ನಲ್ವತ್ತು ದಿನದ ಹಿಂದೆಯಷ್ಟೇ ಜನಿಸಿದ ಮಗು ಸಾವನ್ನಪ್ಪಿದ ಘಟನೆ ಹೆರ್ಮುಡೆಯ ರೇಂಜ ಎಂಬಲ್ಲಿ ನಡೆದಿದೆ.
ಮಗುವಿನ ತಾಯಿ ದೀಕ್ಷಿತ ಎಂಬವರು ಮೇ 1 ರಂದು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಯಲ್ಲಿ ಎರಡನೇ ಹೆರಿಗೆಯಾಗಿ ಗಂಡು ಮತ್ತು ಹೆಣ್ಣು ಅವಳಿ ಮಕ್ಕಳನ್ನು ಪಡೆದಿದ್ದರು. ಬಳಿಕ ಮೇ 9 ರಂದು ತನ್ನ ತಂದೆ ಕೆಲಸ ಮಾಡಿಕೊಂಡಿದ್ದ ರಾಜೇಂದ್ರ ಶೆಟ್ಟಿಯವರ ತೋಟದ ಬಾಡಿಗೆ ಮನೆಗೆ ಹಿಂತಿರುಗಿದ್ದಾರೆ. ಜೂ. 9 ರಂದು ಬೆಳಗ್ಗೆ 6 ಗಂಟೆ ಹೊತ್ತಿಗೆ ಗಂಡು ಮಗುವಿಗೆ ಹಾಲುಣಿಸಿ ಮಲಗಿಸಿ, ತಾಸುಗಳ ಬಳಿಕ ಎಬ್ಬಿಸಲು ಪ್ರಯತ್ನಿಸಿದ್ದಾರೆ. ಮಗು ಪ್ರತಿಕ್ರಿಯೆ ನೀಡದೇ ಇದ್ದು, ಮೂಗಿನಲ್ಲಿ ರಕ್ತ ಸೋರುವುದನ್ನು ಗಮನಿಸಿ, ತಕ್ಷಣ ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಮಗುವನ್ನು ಪರೀಕ್ಷಿಸಿದ ವೈದ್ಯರು ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಈ ಬಗ್ಗೆ ಮಗುವಿನ ತಾಯಿ ನೀಡಿದ ದೂರಿನ ಅನ್ವಯ ಅಜೆಕಾರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.


















