ರೋಟರಿ ಕ್ಲಬ್ ಕಾರ್ಕಳ ಹಾಗೂ ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಇವರ ಸಂಯುಕ್ತ ಆಶ್ರಯದಲ್ಲಿ ಇಂಟರ್ ಡಿಸ್ಟ್ರಿಕ್ಟ್ ಜಾಯಿಂಟ್ ಕ್ಲಬ್ ಮೀಟಿಂಗ್ ಮೂಡುಬಿದಿರೆಯ ಟೆಂಪಲ್ ಟೌನ್ ಆಡಿಟೋರಿಯಂನಲ್ಲಿ ಯಶಸ್ವಿಯಾಗಿ ನಡೆಯಿತು.
ಕಾರ್ಕಳ ರೋಟರಿ ಕ್ಲಬ್ಬಿನ ಸುಮಾರು 40 ಸದಸ್ಯರು ಕುಟುಂಬ ಸಮೇತರಾಗಿ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಕಾರ್ಯಕ್ರಮದ ಆರಂಭದಲ್ಲಿ ಜೋನಲ್ ಲೆಫ್ಟಿನೆಂಟ್ ಜಾನ್ ಆರ್. ಡಿ. ಸಿಲ್ವ ಅವರು ಕಾರ್ಕಳ ಕ್ಲಬ್ಬಿನ ಸದಸ್ಯರನ್ನು ಪರಿಚಯಿಸಿದರು.
ಕಾರ್ಕಳ ರೋಟರಿ ಕ್ಲಬ್ಬಿನ ಅಧ್ಯಕ್ಷರಾದ ರೋ. ಕೆ. ನವೀನ್ ಚಂದ್ರ ಶೆಟ್ಟಿ ಅವರು ಕ್ಲಬ್ಬಿನ 62 ವರ್ಷಗಳ ಇತಿಹಾಸ, ಸಮಾಜಮುಖಿ ಸೇವಾ ಚಟುವಟಿಕೆಗಳು, ಆರೋಗ್ಯ, ಶಿಕ್ಷಣ ಹಾಗೂ ಸಮುದಾಯ ಅಭಿವೃದ್ಧಿ ಕ್ಷೇತ್ರಗಳಲ್ಲಿ ಕೈಗೊಂಡಿರುವ ವಿವಿಧ ಯೋಜನೆಗಳ ಕುರಿತು ವಿವರಿಸಿದರು.
ರೋಟರಿ ಕ್ಲಬ್ ಮೂಡುಬಿದಿರೆ ಟೆಂಪಲ್ ಟೌನ್ ಅಧ್ಯಕ್ಷರಾದ ರೋ. ಹರೀಶ್ ಎಮ್ ಕೆ . ಅವರು ತಮ್ಮ ಕ್ಲಬ್ಬಿನ ಚಟುವಟಿಕೆಗಳು ಮತ್ತು ಸಾಧನೆಗಳ ಕುರಿತು ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಎರಡೂ ಕ್ಲಬ್ಬುಗಳ ವತಿಯಿಂದ ಸೌಹಾರ್ದ ಮತ್ತು ಸ್ನೇಹದ ಸಂಕೇತವಾಗಿ ರೋಟರಿ ಫ್ಲ್ಯಾಗ್ ಎಕ್ಸ್‌ಚೇಂಜ್ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಡಿಸ್ಟ್ರಿಕ್ಟ್ 3181ರ ಜೋನ್-4ರ ಅಸಿಸ್ಟೆಂಟ್ ಗವರ್ನರ್ ರೋ. ಉಮೇಶ್ ರಾವ್ ಮಿಜಾರ್ ಹಾಗೂ ಡಿಸ್ಟ್ರಿಕ್ಟ್ 3182ರ ಜೋನ್-5ರ ಅಸಿಸ್ಟೆಂಟ್ ಗವರ್ನರ್ ರೋ. ವಿಘ್ನೇಶ್ ಶೆಣೈ ಉಪಸ್ಥಿತರಿದ್ದು, ಇಂತಹ ಜಂಟಿ ಸಭೆಗಳು ಎರಡು ಜಿಲ್ಲೆಗಳ ರೋಟರಿ ಸದಸ್ಯರ ನಡುವೆ ಉತ್ತಮ ಬಾಂಧವ್ಯ, ಪರಸ್ಪರ ಕಲಿಕೆ ಮತ್ತು ಸೇವಾ ಸಹಕಾರವನ್ನು ವೃದ್ಧಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ ಎಂದು ಅಭಿಪ್ರಾಯಪಟ್ಟರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಔಷಧೀಯ ಸಸ್ಯಗಳ ತಜ್ಞ ದಿನೇಶ್ ನಾಯಕ್ ಅವರು ಔಷಧೀಯ ಸಸ್ಯಗಳ ಮಹತ್ವ, ಅವುಗಳ ಸಂರಕ್ಷಣೆ ಹಾಗೂ ಆರೋಗ್ಯ ಕ್ಷೇತ್ರದಲ್ಲಿ ಅವುಗಳ ಉಪಯೋಗಗಳ ಕುರಿತು ಉಪಯುಕ್ತ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಎಕ್ಸಲೆಂಟ್ ಕಾಲೇಜಿನ ಚೇರ್ಮನ್ ಯುವರಾಜ್ ಜೈನ್ ದಂಪತಿ ಮತ್ತು ರಾಜೇಶ್ ಆರ್ ಕೋಟ್ಯಾನ್ ರವರವರು ಮಾಡಿದ ಸೇವೆ ಮತ್ತು ಸಾಧನೆಯನ್ನು ಗುರುತಿಸಿ ಸನ್ಮಾನಿಸಿ ಅಭಿನಂದಿಸಲಾಯಿತು.
ಸಭೆಯ ಬಳಿಕ ಆತಿಥೇಯ ಕ್ಲಬ್ಬಿನ ವತಿಯಿಂದ ಅತ್ಯುತ್ತಮ ಉಪಹಾರ ಮತ್ತು ಆತಿಥ್ಯದ ವ್ಯವಸ್ಥೆ ಮಾಡಲಾಗಿದ್ದು, ಭಾಗವಹಿಸಿದ ಎಲ್ಲ ಸದಸ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಕಾರ್ಯಕ್ರಮದಲ್ಲಿ ಎರಡೂ ಕ್ಲಬ್ಬಿನ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.


















