ಇ-ಕಾಮರ್ಸ್ ವೇದಿಕೆಗಳಾದ ಅಮೆಜಾನ್, ಸ್ವಿಗ್ಗಿ, ಇನ್‌ಸ್ಟಾಮಾರ್ಟ್ ಮತ್ತು ಬಿಗ್‌ಬಾಸ್ಕೆಟ್‌ಗೆ ನೀಡಲಾಗಿರುವ ಆಹಾರ ಪರವಾನಗಿಯನ್ನು ಅಮಾನತು ಮಾಡುವಂತೆ ರಾಜ್ಯ ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆ ಸಂಬಂಧಪಟ್ಟ ಅಡಳಿತಕ್ಕೆ ಶಿಫಾರಸು ಮಾಡಿದೆ.
ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಕಾಯ್ದೆ 2006 ಮತ್ತು 2011ರ ನಿಯಮಗಳ ಅಡಿಯಲ್ಲಿ ಈ ಶಿಫಾರಸು ಮಾಡಲಾಗಿದ್ದು, ಒಂದು ವೇಳೆ ಪರವಾನಗಿ ಅಮಾನತು ಆದರೆ ಈ ವೇದಿಕೆಗಳು ಯಾವುದೇ ಆಹಾರ ಪದಾರ್ಥಗಳನ್ನು ಮಾರಾಟ ಮಾಡಲು ಸಾಧ್ಯವಾಗುವುದಿಲ್ಲ.
ಕೆಲ ಇ-ಕಾಮರ್ಸ್ ವೇದಿಕೆಗಳು ವಿಷಪೂರಿತ ದತ್ತೂರಿ ಹಣ್ಣು ಮತ್ತು ಅದರ ಬೀಜಗಳನ್ನು ಸೇವನೆಗೆ ಯೋಗ್ಯ ಎಂಬಂತೆ ತೋರಿಸಿ, ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರದ ಪರವಾನಗಿ ಮತ್ತು ನೋಂದಣಿ ಸಂಖ್ಯೆಯೊಂದಿಗೆ ಮಾರಾಟ ಮಾಡುತ್ತಿರುವುದು ಕಂಡು ಬಂದಿದೆ. ಇದಕ್ಕೆ ಸಂಬಂಧಿಸಿದಂತೆ ಇಲಾಖೆಯಿಂದ ನೋಟಿಸ್ ನೀಡಿದ ನಂತರವೂ ನಿಯಮಗಳ ಪಾಲನೆಯಾಗಿಲ್ಲ. ಹೀಗಾಗಿ, ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
ದತ್ತೂರಿಯನ್ನು ಇಂಗ್ಲಿಷ್‌ನಲ್ಲಿ ‘ಡೆವಿಲ್ಸ್ ಟ್ರಂಪೆಟ್’ ಅಥವಾ ‘ಮ್ಯಾಡ್ ಆ್ಯಪಲ್’ ಎನ್ನಲಾಗುತ್ತದೆ. ಇದರ ಬೀಜ, ಹೂಗಳು ಉಸಿರಾಟದ ತೊಂದರೆ ಹಾಗೂ ಅಮಲೇರಿಸುತ್ತವೆ. ಸಾವಿಗೂ ಕಾರಣವಾಗಬಹುದು.


















