ನೀರೆ ಗ್ರಾಮ ಪಂಚಾಯತ್ ವ್ಯಾಪ್ತಿಯ ‘ಜಡ್ಡಿನಂಗಡಿಯಿಂದ ಜಂಗುಳಿಯ ವರೆಗಿನ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ ಎಸೆಯಲಾಗಿರುವ ಪ್ಲಾಸ್ಟಿಕ್ ಸೇರಿದಂತೆ ತ್ಯಾಜ್ಯಗಳನ್ನು ಸಂಗ್ರಹ ಮಾಡುತ್ತಿದ್ದಾಗ ತ್ಯಾಜ್ಯ ಕಟ್ಟಿನ ಒಳಗಡೆ ಉಡುಪಿ ತೆಂಕನಿಡಿಯೂರಿನ ವ್ಯಕ್ತಿಯೋರ್ವರ ಆಧಾರ್‌ಕಾರ್ಡ್, ಪಾನ್ ಕಾರ್ಡ್ ಸಿಕ್ಕಿದ್ದು ಅವರನ್ನು ಸಂಪರ್ಕಿಸಿದಾಗ ಕಸ, ಎಸೆದಿರುವುದು ಒಪ್ಪಿಕೊಂಡಿದ್ದು ವ್ಯಕ್ತಿಯಿಂದ 2,000 ರೂ ದಂಡ ವಸೂಲಿ ಮಾಡಿ ಎಚ್ಚರಿಕೆ ನೀಡಲಾಗಿದೆ.
ನೀರೆ ಗ್ರಾ. ಪಂ.ವ್ಯಾಪ್ತಿಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದ್ದು, ಗ್ರಾಮಸ್ಥರು ಸ್ವಚ್ಛತೆ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಕೊಂಡಿದ್ದಾರೆ. ಆದರೆ ನೀರೆ ಗ್ರಾ. ಪಂ. ವ್ಯಾಪ್ತಿಯು ಉಡುಪಿ-ಕಾರ್ಕಳ ಹೆದ್ದಾರಿಯಲ್ಲಿ ಬರುವುದರಿಂದ ಹೊರ ಭಾಗದ ಕೆಲ ಅನಾಗರಿಕರು ತಂದು ತ್ಯಾಜ್ಯಗಳನ್ನು ಇಲ್ಲಿ ಎಸೆಯುವುದರಿಂದ ಪಂ.ಆಡಳಿತಕ್ಕೆ ಸ್ವಚ್ಛತೆ ಕಾಪಾಡುವುದೇ ಸವಾಲಾಗಿ ಪರಿಣಮಿಸಿದೆ.
ನೀರೆ ಪಂ. ಆಡಳಿತ ವ್ಯಾಪ್ತಿಯ ಎಲ್ಲ ರಸ್ತೆಗಳ ಇಕ್ಕೆಲ ಹಾಗೂ ನೀರು ಹೋಗುವ ತೊಡುಗಳನ್ನು ಸ್ವಚ್ಛತೆ ಮಾಡುತ್ತಿದ್ದು ಮಳೆಗಾಲ ಪ್ರಾರಂಭವಾಗುವ ಮೊದಲು ಎಲ್ಲ ಕಸ ಕಡ್ಡಿಗಳನ್ನು ವಿಲೇವಾರಿ ಮಾಡುವ ಗುರಿ ಹೊಂದಿದೆ. ಪ್ರವಾಸಿಗರು, ನಿತ್ಯ ಸಂಚಾರಿಗಳು ಜನ ವಸತಿ ಇಲ್ಲದ ಪ್ರದೇಶದಲ್ಲಿ ರಸ್ತೆ ತಿರುವುಗಳಲ್ಲಿ ಕಸವನ್ನು ಪ್ರತಿದಿನ ಎಸೆದು ಪರಿಸರಕ್ಕೆ ಹಾನಿ ಮಾಡುತ್ತಿದ್ದಾರೆ. ಕಸ ಎಸೆಯುವವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಪಿಡಿಒ ನಾಗರಾಜ್ ಹೇಳಿದ್ದಾರೆ.






























