ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ 6ನೇ ಸೆಮಿಸ್ಟರ್ ಬಿಟೆಕ್ ವಿದ್ಯಾರ್ಥಿಗಳು ಆಯ್ಕೆ ಮಾಡಿದ್ದ ‘ಯಕ್ಷಗಾನದ ಪರಿಚಯ’ ಎಂಬ ಐಚ್ಛಿಕ ಕೋರ್ಸ್ ನ ಸೆಮಿಸ್ಟರ್ ಮೌಲ್ಯಮಾಪನದ ಭಾಗವಾಗಿ ಇತ್ತೀಚೆಗೆ ಕಾಲೇಜಿನಲ್ಲಿ ‘ವೀರ ಬಬ್ರುವಾಹನ’ ಎಂಬ ಯಕ್ಷಗಾನ ಪ್ರಸಂಗವನ್ನು ಪ್ರದರ್ಶಿಸಿದರು. ರಾಷ್ಟ್ರೀಯ ಶಿಕ್ಷಣ ನೀತಿ ಮಾರ್ಗಸೂಚಿಗಳ ಪ್ರಕಾರ, ‘ಯಕ್ಷಗಾನದ ಪರಿಚಯ’ ಎಂಬ ವಿಷಯವನ್ನು ನಿಟ್ಟೆ ತಾಂತ್ರಿಕ ಕಾಲೇಜಿನಲ್ಲಿ ಪರಿಚಯಿಸಲಾಯಿತು. ರಸಾಯನಶಾಸ್ತ್ರ ವಿಭಾಗದ ಪ್ರಾಧ್ಯಾಪಕ ಹಾಗೂ ಯಕ್ಷಗಾನ ಕಲಾವಿದ ಡಾ.ಜನಾರ್ದನ ನಾಯಕ್ ಅವರು ಸೆಮಿಸ್ಟರ್ ನಲ್ಲಿ ವಿದ್ಯಾರ್ಥಿಗಳಿಗೆ 40 ಗಂಟೆಗಳ ಕಾಲ ಯಕ್ಷಗಾನ ತರಬೇತಿ ನೀಡುತ್ತಾರೆ. ಈ ಕೋರ್ಸ್ ನ ಭಾಗವಾಗಿ ಯಕ್ಷಗಾನ, ತಾಳ, ನಾಟ್ಯ, ವೇಷ, ಸಂವಾದ ಇತ್ಯಾದಿಗಳ ಮೂಲಭೂತ ವಿಷಯಗಳನ್ನು ಕಲಿಸಲಾಗುತ್ತಿದೆ. ಇದಕ್ಕೆ ವಿದ್ಯಾರ್ಥಿಗಳಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.






























