ಹೆಬ್ರಿ ತಾಲ್ಲೂಕಿನ ಕುಚ್ಚೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಧರೆಮನೆ ಸಂಪರ್ಕಿಸುವ ರಸ್ತೆಯು ಸಂಪೂರ್ಣ ಹದಗೆಟ್ಟು ಕೆಸರುಮಯವಾಗಿ ಸಂಚರಿಸಲು ಸಾಧ್ಯವಾಗದಷ್ಟು ಹದಗೆಟ್ಟಿದೆ, ಸಾರ್ವಜನಿಕರಿಗೆ ತೊಂದರೆ ಉಂಟಾಗಿದೆ.
ಬೇಸಿಗೆಯಲ್ಲಿ ರಸ್ತೆ ಸಂಪೂರ್ಣ ಹದಗೆಟ್ಟು ಧೂಳು ಮಯವಾಗಿತ್ತು. ಧರೆಮನೆ ರಸ್ತೆಯನ್ನು ಸ್ವಲ್ಪಮಟ್ಟಿಗೆ ಮಣ್ಣು ಹಾಕಿ ದುರಸ್ತಿ ಮಾಡಿಕೊಡಲಾಗಿತ್ತು. ಆದರೇ ಮಳೆಗಾಲದಲ್ಲಿ ಹಾಕಿದ ಮಣ್ಣಿನಿಂದ ಸಮಸ್ಯೆ ಉಂಟಾಗಿ ಓಡಾಡಲು ಸಾಧ್ಯವಾಗುತ್ತಿಲ್ಲ.
ಕೆಸರು ರಾಡಿಯಲ್ಲಿ ಶಾಲೆಗೆ ಮಕ್ಕಳಿಗೆ ಸೈಕಲ್ ತೆಗೆದುಕೊಂಡು ಹೋಗಲು ಸಾಧ್ಯವಾಗುತ್ತಿಲ್ಲ. ಕೂಲಿ ಕಾರ್ಮಿಕರು, ಡೈರಿಗೆ ಹಾಲು ತೆಗೆದುಕೊಂಡು ಹೋಗುವರು ರಸ್ತೆಯ ಅವ್ಯವಸ್ಥೆ ಸಮಸ್ಯೆ ಅನುಭವಿಸುತ್ತಿದ್ದಾರೆ. ಈ ಭಾಗದ 30 ಮನೆಯವರು ರಸ್ತೆ ಸಮಸ್ಯೆಯಿಂದ ಕಂಗೆಟ್ಟಿದ್ದಾರೆ.
ಚುನಾವಣೆ ಸಮಯದಲ್ಲಿ ಆಶ್ವಾಸನೆಗೆ ಸೀಮಿತವಾದ ರಸ್ತೆ : ಪ್ರತಿ ಚುನಾವಣೆ ಬಂದಾಗ ರಾಜಕೀಯ ನಾಯಕರು ಬಂದು ಶೀಘ್ರದಲ್ಲಿ ರಸ್ತೆಯನ್ನು ಮಾಡಿಕೊಡುತ್ತೇವೆ ಎನ್ನುತ್ತಾರೆ. ಚುನಾವಣೆ ಮುಗಿದ ನಂತರ ಯಾರ ಸುಳಿವು ಇರುವುದಿಲ್ಲ. ಬಹುತೇಕ ಸಂದರ್ಭಗಳಲ್ಲಿ ನಾವೆಲ್ಲರೂ ಸೇರಿ ಈ ರಸ್ತೆಯನ್ನು ನಿರಂತರವಾಗಿ ದುರಸ್ತಿ ಮಾಡುತ್ತಾ ಬಂದಿದ್ದೇವೆ. ಸಂಬಂಧಪಟ್ಟ ಎಲ್ಲರಿಗೂ ಅನೇಕ ಬಾರಿ ಮನವಿ ಸಲ್ಲಿಸಿದರು, ಯಾವುದೇ ಪ್ರಯೋಜನ ಆಗಿಲ್ಲ. ಕೆಲಸಕ್ಕೆ ಹೋಗುವ ಮಹಿಳೆಯರು ಸ್ಕೂಟರ್ ತೆಗೆದು ಕೊಂಡು ಹೋಗಲು ಹಿಂಜರಿಯುತ್ತಾರೆ. ಈ ಭಾಗದ ಯುವಕರು ಬೈಕನ್ನು ಸಂಬಂಧಿಕರ ಮನೆಯಲ್ಲಿ ಇಟ್ಟು ಬರುತ್ತಿದ್ದಾರೆ ಎಂದು ಸ್ಥಳೀಯರಾದ ರಮೇಶ್ ಬೇಸರ ವ್ಯಕ್ತಪಡಿಸಿದರು.
ನಮಗೆ ಸುಸಜ್ಜಿತ ರಸ್ತೆ ಬೇಕು : ಈ ಭಾಗದಲ್ಲಿ ಅನೇಕ ವರ್ಷಗಳಿಂದ ಊರಿನ ಜನ ಈ ರಸ್ತೆಯನ್ನು ಬಳಸುತ್ತಿದ್ದಾರೆ. ನಮಗೆ ಸುಸಜ್ಜಿತವಾದ ಕಾಂಕ್ರೀಟ್ ರಸ್ತೆಯ ನಿರ್ಮಾಣ ಆಗಬೇಕು. ಇಲ್ಲದಿದ್ದಲ್ಲಿ ಮುಂದಿನ ಚುನಾವಣೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳಿಗೆ ಸಮರ್ಪಕ ಉತ್ತರ ನೀಡುತ್ತೇವೆ. ಸದ್ಯಕ್ಕೆ ತಾತ್ಕಾಲಿಕ ದುರಸ್ತಿ ಮಾಡಿ ಜನರು ಓಡಾಡುವಂತೆ ಮಾಡಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಪಂಚಾಯಿತಿಯಿಂದ ದುರಸ್ತಿ ಮಾಡಿ ಕೊಡಲು ನಿರ್ಧಾರ : ಗ್ರಾಮ ಪಂಚಾಯತಿ ವತಿಯಿಂದ ತಾತ್ಕಾಲಿಕವಾಗಿ ರಸ್ತೆಯನ್ನು ಈ ಹಿಂದೆ ಇದ್ದಂತೆ ರಸ್ತೆಯನ್ನು ದುರಸ್ತಿ ಮಾಡಿಕೊಡುವುದಾಗಿ ತಿಳಿಸಿದ್ದಾರೆ. ಮಣ್ಣನ್ನು ಅಗೆದು, ಚರಂಡಿಯ ಮಟ್ಟಕ್ಕೆ ದುರಸ್ತಿ ಮಾಡಲಾಗುತ್ತದೆ.
……
ನಾವು ಬಾಲ್ಯದಿಂದ ಈ ರಸ್ತೆಯನ್ನು ಬಳಸುತ್ತಿದ್ದೇವೆ. ನಿರಂತರವಾಗಿ ಮಳೆಗಾಲ, ಬೇಸಿಗೆ ಕಾಲದಲ್ಲಿ ರಸ್ತೆಯಲ್ಲಿ ಸಮಸ್ಯೆ ಇರುತ್ತದೆ. ಬೇಸಿಗೆ ಕಾಲದಲ್ಲಿ ದುರಸ್ತಿ ಮಾಡಿದ್ದರು, ಮಳೆಗಾಲಕ್ಕೆ ಸಂಪೂರ್ಣ ಹಾಳಾಗುತ್ತದೆ. ಶಾಲೆ ಮಕ್ಕಳು ಕೆಸರು ರಾಡಿಯಲ್ಲಿ ನಡೆದುಕೊಂಡು ಹೋಗಲು ಪರದಾಡುತ್ತಾರೆ. ಪ್ರತಿ ಚುನಾವಣೆ ಬಂದಾಗ ಎಲ್ಲ ರಾಜಕೀಯ ನಾಯಕರು ರಸ್ತೆ ನಿರ್ಮಿಸುತ್ತೇವೆ ಎನ್ನುತ್ತಾರೆ. ನಂತರ ಯಾರು ಈ ಬದಿ ಸುಳಿಯುವುದಿಲ್ಲ. ಈ ಸಲವಾದರೂ ಬಹು ಬೇಡಿಕೆಯ ನಮ್ಮ ರಸ್ತೆಯನ್ನು ನಿರ್ಮಾಣ ಮಾಡಿಕೊಡಿ ಎಂದು ಎಂದು ಹಿರಿಯರಾದ ಮಹಾಬಲ ನಾಯ್ಕ್ ಹೇಳಿದ್ದಾರೆ.
………
ರಸ್ತೆಯನ್ನು ತಾತ್ಕಾಲಿಕವಾಗಿ ದುರಸ್ತಿ ಮಾಡಿಕೊಳ್ಳುತ್ತೇವೆ. ಕಾಂಕ್ರೀಟ್ ರಸ್ತೆ ಮಾಡಿ ಕೊಡುವಷ್ಟು ನಮ್ಮಲ್ಲಿ ಅನುದಾನವಿಲ್ಲ. ಸಾರ್ವಜನಿಕರು ಸಹಕರಿಸಬೇಕು ಎಂದು ಕುಚ್ಚೂರು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ರಿತೇಶ್ ಪುತ್ರನ್ ಹೇಳಿದ್ದಾರೆ.




















