ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ ಅಧ್ಯಕ್ಷ ಅಜಿತ್ ಹೆಗ್ಡೆಮಾಳ ಅವರ ಅಧ್ಯಕ್ಷತೆಯಲ್ಲಿ ಸೋಮವಾರ ತಾ. ಪಂ. ಸಭಾಂಗಣದಲ್ಲಿ ನಡೆಯಿತು.ಗೃಹಲಕ್ಷ್ಮೀ ಯೋಜನೆಯಡಿಕಾರ್ಕಳತಾಲೂಕಿನಲ್ಲಿ37,742 ಮಂದಿ ನೋಂದಾಯಿಸಿಕೊಂಡಿದ್ದು, 34,358 ಮಂದಿಗೆ ಪಾವತಿಯಾಗಿದೆ. ಮರಣ ಹೊಂದಿದ ಫಲಾನುಭವಿಗಳು ಹಾಗೂ ಡಬಲ್ ಅಕೌಂಟ್ ಸೇರಿದಂತೆ ಫಲಾನುಭವಿಗಳ ವಿವರಗಳನ್ನು ಪರಿಶೀಲಿಸಿ ಪರಿಷ್ಕರಣೆ ನಡೆಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು. ಪರಿಶೀಲನೆಗೆ ಎಲ್ಲ ಇಲಾಖೆಗಳ ಸಹಕಾರ ಅಗತ್ಯವಿದೆ ಎಂದು ಶಿಶು ಅಭಿವೃದ್ಧಿ ಯೋಜನಾಧಿಕಾರಿ ಹೇಳಿದರು.
ಅನ್ನಭಾಗ್ಯ ಯೋಜನೆಯಡಿ 15,573 ಪಡಿತರ ಚೀಟಿದಾರರು ಜಾತಿ ಹಾಗೂ ಆದಾಯ ಪ್ರಮಾಣಪತ್ರ ಸಲ್ಲಿಸಿ ಇ-ಕೆವೈಸಿ ಮಾಡಿಸಬೇಕಿದೆ. ಸೆ. 30ರೊಳಗೆ ಇ-ಕೆವೈಸಿ ಪೂರ್ಣಗೊಳಿಸುವಂತೆ ಸೂಚಿಸಲಾಗಿದೆ. ಸರ್ವರ್ ಸಮಸ್ಯೆಯಿಂದ ಪಡಿತರ ವಿತರಣೆಯಲ್ಲಿ ಕೆಲವೊಮ್ಮೆ ತೊಂದರೆಯಾಗುತ್ತಿದ್ದರೂ ಅಕ್ಕಿ ವಿತರಣೆ ನಿರಂತರವಾಗಿದೆ. ಮಿಯ್ಯಾರು ಹಾಗೂ ಎರ್ಲಪಾಡಿಯಲ್ಲಿ ಹೊಸ ನ್ಯಾಯಬೆಲೆ ಅಂಗಡಿ ಆರಂಭಿಸಲು ಪ್ರಯತ್ನ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದರು. ಪಡಿತರರಿಗೆ ಯಾವುದೇ ರೀತಿ ಸಮಸ್ಯೆಯಾಗದಂತೆ ಕ್ರಮವಹಿಸಬೇಕು. ಸರ್ವರ್ ಸಮಸ್ಯೆ ಇದೆ ಎಂದು ಸಾರ್ವಜನಿಕರು ಕಾಯುವಂತಾಗಬಾರದು ಎಂದು ಅಜಿತ್ ಹೆಗ್ಡೆ ಸಲಹೆ ನೀಡಿದರು.
ಗೃಹಜ್ಯೋತಿ ಯೋಜನೆಯಡಿ 45,481 ಮನೆಗಳ ಪೈಕಿ 99.98ರಷ್ಟು ಮನೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿದೆ ಎಂದು ಮೆಸ್ಕಾಂ ಎಇಇಗಳಾದ ವಿನಾಯಕ್ ಕಾಮತ್, ಶಿಲ್ಪಾ ಶೆಟ್ಟಿ ಮಾಹಿತಿ ನೀಡಿದರು.
ಶಕ್ತಿ ಯೋಜನೆಯಡಿ ಜಿಲ್ಲೆಯಲ್ಲಿ ಸುಮಾರು 60 ಲಕ್ಷ ಮಂದಿ ಪ್ರಯಾಣಿಸಿದ್ದಾರೆ ಎಂದು ಕೆಎಸ್‌ಆರ್‌ಟಿಸಿ ಅಧಿಕಾರಿಗಳು ಮಾಹಿತಿ ನೀಡಿದರು. ಪಳ್ಳಿ-ಕಣಂಜಾರು ಬಸ್ ಸಂಚಾರ ಸ್ಥಗಿತದಿಂದ ಶಾಲಾ ಮಕ್ಕಳು ಹಾಗೂ ಕೂಲಿ ಕಾರ್ಮಿಕರಿಗೆ ತೊಂದರೆಯಾಗುತ್ತಿದೆ. ಈ ಸಮಸ್ಯೆ ಪರಿಹಾರಕ್ಕೆ ಕೆಎಸ್‌ಆರ್ ಟಿಸಿ ಪರ್ಯಾಯ ಸಮಯದ ರೂಟ್ ಪ್ರಸ್ತಾವನೆ ಸಲ್ಲಿಸುವಂತೆ ಸಭೆಯಲ್ಲಿ ಸೂಚಿಸಿದರು.
ಸಮಿತಿ ಸದಸ್ಯರಾದ ರಜನಿ, ಫಿಲಿಪ್ ಮಸ್ಕರೇನಸ್, ರಾಕೇಶ್ ನಾಯ್ಕ ಪ್ರಶಾಂತ್ ಪೂಜಾರಿ, ಚರಿತ್ರ ಎಂ., ಶೋಭಾ ರಾಣೆ, ಸಹೀಮ್, ಜಯ ಕುಲಾಲ್, ಸುರೇಶ್ ಆಚಾರ್ಯ, ಸಂತೋಷ್ ದೇವಾಡಿಗ, ಸಂತೋಷ್ ಶೆಟ್ಟಿ ವಿಶ್ವನಾಥ ಭಂಡಾರಿ, ಹೇಮಂತ್ ಆಚಾರ್ಯ, ಯತೀಶ್ ಕೋಟ್ಯಾನ್ ಮತ್ತಿತರರು ಉಪಸ್ಥಿತರಿದ್ದರು.


















