ತೆಂಗಿನ ಮರದಿಂದ ತೆಂಗಿನಕಾಯಿ ತಲೆಗೆ ಬಿದ್ದ ಪರಿಣಾಮ ಒಂದೂವರೆ ವರ್ಷದ ಬಾಲಕ ಮೃತಪಟ್ಟ ದಾರುಣ ಘಟನೆ ಬ್ರಹ್ಮಾವರ ಸಮೀಪ ಹೆರಂಜೆಯಲ್ಲಿ ಸಂಭವಿಸಿದೆ.
ದಕ್ಷ್ ಪೂಜಾರಿ ಮೃತ ಬಾಲಕ. ಈತ ಹೆರಂಜೆಯ ಪ್ರಶಾಂತ್ ಪೂಜಾರಿ ಹಾಗೂ ಸುಚಿತ್ರ ಪೂಜಾರಿ ದಂಪತಿಯ ಪುತ್ರನಾಗಿದ್ದಾನೆ.
ಮಂಗಳವಾರ ಬೆಳಿಗ್ಗೆ ಸುಮಾರು 8.15 ಗಂಟೆಯ ವೇಳೆ ಈ ದುರ್ಘಟನೆ ಸಂಭವಿಸಿದೆ. ಮಗಳು ದಿಯಾಳನ್ನು ಶಾಲಾ ಬಸ್ಸಿಗೆ ಕಳುಹಿಸಲು ಸುಚಿತ್ರ ಪೂಜಾರಿ ಅವರು ಮಗ ದಕ್ಷ್ನನ್ನು ಕೈಯಲ್ಲಿ ಎತ್ತಿಕೊಂಡು ಮನೆಯಿಂದ ಹೊರಟಿದ್ದರು. ಈ ವೇಳೆ ರಸ್ತೆಯ ಬದಿಯಲ್ಲಿದ್ದ ಸುಮಾರು 40 ಅಡಿ ಎತ್ತರದ ತೆಂಗಿನ ಮರದಿಂದ ತೆಂಗಿನಕಾಯಿ ಕೆಳಗೆ ಬಿದ್ದು ಮಗುವಿನ ತಲೆಗೆ ಬಡಿದಿದೆ. ಗಂಭೀರವಾಗಿ ಗಾಯಗೊಂಡಿದ್ದ ಬಾಲಕನನ್ನು ತಕ್ಷಣ ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ವೈದ್ಯರು ಶಸ್ತ್ರಚಿಕಿತ್ಸೆ ನಡೆಸಿದ್ದರೂ, ತಲೆಯ ಮೆದುಳಿಗೆ ತೀವ್ರ ಪೆಟ್ಟಾಗಿದ್ದ ಕಾರಣ ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.
ಮಗುವಿನ ತಂದೆ ಪ್ರಶಾಂತ್ ಪೂಜಾರಿ ಅವರು ಕಳೆದ ಸುಮಾರು 13 ವರ್ಷಗಳಿಂದ ಬ್ರಹ್ಮಾವರ ಗಾಂಧಿ ಮೈದಾನದ ಸಮೀಪ ಸಣ್ಣ ಗಾಡಿಯಲ್ಲಿ ಫಾಸ್ಟ್ ಫುಡ್ ವ್ಯಾಪಾರ ನಡೆಸುತ್ತಿದ್ದು, ಕುಟುಂಬ ಜೀವನ ಸಾಗಿಸುತ್ತಿದ್ದರು.
ಘಟನಾ ಸ್ಥಳಕ್ಕೆ ಬ್ರಹ್ಮಾವರ ಪೊಲೀಸರು ಭೇಟಿ ನೀಡಿ, ಪರಿಶೀಲಿಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.


















