ಕಾರ್ಕಳ ಹಾಗೂ ಹೆಬ್ರಿ ತಾಲೂಕಿನಾದ್ಯಂತ ಶುಕ್ರವಾರ ಸಂಜೆ ಕೆಲವು ಕಾಲ ಗುಡುಗು ಸಹಿತ ಧಾರಾಕಾರ ಮಳೆ ಸುರಿದಿದೆ.
ಕಾರ್ಕಳ ಪಟ್ಟಣ ಭಾಗ, ಜೋಡುರಸ್ತೆ, ಬೈಲೂರು, ಅಜೆಕಾರು, ಶಿರ್ಲಾಲು, ಕೆರ್ಬಾಶೆ, ಮಾಳ, ನೂರಳ್ ಬೆಟ್ಟು ಹೊಸಾರು, ಹೆರ್ಮುಂಡೆ ಹಾಗೂ ಬಜಗೋಳಿ ಭಾಗಗಳಲ್ಲಿ, ಹೆಬ್ರಿ ತಾಲೂಕಿನ ಮುನಿಯಾಲು, ಅಂಡಾರು, ಮುದ್ರಾಡಿ, ಕಬ್ಬಿನಾಲೆ ಸೇರಿದಂತೆ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿಯೂ ಉತ್ತಮ ಮಳೆಯಾದ ವರದಿಯಾಗಿದೆ.
ದಿಢೀರ್‌ಮಳೆಯಿಂದಾಗಿ ಒಮ್ಮೆಲೆ ರಸ್ತೆ ಮೇಲೆ ನೀರು ಹರಿದು ಕೃತಕನೆರೆ ಸೃಷ್ಟಿಯಾಗಿತ್ತು. ಜೋಡುರಸ್ತೆಯಲ್ಲಿ ಮಳೆ ನೀರು ನಿಂತು ಸುಗಮ ಸಂಚಾರಕ್ಕೆ ತೊಡಕುಂಟಾಯಿತು.ಗುಡುಗು-ಸಿಡಿಲು ಆರ್ಭಟದಿಂದಾಗಿ ವಿದ್ಯುತ್ ಪೂರೈಕೆಯಲ್ಲಿ ಅಡಚಣೆ ಉಂಟಾಯಿತು.
ತಾಲೂಕಿನಲ್ಲಿ ಮಳೆಗೆ ವಿವಿಧೆಡೆ ಹಾನಿ ಸಂಭವಿಸಿದೆ. ಕಲ್ಯ ಗ್ರಾಮದ ಅಶೋಕನಗರದಲ್ಲಿ ಒಂದು ಮನೆಗೆ ಸಿಡಿಲು ಬಡಿದು ಅಂದಾಜು ರೂ. 10,000 ನಷ್ಟ ಸಂಭವಿಸಿದೆ. ಕಾರ್ಕಳ ಗ್ರಾಮದ ಬಂಗ್ಲೆಗುಡ್ಡೆ ಸದ್ಭಾವನಗರದ ಒಂದು ಮನೆಗೆ ಗಾಳಿ-ಮಳೆಯಿಂದ ಮರ ಬಿದ್ದು ಹಾನಿಯಾಗಿದೆ. ಕಡ್ತಲ ಗ್ರಾಮದಲ್ಲಿ ಗಾಳಿ ಮಳೆಯಿಂದ ಹಲವು ಅಡಿಕೆ ಮರಗಳು ಮುರಿದು ಬಿದ್ದಿವೆ.






























