ಯಕ್ಷಗಾನ ಕಲಾವಿದರಿಗೆ ನೀಡುವ ಗೌರವ ಅವರಿಗೆ ವಿಶೇಷ ಶಕ್ತಿ ತುಂಬಿದಂತೆ, ಅದು ಅತ್ಯುತ್ತಮ ಕಾರ್ಯ, ಅದರಿಂದಾಗಿ ಊರಿಗೂ ಹೆಸರು ಬರುತ್ತದೆ. ಯಕ್ಷಗಾನ ಕ್ಷೇತ್ರವನ್ನು ಯಳಗೋಳಿ ರವೀಂದ್ರ ಪುರೋಹಿತ್ ನಿರಂತರವಾಗಿ ಪೋಷಿಸುತ್ತಿದ್ದಾರೆ ಎಂದು ಉದ್ಯಮಿ ಪ್ರಸನ್ನ ಸೂಡ ಕೆರೆಬೆಟ್ಟು ಹೇಳಿದರು.
ಅವರು ಮಂಗಳವಾರ ಶಿವಪುರ ಯಳಗೋಳಿ ದೈವಸ್ಥಾನದ ವಠಾರದಲ್ಲಿ ಹತ್ತು ಸಮಸ್ತರ ವತಿಯಿಂದ ಹೆಬ್ರಿ ಯಕ್ಷಚೇತನ ಕಲಾರಂಗದ ಯಳಗೋಳಿ ರವೀಂದ್ರ ಪುರೋಹಿತ್ ಹೆಬ್ರಿ ನೇತ್ರತ್ವದಲ್ಲಿ ನಡೆದ ಯಕ್ಷಗಾನ ಕಲಾವಿದರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಗೌರವ ಸ್ವೀಕರಿಸಿ ಮಾತನಾಡಿದ ಕಲಾವಿದ ಶ್ರೀಕೃಷ್ಣ ರೈ ನಿರ್ಚಾಲು ಯಳಗೋಳಿಯಲ್ಲಿ ನಮಗೆ ನೀಡಿರುವುದು ದೊಡ್ಡ ಗೌರವ. ಯಕ್ಷಗಾನವೇ ನಮಗೆ ಜೀವನ. ಗೌರವದಿಂದ ಇನ್ನಷ್ಟು ಶಕ್ತಿ ಬರುತ್ತದೆ. ಗೌರವವನ್ನು ಬೆಂಕಿನಾಥೇಶ್ವರನ ಪ್ರಸಾದವೆಂದು ಸ್ವೀಕರಿಸಿದ್ದೇವೆ. ಜೀವನ ನೀಡಿದ ಮೇಳಕ್ಕೆ ನಾವು ಪ್ರಾಮಾಣಿಕವಾಗಿ ಸೇವೆಯನ್ನು ಸಲ್ಲಿಸಬೇಕು. ಬೆಂಕಿನಾಥೇಶ್ವರ ಮೇಳವು ನಮ್ಮಂತಹ ಕಲಾವಿದರಿಗೆ ಬದುಕುಕೊಟ್ಟಿದೆ. ಯಕ್ಷಗಾನವನ್ನು ಎಲ್ಲರೂ ಸೇರಿ ಉಳಿಸಿ ಬೆಳೆಸಿ ಎಂದರು.
ಯಕ್ಷಗಾನ ಕಲಾ ಪೊಷಕ ಕಳ್ತೂರು ವಿಜಯ ಹೆಗ್ಡೆ ಅಧ್ಯಕ್ಷತೆ ವಹಿಸಿ ಮಾತನಾಡಿ ಯಕ್ಷಗಾನದಲ್ಲಿ ಇನ್ನಷ್ಟು ಹೊಸತನದ ಸೃಷ್ಠಿಯ ಮೂಲಕ ಯಕ್ಷಗಾನವನ್ನು ಉಳಿಸಬೇಕಾಗಿದೆ, ಕಲಾವಿದರ ಗೌರವದಿಂದ ಉತ್ತೇಜನಗೊಂಡು ಕಲಾ ಸೇವೆಗೆ ಪ್ರೇರಣೆ ದೊರೆಯುತ್ತದೆ ಎಂದರು.
ಗುಜರಾತ್ ಉದ್ಯಮಿ ಉದಯ ಶೆಟ್ಟಿ ಎಳಗೋಳಿ, ಹಿಂದೂ ಮುಖಂಡ ಗಣೇಶ್ ಕುಮಾರ್ ಅರಸಮ್ಮಕಾನು, ಹೆಬ್ರಿ ಯಕ್ಷಚೇತನ ಕಲಾರಂಗದ ಯಳಗೋಳಿ ರವೀಂದ್ರ ಪುರೋಹಿತ್ ಹೆಬ್ರಿ, ಆಶಾ ರವೀಂದ್ರ ಪುರೋಹಿತ್, ವಿಶ್ವಕರ್ಮ ಸಮಾಜದ ಮುಖಂಡ ಹೆಬ್ರಿ ಟಿ.ಜಿ.ಆಚಾರ್ಯ, ನಿವೃತ್ತ ಸಬ್ ಇನ್ಸ್ ಫೆಕ್ಟರ್ ಸಾಂತ್ಯಾರು ಸದಾಶಿವ ಆಚಾರ್ಯ ಬೈಲೂರು, ಶ್ರೀಧರ ಆಚಾರ್ಯ ಯಳಗೋಳಿ, ಚಂದ್ರಶೇಖರ ಆಚಾರ್ಯ ಯಳಗೋಳಿ, ನಿವೃತ್ತ ಮುಖ್ಯ ಶಿಕ್ಷಕಿ ಪ್ರೇಮ ಎಂ ವರಂಗ, ಪ್ರವೀಣ್ ಸೂಡ ಕೆರೆಬೆಟ್ಟು ಸೇರಿದಂತೆ, ಗ್ರಾಮ ಮೋಕ್ತೇಸರ ಪ್ರಕಾಶ ಆಚಾರ್ಯ ಯಳಗೋಳಿ ಸ್ಥಳೀಯ ಪ್ರಮುಖರು, ಗಣ್ಯರು, ಯಕ್ಷಗಾನ ಕಲಾವಿದರು ಉಪಸ್ಥಿತರಿದ್ದರು.
ಶ್ರೀಕ್ಷೇತ್ರ ಕಳವಾರು ಬಾಳ ಶ್ರೀಬೆಂಕಿನಾಥೇಶ್ವರ ಕೃಪಾಪೋಷಿತ ಯಕ್ಷಗಾನ ಮಂಡಳಿಯಿಂದ ಅಮರಶಿಲ್ಪಿ ವೀರ ಶಂಭು ಕಲ್ಕುಡ ಕಥಾನಕ ಪ್ರದರ್ಶನಗೊಂಡಿತು.
ಹರಿದಾಸ ಹೆಬ್ರಿ ಟಿ.ಜಿ. ಆಚಾರ್ಯ ನಿರೂಪಿಸಿ ವಂದಿಸಿದರು. ಕಾರ್ಯಕ್ರಮದ ಸಂಘಟಕ ರವೀಂದ್ರ ಪುರೋಹಿತ್ ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು.



































