ರಾಷ್ಟ್ರ ರಾಜಧಾನಿ ದೆಹಲಿಯಿಂದ ಅಚ್ಚರಿಯ ಸುದ್ದಿಯೊಂದು ಹೊರಬಿದ್ದಿದೆ. ಮೂಲಗಳ ಪ್ರಕಾರ, ಕರ್ನಾಟಕಕ್ಕೆ ನೂತನ ಬಿಜೆಪಿ ರಾಜ್ಯಾಧ್ಯಕ್ಷರನ್ನು ಬಿಜೆಪಿ ವರಿಷ್ಠರು ನೇಮಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದು, ಇತ್ತೀಚೆಗೆ ಬಿಜೆಪಿಯ ರಾಷ್ಟ್ರಾಧ್ಯಕ್ಷರಾದ ನಿತಿನ್ ನಬಿನ್, ರಾಜ್ಯಕ್ಕೆ ಭೇಟಿ ನೀಡಿದ ನಂತರದ ಬೆಳವಣಿಗೆ ಎನ್ನುವ ಚರ್ಚೆ ಬಿಜೆಪಿ ವಲಯದಲ್ಲಿ ನಡೆಯುತ್ತಿದೆ.
ಇತ್ತೀಚೆಗೆ ನಾಲ್ಕು ರಾಜ್ಯಗಳಿಗೆ ಬಿಜೆಪಿಯ ವರಿಷ್ಠರು ನೂತನ ಅಧ್ಯಕ್ಷರನ್ನು ನೇಮಿಸಿದ್ದರು, ಆದರೆ, ಕರ್ನಾಟಕದ ಅಧ್ಯಕ್ಷರ ಘೋಷಣೆಯನ್ನು ಹಾಗೆಯೇ ಪೆಂಡಿಂಗ್ ಇಟ್ಟಿತ್ತು. ಈಗ, ಜೂನ್ ಮಧ್ಯ ಭಾಗದಲ್ಲಿ ಕೇಂದ್ರ ಸಚಿವ ಸಂಪುಟಕ್ಕೆ ಮೇಜರ್ ಸರ್ಜರಿಯಾಗಲಿದೆ ಎನ್ನುವ ಸುದ್ದಿ, ಈಗಾಗಲೇ ಹರಿದಾಡುತ್ತಿದೆ. ಇದರ ಜೊತೆಗೆ, ರಾಜ್ಯ ಬಿಜೆಪಿಗೆ ನೂತನ ಬಾಸ್ ಬರಲಿದ್ದಾರೆ ಎನ್ನುವ ಸುದ್ದಿಗೆ ರೆಕ್ಕೆಪುಕ್ಕ ಹುಟ್ಟಿಕೊಳ್ಳುತ್ತಿದೆ.
ಜೂನ್ ಹದಿನೈದರಿಂದ ಹದಿನೆಂಟರ ಮಧ್ಯೆ, ಕೇಂದ್ರ ಸಚಿವ ಸಂಪುಟದಲ್ಲಿ ಮೇಜರ್ ಸರ್ಜರಿಯಾಗಲಿದೆ. ವಿವಿಧ ರಾಜ್ಯಗಳಲ್ಲಿ ನಡೆಯಲಿರುವ ವಿಧಾನಸಭಾ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಕೇಂದ್ರ ಗೃಹ ಸಚಿವ ಅಮಿತ್ ಶಾ, ಸುಮಾರು ಹತ್ತರಿಂದ ಹನ್ನೆರಡು ಸಚಿವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆಯಿದೆ. ಜೊತೆಗೆ, ಹಾಲೀ ಸಚಿವರ ಖಾತೆಯನ್ನು ಬದಲಾಯಿಸುವ ಸಾಧ್ಯತೆಯಿದೆ. ಇದರ ಜೊತೆಗೆ, ಕರ್ನಾಟಕದಲ್ಲೂ ಬಹುಕಾಲದಿಂದ ಪೆಂಡಿಂಗ್’ನಲ್ಲಿರುವ ರಾಜ್ಯಾಧ್ಯಕ್ಷರ ಹುದ್ದೆಗೂ ಹೊಸ ಹೆಸರನ್ನು ಘೋಷಿಸುವ ಸಾಧ್ಯತೆಯ ಬಗ್ಗೆ ಸುದ್ದಿಗಳು ಕೇಳಿ ಬರುತ್ತಿದೆ.
ಕನಿಷ್ಠ ಇಬ್ಬರು ಕ್ಯಾಬಿನೆಟ್ ದರ್ಜೆಯ ಸಚಿವರ ಜೊತೆಗೆ ಮೂರು ಅದಕ್ಕಿಂತ ಹೆಚ್ಚು ರಾಜ್ಯ ಸಚಿವರನ್ನು ಸಂಪುಟದಿಂದ ಕೈಬಿಡುವುದು ಬಹುತೇಕ ಕನ್ಫರ್ಮ್ ಎಂದು ಹೇಳಲಾಗುತ್ತಿದೆ. ಕ್ಯಾಬಿನೆಟ್’ನಿಂದ ಹೊರ ನಡೆಯುವ ಸಚಿವರುಗಳಿಗೆ, ರಾಜ್ಯದ ಜವಾಬ್ದಾರಿಯನ್ನು ನೀಡುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಇದರಲ್ಲಿ ಕರ್ನಾಟಕವನ್ನು ಪ್ರತಿನಿಧಿಸುವ ಸಚಿವರುಗಳನ್ನು ಕೇಂದ್ರದಿಂದ ರಾಜ್ಯಕ್ಕೆ ಕಳುಹಿಸುವ ಸಾಧ್ಯತೆಯಿದೆ ಎನ್ನುವ ಸುದ್ದಿ, ದೆಹಲಿ ವಲಯದಲ್ಲಿ ಹರಿದಾಡುತ್ತಿದೆ.
ಉತ್ತರ ಪ್ರದೇಶ ಮತ್ತು ಪಂಜಾಬ್ ಚುನಾವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಮೈತ್ರಿಕೂಟದ ಪಾಲುದಾರ ಪಾರ್ಟಿಗಳಿಗೆ ಹೆಚ್ಚಿನ ಸ್ಥಾನಮಾನ ಸಿಗುವ ಸಾಧ್ಯತೆಯಿದೆ. ಕ್ಯಾಬಿನೆಟ್ ದರ್ಜೆ ಇಲ್ಲದಿದ್ದರೂ, ರಾಜ್ಯ ಸಚಿವರನ್ನಾಗಿ ನೇಮಿಸುವ ಬಗ್ಗೆ ಮಾತುಗಳು ಕೇಳಿ ಬರುತ್ತಿದೆ. ಇತ್ತೀಚೆಗೆ ಉತ್ತರ ಪ್ರದೇಶಕ್ಕೆ ಪಂಕಜ್ ಚೌಧುರಿಯವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಇನ್ನು, ದೆಹಲಿಗೆ ಹರ್ಷ ಮಲ್ಹೋತ್ರ ಅವರನ್ನು ಅಧ್ಯಕ್ಷರನ್ನಾಗಿ ನೇಮಿಸಲಾಗಿತ್ತು. ಈಗ, ಮುಂದಿನ ಸರದಿ ಕರ್ನಾಟಕ ಬಿಜೆಪಿಯದ್ದು ಎಂದು ಹೇಳಲಾಗುತ್ತಿದೆ.
ರಾಜ್ಯದಲ್ಲಿನ ನಾಲ್ವರು ಲೋಕಸಭಾ ಸದಸ್ಯರು ಮೋದಿ ಕ್ಯಾಬಿನೆಟ್’ನಲ್ಲಿದ್ದಾರೆ. ಅದರಲ್ಲಿ ಕ್ಯಾಬಿನೆಟ್ ದರ್ಜೆಯ ಸಚಿವರಾಗಿ ಪ್ರಲ್ಹಾದ ಜೋಶಿ, ಎಚ್.ಡಿ.ಕುಮಾರಸ್ವಾಮಿ ಅವರಿದ್ದಾರೆ. ಇನ್ನು ರಾಜ್ಯ ಸಚಿವರಾಗಿ ವಿ.ಸೋಮಣ್ಣ ಮತ್ತು ಶೋಭಾ ಕರಂದ್ಲಾಜೆ ಇದ್ದಾರೆ. ಇದರಲ್ಲಿ, ಬಿಜೆಪಿಯ ನಾಯಕರು ಮೂವರು, ಈ ಮೂವರ ಪೈಕಿ ಒಬ್ಬರನ್ನು ಕೇಂದ್ರ ಸಂಪುಟದಿಂದ ಒಬ್ಬರನ್ನು ರಾಜ್ಯ ಬಿಜೆಪಿಯ ಅಧ್ಯಕ್ಷರನ್ನಾಗಿ ಮಾಡಲಾಗುತ್ತದೆ ಎನ್ನುವ ಸುದ್ದಿ ಬಲವಾಗಿ ಹರಿದಾಡುತ್ತಿದೆ. ರಾಜ್ಯ ಬಿಜೆಪಿಗೆ ಅಧ್ಯಕ್ಷರ ಹೆಸರಿನಲ್ಲಿ ಪ್ರಲ್ಹಾದ ಜೋಶಿ ಮತ್ತು ವಿ.ಸೋಮಣ್ಣ ಅವರ ಹೆಸರೂ ಹಿಂದೆ ಕೂಡಾ, ಮಂಚೂಣಿಯಲ್ಲಿ ಕೇಳಿ ಬರುತ್ತಿತ್ತು. ಈ ಸುದ್ದಿಗೆ ಈಗ ಮತ್ತೆ ರೆಕ್ಕೆಪುಕ್ಕ ಸುತ್ತಿಕೊಂಡಿದೆ.

















