್ಯಾರ್ಥಿನಿಯರಿಗೆ ಆರ್ಥಿಕ ಬೆಂಬಲ ಸಿಕ್ಕಿದಂತಾಗುತ್ತದೆ.
ಪಡುಬಿದ್ರಿ – ನಿಟ್ಟೆ – ಕಾರ್ಕಳ ಮಾರ್ಗದಲ್ಲಿ ಸರಕಾರಿ ಬಸ್ಸು ಓಡಿಸುವ ಸಾರಿಗೆ ಇಲಾಖೆಯ ನಿರ್ಧಾರ ಸ್ವಾಗತಾರ್ಹ. ವಿದ್ಯಾರ್ಥಿ ಸಂಘಟನೆಗಳ ಮನವಿಗೆ ಸ್ಪಂದಿಸಿ, ಕಾರ್ಕಳದ ತಹಸೀಲ್ದಾರ್ ಮುತುವರ್ಜಿ ವಹಿಸಿ, ಆದಷ್ಟು ಬೇಗ ಕಾರ್ಯಗತ ಗೊಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅವರ ಕಾರ್ಯವೈಖರಿ ಮೆಚ್ಚುವಂಥದ್ದು. ಇದಕ್ಕೆ ರಾಜ್ಯ ಸರಕಾರ, ಸಂಬಂಧ ಪಟ್ಟ ಇಲಾಖೆ ಹಾಗು ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಸಹಕರಿಸಿದ ಎಲ್ಲರಿಗೂ ಅಭಿನಂದನೆಗಳನ್ನು ಸಲ್ಲಿಸುತ್ತೇನೆ ಎಂದಿದ್ದಾರೆ.
ಮುನಿಯಾಲು:ಮಣ್ಣಿನ ಜಿಡ್ಡೆಗೆ ಡಿಕ್ಕಿ ಹೊಡೆದ ಕಾರು,ಪ್ರಾಣಪಾಯದಿಂದ ಪಾರಾದ ಪ್ರಯಾಣಿಕರು
ಮುನಿಯಾಲಿನಲ್ಲಿ ಇಂದು ಮುಂಜಾನೆ ಗದಗದಿಂದ ಪುತ್ತೂರಿಗೆ ಪ್ರಯಾಣ ಮಾಡುತ್ತಿದ್ದ ಮಾರುತಿ ವ್ಯಾಗನರ್ ಕಾರ್ ಒಂದು ರಸ್ತೆಯ ಬದಿಯ ಮಣ್ಣಿನ ಜಿಡ್ಡೆಗೆ ಹೊಡೆದು ಅದರಲ್ಲಿ ಪ್ರಯಾಣ ಮಾಡುತಿದ್ದ ಇಬ್ಬರು ಪ್ರಾಣಪಾಯದಿಂದ ಪಾರಾಗಿ ಕಾರು ಜಖಂಗೊಂಡಿದೆ.
ಅಜೆಕಾರು:ಎಟಿಎಂ ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಅಪರಿಚಿತರಿಬ್ಬರು ವಂಚನೆ ಮಾಡಿರುವ ಘಟನೆ ಅಜೆಕಾರಿನಲ್ಲಿ ವರದಿಯಾಗಿದೆ.
ಘಟನೆ ವಿವರ:ಮೇರಿ ಹೆನ್ರಿ ಡಿಸೋಜಾರವರು Equitas small Finance Bank Limited ನಲ್ಲಿ ಬ್ಯಾಂಕ್ ಖಾತೆಯನ್ನು ಹೊಂದಿದ್ದು ಸೆ.16ರಂದು ಸಂಜೆ ಅವರ ಪತಿ ಹೆನ್ರಿ ಡಿಸೋಜರವರು ಎಟಿಎಂ ನಿಂದ ಹಣ ಡ್ರಾ ಮಾಡಿಕೊಳ್ಳಲು ಅಜೆಕಾರು ಕರ್ನಾಟಕ ಬ್ಯಾಂಕ್ ಎಟಿಎಂಗೆ ಬಂದಿದ್ದು ಅಲ್ಲಿ ಇದ್ದ ಇಬ್ಬರು ಅಪರಿಚಿತರು ಹಣ ಡ್ರಾ ಮಾಡಿಕೊಡುವ ನೆಪದಲ್ಲಿ ಎಟಿಎಂ ಕಾರ್ಡ್ ನ್ನು ಪಡೆದು ಪಿನ್ ನಂಬರ್ ತಿಳಿದುಕೊಂಡು ಹೆನ್ರಿ ಡಿಸೋಜರವರವರಿಗೆ ತಿಳಿಯದಂತೆ ಎಟಿಎಂಕಾರ್ಡ್ ನ್ನು ಬದಲಾವಣೆ ಮಾಡಿ ಹಣ ಬರುತ್ತಿಲ್ಲ ಎಂದು ಹೇಳಿ ಬೇರೆ ಎಟಿಎಂಕಾರ್ಡ್ ನ್ನು ವಾಪಾಸ್ ನೀಡಿದ್ದಾರೆ.
ನಂತರ ಅರೋಪಿಗಳು ಕಾರ್ಕಳ ಬ್ಯಾಂಕ್ ಆಫ್ ಬರೋಡಾ ಎಟಿಎಂನಿಂದ ಮೇರಿ ಹೆನ್ರಿ ಡಿಸೋಜಾರವರ ಬ್ಯಾಂಕ್ ಖಾತೆಯಿಂದ ಎಟಿಎಂ ಕಾರ್ಡ್ ಬಳಸಿ ತಲಾ 10 ಸಾವಿರದಂತೆ 10 ಬಾರಿ ಒಟ್ಟು 1 ಲಕ್ಷ ರೂಪಾಯಿ ಡ್ರಾ ಮಾಡಿಕೊಂಡಿದ್ದಾರೆ.ಈ ಬಗ್ಗೆ ಅಜೆಕಾರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.
ಕಾರ್ಕಳದ ಸ್ವರ್ಣ ಸಹಕಾರ ಸಂಘದಲ್ಲಿ ಹೊಸ ತಂತ್ರಜ್ಞಾನ ಅಳವಡಿಕೆ ಪಿಗ್ಮಿ, ಉಳಿತಾಯ, ಆರ್ ಡಿ, ಸಾಲ ಮಾಹಿತಿ ಇನ್ಮುಂದೆ ಮೊಬೈಲ್ ನಲ್ಲೇ ಲಭ್ಯ
ಭಾರತದ ಎಲ್ಲ ಬ್ಯಾಂಕುಗಳು ಸಂಪೂರ್ಣ ಡಿಜಿಟಲೀಕರಣಗೊಂಡು ಗ್ರಾಹಕರಿಗೆ ಉತ್ತಮ ವಿಶ್ವಾಸರ್ಹ ಸೇವೆಗಳನ್ನು ನೀಡುತ್ತಿವೆ. ಗ್ರಾಹಕರು ತಮ್ಮ ಖಾತೆಗಳ ಎಲ್ಲಾ ವಿವರಗಳನ್ನು ತಮ್ಮ ಮೊಬೈಲ್ ಮೂಲಕ ಪಡೆದುಕೊಳ್ಳುತ್ತಾರೆ. ಈ ಆನ್ಲೈನ್ ಸೇವೆಗಳನ್ನು ನೀಡುವ ಸಾಪ್ಟ್ವೇರ್ ಅಭಿವೃದ್ದಿ ಪಡಿಸಲು ಬ್ಯಾಂಕುಗಳು ಐಟಿ ಕಂಪನಿಗಳಿಗೆ ಕೋಟ್ಯಾಂತರ ಹಣವನ್ನು ಸುರಿಯುತ್ತವೆ. ಜೊತೆಗೆ ಸರ್ವರ್ಗಳಿಗಾಗಿ ತಿಂಗಳು ತಿಂಗಳು ಕರ್ಚಾಗುತ್ತದೆ. ಹಣಕಾಸು ವ್ಯವಹಾರದಲ್ಲಿ ಭಾರತದಲ್ಲಿ ಸಹಕಾರಿ ಸಂಘಗಳ ಪಾಲು ಕೂಡಾ ಬಹಳಷ್ಟಿದೆ. ಕೆಲವು ಊರುಗಳಲ್ಲಿ ರಾಷ್ಟ್ರೀಕೃತ ಬ್ಯಾಂಕುಗಳಿಗಿಂತಲೂ ಸಹಕಾರಿ ಸಂಸ್ಥೆಯ ವ್ಯವಹಾರ ಹೆಚ್ಚಿರುತ್ತದೆ.
ಆದರೆ ಸಹಕಾರಿ ಸಂಸ್ಥೆಗಳು ತಮ್ಮ ಸದಸ್ಯರಿಗೆ/ಗ್ರಾಹಕರಿಗೆ ಆನ್ ಲೈನ್ ಸೇವೆಗಳನ್ನು ಮತ್ತು ಮೊಬೈಲ್ ಸೇವೆಗಳನ್ನು ನೀಡಲು ಇನ್ನೂ ಶಕ್ತವಾಗಿಲ್ಲ. ಅದಕ್ಕೆ ಬಹುಮುಖ್ಯ ಕಾರಣ ಸಂಪನ್ಮೂಲದ ಕೊರತೆ. ಗ್ರಾಹಕರು ತಮ್ಮ ಖಾತೆಗೆ ಸಂಬಂಧಪಟ್ಟ ಯಾವುದೇ ಮಾಹಿತಿಯನ್ನು ಪಡೆಯಬೇಕಾದರೆ ಸಹಕಾರ ಸಂಘವನ್ನು ಸಂಪರ್ಕಿಸಲೇಬೇಕು. ಈ ಕಾರಣದಿಂದ ಕೆಲವು ಸಲ ಗ್ರಾಹಕರಿಗೆ ವಂಚನೆ ಕೂಡಾ ನಡೆಯುತ್ತದೆ. ಈ ಎಲ್ಲ ವಿಷಯಗಳನ್ನು ಮನಗಂಡ ಕಾರ್ಕಳದ ಸಾಪ್ಟ್ವೇರ್ ತಂತ್ರಜ್ಞ ಸತೀಶ್ ಪೂಜಾರಿ ಮತ್ತವರ ತಂಡ ಒಂದು ಹೊಸ ತಂತ್ರಜ್ಞಾನವನ್ನು ತಯಾರಿಸಿದೆ. ಅದುವೆ “ಯೂನಿಗ್ಸ್” (UNIGS) ಅಂದರೆ ಯೂನಿಫೈಡ್ ಇನ್ಫಾರ್ಮೇಶನ್ ಗೇಟ್ವೇ ಸಿಸ್ಟಂ. ತಮ್ಮ ನೂತನ ಸಂಸ್ಥೆ “INBI NextGen Innovations Private Limited”ನ ಮೂಲಕ ಈ ತಂತ್ರಜ್ಞಾನವನ್ನು ಅವಿಷ್ಕರಿಸಿದ್ದಾರೆ. ಈ ತಂತ್ರಜ್ಞಾನದ ಮೂಲಕ ಸಹಕಾರ ಸಂಘಗಳು ತಮ್ಮ ಸದಸ್ಯರಿಗೆ ಮೊಬೈಲ್ ಆಪ್ ಮೂಲಕ ಬಹಳಷ್ಟು ಸೇವೆಗಳನ್ನು ರಾಷ್ಟ್ರೀಕೃತ ಬ್ಯಾಂಕುಗಳ ರೀತಿಯಲ್ಲಿ ಒದಗಿಸಲು ಸಾಧ್ಯವಾಗಲಿದೆ.
ಸದಸ್ಯರು ತಮ್ಮ ಅಂಡ್ರಾಯ್ಡ್ ಮೊಬೈಲ್ನಲ್ಲಿ “ಯೂನಿಗ್ಸ್” ಆಪ್ ಅಳವಡಿಸಿಕೊಂಡು ಸಹಕಾರ ಸಂಸ್ಥೆಯಲ್ಲಿರುವ ತಮ್ಮ ಉಳಿತಾಯ/ಪಿಗ್ಮಿ/ಆರ್.ಡಿ/ಸಾಲ ಮುಂತಾದ ಖಾತೆಗಳ ಎಲ್ಲಾ ವಿವರವನ್ನು ಪಡೆಯಬಹುದು. ತಮ್ಮ ಸಾಲ ಅಥವಾ ಪಿಗ್ಮಿ ಖಾತೆಗೆ ತಮ್ಮ ಮೊಬೈಲ್ನಿಂದಲೇ ಹಣ ಜಮಾ ಮಾಡಬಹುದು. ತಮ್ಮ ಸಾಲದ ಕಂತನ್ನು ಕಟ್ಟುವ ದಿನವನ್ನು ಈ ಆಪ್ ನೆನಪಿಸುತ್ತದೆ. ಈ ಆಪ್ ಆಂಗ್ಲ ಮತ್ತು ಸ್ಥಳೀಯ ಭಾಷೆಯಲ್ಲಿ ಲಭ್ಯವಿದೆ. ಆದುದರಿಂದ ಇಂಗ್ಲೀಷ್ ಬರದವರು ಕೂಡಾ ಇದನ್ನು ಯಾವುದೇ ಕಷ್ಟವಿಲ್ಲದೆ ಬಳಸಬಹುದು. ವಿಶೇಷವೆಂದರೆ ಯೂನಿಗ್ಸ್ ತಂತ್ರಜ್ಞಾನದೊಂದಿಗೆ ಸಹಯೋಗ ಹೊಂದಲು ಸಹಕಾರಿ ಸಂಸ್ಥೆಗಳಿಗೆ ಯಾವುದೇ ಖರ್ಚು ಇಲ್ಲ. ದೇಶದಲ್ಲಿಯೇ ಪ್ರಥಮ ಎನ್ನಬಹುದಾದ ಈ ತಂತ್ರಜ್ಞಾನದ ಮೊದಲ ಅಳವಡಿಕೆ ಮತ್ತು ಲೋಕಾರ್ಪಣೆ ಮುಂದಿನ ಭಾನುವಾರ ಕಾರ್ಕಳದ ಜೋಡುಕಟ್ಟೆಯ “ಸ್ವರ್ಣ ಗ್ರಾಮೀಣ ಸೌಹಾರ್ದ ಸಹಕಾರಿ ಸಂಘ (ನಿ.)” ಇಲ್ಲಿ ನಡೆಯಲಿದೆ.
ಸತೀಶ್ ಪೂಜಾರಿಯವರು ಕಳೆದ ಇಪ್ಪತ್ತಾರು ವರ್ಷಗಳಿಂದ ಸಾಪ್ಟ್ ವೇರ್ ಕ್ಷೇತ್ರದಲ್ಲಿದ್ದಾರೆ. ಬಹುರಾಷ್ಟ್ರ ಕಂಪನಿಯಲ್ಲದೆ ಸ್ಥಳೀಯ ಸಣ್ಣ ಸಣ್ಣ ಕಂಪನಿ ಕೂಡಾ ಹೊಸ ಹೊಸ ಅವಿಷ್ಕಾಗಳನ್ನು ಮಾಡಿ ಸ್ಥಳೀಯರಿಗೆ ಹೆಚ್ಚು ಹೆಚ್ಚು ಉದ್ಯೋಗ ಸೃಷ್ಟಿಯಾಗಬೇಕೆನ್ನುವುದು ಅವರ ಬಯಕೆ. “ದೊಡ್ಡ ದೊಡ್ಡ ನಗರಗಳಿಗೆ ಹೋಗುವ ದಾರಿಯೇ ನಗರದಿಂದ ಹಳ್ಳಿಗೆ ಹೋಗಲು ಕೂಡಾ ಇರುವುದು” ಅನ್ನುವುದು ಅವರ ವಾದ. ಬಹುರಾಷ್ಟ್ರ ಕಾರ್ಪೊರೇಟ್ ಕಂಪನಿಗಳು ತಂತ್ರಜ್ಞಾನದ ಮೂಲಕ ದೊಡ್ಡ ದೊಡ್ಡ ಉಧ್ಯಮಗಳ ಮೇಲೆ ತಮ್ಮ ಪ್ರಭುತ್ವವನ್ನು ಹೊಂದಿದ್ದಾರೆ. ಅವರಿಗೆ ಸ್ಪರ್ಧೆ ಒಡ್ಡಲು ಸ್ಥಳೀಯ ಉಧ್ಯಮಿಗಳಿಗೆ, ವ್ಯಾಪಾರಸ್ಥರಿಗೆ ಸಾಧ್ಯವಿಲ್ಲ. ಹಾಗಾಗಬಾರದು, ಸ್ಥಳೀಯ ಮತ್ತು ಸಣ್ಣ ಉಧ್ಯಮಿಗಳು ಆಧುನಿಕ ತಂತ್ರಜ್ಞಾನವನ್ನು ಯಾವುದೇ ಹೊರೆಯಾಗದಂತೆ ಅಳವಡಿಸಿಕೊಂಡು ತಮ್ಮ ಗ್ರಾಹಕರಿಗೆ ಸೇವೆ ನೀಡುವಂತಾಗಿ ಆಧುನಿಕ ಜಗತ್ತಿನ ಸ್ಪರ್ಧೆಯನ್ನು ಎದುರಿಸಲು ಸಾಧ್ಯವಾಗಬೇಕೆನ್ನುವುದು ಸತೀಶ್ ಅವರ ಆಶಯ. ತಮ್ಮ ಹೊಸ ಸಂಸ್ಥೆಯ ಮೂಲಕ ಈ ರೀತಿಯ ಇನ್ನೂ ಹಲವು ಹೊಸ ಮತ್ತು ಸಮಾಜಕ್ಕೆ ಉಪಯುಕ್ತವಾಗುವ ತಂತ್ರಜ್ಞಾನಗಳನ್ನು ಅಭಿವೃದ್ದಿ ಪಡಿಸುತ್ತಿದ್ದಾರೆ
ಕೊಲ್ಲೂರು ಮೂಕಾಂಬಿಕಾ ದೇವಸ್ಥಾನದ ವ್ಯವಸ್ಥಾಪನ ಸಮಿತಿಗೆ ಕೋಟೇಶ್ವರದ ಸುರೇಂದ್ರ ಶೆಟ್ಟಿಯವರನ್ನು ನೇಮಕ ಮಾಡಿ ಸರಕಾರ ಆದೇಶ ಹೊರಡಿಸಿದೆ.
ಒಟ್ಟು 9 ಮಂದಿಯನ್ನು ವ್ಯವಸ್ಥಾಪನಾ ಸಮಿತಿಗೆ ಸರಕಾರಆಯ್ಕೆ ಮಾಡಿದೆ.
ಸುರೇಂದ್ರ ಶೆಟ್ಟಿಯವರು ಕಾರ್ಕಳ ಹಿರಿಯoಗಡಿ ನಿವಾಸಿ ಆಗಿದ್ದು ಕೋಟೇಶ್ವರದಲ್ಲಿ ತನ್ನ ಉದ್ಯಮವನ್ನು ಹೊಂದಿದ್ದಾರೆ. ಸುಮಾರು 15 ವರ್ಷಗಳಿಂದ ಅವರು ಕುಂದಾಪುರದಲ್ಲಿ ಉದ್ಯಮ ನಡೆಸುತ್ತಿದ್ದಾರೆ.
ಕಾರ್ಕಳ ಶಿವತಿಕೆರೆ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿ ಕೂಡ ಅವರು ಸೇವೆ ಸಲ್ಲಿಸಿದ್ದರು.