ಕಾರ್ಕಳ: ಕಾರ್ಕಳ ಯಕ್ಷ ಕಲಾರಂಗದ ವತಿಯಿಂದ ತಾಲೂಕಿನ ವಿವಿಧ ಶಾಲಾ ಕಾಲೇಜುಗಳ ಆಸಕ್ತಿಯ ವಿಧ್ಯಾರ್ಥಿಗಳಿಗೆ ಉಚಿತವಾಗಿ ಯಕ್ಷ ಶಿಕ್ಷಣ ನೀಡಿ ವರ್ಷಾಂತ್ಯದಲ್ಲಿ ನಡೆಸುವ ಕಿಶೋರ ಯಕ್ಷೊತ್ಸವವು ನಿನ್ನೆ ಉದ್ಘಾಟನೆ ಗೊಂಡಿತು.
ಕಾರ್ಕಳದ ಪ್ರತಿಷ್ಟಿತ ಸಮಾಜ ಸೇವಕ,ಕಲಾಪೋಷಕ ಸಿ.ಎ. ಕಮಲಾಕ್ಷ ಕಾಮತ್ ಯಕ್ಷೋತ್ಸವ ಉದ್ಘಾಟಿಸಿ ತಲೆ ತಲಾಂತರದಿಂದ ಹಿರಿಯ ಕಲಾವಿದರು ಉಳಿಸಿ ಬೆಳೆಸಿದ ನಮ್ಮ ಆರಾಧನಾ ಕಲೆಯನ್ನು ನಾವೂ ಉಳಿಸುವ ಪ್ರಯತ್ನ ಮಾಡಬೇಕು .ಮಕ್ಕಳಲ್ಲಿ ವಿದ್ಯೆಯ ಜೊತೆ ಆತ್ಮ ಸ್ತೈರ್ಯ ತುಂಬುವ ಭಾರತೀಯ ರಂಗ ಕಲೆಗಳ ಬಗ್ಗೆ ತರಬೇತಿ ಕೊಟ್ಟು ಸಂಸ್ಕಾರವಂತರಾಗಿಸುವುದು ನಮ್ಮ ಕರ್ತವ್ಯ ಎಂದರು.
ಸಂಸ್ಥೆಯ ಅದ್ಯಕ್ಷ ವಿಜಯ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಕಾರ್ಕಳದ ವೇ.ಮೂ.ನಾರಾಯಣ ಭಟ್ ರವರು ಶುಭಾಸಂಸನೆಗೈದರು.ಪ್ರಧಾನ ಅತಿಥಿಗಳಾಗಿ ಯಕ್ಷಧ್ರುವ ಯಕ್ಷ ಶಿಕ್ಷಣದ ಸಂಚಾಲಕ ಪಣಂಬೂರು ವಾಸುದೇವ ಐತಾಳ್ ಹಾಗೂ ಅತಿಥಿಗಳಾಗಿ ಅರಿವಳಿಕೆ ತಜ್ಞ ಡಾ. ಜ್ಞಾನೇಶ್ ಕಾಮತ್, , ಪೆರ್ವಾಜೆ ಹೈಸ್ಕೂಲ್ ನ ಶಾಲಾಭಿವೃದ್ದಿ ಸಮಿತಿಯ ಅದ್ಯಕ್ಷ ಆನಂದ್ರಾಯ ನಾಯಕ್, ಮುಖ್ಯ ಶಿಕ್ಷಕರಾದ ದಿವಾಕರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ಸಂಚಾಲಕ ಪ್ರೊ. ಪದ್ಮನಾಭ ಗೌಡ ಸ್ವಾಗತಿಸಿದರು. ಪ್ರೊ. ಕೃಷ್ಣ ಭಟ್ ವಂದಿಸಿದರು.
ಕಲಾವಿದ ಕಾರ್ಯದರ್ಶಿ ಮಹಾವೀರ ಪಾಂಡಿ ಕಾರ್ಯಕ್ರಮ ನಿರೂಪಿಸಿದರು.ನಂತರ ಕಾಂತಾವರ ಅನುದಾನಿತ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಂದ ರಾಮಾಂಜನೇಯ ಯಕ್ಷಗಾನ ಪ್ರದರ್ಶನ ಆರಂಭವಾಯಿತು.
ಅಮಿತ್ ಷಾ ಗೆ ನಕ್ಸಲ್ ಮೇಲೆ ಯಾಕೆ ಇಷ್ಟು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಗೆ ಇದೆಯೇ?-ಸಿಎಂ ಸಿದ್ದರಾಮಯ್ಯ
ಲಾಠಿ-ದೊಣ್ಣೆ, ಕತ್ತಿ-ತ್ರಿಶೂಲಗಳನ್ನು ನೀಡಿ ಅಮಾಯಕರನ್ನು ಹಿಂಸಾಮಾರ್ಗಕ್ಕೆ ಇಳಿಸಿ ರಾಜಕೀಯ ಲಾಭ ಗಳಿಸುವ ಕುತಂತ್ರದ ರಾಜಕಾರಣ ನಮ್ಮದ್ದಲ್ಲ
ನನ್ನ ಪ್ರಕಾರ ಕರ್ನಾಟಕ ನಕ್ಸಲ್ ಮುಕ್ತ ಆಗಿದೆ. ಶರಣಾದ ನಕ್ಸಲರ ಬೇಡಿಕೆ ಬಗ್ಗೆ ಕ್ಯಾಬಿನೆಟ್‌ನಲ್ಲಿ ಚರ್ಚಿಸಿ ತೀರ್ಮಾನ ಮಾಡ್ತೀವಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.
ನಗರದ ಗೃಹ ಕಚೇರಿ ಕೃಷ್ಣದಲ್ಲಿ ನಕ್ಸಲರು ತಮ್ಮ ಮುಂದೆ ಶರಣಾದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ, 20 ವರ್ಷಗಳು ಹೆಚ್ಚು ಕಾಲ ನಕ್ಸಲ್ ಚಳುವಳಿ ದಾರಿಯಲ್ಲಿ ನಡೆದರು. ಕಾಡಿನಲ್ಲಿ ಇದ್ದು ಚಳುವಳಿ ಮಾಡಿದ 6 ಜನ ನಕ್ಸಲರು ಇಂದು ಶರಣಾಗತಿ ಆಗಿದ್ದಾರೆ. ಸರ್ಕಾರ ಅವರಿಗೆ ಆಹ್ವಾನ ನೀಡಿದ್ದರಿಂದ 6 ಜನ ಶರಣಾಗತಿ ಆಗಿದ್ದಾರೆ. ಹೋರಾಟ ಹಾದಿ ಬಿಟ್ಟು ಪರಿವರ್ತನೆಗೊಂಡು ಮುಖ್ಯವಾಹಿನಿಗೆ ಬರಲು ತೀರ್ಮಾನ ಮಾಡಿ ನನ್ನ ಮುಂದೆ ಶರಣಾಗತಿ ಆಗಿದ್ದಾರೆ. ಡಿಸಿಎಂ ಸೇರಿ ಸಚಿವರ ಮುಂದೆ ಶರಣಾಗತಿ ಆಗಿದ್ದಾರೆಂದು ಅಧಿಕೃತವಾಗಿ ಸಿಎಂ ತಿಳಿಸಿದರು.
ಕೆಲವು ದಿನಗಳ ಹಿಂದೆ ನಾಗರಿಕ ಸಮಿತಿ, ಪುನರ್ ವಸತಿ ಸಮಿತಿ ಅವರು ಭೇಟಿ ಆಗಿದ್ದರು. ಅವರ ಜೊತೆ ಮಾತುಕತೆ ನಡೆಸಿದರು. ಅವರು, 6 ನಕ್ಸಲರು ಶರಣಾಗತಿ ಆಗಲು ತೀರ್ಮಾನ ಮಾಡಿದ್ದಾರೆ. ಸರ್ಕಾರದ ವತಿಯಿಂದ ಆಹ್ವಾನ ಮಾಡಲು ಹೇಳಿದರು. ಅದಕ್ಕೆ ಪತ್ರಿಕಾ ಹೇಳಿಕೆ ಕೊಟ್ಟೆ. ಕಾನೂನು ರೀತಿ ಯಾವ ಸಹಾಯ ಮಾಡಲು ಸಾಧ್ಯವೋ ಮಾಡ್ತೀನಿ ಅಂತ ಹೇಳಿದ್ದೆ. ಕೆಟಗರಿ ಆಧಾರದಲ್ಲಿ ಅವರಿಗೆ ಪರಿಹಾರ ಕೊಡ್ತೀವಿ. ಕಾಡಿನಿಂದ ನಾಡಿಗೆ ಬರಲಿಕ್ಕೆ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತೆ ಅಂತ ಹೇಳಿದ್ವಿ. ಕಾನೂನು ರೀತಿ ಸಹಕಾರ ಕೊಡೋದಾಗಿ ಹೇಳಿದ್ವಿ. ಶಸ್ತ್ರಾಸ್ತ್ರಗಳ ಮೂಲಕ, ಅನ್ಯಾಯ, ದೌರ್ಜನ್ಯ, ಶೋಷಣೆ ವಿರುದ್ಧ ಹೋರಾಟ ಮಾಡುತ್ತಿದ್ದರು. ಹೋರಾಟದ ಮೂಲಕ ನ್ಯಾಯ ಸಿಗೊಲ್ಲ ಅಂತ ಅವರಿಗೆ ಅರಿವಾಗಿದೆ. ಸಂವಿಧಾನದ ಪ್ರಕಾರ ಹೋರಾಟಕ್ಕೆ ಅವಕಾಶ ಇದೆ ಅಂತ ಮುಖ್ಯವಾಹಿನಿಗೆ ಬರೋಕೆ ಒಪ್ಪಿದ್ದಾರೆ. ಒಟ್ಟಾರೆಯಾಗಿ ನಮ್ಮ ಸರ್ಕಾರ ಕರ್ನಾಟಕವನ್ನ ನಕ್ಸಲ್ ಮುಕ್ತವಾಗಿ ಮಾಡೋದು ನಮ್ಮ ಉದ್ದೇಶ ಎಂದು ಸ್ಪಷ್ಟಪಡಿಸಿದರು.
ಅನೇಕ ರಾಜ್ಯಗಳು ಇಂತಹ ಪ್ರಯತ್ನ ಮಾಡಿವೆ. ಅನೇಕ ರಾಜ್ಯದಲ್ಲಿ ನಕ್ಸಲ್ ಹೋರಾಟ ಇದೆ. ನಕ್ಸಲ್ ದಾರಿ ಬಿಡಿ, ಸಂವಿಧಾನಬದ್ಧ ಹೋರಾಟ ಮಾಡಿ ಅಂತ ಹೇಳಿದ ಮೇಲೆ ಶರಣಾಗತಿಯಾಗಿದ್ದಾರೆ. ಡಿಸಿ ಮುಂದೆ ಅವರನ್ನ ಪ್ರೊಡ್ಯೂಸ್ ಮಾಡಿದ್ದಾರೆ. 6 ಜನ ಶರಣಾಗತಿ ಆಗಿದ್ದಾರೆ. ಡಿಸಿ ಕೂಡಾ ಆದೇಶ ಮಾಡಿದ್ದಾರೆ ಎಂದು ಸಿಎಂ ಆದೇಶ ಪ್ರತಿ ತೋರಿಸಿದರು. ನಮ್ಮ ಮುಂದೆ ಬಂದು ಶರಣಾಗತಿ ಆಗಿದ್ದಾರೆ. ಸರ್ಕಾರ ಶರಣಾಗತಿ ಒಪ್ಪಿದೆ. ಅವರ ಶರಣಾಗತಿಗೆ ಪ್ರಯತ್ನ ಮಾಡಿದ ಎಲ್ಲಾ ಸಂಘಟನೆಗಳಿಗೆ ಅಭಿನಂದನೆ ಸಲ್ಲಿಸುತ್ತೇನೆ. ಎಎನ್‌ಎಫ್‌ನಲ್ಲಿ ಕೆಲಸ ಮಾಡಿರೋರಿಗೂ ಧನ್ಯವಾದ ಹೇಳ್ತೀನಿ. ನಿಂಬಾಳ್ಕರ್ ಅವರಿಗೂ ಧನ್ಯವಾದ ಹೇಳ್ತೀನಿ ಎಂದರು.
3-4 ದಿನಗಳ ಹಿಂದೆ ಶರಣಾಗತಿ ಬಗ್ಗೆ ಹೇಳಿದ್ದರು. ನಾನು ಯಾರಿಗೂ ಹೇಳಿರಲಿಲ್ಲ. ನಿನ್ನೆ ಅಲೋಕ್ ಮೋಹನ್, ಮೊಹಂತಿ ಅವರು ಬಂದು ಹೇಳಿದ್ದರು. ಎಲ್ಲರಿಗೂ ಧನ್ಯವಾದ ಹೇಳ್ತೀನಿ. ಶರಣಾಗತಿ ಆಗಿರೋರಿಗೆ ಅವರಿಗೆ ಶುಭವಾಗಲಿ. ಸರ್ಕಾರಕ್ಕೆ ಅಹವಾಲು, ಬೇಡಿಕೆ ಇಟ್ಟಿದ್ದಾರೆ. ಎಲ್ಲಾ ಬೇಡಿಕೆಯನ್ನ ಸಹಾನುಭೂತಿಯಿಂದ ಸರ್ಕಾರ ಪರಿಗಣಿಸುತ್ತದೆ. ಕೇರಳ, ತಮಿಳುನಾಡು ಸಿಎಂ ಜೊತೆ ಮಾತಾಡ್ತೀನಿ. ತ್ವರಿತವಾಗಿ ನ್ಯಾಯ ಕೊಡೋ ಕೆಲಸ ಮಾಡ್ತೀವಿ. ತ್ವರಿತ ನ್ಯಾಯಾಲಯ ಮಾಡಿ, ಕೇಸ್ ಇತ್ಯರ್ಥ ಮಾಡುತ್ತೇವೆ ಎಂದು ತಿಳಿಸಿದರು.
ರಾಜ್ಯದಲ್ಲಿ ಆರು ಮಂದಿ ನಕ್ಸಲೀಯರು ಶರಣಾಗುತ್ತಿರುವಾಗ ಬೆಚ್ಚಿಬಿದ್ದಿರುವ ಬಿಜೆಪಿ ಶಾಸಕ ಸುನೀಲ್ ಕುಮಾರ್ ಅವರು ಕಳೆದ ತಿಂಗಳು ಛತ್ತೀಸ್‌ಘಢದಲ್ಲಿ ಶರಣಾದ 30 ನಕ್ಸಲರನ್ನು ಕೇಂದ್ರ ಗೃಹಸಚಿವ ಅಮಿತ್ ಶಾ ಅವರೇ ಖುದ್ದಾಗಿ ಬರಮಾಡಿಕೊಂಡು ಆನಂದಬಾಷ್ಪ ಸುರಿಸಿದಾಗ ಯಾಕೆ ಬೆಚ್ಚಿ ಬಿದ್ದಿಲ್ಲ? ಶಾ ಅವರಿಗೆ ನಕ್ಸಲರ ಬಗ್ಗೆ ಯಾಕೆ ಇಷ್ಟೊಂದು ಪ್ರೀತಿ ಎಂದು ಕೇಳುವ ದಮ್ಮು ಸುನೀಲ್ ಕುಮಾರ್ ಅವರಿಗೆ ಇದೆಯೇ?
ಕಳೆದ ವರ್ಷ ಮಹಾರಾಷ್ಟ್ರದಲ್ಲಿ ಶರಣಾದ ನಕ್ಸಲ್ ದಂಪತಿಗೆ ಅಲ್ಲಿನ ಬಿಜೆಪಿ ಸರ್ಕಾರದ ಉಪಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು 41 ಲಕ್ಷ ರೂಪಾಯಿಗಳ ನೆರವು ನೀಡಿರುವುದು ಶಾಸಕ ಸುನೀಲ್ ಕುಮಾರ್ ಅವರಿಗೆ ಗೊತ್ತಿರಲಿಲ್ಲವೇ? ಈ ನೆರವನ್ನು ಯಾವ ಮಾನದಂಡದಲ್ಲಿ ನೀಡಿದ್ದೀರಿ ಎಂದು ಕೇಳುವ ಧೈರ್ಯ ಸುನೀಲ್ ಕುಮಾರ್ ಅವರಿಗೆ ಇದೆಯೇ?
ಶರಣಾಗಿರುವ ಈ ನಕ್ಸಲೀಯರ ಅನುಸರಿಸಿದ ಹಿಂಸಾಮಾರ್ಗದ ಬಗ್ಗೆ ನಮಗೆಲ್ಲರಿಗೂ ವಿರೋಧವಿದೆ. ಆದರೆ ಇವರಲ್ಲಿ ಯಾರೂ ಜನರ ತೆರಿಗೆ ಹಣವನ್ನು ನುಂಗಿದ ಭ್ರಷ್ಟರೂ ಅಲ್ಲ, ರಾಮ-ಪರಶುರಾಮನ ಮೂರ್ತಿ ನಿರ್ಮಾಣದಲ್ಲಿಯೂ ಮೋಸ ಮಾಡಿ ಜೇಬು ತುಂಬಿಕೊಂಡವರೂ ಅಲ್ಲ.
ಲಾಠಿ-ದೊಣ್ಣೆ, ಕತ್ತಿ-ತ್ರಿಶೂಲಗಳನ್ನು ನೀಡಿ ಅಮಾಯಕರನ್ನು ಹಿಂಸಾಮಾರ್ಗಕ್ಕೆ ಇಳಿಸಿ ರಾಜಕೀಯ ಲಾಭ ಗಳಿಸುವ ಕುತಂತ್ರದ ರಾಜಕಾರಣ ನಮ್ಮದ್ದಲ್ಲ. ದಾರಿ ತಪ್ಪಿ ಹಿಂಸೆಯ ಮಾರ್ಗ ಹಿಡಿದವರ ಮನವೊಲಿಸಿ ಸಮಾಜದ ಮುಖ್ಯವಾಹಿನಿಗೆ ಸೇರಿಸಿ, ಅವರನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಪರಿವರ್ತನೆ ಮಾಡುವುದು ಒಂದು ಸರ್ಕಾರದ ಕರ್ತವ್ಯವಾಗಿದೆ. ಇದೇ ಕರ್ತವ್ಯವನ್ನು ನಮ್ಮ ಸರ್ಕಾರ ಪಾಲಿಸುತ್ತಾ ಬಂದಿದೆ ಎಂದು ಸಿದ್ದರಾಮಯ್ಯ ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
ಬಜಗೋಳಿ:ಅಯೋಧ್ಯೆಗೆ ನೆಲ್ಲಿಕಾರು ಶಿಲೆ ಸಮರ್ಪಿತವಾದ ಸವಿನೆನಪಿಗಾಗಿ 18 ದಿನಗಳ ಮಹೋತ್ಸವ ಕಾರ್ಯಕ್ರಮಕ್ಕೆ ಚಾಲನೆ
ಪ್ರತೀ ದಿನ ಕುಣಿತ ಭಜನೆ ಜ.22ರಂದು ಧಾರ್ಮಿಕ ಸಭೆ,ಗೀತಾ ಸಾಹಿತ್ಯ ಸಂಭ್ರಮ
ಅಯೋಧ್ಯೆ ಶ್ರೀ ರಾಮದೇವರ ಮಹೋತ್ಸವದ ಅಂಗವಾಗಿ, ಅಯೋಧ್ಯೆಗೆ ನೆಲ್ಲಿಕಾರು ಶಿಲೆ ಸಮರ್ಪಿತವಾದ ಸವಿನೆನಪಿಗಾಗಿ 2ನೇ ವರ್ಷದ 18 ದಿನಗಳ ಮಹೋತ್ಸವ ಕಾರ್ಯಕ್ರಮಕ್ಕೆ ಬಜಗೋಳಿ ದಿಡಿ೦ಬಿರಿ ಅಯ್ಯಪ್ಪ ಮಂದಿರದಲ್ಲಿ ಡಾ.ರವೀಂದ್ರ ಶೆಟ್ಟಿ ಬಜಗೋಳಿ ಚಾಲನೆ ನೀಡಿದರು.
ಭಾರತೀಯ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಮಸ್ತ ಮತ ಪಂಗಡದವರಿಗೂ ಬದುಕಲು ಸಮಾನ ಅವಕಾಶ ಸಂವಿಧಾನ ನೀಡಿದ್ದು,ವಿಶ್ವಕ್ಕೆ ಮಾದರಿಯಾದ ಆಡಳಿತ ವ್ಯವಸ್ಥೆ ನಮ್ಮ ದೇಶದಲ್ಲಿದೆ. ಆದರೆ ಅಲ್ಪಸಂಖ್ಯಾತರ ಓಲೈಕೆಗಾಗಿ ಬಹುಸಂಖ್ಯಾತ ಹಿಂದೂ ಧರ್ಮವನ್ನು ಕಡೆಗಣಿಸುವಂತಹ ಮತ್ತು ರಾಜಕೀಯವಾಗಿ ಮಾತ್ರ ಬಳಸಿಕೊಳ್ಳುವ ವ್ಯವಸ್ಥೆಯಿಂದಾಗಿ ಹಿಂದೂ ಧರ್ಮದ ಉಳಿವಿಗಾಗಿ ಎಲ್ಲ ಹಿಂದೂ ದರ್ಮದವರು ಜಾತಿ ಮತ,ಪಂಗಡ,ರಾಜಕೀಯ ವೈಷಮ್ಯ ಬದಿಗಿಟ್ಟು ಒಗ್ಗಟ್ಟಾಗುವುದರೊಂದಿಗೆ ಸಾಮೂಹಿಕವಾಗಿ ದೇವರಿಗೆ ಪ್ರಾರ್ಥನೆ ಮಾಡುವ ಅಗತ್ಯ ಕಾಲಗಟ್ಟದಲ್ಲಿ ನಾವಿದ್ದೇವೆ.
ಶ್ರೀ ರಾಮ ಜಯರಾಮ ಜಯಜಯ ರಾಮ ಎಂಬ ನಾಮ ಸಂಕೀರ್ತನೆಯೊಂದಿಗೆ ಭಕ್ತಿಪೂರ್ವಕವಾಗಿ ದೇವರನ್ನು ಪ್ರಾರ್ಥಿಸುವ ಈ ಕಾರ್ಯಕ್ರಮದಲ್ಲಿ ಸಮಸ್ತ ಹಿಂದೂ ಬಂಧುಗಳು ಭಾಗವಹಿಸಬೇಕು ಎಂದು ಡಾ.ರವೀಂದ್ರ ಶೆಟ್ಟಿ ಬಜಗೋಳಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಶ್ರೀ ರಾಮ ತಾರಕ ಜಪ ಯಜ್ಞ ಸಮಿತಿಯ ಅಧ್ಯಕ್ಷ ದೇವಿದಾಸ್ ಪ್ರಭು,ಮುಡಾರು ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಸುರೇಶ್ ಶೆಟ್ಟಿ,ಪಂಚಾಯತ್ ಸದಸ್ಯ ಪ್ರಶಾಂತ್ ಮತ್ತಿತರರು ಉಪಸ್ಥಿತರಿದ್ದರು.
ಜ.5ರಿಂದ ಜ.21ರ ಮಂಗಳವಾರದವರೆಗೆ ಪ್ರತೀ ದಿನ ಸಾಯಂಕಾಲ ಕುಣಿತ ಭಜನೆ ಹಾಗೂ ಜ.22 ಬುಧವಾರ ಸೂರ್ಯೋದಯದಿಂದ ಸೂರ್ಯಾಸ್ಥದ ವರೆಗೆ ಶ್ರೀ ರಾಮ ತಾರಕ ಜಪ ಯಜ್ಞ ನಡೆಯಲಿದೆ.
ಶ್ರೀ ರಾಮತಾರಕ ಜಪಯಜ್ಞದಲ್ಲಿ ಸಮಸ್ತ ಹಿಂದೂ ಬಂಧುಗಳಿಗೆ ಶ್ರೀ ರಾಮದೇವರಿಗೆ ಪುಷ್ಪಾರ್ಚನೆಯೊಂದಿಗೆ ಶ್ರೀ ರಾಮ ತಾರಕ ಜಪವನ್ನು ಪಠಿಸುವುದಕ್ಕೆ ಅವಕಾಶ ಕಲ್ಪಿಸಲಾಗಿದೆ.ಸಂಜೆ 6-15ರಿಂದ ಸಮಸ್ತ ಹಿಂದೂ ಬಾಂಧವರಿಂದ ಅಯೋಧ್ಯೆಗೆ ಕಡೆ ಮುಖಮಾಡಿ ಹಣತೆಯನ್ನು ಕೈಯಲ್ಲಿ ಹಿಡಿದು ಮಹಾಮಂಗಳಾರತಿ ಕಾರ್ಯಕ್ರಮ ನಡೆಯಲಿದೆ.
ಧಾರ್ಮಿಕ ಸಭೆ:ಜ.22 ರಂದು ವಾಗ್ಮಿ ದಾಮೋದರ್ ಶರ್ಮಾರವರಿಂದ ಧಾರ್ಮಿಕ ಪ್ರವಚನ ಹಾಗೂ 7.30ರಿಂದ ವಿಠ್ಠಲ್ ನಾಯಕ್ ಕಲ್ಲಡ್ಕ ಮತ್ತು ಬಳಗದವರಿಂದ ಗೀತಾ ಸಾಹಿತ್ಯ ಸಂಭ್ರಮ ನಡೆಯಲಿದೆ.
ಕೇಂದ್ರ ಸರಕಾರದ ಯುವಜನ ಮತ್ತು ಕ್ರೀಡಾ ಇಲಾಖೆ ವತಿಯಿಂದ ದೆಹಲಿಯ ಭಾರತ್ ಮಂಡಪಂ ನಲ್ಲಿ ನಡೆಯಲಿರುವ ವಿಕಸಿತ ಭಾರತ ಯಂಗ್ ಲೀಡರ್ಸ್ ಡೈಲಾಗ್ ಅಧಿವೇಶನದಲ್ಲಿ ಭಾಗವಹಿಸಲು ಕರ್ನಾಟಕದಿಂದ ‘ವಿಶೇಷ ಆಹ್ವಾನಿತ ಯೂತ್ ಐಕಾನ್’ ಆಗಿ ಕಾರ್ಕಳ ತಾಲೂಕಿನ ಇನ್ನ ಗ್ರಾಮದ ಮನು ಶೆಟ್ಟಿ ಆಯ್ಕೆಯಾಗಿದ್ದಾರೆ. ಇವರು ಉದ್ಯಮಿ ಇನ್ನಾ ಉದಯ ಶೆಟ್ಟಿ ಮತ್ತು ಜಿ. ಪಂ ಮಾಜಿ ಸದಸ್ಯೆ ರೇಶ್ಮಾ ಉದಯ ಶೆಟ್ಡಿ ಯವರ ಪುತ್ರಿ ಯಾಗಿದ್ದಾರೆ.
ವಿಕಸಿತ ಭಾರತದ ನಿರ್ಮಾಣದಲ್ಲಿ ಯುವ ಜನರ ಭಾಗವಹಿಸುವಿಕೆಯನ್ನು ಖಾತ್ರಿಗೊಳಿಸಲು ರಾಷ್ಟ್ಟೀಯ ಮಟ್ಟದ ಯುವ ಪ್ರತಿಭೆಗಳ 2 ದಿನ ದ ಅಧಿವೇಶನ ದೆಹಲಿಯಲ್ಲಿ ಜನವರಿ 11, ಮತ್ತು 12 ರಂದು ನಡೆಯಲಿದ್ದು ಭಾರತಾದ್ಯಂತದ 3 ಸಾವಿರ ಯುವಕ ಯುವತಿಯರು ಆಯ್ಕೆಯಾಗಿದ್ದಾರೆ.
ದೇಶದ ಅಭಿವೃದ್ದಿಗೆ ಸಂಬಂಧಿಸಿದಂತೆ ವಿಕಸಿತ ಭಾರತದ ವಿವಿಧ ಕ್ಷೇತ್ರಗಳ ವಿಷಯಗಳ ಬಗ್ಗೆ ಚರ್ಚೆ, ವಿಚಾರ ಮಂಡನೆ ಮತ್ತು ಸಂವಾದಗಳು ನಡೆಯಲಿದ್ದು ಆಹ್ವಾನಿತರು ತಮ್ಮ ವಿಚಾರಗಳನ್ನು ಪ್ರಸ್ತುತ ಪಡಿಸಲಿದ್ದಾರೆ. ವಿವಿಧ ಇಲಾಖೆಗಳ ಪ್ರದರ್ಶನಗಳು ಇರಲಿವೆ. ಪ್ರಧಾನಿ ನರೇಂದ್ರ ಮೋದಿಯೂ ಸೇರಿದಂತೆ ಕೇಂದ್ರ ದ ವಿವಿಧ ಇಲಾಖಾ ಮಂತ್ರಿಗಳು, ಅಧಿಕಾರಿಗಳು, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿಕೊಂಡಿರುವ ಪರಿಣಿತರೊಂದಿಗೆ ಸಂವಾದ ನಡೆಯಲಿದೆ.
ಮನು ಶೆಟ್ಡಿಯವರು ಉಡುಪಿ ಎಂಜಿಎಂ ಕಾಲೇಜಿನ ಪ್ರಥಮ ಬಿ.ಎ ವಿದ್ಯಾರ್ಥಿನಿಯಾಗಿದ್ದು , ವಿದ್ಯಾರ್ಥಿ ಸಂಘಟನೆ ಎಬಿವಿಪಿ ಹಾಗೂ ಅಂತರಾಷ್ಟ್ರೀಯ ಸಂಸ್ಥೆ ಜೆಸಿಐ ಪಡುಬಿದ್ರಿ ಯ ಸಕ್ರೀಯ ಸದಸ್ಯೆಯಾಗಿದ್ದಾರೆ.
ಪ್ರತಿಭಾ ಕಾರಂಜಿಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ತನ್ಮಯಿ ಆರ್. ಆರಾಧ್ಯ
ಕರ್ನಾಟಕ ರಾಜ್ಯ ವಿದ್ಯಾರ್ಥಿ ಕ್ಷೇಮಾಭಿವೃದ್ಧಿ ಮತ್ತು ಶಾಲಾ ಶಿಕ್ಷಣ ಇಲಾಖೆಯ ವತಿಯಿಂದ ಜನವರಿ 2ರಂದು ದುರ್ಗಾ ಆಂಗ್ಲಮಾಧ್ಯಮ ಶಾಲೆ ಕೊಕ್ಕರ್ಣೆಯಲ್ಲಿ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದ ಪ್ರಥಮ ಪಿ.ಯು.ಸಿ. ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ತನ್ಮಯಿ ಆರ್. ಆರಾಧ್ಯ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಇವರು ಕುಂದಾಪುರದ ಎಂ. ರಾಜಶೇಖರ ಹಾಗೂ ಕಲ್ಪನಾ ಆರ್ ದಂಪತಿಯ ಸುಪುತ್ರಿ. ಸಾಧಕ ವಿದ್ಯಾರ್ಥಿನಿಯನ್ನು ಅಜೆಕಾರ್ ಪದ್ಮಗೋಪಾಲ್ ಎಜುಕೇಶನ್ ಟ್ರಸ್ಟ್(ರಿ.)ನ ಅಧ್ಯಕ್ಷರಾದ ಡಾ.ಸುಧಾಕರ ಶೆಟ್ಟಿ, ಕಾಲೇಜಿನ ಪ್ರಾಂಶುಪಾಲರು ಹಾಗೂ ಬೋಧಕ-ಬೋಧಕೇತರ ವರ್ಗ ಅಭಿನಂದಿಸಿರುತ್ತಾರೆ.
ನಿಟ್ಟೆ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಹಳೆಯ ವಿದ್ಯಾರ್ಥಿಗಳ ಪುನರ್ಮಿಲನ ಹಾಗೂ 1995 ರಲ್ಲಿ ಪ್ರವೇಶ ಪಡೆದ ಎನ್ಎಂಎಎಂಐಟಿಯ ಹಳೆಯ ವಿದ್ಯಾರ್ಥಿಗಳ ಸಿಲ್ವರ್ ರಿಯೂನಿಯನ್ ನ್ನು ನಿಟ್ಟೆ ತಾಂತ್ರಿಕ ಕಾಲೇಜಿನ ಹಳೆಯ ವಿದ್ಯಾರ್ಥಿಗಳ ಸಂಘವಾದ “ವೆನಮಿತಾ” ಇತ್ತೀಚೆಗೆ ನಿಟ್ಟೆಯ ಸಂಭ್ರಮ್ ಸಭಾಂಗಣದಲ್ಲಿ ಹಮ್ಮಿಕೊಂಡಿತು.
ಕಾರ್ಯಕ್ರಮವನ್ನು ನಿಟ್ಟೆ ಎಜುಕೇಶನ್ ಟ್ರಸ್ಟ್ ನ ಅಧ್ಯಕ್ಷ ಹಾಗೂ ನಿಟ್ಟೆ ಡೀಮ್ಡ್ ಟು ಬಿ ಯೂನಿವರ್ಸಿಟಿಯ ಕುಲಪತಿ ಎನ್.ವಿನಯ ಹೆಗ್ಡೆ ಉದ್ಘಾಟಿಸಿದರು. ನಿಟ್ಟೆ ಕ್ಯಾಂಪಸ್ ನ್ನು ಅವರು ಎಷ್ಟು ಭಾವನಾತ್ಮಕವಾಗಿ ಹಚ್ಚಿಕೊಂಡಿರುವರು ಎಂದು ವ್ಯಕ್ತಪಡಿಸಿ, ಸಂಸ್ಥೆಯ ಬೆಳವಣಿಗೆಯ ಬಗ್ಗೆ ನೆನಪಿಸಿಕೊಂಡು ಮತ್ತು ಸಂಸ್ಥೆಯ ಯಶಸ್ಸಿನಲ್ಲಿ ಹಳೆಯ ವಿದ್ಯಾರ್ಥಿಗಳ ನಿರ್ಣಾಯಕ ಪಾತ್ರವನ್ನು ವಿವರಿಸಿದರು.
ನಿಟ್ಟೆ ಸಂಸ್ಥೆಯ ಉಪಾಧ್ಯಕ್ಷ ಡಾ.ಗೋಪಾಲ್ ಮುಗೇರಾಯ ಅವರು ಪ್ರೇರಕ ಭಾಷಣ ಮಾಡಿ, ಇಂತಹ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಹಾರೈಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ವೆನಮಿತಾದ ಅಧ್ಯಕ್ಷ ಮುಲ್ಕಿ ಜೀವನ್ ಕೆ.ಶೆಟ್ಟಿ ಅವರು ತಮ್ಮ ಭಾಷಣದಲ್ಲಿ, ಪ್ರಸ್ತುತ ವಿದ್ಯಾರ್ಥಿಗಳನ್ನು ಅವರ ಶೈಕ್ಷಣಿಕ ಮತ್ತು ವೃತ್ತಿಜೀವನದ ಅನ್ವೇಷಣೆಗಳಲ್ಲಿ ಬೆಂಬಲಿಸುವ ಹಳೆಯ ವಿದ್ಯಾರ್ಥಿಗಳ ಸಂಘದ ಬದ್ಧತೆಯನ್ನು ವ್ಯಕ್ತಪಡಿಸಿದರು.
ಮಾಜಿ ಪ್ರಾಂಶುಪಾಲ ಡಾ. ಎಸ್ ವೈ ಕುಲಕರ್ಣಿ ಅವರ ಕೊಡುಗೆಗಳಿಗಾಗಿ ವಿಶೇಷ ಗೌರವದೊಂದಿಗೆ ಸನ್ಮಾನಿಸಲಾಯಿತು. ಜೊತೆಗೆ 25 ವರ್ಷಗಳ ಸೇವೆಯನ್ನು ಪೂರ್ಣಗೊಳಿಸಿದ ಹಾಗೂ ನಿವೃತ್ತರಾದ ಎನ್ಎಂಎಎಂಐಟಿ ಬೋಧಕರು ಮತ್ತು ಸಿಬ್ಬಂದಿ ಗಳಾದ ಪ್ರೊ.ಶಾಲಿನಿ ಕೆ.ಶರ್ಮಾ, ಡಾ.ಉದಯ ಕುಮಾರ್, ಪ್ರೊ.ವೇಣುಗೋಪಾಲ್, ಪ್ರೊ.ವಾಸುದೇವ ಶೆಟ್ಟಿಗಾರ್, ಡಾ.ದಿವಾಕರ ಭಟ್ (ಗ್ರಂಥಪಾಲಕ), ದೊಂಬಯ್ಯ ಪೂಜಾರಿ, ಸುನೀತಾ ಶೆಟ್ಟಿ, ಜಾನ್ ಡಿಸೋಜ ಅವರನ್ನು ಸನ್ಮಾನಿಸಲಾಯಿತು.
ಎನ್ಎಂಎಎಂಐಟಿಯ ಪ್ರಾಂಶುಪಾಲ ಡಾ.ನಿರಂಜನ್ ಎನ್.ಚಿಪ್ಲುಂಕರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸಂಸ್ಥೆಯ ಪಯಣದಲ್ಲಿ ಹಳೆಯ ವಿದ್ಯಾರ್ಥಿಗಳ ಮಹತ್ವವನ್ನು ಹೇಳಿದರು. ಮಹೇಶ್ ನಿಡುಗಾಲ (1995 ಬ್ಯಾಚ್) ಮತ್ತು ಶ್ರೀವತ್ಸ ಪ್ರಭಾಕರ್ (1994 ಬ್ಯಾಚ್) ಸೇರಿದಂತೆ ವಿವಿಧ ಬ್ಯಾಚ್ ಗಳ ಹಳೆಯ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ವೆನಮಿತಾ ಉಪಾಧ್ಯಕ್ಷ ಅವಿನಾಶ್ ಕೃಷ್ಣ ಕುಮಾರ್ ಸ್ವಾಗತಿಸಿ, ಕಾರ್ಯದರ್ಶಿ ರಂಜಿತ್ ಭಟ್ ವಂದಿಸಿದರು. ಕಾರ್ಯಕ್ರಮವನ್ನು ವೆನಾಮಿಟಾದ ಖಜಾಂಚಿ ಡಾ. ಹರ್ಷಿತಾ ನಿರೂಪಿಸಿದರು. ಜೊತೆ ಕಾರ್ಯದರ್ಶಿ ಶರತ್ ಸಾಲಿಯಾನ್ ಉಪಸ್ಥಿತರಿದ್ದರು.
ಕಾರ್ಕಳ:ಬಸ್ ಗೆ ಆಂಬುಲೆನ್ಸ್ ಡಿಕ್ಕಿ ಹೊಡೆದ ಘಟನೆ ಕಾರ್ಕಳ ಕುಕ್ಕುಂದೂರು ಬಳಿನಡೆದಿದೆ.
ಬಸ್ ಚಾಲಕ ಸುಲೇಮಾನ್ ಎಂಬುವವರು ಕುಕ್ಕುಂದೂರು ಗ್ರಾಮದ ದುರ್ಗಾ ಹೈಸ್ಕೂಲ್ ಗ್ಯಾರೇಜ್ ಸ್ಟಾಪ್ ನಲ್ಲಿ ಬಸ್ಸನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸಿ ಮುಂದಕ್ಕೆ ಹೋಗುತ್ತಿರುವಾಗ ಅಜೆಕಾರು ಕಡೆಯಿಂದ ನೊಂದಣಿ ಸಂಖ್ಯೆ ಇಲ್ಲದ T1024KA2619E ಇರುವ ಅಂಬುಲೆನ್ಸ ವಾಹನವನ್ನು ಅದರ ಚಾಲಕ ಜೋಡುರಸ್ತೆಯ ಕಡೆಗೆ ಅತೀ ವೇಗ ಚಲಾಯಿಸಿ ಕೊಂಡು ಬಂದು ಬಸ್ಸಿನ ಬಲಬದಿಯ ಎದುರುಗಡೆ ಡಿಕ್ಕಿ ಹೊಡೆದು ನಂತರ ರಸ್ತೆಯ ಬದಿಯಲ್ಲಿ ಇರುವ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದೆ.
ಅಪಘಾತದ ರಭಸಕ್ಕೆ ರಸ್ತೆಯ ಬದಿಯಲ್ಲಿ ಇದ್ದ ವಿದ್ಯುತ್ ಕಂಬ ತುಂಡಾಗಿದ್ದು, ಬಸ್ ಬಾಗಿಲು ಹಾಗೂ ಬಂಪರ್ ಮತ್ತು ಅಂಬುಲೆನ್ಸ ವಾಹನ ಸಂಪೂರ್ಣ ಜಖಂಗೊಂಡಿದೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕ್ರೈಸ್ಟ್ ಕಿಂಗ್ ಹಿರಿಯ ವಿದ್ಯಾರ್ಥಿಗಳಾದ ಟ್ವಿನ್ಸನ್ ವೀವನ್ ಮಿನೇಜನಸ್ ಹಾಗೂ ಲವ್ಯ ಶೆರ್ಲಿನ್ ಮೆಂಡೋನ್ಸಾ ಸಿ.ಎ ಅಂತಿಮ ಪರೀಕ್ಷೆಯಲ್ಲಿ ತೇರ್ಗಡೆ
ಕಾರ್ಕಳ: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆ 2024ರ ನವೆಂಬರ್ ತಿಂಗಳಲ್ಲಿ ನಡೆಸಿದ – ಸಿ.ಎ. ಅಂತಿಮ ಪರೀಕ್ಷೆಯಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಪದವಿ ಪೂರ್ವ ಕಾಲೇಜಿನ ಇಬ್ಬರು ವಿದ್ಯಾರ್ಥಿಗಳು ತೇರ್ಗಡೆ ಹೊಂದಿದ್ದಾರೆ.
ಕಾರ್ಕಳ ಗಾಂಧೀಮೈದಾನ ಬಳಿಯ ನಿವಾಸಿಗಳಾದ ಶ್ರೀ ವಿಲ್ಸನ್ ಮಿನೇಜಸ್ ಮತ್ತು ಶ್ರೀಮತಿ ತೃಪ್ತಿ ಮಿನೇಜಸ್ ಅವರ ಪುತ್ರ ಟ್ವಿನ್ಸನ್ ವೀವನ್ ಮಿನೇಜಸ್ ಹಾಗೂ ಕಾರ್ಕಳ ಪುಲ್ಕೇರಿ ಬಳಿಯ ನಿವಾಸಿಗಳಾದ ಶ್ರೀ ವಲೇರಿಯನ್ ಮತ್ತು ಶ್ರೀಮತಿ ಅನಿತಾ ಮೆಂಡೋನ್ಸಾ ದಂಪತಿಗಳ ಪುತ್ರಿ ಲವ್ಯ ಶೆರ್ಲಿನ್ ಮೆಂಡೋನ್ಸಾ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿದ್ದಾರೆ.
ನಂದಳಿಕೆ ಅಬ್ಬನಡ್ಕ ಫ್ರೆಂಡ್ಸ್ ಕ್ಲಬ್:ರಜತ ಸಂಭ್ರಮದ ಪೋಸ್ಟರ್ ಬಿಡುಗಡೆ
ರಾಜ್ಯ ಅತ್ಯುತ್ತಮ ಯುವ ಮಂಡಳಿ ಪ್ರಶಸ್ತಿ ಪುರಸ್ಕೃತ ಸಂಸ್ಥೆ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ನೇತೃತ್ವದಲ್ಲಿ 2025ರ ಫೆಬ್ರವರಿ 28 ಮತ್ತು ಮಾರ್ಚ್ 1ರಂದು ಜರಗಲಿರುವ ರಜತ ಸಂಭ್ರಮದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮವು ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಿತು.
ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ವೇದಮೂರ್ತಿ ಬಿ.ಕೆ. ವಿಘ್ನೇಶ್ ಭಟ್ ಅವರು ರಜತ ಸಂಭ್ರಮದ ಪೋಸ್ಟರ್ ಬಿಡುಗಡೆಗೊಳಿಸಿ ಸಮಾರಂಭಕ್ಕೆ ಶುಭ ಹಾರೈಸಿದರು.
ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಅಧ್ಯಕ್ಷರಾದ ಬೀರೊಟ್ಟು ದಿನೇಶ್ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ಜರಗಿತು.
ಕಾರ್ಯಕ್ರಮದಲ್ಲಿ ಬೆಳ್ಮಣ್ಣು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ತಂತ್ರಿಗಳಾದ ಸತೀಶ್ ತಂತ್ರಿ, ಸುಮಧ್ವ ಭಟ್, ಉದ್ಯಮಿ ಸದಾಶಿವ ಪೈ ಬೆಳ್ಮಣ್ಣು, ಕರುಣಾಕರ ಉಡುಪಿ, ರಘುನಾಥ ನಾಯಕ್ ಉಪಸ್ಥಿತಿತರಿದ್ದರು.
ಈ ಸಂದರ್ಭದಲ್ಲಿ ನಂದಳಿಕೆ ಅಬ್ಬನಡ್ಕ ಶ್ರೀ ದುರ್ಗಾಪರಮೇಶ್ವರಿ ಫ್ರೆಂಡ್ಸ್ ಕ್ಲಬ್‌ನ ಸಂಚಾಲಕರಾದ ಅಬ್ಬನಡ್ಕ ಸಂದೀಪ್ ವಿ. ಪೂಜಾರಿ, ಪೂರ್ವಾಧ್ಯಕ್ಷ ಸುರೇಶ್ ಪೂಜಾರಿ, ಕಾರ್ಯದರ್ಶಿ ಸಂಧ್ಯಾ ಶೆಟ್ಟಿ, ಜೊತೆ ಕಾರ್ಯದರ್ಶಿ ಅನ್ನಪೂರ್ಣ ಕಾಮತ್, ಕೋಶಾಧಿಕಾರಿ ಆರತಿ, ಮಹಿಳಾ ಸಂಘಟನಾ ಕಾರ್ಯದರ್ಶಿ ಲೀಲಾ ಪೂಜಾರಿ, ಸದಸ್ಯರಾದ ವೀಣಾ ಪೂಜಾರಿ, ವೀಣಾ ಆಚಾರ್ಯ, ಯೋಗೀಶ್ ಆಚಾರ್ಯ, ಪ್ರದೀಪ್ ಸುವರ್ಣ ಮೊದಲಾದವರಿದ್ದರು.
ಸಿ.ಎ ಅಂತಿಮ ಪರೀಕ್ಷೆ ತೇರ್ಗಡೆ:ಜ್ಞಾನಸುಧಾ ಹಳೆ ವಿದ್ಯಾರ್ಥಿಗಳ ಸಾಧನೆ
ಕಾರ್ಕಳ : ಐ.ಸಿ.ಎ.ಐ ನಡೆಸಿದ 2024ರ ನವೆಂಬರ್-ಸಿ.ಎ ಅಂತಿಮ ಪರೀಕ್ಷೆಯಲ್ಲಿ ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಹಳೆವಿದ್ಯಾರ್ಥಿಗಳಾದ, ಕಾರ್ಕಳ ಕಾಬೆಟ್ಟು ನಿವಾಸಿ ವಿಶ್ವನಾಥ ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿಗಳ ಸುಪುತ್ರನಾದ ಸೋಮನಾಥ್ ವಿ. ಶೆಟ್ಟಿ, ಜಾರ್ಕಳದ ಮೋಹನ್ ಕಿಣಿ ಮತ್ತು ಶುಭಾ ಕಿಣಿ ದಂಪತಿಗಳ ಸುಪುತ್ರಿಯಾದ ಸ್ವಾತಿ ಕಿಣಿ ಮತ್ತು ಬೈಲೂರು ರಮೇಶ್ ಶೆಟ್ಟಿ ಮತ್ತು ಶಾಲಿನಿ ಶೆಟ್ಟಿ ದಂಪತಿಗಳ ಸುಪುತ್ರಿಯಾದ ರಕ್ಷಾ ಶೆಟ್ಟಿ ಅತ್ಯುತ್ತಮ ಅಂಕಗಳೊಂದಿಗೆ ತೇರ್ಗಡೆ ಹೊಂದಿರುತ್ತಾರೆ.
ಇವರ ಸಾಧನೆಯನ್ನು ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ.ಸುಧಾಕರ್ ಶೆಟ್ಟಿಯವರು ಹಾಗೂ ಜ್ಞಾನಸುಧಾ ಪರಿವಾರವು ಅಭಿನಂದಿಸಿ ಹರ್ಷ ವ್ಯಕ್ತಪಡಿಸಿರುತ್ತಾರೆ.