ಕಾರ್ಕಳದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಯಾದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷಕರ ದಿನಾಚರಣೆಯನ್ನು ಶಿಕ್ಷಕ ರಕ್ಷಕ ಸಂಘದ ಆಶ್ರಯದಲ್ಲಿ ಸಂಸ್ಥೆಯ ನೂತನ ಕಾಲೇಜು ಸಭಾಂಗಣದಲ್ಲಿ ಸಂಭ್ರಮದಿಂದ ಆಚರಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಉಡುಪಿಯ ಮಿಲಾಗ್ರಿಸ್ ಕಾಲೇಜಿನ ಪ್ರಾಂಶುಪಾಲರಾದ ಡಾ| ವಿನ್ಸೆಂಟ್ ಆಳ್ವರವರು ದೀಪ ಬೆಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು “ಮಾನವ ಇಂದ್ರೀಯ ವಿಷಯಗಳ ಹಿಂದೆ ಬೀಳದೆ ಅದನ್ನು ಸ್ವಾರ್ಥಕ್ಕಾಗಿ ಬಳಸದೆ ಸಮಾಜದ ಏಳಿಗೆಗಾಗಿ ಬಳಕೆ ಮಾಡಬೇಕು. ನಮ್ಮ ಪಾಲಿಗೆ ಜ್ಞಾನದ ವರವನ್ನು ನೀಡುವ ಶಿಕ್ಷಕರು ನಿಜವಾದ ದೇವರು. ಇಂತಹ ದೇವರುಗಳಿಗೆ ಗೌರವ ನೀಡದೆ ಮಂದಿರ ಚರ್ಚು ಮಸೀದಿಗಳನ್ನು ಸುತ್ತಿದರೆ ಅದು ವ್ಯರ್ಥ ಕೆಲಸ” ಎಂದು ಹೇಳಿದರು. ಇನ್ನೊರ್ವ ಅತಿಥಿ ನಿಟ್ಟೆ ಪರಪ್ಪಾಡಿ ನಿರ್ಮಲಪದವು ಚರ್ಚ್ನ ಧರ್ಮಗುರುಗಳಾದ ರೆ.ಫಾ.ಅಶ್ವಿನ್ ಅರಾನ್ಹ ಅವರು ಮಾತನಾಡುತ್ತಾ, “ ಮಕ್ಕಳಿಗೆ ಪ್ರೀತಿಯಿಂದ ಕಲಿಸಿ ಮುನ್ನಡೆಸಿ ಅವರಲ್ಲಿ ಆತ್ಮ ವಿಶ್ವಾಸ ಮತ್ತು ನಂಬಿಕೆಯನ್ನು ಬೆಳೆಸಿ ಸಾಧನೆಗೆ ಪ್ರೇರಣೆ ನೀಡಿ ಜವಾಬ್ದಾರಿಯುತ ಜೀವನ ನಡೆಸಲು ಸರಿ ದಾರಿ ತೋರಿಸುವವರು ಶಿಕ್ಷಕರು. ಅಂತಹ ಶಿಕ್ಷಕರನ್ನು ಸದಾ ಕಾಲ ಸ್ಮರಿಸಬೇಕು” ಎಂದು ಹೇಳಿದರು.
ಈ ಸಂದರ್ಭದಲ್ಲಿ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನವರಿಂದ ಕೊಡಮಾಡುವ ‘ಕ್ರೈಸ್ಟ್ ಕಿಂಗ್ ಶಿಕ್ಷಕರತ್ನ’ ಪ್ರಶಸ್ತಿಯನ್ನು ಸುಂದರ ಪುರಾಣಿಕ ಸರಕಾರಿ ಪ್ರೌಢ ಶಾಲೆ ಪೆರ್ವಾಜೆ ಇಲ್ಲಿನ ವಿಜ್ಞಾನ ಶಿಕ್ಷಕರಾದ ಬಾಲಕೃಷ್ಣ ನಾಯಕ್ ಅವರಿಗೆ ಮತ್ತು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಇರ್ವತ್ತೂರು ಇಲ್ಲಿನ ದೈಹಿಕ ಶಿಕ್ಷಣ ಶಿಕ್ಷಕ ಆನಂದ ಪೂಜಾರಿ ಇವರಿಗೆ “ಕ್ರೈಸ್ಟ್ ಕಿಂಗ್ ಕ್ರೀಡಾ ಶಿಕ್ಷಕ ಶ್ರೀ” ಪ್ರಶಸ್ತಿ ನೀಡಿ ಗೌರವಿಸಲಾಯಿತು. ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಬಾಲಕೃಷ್ಣ ನಾಯಕ್ ಅವರು ತಮ್ಮ ವೃತ್ತಿ ಜೀವನವನ್ನು ಆರಂಭಿಸಿದ ಸಂಸ್ಥೆಯಲ್ಲಿ ಇಂದು ಸನ್ಮಾನಗೊಳ್ಳುತ್ತಿರುವ ಬಗ್ಗೆ ಸಂತಸ ವ್ಯಕ್ತಪಡಿಸಿ “ಗುರುವಿನಲ್ಲಿ ಭಗವಂತನನ್ನು ಕಾಣುವವರಿಗೆ ಗುರು ಸಂಪೂರ್ಣ ಶಕ್ತಿಯನ್ನು ಧಾರೆಯೆರೆಯುತ್ತಾರೆ, ಆದುದರಿಂದ ಗುರು ಎನ್ನುವವನು ನಮ್ಮ ಜೀವನ ರೂಪಿಸಲು ಬಂದ ದೇವರು” ಎಂದು ಹೇಳಿದರು. ಕ್ರೀಡಾ ಶಿಕ್ಷಕಶ್ರೀ ಪ್ರಶಸ್ತಿ ಪಡೆದ ಆನಂದ ಪೂಜಾರಿ ಅವರು ಮಾತನಾಡುತ್ತಾ “ಶಿಕ್ಷಣ ಮಾತ್ರವಲ್ಲದೆ ಕ್ರೀಡಾ ಕ್ಷೇತ್ರದಲ್ಲೂ ಮಹತ್ತರ ಸಾಧನೆ ಮಾಡುತ್ತಿರುವ ಈ ಸಂಸ್ಥೆಯ ವಿದ್ಯಾರ್ಥಿಗಳ ಸಾಧನೆಗೆ ಸ್ಪೂರ್ತಿ ನೀಡುತ್ತಿರುವವರು ಶಿಕ್ಷಕರು” ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ.ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ “ದೇವರ ಸೃಷ್ಟಿಯಲ್ಲಿ ಪ್ರತಿಯೊಬ್ಬರೂ ತಮ್ಮದೇ ಆದ ಬುದ್ಧಿ ಮತ್ತು ವಿಶಿಷ್ಟ ಸಾಮರ್ಥ್ಯವನ್ನು ಹೊಂದಿದ್ದಾರೆ. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಅರಿತು ಸವಾಲುಗಳನ್ನು ಧೈರ್ಯದಿಂದ ಸ್ವೀಕರಿಸಿ ಮುನ್ನಡೆದರೆ ಯಶಸ್ಸು ಸಾಧಿಸುವುದು ಸಾಧ್ಯ ಹಾಗೆಯೇ ಜೀವನದಲ್ಲಿ ಸತ್ಪಥದಲ್ಲಿ ನಡೆದು ದೇವರ ಸಾನಿಧ್ಯವನ್ನು ಪಡೆಯುವ ದಾರಿ ತೋರಿಸುವ ಶಿಕ್ಷಕರು ಸಮಾಜದ ಎಲ್ಲಾ ವೃತ್ತಿಪರರನ್ನು ರೂಪುಗೊಳಿಸುವ ರೂವಾರಿಗಳು” ಎಂದು ಹೇಳಿದರು. ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯರಾದ ಲಕ್ಷ್ಮಿ ನಾರಾಯಣ ಕಾಮತ್ ಪ್ರಸ್ತಾವನೆಗೈದರೆ ಕನ್ನಡ ಉಪನ್ಯಾಸಕ ಉಮೆಶ್ ಬೆಳ್ಳಿಪ್ಪಾಡಿ ಪ್ರಶಸ್ತಿಗಳ ಪರಿಚಯಗೈದರು. ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಾಚಾರ್ಯರಾದ ಲಕ್ಷಿö್ಮÃನಾರಾಯಣ ಕಾಮತ್ ಹಾಗೂ ಸಂಸ್ಥೆಯ ಭೌತಶಾಸ್ತ್ರ ಉಪನ್ಯಾಸಕ ಸುಧೀರ್ ಜಿ ಸುವರ್ಣರವರನ್ನು ಸನ್ಮಾನಿಸಲಾಯಿತು.
ಸಂಸ್ಥೆಯ ಎಲ್ಲಾ ಶಿಕ್ಷಕರು ಉಪನ್ಯಾಸಕರು ಹಾಗೂ ಬೋಧಕೇತರ ವೃಂದದವರನ್ನು ಈ ಸಂದರ್ಭದಲ್ಲಿ ಸ್ಮರಣಿಕೆ ನೀಡಿ ಗೌರವಿಸಲಾಯಿತು. ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಕಾರ್ಯದರ್ಶಿ ಆವೆಲಿನ್ ಲೂಯಿಸ್, ಸಂಸ್ಥೆಯ ಉಪ ಪ್ರಾಚಾರ್ಯ ಡಾ. ಪ್ರಕಾಶ್ ಭಟ್, ಹಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ಐ.ಕ್ರಿಸ್ಟೋಫರ್ ಕೋಟ್ಯಾನ್, ಕಿರಿಯ ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕಿ ಸಿ.ಜಾಲಿ ಜೇಕಬ್, ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರುಗಳಾದ ಪದವಿಪೂರ್ವ ವಿಭಾಗದ ನಿತೇಶ್ ಶೆಟ್ಟಿ, ಪ್ರೌಢಶಾಲಾ ವಿಭಾಗದ ವಿಶ್ವನಾಥ ಪೂಜಾರಿ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಶಿಕ್ಷಕರಿಂದ ಹಾಗೂ ಪೋಷಕರಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು. ಶಕೀಲಾ ಜಿ ಶೆಟ್ಟಿ, ವಾಣಿ, ಮಮತಾ, ಝೀನಾ, ಲಿನೆಟ್ ಡಿಸೋಜ, ಸೆಲೆಸ್ಟೀನ್ ಪಿಂಟೊ, ಜ್ಯೋತಿ, ಜಯಾನಂದ ವಿವಿಧ ಕಾರ್ಯಕ್ರಮ ನಿರೂಪಿಸಿದರು. ಶಿಕ್ಷಕ – ರಕ್ಷಕ ಸಂಘದ ಸದಸ್ಯರಾದ ಉದಯರವಿ ಸ್ವಾಗತಿಸಿ ಶಿಕ್ಷಕ-ರಕ್ಷಕ ಸಂಘದ ಪ್ರಾಥಮಿಕ ವಿಭಾಗದ ಅಧ್ಯಕ್ಷೆ ವನಿತಾ ವಂದಿಸಿದರು. ಶಿಕ್ಷಕ ರಕ್ಷಕ ಸಂಘದ ಸದಸ್ಯರಾದ ಜೋಕಿಮ್ ಮಿನೇಜಸ್ ಮತ್ತು ಅಕ್ಷತಾ ಕಾರ್ಯಕ್ರಮ ನಿರೂಪಿಸಿದರು.

























