ಬಿಜೆಪಿ ಅಧಿವೇಶನ ಮಾಡಲು ಬಿಡದೆ ರಾಜ್ಯದ ಜನರಿಗೆ ವಂಚನೆ ಮಾಡಿದೆ. ಜನರ ಸಮಸ್ಯೆಗಳನ್ನು ಚರ್ಚೆ ಮಾಡಿ ಪರಿಹಾರ ಕೊಡುವ ವೇದಿಕೆಯನ್ನು ರಾಜಕೀಯ ಪಕ್ಷ ಪ್ರತಿಭಟನೆಗೆ ಬಳಸಬಾರದು ಎಂದು ಸಚಿವ ಯು. ಟಿ. ಖಾದರ್ ಹೇಳಿದರು.
ಮಾಧ್ಯಮಗಳ ಜತೆ ಮಾತನಾಡಿದ ಅವರು, ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣಕ್ಕೆ ಸಂಬಂಧಿಸಿ ‘ಬಿಜೆಪಿ ಪಾದಯಾತ್ರೆ ನಡೆಸುತ್ತಿರುವ ವಿಚಾರದಲ್ಲಿ ಅವರು ಮಾತನಾಡಿ, ನಾಗೇಂದ್ರ ಅವರು ಈಗಾಗಲೇ ಸಚಿವ ಸ್ಥಾನಕ್ಕೆ ರಾಜೀನಾಮೆ ಕೊಟ್ಟಿದ್ದಾರೆ. ಹಗರಣ ನಡೆದಿದೆ ಎಂದು ಹೇಳಲಾದ ಶೇ. 99ರಷ್ಟು ಹಣವನ್ನೂ ವಾಪಾಸು ಪಡೆದುಕೊಳ್ಳಲಾಗಿದೆ. ಸಂಬಂಧಪಟ್ಟ ಅಧಿಕಾರಿಗಳ ಮೇಲೂ ಕ್ರಮವಾಗಿದೆ. ಬಿಜೆಪಿ ನಾಯಕರಿಗೂ ಬಹಳಷ್ಟು ನೋಟಿಸ್ ಗಳು ಬಂದಿವೆ. ಅವರೂ ರಾಜೀನಾಮೆ ಕೊಟ್ಟು ಬದ್ಧತೆ ತೋರಿಸಲಿ ಎಂದರು.
ಮೊದಲ ಬಾರಿಗೆ ರಾಜ್ಯ ಸಚಿವ ಸಂಪುಟ ಸಭೆ ಮಂಗಳೂರಿನಲ್ಲಿ ನಡೆಯ ಲಿದೆ. ಸಭೆಯಲ್ಲಿ ಕರಾವಳಿಯ ಅಭಿವೃದ್ಧಿ, ಪ್ರವಾಸೋದ್ಯಮ ಕ್ಷೇತ್ರ ಸಹಿತ ವಿವಿಧ ವಿಚಾರಗಳಿಗೆ ಸಂಬಂಧಿಸಿದಂತೆ ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಅಧಿಕಾರಿಗಳು ಉಸ್ತುವಾರಿ ಮತ್ತು ಇಲಾಖಾ ಸಚಿವರಿಗೆ ಹಣ ನೀಡಲು ಇದೆ ಎಂದು ಗುತ್ತಿಗೆದಾರರಿಂದ ಹಣಕ್ಕಾಗಿ ಬೇಡಿಕೆ ಇಡುವ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಎಂದು ಶಾಸಕ ಅಶೋಕ್ ಕುಮಾರ್ ರೈ ಆರೋಪ ಮಾಡಿರುವ ಬಗ್ಗೆ ಉತ್ತರಿಸಿದ ಅವರು, ನನ್ನ ಹೆಸರು ಹೇಳಿ ಅಧಿಕಾರಿಗಳು ಹಣ ವಸೂಲಿ ಮಾಡಿರುವುದು ಗಮನಕ್ಕೆ ಬಂದಿಲ್ಲ. ಹಾಗಿದ್ದಲ್ಲಿ ನಾನೇ ಕಠಿನ ಕ್ರಮ ಕೈಗೊಳ್ಳುತ್ತೇನೆ ಎಂದರು.



















