Friday, May 15, 2026
Google search engine
Homeಅಂತಾರಾಷ್ಟ್ರೀಯನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಬಿಜೆಪಿ ಯುವ ಮೋರ್ಚಾ ಸದಸ್ಯ, ಸಹೋದರ ಸಿಬಿಐ ವಶಕ್ಕೆ

ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಪ್ರಕರಣ ಬಿಜೆಪಿ ಯುವ ಮೋರ್ಚಾ ಸದಸ್ಯ, ಸಹೋದರ ಸಿಬಿಐ ವಶಕ್ಕೆ

ಹೊಸದಿಲ್ಲಿ: ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಕೆಲವೇ ಗಂಟೆಗಳಲ್ಲಿ ಕೇಂದ್ರ ತನಿಖಾ ದಳ (ಸಿಬಿಐ) ರಾಜಸ್ಥಾನದ ಜೈಪುರದಲ್ಲಿ ಸುಮಾರು 23ಕ್ಕೂ ಹೆಚ್ಚು ಶಂಕಿತರನ್ನು ವಶಕ್ಕೆ ಪಡೆದಿದೆ ಎಂದು ‘the print’ ವರದಿ ಮಾಡಿದೆ.

ವಶಕ್ಕೆ ಪಡೆದವರಲ್ಲಿ ಬಿಜೆಪಿಯ ಯುವ ಘಟಕವಾದ ಭಾರತೀಯ ಜನತಾ ಯುವ ಮೋರ್ಚಾ (ಬಿಜೆವೈಎಂ) ಸ್ಥಳೀಯ ಸದಸ್ಯ ದಿನೇಶ್ ಬಿವಾಲ್ ಹಾಗೂ ಆತನ ಸಹೋದರ ಮಂಗಿಲಾಲ್ ಬಿವಾಲ್ ಕೂಡ ಸೇರಿದ್ದಾರೆ.

ದಿನೇಶ್ ಬಿವಾಲ್ ನ ಸಾಮಾಜಿಕ ಜಾಲತಾಣ ಖಾತೆಗಳಲ್ಲಿ ಬಿಜೆಪಿ ಶಾಸಕರು ಮತ್ತು ರಾಜ್ಯ ಮಟ್ಟದ ನಾಯಕರೊಂದಿಗಿನ ಫೊಟೋಗಳು ಹೆಚ್ಚಾಗಿ ಕಂಡುಬಂದಿವೆ. ಜೈಪುರ ಗ್ರಾಮೀಣ ಪ್ರದೇಶದ ಮೂಲದ ಈ ಸಹೋದರರು ಕಳೆದ ಐದು–ಆರು ವರ್ಷಗಳಿಂದ ಸಿಕಾರ್‌ ನಲ್ಲಿ ನೆಲೆಸಿದ್ದರು ಎಂದು ಹೇಳಲಾಗಿದೆ.

ಶಿಕ್ಷಣ ಸಚಿವಾಲಯದ ದೂರಿನ ಮೇರೆಗೆ ಸಿಬಿಐ ಮಂಗಳವಾರ ಸಂಜೆ ಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್‌) ಅಡಿಯಲ್ಲಿ ಕ್ರಿಮಿನಲ್ ಪಿತೂರಿ, ವಂಚನೆ, ಕ್ರಿಮಿನಲ್ ನಂಬಿಕೆ ದ್ರೋಹ, ಕಳ್ಳತನ, ಸಾಕ್ಷ್ಯ ನಾಶ, ಭ್ರಷ್ಟಾಚಾರ ತಡೆ ಕಾಯ್ದೆ ಹಾಗೂ ಸಾರ್ವಜನಿಕ ಪರೀಕ್ಷೆಗಳಲ್ಲಿ ಅನ್ಯಾಯ ಮಾರ್ಗ ತಡೆ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದೆ

ತನಿಖಾ ಮೂಲಗಳ ಪ್ರಕಾರ, ಪ್ರಸ್ತುತ ಪ್ರಕರಣದಲ್ಲಿ ಲಭ್ಯವಾದ ಸಾಕ್ಷ್ಯಾಧಾರಗಳ ಆಧಾರದ ಮೇಲೆ ಬಿವಾಲ್ ಸಹೋದರರ ಚಟುವಟಿಕೆಗಳ ಬಗ್ಗೆ ತನಿಖಾಧಿಕಾರಿಗಳಿಗೆ ಅನುಮಾನ ವ್ಯಕ್ತವಾಗಿದೆ.

“ಅವರ ಕುಟುಂಬದ ನಾಲ್ವರು ಸದಸ್ಯರು ಕಳೆದ ವರ್ಷ ನೀಟ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಈ ಹಿನ್ನೆಲೆಯಲ್ಲಿ, ಪ್ರಶ್ನೆಪತ್ರಿಕೆ ಸೋರಿಕೆ ಜಾಲದೊಂದಿಗೆ ಅವರಿಗೆ ಸಂಪರ್ಕ ಇರಬಹುದೇ ಎಂಬ ಶಂಕೆ ತನಿಖಾಧಿಕಾರಿಗಳಲ್ಲಿ ಮೂಡಿದೆ” ಎಂದು ತನಿಖಾ ಸಂಸ್ಥೆಯ ಮೂಲಗಳು ತಿಳಿಸಿವೆ.

ಎಸ್‌ಒಜಿಯ ಪ್ರಾಥಮಿಕ ತನಿಖೆಯ ಪ್ರಕಾರ, ದಿನೇಶ್ ಬಿವಾಲ್, ಗುರುಗ್ರಾಮ್ ಮೂಲದ ವೃತ್ತಿ ಸಲಹೆಗಾರ ಯಶ್ ಯಾದವ್ ನಿಂದ 15 ಲಕ್ಷ ರೂ.ಗೆ ಪ್ರಶ್ನೆಪತ್ರಿಕೆ ಖರೀದಿಸಿದ್ದ. ಯಶ್ ಯಾದವ್ ಈ ಪ್ರಶ್ನೆಪತ್ರಿಕೆಯನ್ನು ಪ್ರಕರಣದ ಪ್ರಮುಖ ಆರೋಪಿ ಶುಭಮ್ ಖೈರ್ನರ್ ನಿಂದ ಪಡೆದಿದ್ದ ಎಂದು ಆರೋಪಿಸಲಾಗಿದೆ.

“ದಿನೇಶ್ ಕಳೆದ ವರ್ಷವೂ ಯಶ್ ಯಾದವ್ ನಿಂದ ಪ್ರಶ್ನೆಪತ್ರಿಕೆ ಖರೀದಿಸಿದ್ದನು. ಆ ಸಂದರ್ಭದಲ್ಲಿ ಅವರ ಕುಟುಂಬದ ನಾಲ್ವರು ಅಭ್ಯರ್ಥಿಗಳು ಉತ್ತೀರ್ಣರಾಗಿದ್ದರು” ಎಂದು ಮತ್ತೊಂದು ಮೂಲ ತಿಳಿಸಿದೆ.

ಈ ವರ್ಷ ಮೇ 3ರಂದು ನಡೆದ ನೀಟ್ ಪರೀಕ್ಷೆಗೆ ನಾಲ್ಕು ದಿನಗಳ ಮೊದಲು, ಅಂದರೆ ಎಪ್ರಿಲ್ 29ರಂದು ದಿನೇಶ್ ಬಿವಾಲ್ ಪ್ರಶ್ನೆಪತ್ರಿಕೆ ಖರೀದಿಸಿರುವ ಸಾಧ್ಯತೆಯಿದೆ ಎಂದು ತನಿಖೆಯಲ್ಲಿ ಶಂಕಿಸಲಾಗಿದೆ. ಯಶ್ ಯಾದವ್ ಇದೇ ಪ್ರಶ್ನೆಪತ್ರಿಕೆಯನ್ನು ಬಿಹಾರ ಹಾಗೂ ಜಮ್ಮು ಮತ್ತು ಕಾಶ್ಮೀರದ ನಿವಾಸಿಗಳೆಂದು ಶಂಕಿಸಲಾದ ಹಲವರಿಗೆ ಮಾರಾಟ ಮಾಡಿದ್ದ ಎಂದು ಮೂಲಗಳು ತಿಳಿಸಿವೆ.

ಈ ನಡುವೆ, ಪ್ರಶ್ನೆಪತ್ರಿಕೆಯ ಮುದ್ರಿತ ಪ್ರತಿಯನ್ನು ಕೊರಿಯರ್ ಮೂಲಕ ಶುಭಮ್ ಖೈರ್ನರ್ ಗೆ ಕಳುಹಿಸಿದ್ದಾನೆ ಎನ್ನಲಾದ ಧನಂಜಯ್ ಲೋಖಂಡೆ ಎಂಬ ಶಂಕಿತನ ಮೇಲೂ ಸಿಬಿಐ ನಿಗಾ ಇಟ್ಟಿದೆ.

ಮಹಾರಾಷ್ಟ್ರದ ಅಹಲ್ಯಾನಗರ ಮೂಲದ ಲೋಖಂಡೆ ಕಳೆದ ಕೆಲವು ತಿಂಗಳುಗಳಿಂದ ಪುಣೆಯ ವಾಘೋಲಿ ಪ್ರದೇಶದಲ್ಲಿ ವಾಸಿಸುತ್ತಿದ್ದ ಎಂದು ಮೂಲಗಳು ತಿಳಿಸಿವೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments