ಎಪ್ರಿಲ್-ಜೂನ್ ತ್ರೈಮಾಸಿಕದಲ್ಲಿ ಭಾರತದ ಜಿಡಿಪಿ ದರ ಶೇ.7.8ರಷ್ಟು ಪ್ರಗತಿ ಸಾಧಿಸಿರುವುದನ್ನು ಶ್ಲಾಘಿಸಿರುವ ಪ್ರಧಾನಿ ಮೋದಿ, ವಿಶ್ವದಲ್ಲೇ ಭಾರತ ಮುಂಚೂಣಿ ರಾಷ್ಟ್ರವಾಗಲು ಸ್ವದೇಶಿ ತತ್ತ್ವವನ್ನು ಅಳವಡಿಸಿಕೊಳ್ಳ ಬೇಕು ಎಂದು ಕರೆ ನೀಡಿದ್ದಾರೆ.
ಈ ಬಗ್ಗೆ ಇನ್‌ಸ್ಟಾಗ್ರಾಂನಲ್ಲಿ ವೀಡಿಯೋ ಸಂದೇಶ ಬಿಡುಗಡೆ ಮಾಡಿರುವ ಅವರು ವಿಪಕ್ಷ ನಾಯಕ ರಾಹುಲ್ ಗಾಂಧಿ ವಿರುದ್ಧ ವಾಗ್ದಾಳಿ ನಡೆಸಿದ್ದು, ಸುಳ್ಳುಗಳ ನಡುವೆ ದೇಶದ ಪ್ರಗತಿಯನ್ನು ಮುಚ್ಚಿಹಾಕಲು ಸಾಧ್ಯ ವಿಲ್ಲ ಎಂದಿದ್ದಾರೆ.
ಇದೇ ವೇಳೆ ಭಾರತದಲ್ಲೇ ಖರೀದಿ ಮಾಡಿ, ದೇಶದ ಬೆಳವಣಿಗೆಗೆ ನೆರವಾಗಿ ಎಂದು ಹೇಳಿದ್ದಾರೆ. ಮೋಜು-ಮಸ್ತಿಗಾಗಿ ವಿದೇಶಗಳಿಗೆ ಪ್ರವಾಸ ಬೆಳೆಸುವುದು, ವಿದೇಶಗಳಲ್ಲಿ ವಿವಾಹ ಸಮಾರಂಭ ಏರ್ಪಡಿಸುವುದನ್ನು ಬಿಟ್ಟು ‘ವೆಡ್ಡಿಂಗ್ಸ್ ಇನ್ ಇಂಡಿಯಾ’ ತತ್ತ್ವವನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕು. ಅಗತ್ಯವಿದ್ದಲ್ಲಿ ಮಾತ್ರ ಚಿನ್ನ ಅನಗತ್ಯವಾಗಿ ಚಿನ್ನದ ಮೇಲೆ ಹೂಡಿಕೆ ಮಾಡುವುದನ್ನು ಅಥವಾ ಖರೀದಿಸುವುದನ್ನು ನಿಯಂತ್ರಿಸಬೇಕೆಂದು ಕೂಡ ಹೇಳಿದ್ದಾರೆ.
ನಾವು ಸ್ವದೇಶಿ ಹಾಗೂ ಸ್ವಾವಲಂಬನೆಗೆ ಒತ್ತು ನೀಡಿದಷ್ಟು ವೇಗವಾಗಿ ದೇಶ ಪ್ರಗತಿ ಹೊಂದಲಿದೆ. ದೇಶದ 100ನೇ ಸ್ವಾತಂತ್ರೋತ್ಸವದ ಹೊತ್ತಿಗೆ ಸುಭದ್ರ ಹಾಗೂ ವಿಕಸಿತ ಭಾರತ ವನ್ನು ಯುವಜನತೆಗೆ ಹಸ್ತಾಂತರಿಸ ಲಿದ್ದೇವೆ ಎಂಬ ಭರವಸೆ ತನಗಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.



















