ಕಾರ್ಕಳ ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಆರಂಭೋತ್ಸವ ಕಾರ್ಯಕ್ರಮ ಸಂಸ್ಥೆಯ ಸಭಾಂಗಣದಲ್ಲಿ ನಡೆಯಿತು. ಅತ್ತೂರು ಸೈಂಟ್ ಲಾರೆನ್ಸ್ ಮೈನರ್ ಬಸಿಲಿಕಾ ಚರ್ಚ್ ನ ಧರ್ಮಗುರುಗಳಾದ ರೆ.ಫಾ.ಅಲ್ಬನ್ ಡಿ’ಸೋಜ ಅವರು ದೀಪ ಬೆಳಗುವುದರ ಮೂಲಕ ಪ್ರಥಮ ಪಿಯುಸಿ ವಾಣಿಜ್ಯ ವಿಭಾಗದ ಆರಂಭೋತ್ಸವವನ್ನು ನಡೆಸಿಕೊಟ್ಟರು.
ನಂತರ ಮಾತನಾಡಿದ ಅವರು “ಮುಂದೆ ಏನಾಗಬೇಕು ಎಂದು ನಿರ್ಧರಿಸಲು ವಿದ್ಯಾರ್ಥಿಗಳಗೆ ಸಕಾಲ, ಕಲಿಕೆಯಲ್ಲಿ ಉತ್ತಮ ಸಾಧನೆ ಮಾಡಿದರೆ ಮುಂದೆ ಹೆಚ್ಚಿನ ಅವಕಾಶಗಳು ದೊರೆಯುತ್ತವೆ. ಪರಿಶ್ರಮ ಇದ್ದರೆ ಪ್ರತಿಫಲ ಸಿಕ್ಕೇಸಿಗುತ್ತದೆ” ಎಂದು ಹೇಳಿದರು.
ಕಟೀಲು ಶ್ರೀ ದುರ್ಗಾಪರಮೆಶ್ವರಿ ಪ್ರಥಮ ದರ್ಜೆ ಕಾಲೇಜಿನ ನಿವೃತ್ತ ಪ್ರಾಚಾರ್ಯ, ಸಾಹಿತಿ ಪ್ರೊ.ಬಾಲಕೃಷ್ಣ ಶೆಟ್ಟಿ ಅವರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಅವರು ಮಾತನಾಡಿ “ಮಕ್ಕಳ ಸರ್ವಾಂಗೀಣ ಅಭಿವೃದ್ದೀಯ ಹೊಣೆಗಾರಿಕೆ ಪೋಷಕರದ್ದು, ಹೆತ್ತವರು ತಮ್ಮ ಮಕ್ಕಳು ಕಲಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು. ಈ ಜಗತ್ತಿನಲ್ಲಿ ಪ್ರತಿಯೊಬ್ಬ ಸಾಧಕರ ಸಾಧನೆಯ ಹಿಂದೆ ನಿರಂತರ ಶ್ರಮವಿದೆ” ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ಎಲ್ಲಾ ವರ್ಗದ ಮಕ್ಕಳಿಗೆ ಸಮಾನ ಶಿಕ್ಷಣ ಲಭಿಸುವಂತೆ ಮಾಡುವುದು ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳ ಧ್ಯೇಯ, ಅತೀ ಕಡಿಮೆ ಶುಲ್ಕದಲ್ಲಿ ಉತ್ತಮ ಗುಣಮಟ್ಟದ ಶಿಕ್ಷಣವನ್ನು ಸಂಸ್ಥೆಯು ನೀಡುತ್ತಾ ಬಂದಿದೆ, ಇನ್ನು ಮುಂದೆಯೂ ಆಧುನಿಕ ತಂತ್ರಜ್ಞಾನಾಧಾರಿತ, ಸಂಸ್ಕಾರಯುತ ಶಿಕ್ಷಣ ನೀಡಲು ನಾವು ಬದ್ಧ” ಎಂದು ಹೇಳಿದರು.
ಸಂಸ್ಥೆಯ ಪ್ರಾಚಾರ್ಯರಾದ ಲಕ್ಷ್ಮಿ ನಾರಾಯಣ ಕಾಮತ್ ಅವರು ಸಂಸ್ಥೆಯ ಕಾರ್ಯಚಟುವಟಿಕೆಗಳ ಮಾಹಿತಿ ನೀಡಿದರು. ಉಡುಪಿಯ ಸಿಎ, ಸಿಎಸ್ ತರಬೇತುದಾರರಾದ ಚಂದನ್ ರಾವ್ ಅವರು ಸಿಎ, ಸಿಎಸ್ ಮಾಹಿತಿ ನೀಡಿದರು. ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ವಾಣಿಜ್ಯಶಾಸ್ತ್ರ ಉಪನ್ಯಾಸಕ ದೀಪಕ್ ಸ್ವಾಗತಿಸಿ ಕನ್ನಡ ಉಪನ್ಯಾಸಕ ಉಮೇಶ್ ಬೆಳ್ಳಿಪ್ಪಾಡಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.



















