Saturday, September 26, 2026
Google search engine
Homeಕಾರ್ಕಳಕಾರ್ಕಳ ಹೂವಿನ ಬೆಳೆಗಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

ಕಾರ್ಕಳ ಹೂವಿನ ಬೆಳೆಗಾರರ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ

3.80 ಕೋಟಿ ರೂಪಾಯಿ ವ್ಯವಹಾರ : ಫ್ರಾನ್ಸಿಸ್ ಡಿಸೋಜ.

ನಮ್ಮ ಸಂಸ್ಥೆಯ ಪ್ರಗತಿಯ ಪಯಣದಲ್ಲಿ ಸದಸ್ಯರ ವಿಶ್ವಾಸವೇ ನಮ್ಮ ದೊಡ್ಡ ಶಕ್ತಿ. ಪ್ರಗತಿಗಾಗಿ ಸಹಕರಿಸಿದ ಸರ್ವರಿಗೂ ಆಡಳಿತ ಮಂಡಳಿ ಕೃತಜ್ಞತೆಯನ್ನು ಅರ್ಪಿಸುತ್ತಿದೆ. ರಾಜ್ಯದಲ್ಲಿ ಹೊಸ ಕಲ್ಪನೆಯಾಗಿರುವ ಹೂವಿನ ಬೆಳೆಗಾರರ ಸಹಕಾರ ಸಂಘವು ಹೂವಿನ ಬೆಳೆಗಾರರ ಸಂಕಷ್ಟಗಳನ್ನು ಸರ್ಕಾರದ ಗಮನ ಸೆಳೆದು ಸಿಗುವ ಸೌಲಭ್ಯಗಳನ್ನು ಬೆಳೆಗಾರರಿಗೆ ತಲುಪಿಸುವಲ್ಲಿ ಶ್ರಮಿಸುತ್ತಿದೆ, ಸಹಕಾರ, ಸೇವೆಯ ಮೂಲಕ ಪ್ರಸಿದ್ಧಿ ಪಡೆದು ಉಡುಪಿ ಜಿಲ್ಲಾ ಮಟ್ಟದ ಮಾನ್ಯತೆ ಪಡೆದು ಕಾರ್ಕಳದಲ್ಲಿ ಕೇಂದ್ರ ಕಚೇರಿಯ ಜೊತೆಗೆ ಹಣಕಾಸು ವ್ಯವಹಾರ ನಡೆಸುತ್ತಿದೆ ಎಂದು ಹೂವಿನ ಬೆಳೆಗಾರರ ಸಹಕಾರಿ ಸಂಘ ಕಾರ್ಕಳ ಇದರ ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹೇಳಿದರು.

ಅವರು ಅವರು ಶುಕ್ರವಾರ ಕಾರ್ಕಳದ ಪ್ರಕಾಶ್ ಹೊಟೇಲ್ ಸಭಾಂಗಣದಲ್ಲಿ ನಡೆದ ಹೂವಿನ ಬೆಳೆಗಾರರ ಸಹಕಾರಿ ಸಂಘ ಕಾರ್ಕಳ ಇದರ 2025-26ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಸಂಘವು ವಾರ್ಷಿಕವಾಗಿ 3.80 ಕೋಟಿ ರೂಪಾಯಿಗಳ ವ್ಯವಹಾರ ನಡೆಸಿದೆ. ಇನ್ನಷ್ಟು ಪ್ರಗತಿಯನ್ನು ಶೀಘ್ರವಾಗಿ ಸಾಧಿಸಬೇಕಾಗಿದೆ. ನಮ್ಮ ಸಂಘವು ಹೆಬ್ರಿಯಲ್ಲೂ ಶಾಖೆಯನ್ನು ಹೊಂದಿದೆ. ರಂಗನಪಲ್ಕೆಯಲ್ಲಿ ವಿಸ್ತರಣಾ ಶಾಖೆಯನ್ನು ಆರಂಭಿಸಲಾಗಿದೆ.

ಗ್ರಾಹಕರ ಅಗತ್ಯಗಳಿಗೆ ಸ್ಪಂದಿಸುತ್ತ ಹೆಚ್ಚಿನ ಅನುಕೂಲಕ್ಕಾಗಿ ಶಾಖೆಯನ್ನು ಸಂಪೂರ್ಣ ಗಣಕೀಕರಣಗೊಳಿಸಲಾಗಿದೆ. ಉಳಿತಾಯಕ್ಕೆ ಸುರಕ್ಷಿತ ಹಾಗೂ ವಿಶ್ವಾಸಾರ್ಹತೆಯನ್ನು ನೀಡುವುದು ಮತ್ತು ಗ್ರಾಹಕರ ಅಗತ್ಯ ಸಮಯದಲ್ಲಿ ಆರ್ಥಿಕ ನೆರವನ್ನು ನೀಡುವು ನಮ್ಮ ಸಂಸ್ಥೆಯ ಮುಖ್ಯ ಉದ್ದೇಶವಾಗಿದೆ. ನಮ್ಮ ಸಂಸ್ಥೆಯ ಸದಸ್ಯರ ಅಪಾರವಾದ ವಿಶ್ವಾಸ, ಆಡಳಿತ ಮಂಡಳಿಯ ಸಮರ್ಥ ಮಾರ್ಗದರ್ಶನ ಮತ್ತು ಸಿಬ್ಬಂದಿ ವರ್ಗದ ಪ್ರಾಮಾಣಿಕ ಸೇವೆಯೇ ನಮ್ಮ ಸಂಸ್ಥೆಯ ಉನ್ನತಿಗೆ ಕಾರಣವಾಗಿದೆ.

ಬದಲಾಗುತ್ತಿರುವ ಕಾಲಕ್ಕೆ ಅನುಗುಣವಾಗಿ ಸಹಕಾರ ಕ್ಷೇತ್ರದಲ್ಲಿಯೂ ತಂತ್ರಜ್ಞಾನ ಆಧಾರಿತ ಸೇವೆಗಳ ಅಗತ್ಯ ಹೆಚ್ಚಾಗಿದೆ. ಅದಕ್ಕಾಗಿ ಸದಸ್ಯರಿಗೆ ವೇಗವಾದ ಮತ್ತು ಸುಲಭವಾದ ಸೇವೆಯನ್ನು ಒದಗಿಸುವ ಉದ್ದೇಶದಿಂದ ಡಿಜಿಟಲ್‌ ವ್ಯವಹಾರಗಳಿಗೆ ಹೆಚ್ಚಿನ ಆದ್ಯತೆಯನ್ನು ನೀಡಲಾಗುತ್ತಿದೆ.
ಮಲ್ಲಿಗೆ ಬೆಳೆಗಾರರ ಅನುಕೂಲಕ್ಕಾಗಿ ಮುಂದೆ ಇನ್ನಷ್ಟು ಹೊಸ ಶಾಖೆಯನ್ನು ತೆರೆಯುವ ಉದ್ದೇಶವನ್ನು ಹೊಂದಿದೆ.

ಹಾಗೂ ಇತರ ಆಧುನಿಕ ಸೌಲಭ್ಯಗಳ ಮೂಲಕ ಸದಸ್ಯರ ವ್ಯವಹಾರವನ್ನು ಇನ್ನಷ್ಟು ಸುಲಭಗೊಳಿಸುವ ಪ್ರಯತ್ನ ನಡೆಯುತ್ತಿದೆ. ಮುಂದಿನ ದಿನಗಳಲ್ಲಿ ಸಂಸ್ಥೆಯ ಎಲ್ಲಾ ಸೇವೆಗಳನ್ನು ಹಂತಹಂತವಾಗಿ ಆಧುನೀಕರಿಸಿ ಸದಸ್ಯರಿಗೆ ಅತ್ಯುತ್ತಮ ಸೇವೆಯನ್ನು ನೀಡುವ ಉದ್ದೇಶವನ್ನು ಸಂಸ್ಥೆಯು ಹೊಂದಿದೆ ಎಂದು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜ ಹೇಳಿದರು.

ಹೂವಿನ ಬೆಳೆಗಾರರಿಗೆ ಸಂಘವು ಸಕಾಲದಲ್ಲಿ ಹೂವಿನ ಗಿಡ ನಾಟಿಕ್ರಮ, ಆರೈಕೆ, ಕಾಯಿಲೆ, ಗಿಡಗಳ ಮದ್ದು, ವ್ಯಾಪಾರ ವ್ಯವಹಾರದ ಸಮಗ್ರ ಮಾಹಿತಿಯನ್ನು ವಿವಿಧ ಮಾಧ್ಯಮಗಳ ಮೂಲಕ ಕಾಲ ಕಾಲಕ್ಕೆ ನೀಡುತ್ತಿದೆ.
ನಮ್ಮ ಸಹಕಾರ ಸಂಘವು ಹೂವಿನ ಬೆಳೆಗಾರರ ಮತ್ತು ಸರ್ಕಾರದ ನಡುವೆ ಕೊಂಡಿಯಾಗಿ ಸರಕಾರದಿಂದ ಕಾಲಕಾಲಕ್ಕೆ ಸಿಗುವ ಸವಲತ್ತುಗಳನ್ನು ಬೆಳೆಗಾರರಿಗೆ ದೊರಕಿಸಿ ಕೊಡಲು ಶ್ರಮಿಸುತ್ತಿದೆ. ಸಂಘವು ಎಲ್ಲಾ ವರ್ಗದ ಜನ ಸಾಮಾನ್ಯರಿಗಾಗಿ ಬ್ಯಾಂಕಿಂಗ್ ವ್ಯವಹಾರವನ್ನು ನಡೆಸುತ್ತಿದೆ. ತಾವು ಎಲ್ಲರೂ ಸೇರಿ ಸಂಘವನ್ನು ಬೆಳೆಸಿ ಮುನ್ನಡೆಸಬೇಕು ಎಂದು ಅಧ್ಯಕ್ಷ ಫ್ರಾನ್ಸಿಸ್ ಡಿಸೋಜಾ ಮನವಿ ಮಾಡಿದರು.

ಹೆಬ್ರಿಯಲ್ಲಿ ಮಲ್ಲಿಗೆ ಮಾರಾಟ ಮಳಿಗೆ ತೆರೆಯುವ ಉದ್ದೇಶ ಹೊಂದಲಾಗಿದೆ. ಸಂಘದಲ್ಲಿ ಇ ಸ್ಟಾಂಪಿಂಗ್, ಪಾನ್ ಕಾರ್ಡ್,ಮಲ್ಲಿಗೆ ಗಿಡ ಸಹಿತ ವಿವಿಧ ಸೌಲಭ್ಯಗಳು ಕೂಡ ದೊರೆಯುತ್ತಿದೆ ಎಂದು ಫ್ರಾನ್ಸಿಸ್ ಡಿಸೋಜಾ ತಿಳಿಸಿದರು.

ಹೂವಿನ ಬೆಳೆಗಾರರ ಸಹಕಾರಿ ಸಂಘದ ಉಪಾಧ್ಯಕ್ಷ ಕೆ. ರಾಘವೇಂದ್ರ ಪೈ, ನಿರ್ದೇಶಕರಾದ ಫ್ಲೋರಾ ಮೆಂಡೋನ್ಸಾ, ಪ್ಲಾವಿಯಾ ಅರಾನ್ಹ, ಬಿ. ಶಶಿಕಾಂತ್ ಭಟ್, ವೆಂಕಟರಮಣ ಶರ್ಮಾ, ಸುಕುಮಾರ್ ಮುನಿಯಾಲ್, ಮಂದಾರ ಆಚಾರ್ಯ ಮಾರಾಳಿ, ಅಮರ್‌ ಮುಂತಾದವರು ಉಪಸ್ಥಿತರಿದ್ದರು.

ಲತಾ ಉಮೇಶ್ ಮತ್ತು ಶ್ರೇಯಾ ಆರ್ ಪ್ರಾರ್ಥಿಸಿದರು.ಸಂಘದ ಕಾರ್ಯದರ್ಶಿ ಲತಾ ಉಮೇಶ್ ವಾರ್ಷಿಕ ವರದಿ ಮಂಡಿಸಿದರು. ರಂಗನಪಲ್ಕೆ ಶಾಖೆಯ ಜ್ಯೋತಿ ಭಾಸ್ಕರ ಆಚಾರ್ಯ ಸ್ವಾಗತಿಸಿದರು. ಹೆಬ್ರಿ ಶಾಖೆಯ ಭವ್ಯ ರಾಜೇಶ್ ನಾಯ್ಕ್ ವಂದಿಸಿದರು. ಪ್ರಕಾಶ್‌ ಮಾರ್ಟಿಸ್‌ ನಿರೂಪಿಸಿದರು. ಸಿಬಂದಿ ವರ್ಗದವರು ಸಹಕರಿಸಿದರು.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments