
ಕಾರ್ಕಳದ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಹೂಡಿಕೆ ಜಾಗೃತಿ ಮತ್ತು ನಿರ್ವಹಣೆ ಎಂಬ ವಿಷಯದ ಮೇಲೆ ಉಪನ್ಯಾಸ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಹೆಚ್‌ಡಿಎಫ್‌ಸಿ ಮ್ಯೂಚ್ವಲ್ ಫಂಡ್ ನ ಉಡುಪಿ ಶಾಖಾ ವ್ಯವಸ್ಥಾಪಕರಾದ ಪ್ರತಾಪ್ ನಾಯಕ್ ಅವರು ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾತನಾಡಿ “ಭವಿಷ್ಯದ ದೃಷ್ಟಿಯಿಂದ ಹೂಡಿಕೆ ಬಹಳ ಅಗತ್ಯವಾಗಿದೆ. ಆದರೆ ಎಲ್ಲಿ ಹೇಗೆ, ಯಾವುದರಲ್ಲಿ ಮತ್ತು ಯಾವಾಗ ಹೂಡಿಕೆ ಮಾಡಬೇಕೆಂಬ ಪೂರ್ವಾಲೋಚನೆ ಅತೀ ಅಗತ್ಯವಾಗಿರಬೇಕು. ಹೂಡಿಕೆ ಮಾಡುವುದರ ಜೊತೆಗೆ ಅದರ ನಿರ್ವಹಣಾ ವಿಧಾನಗಳ ಬಗ್ಗೆ ಸೂಕ್ತ ಜ್ಞಾನ ಹೊಂದಿರಬೇಕು. ವಿವೇಚನಾ ರಹಿತ ಹೂಡಿಕೆಗಳಿಂದ ಆರ್ಥಿಕ ಅಪಾಯವಾಗಬಹುದು. ಪ್ರಸ್ತುತ ಕಾಲಘಟ್ಟದಲ್ಲಿ ಮ್ಯೂಚ್ವಲ್ ಫಂಡ್‌ಗಲ್ಲಿ ಹೂಡಿಕೆ ಮಾಡುವುದು ಒಳ್ಳೆಯ ನಿರ್ಧಾರವಾಗುತ್ತದೆ” ಎಂದು ಹೇಳಿದರು.
ಸಂಸ್ಥೆಯ ಉಪಪ್ರಾಚಾರ್ಯ ಮತ್ತು ವಾಣಿಜ್ಯ ವಿಭಾಗ ಮುಖ್ಯಸ್ಥ ಡಾ.ಪ್ರಕಾಶ್ ಭಟ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ಚಿನ್ನ, ಷೇರುಗಳು, ವಿವಿಧ ಆಸ್ತಿಗಳು, ಮ್ಯೂಚ್ವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದರಿಂದ ಭವಿಷ್ಯವನ್ನು ಸುಭದ್ರಗೊಳಿಸುವುದರ ಬಗ್ಗೆ ಮಾಹಿತಿ ನೀಡಿದರು.
ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ಪ್ರಜ್ವಲ್ ಶೆಟ್ಟಿ ಸ್ವಾಗತಿಸಿ ಮದಿಹಾ ಫಾತಿಮ ವಂದಿಸಿದರು. ಜಿತೇಶ್ ಪಿಂಟೊ ಅತಿಥಿಗಳನ್ನು ಪರಿಚಯಿಸಿ ಕಾರ್ಯಕ್ರಮ ನಿರೂಪಿಸಿದರು.













