ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಾನು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಸಿದ್ದರಾಮಯ್ಯ ಅವರು ಹೇಳಿದ್ದಾರೆ.
ಲೋಕಭವನದಲ್ಲಿ ರಾಜೀನಾಮೆ ಪತ್ರ ಸಲ್ಲಿಸಿದ ಬಳಿಕ ಗೃಹ ಕಚೇರಿ ಕೃಷ್ಣಾದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಮೊನ್ನೆ ಹೈಕಮಾಂಡ್‌ನವರು ನನಗೆ ರಾಜೀನಾಮೆ ನೀಡುವಂತೆ ಸೂಚಿಸಿದ್ದರು. ಅವರು ರಾಜೀನಾಮೆ ಕೊಡಿ ಎಂದು ಹೇಳಿದ ತಕ್ಷಣ, ನಾನು ನಾಡಿದ್ದು ಕೊಡುತ್ತೇನೆ ಎಂದು ತಿಳಿಸಿದ್ದೆ. ಅದರಂತೆಯೇ ನಾನು ಇಂದು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೆ, ಹೈಕಮಾಂಡ್ ಯಾವಾಗ ಸೂಚನೆ ನೀಡುತ್ತದೆಯೋ ಆಗ ನಾನು ರಾಜೀನಾಮೆ ಕೊಡುತ್ತೇನೆ ಎಂದು. ಈಗ ಅದರಂತೆಯೇ ನಡೆದುಕೊಂಡಿದ್ದೇನೆ ಎಂದು ತಿಳಿಸಿದರು.
ರಾಜೀನಾಮೆ ಪ್ರಕ್ರಿಯೆಯ ಬಗ್ಗೆ ವಿವರಿಸಿದ ಅವರು, “ನಾನು ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ ರಾಜ್ಯಪಾಲರು ಸದ್ಯ ಊರಿನಲ್ಲಿ ಇಲ್ಲ, ಅವರು ಇಂದು ರಾತ್ರಿ ವಾಪಸ್ ಬರುತ್ತಾರೆ ಎಂದು ಅಲ್ಲಿನ ಕಚೇರಿಯಲ್ಲಿ ತಿಳಿಸಿದರು. ಹಾಗಾಗಿ, ನನ್ನ ರಾಜೀನಾಮೆ ಪತ್ರವನ್ನು ಅವರ ಕಾರ್ಯದರ್ಶಿಗೆ ಸಲ್ಲಿಸಿ ಬಂದಿದ್ದೇನೆ. ರಾಜ್ಯಪಾಲರು ಬಂದ ಮೇಲೆ ರಾಜೀನಾಮೆ ಅಂಗೀಕಾರ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಸಂವಿಧಾನದ ಪ್ರಕಾರ ಅವರು ಪ್ರಕ್ರಿಯೆ ನಡೆಸಬೇಕಾಗುತ್ತದೆ” ಎಂದರು.
ರಾಜ್ಯದ ಪ್ರಸ್ತುತ ರಾಜಕೀಯ ಬಲದ ಬಗ್ಗೆ ಮಾತನಾಡಿದ ಅವರು, “ನನ್ನ ರಾಜೀನಾಮೆಯನ್ನು ಅಂಗೀಕಾರ ಮಾಡಿ ಮುಂದಿನ ಮುಖ್ಯಮಂತ್ರಿಗೆ ಆಡಳಿತ ನಡೆಸಲು ಅನುವು ಮಾಡಿಕೊಡುವುದು ರಾಜ್ಯಪಾಲರ ಜವಾಬ್ದಾರಿಯಾಗಿದೆ. ನಮ್ಮ ಪಕ್ಷ 135-1 ಸ್ಥಾನಗಳನ್ನು ಪಡೆದುಕೊಂಡಿದೆ. ಇದರ ಜೊತೆಗೆ ಇಬ್ಬರು ಪಕ್ಷೇತರ ಶಾಸಕರು ಕೂಡ ನಮ್ಮ ಜೊತೆಯಲ್ಲಿದ್ದಾರೆ. ನಾವು ರಾಜ್ಯದಲ್ಲಿ ಸಂಪೂರ್ಣ ಬಹುಮತದಲ್ಲಿದ್ದೇವೆ. ಆದ್ದರಿಂದ ಯಾವುದೇ ಗೊಂದಲವಿಲ್ಲದೆ ಮುಂದಿನ ಮುಖ್ಯಮಂತ್ರಿಗೆ ಅವಕಾಶ ನೀಡಬೇಕು” ಎಂದು ಕೋರಿದರು.
ತಮ್ಮ ಸುದೀರ್ಘ ರಾಜಕೀಯ ಪಯಣವನ್ನು ಸ್ಮರಿಸುತ್ತಾ ಭಾವುಕರಾದ ಸಿದ್ದರಾಮಯ್ಯ, “ಮೇರುನಟ ಡಾ. ರಾಜ್‌ಕುಮಾರ್ ಅವರು ಜನರನ್ನು ‘ಅಭಿಮಾನಿ ದೇವರುಗಳು’ ಎಂದು ಕರೆಯುತ್ತಿದ್ದರು. ಒಬ್ಬ ರಾಜಕಾರಣಿಯಾಗಿ ನಾನು ಕೂಡ ಸಂವಿಧಾನವೇ ನನ್ನ ಧರ್ಮ ಎಂದು ತಿಳಿದುಕೊಂಡಿದ್ದೇನೆ. ನನ್ನ ಪಾಲಿಗೆ ಈ ರಾಜ್ಯದ ಮತದಾರರೇ ಅಭಿಮಾನಿ ದೇವರುಗಳು. ನನಗೆ ರಾಜ್ಯದ ಜನತೆ ಎರಡು ಬಾರಿ ಮುಖ್ಯಮಂತ್ರಿಯಾಗುವ ಮತ್ತು ಎರಡು ಬಾರಿ ವಿಧಾನಸಭೆಯ ವಿರೋಧ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸುವ ಐತಿಹಾಸಿಕ ಅವಕಾಶವನ್ನು ನೀಡಿದ್ದಾರೆ” ಎಂದು ಕೃತಜ್ಞತೆ ಸಲ್ಲಿಸಿದರು.
ಇದೇ ಸಂದರ್ಭದಲ್ಲಿ ತಮಗೆ ಸದಾ ಬೆಂಬಲವಾಗಿ ನಿಂತ ಕಾಂಗ್ರೆಸ್ ವರಿಷ್ಠರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಹಾಗೂ ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಸಿದ್ದರಾಮಯ್ಯ ಅವರು ತಮ್ಮ ಅಪಾರವಾದ ಧನ್ಯವಾದಗಳನ್ನು ಸಮರ್ಪಿಸಿದರು.
















