ಕಾಂಗ್ರೆಸ್ ಸರ್ಕಾರದ ಜನವಿರೋಧಿ ಧೋರಣೆಯಿಂದ ಕಾರ್ಕಳದ ಗ್ರಾಮೀಣ ಜನತೆ, ರೈತರು ಕಂಗಾಲು: ಮಣಿರಾಜ್ ಶೆಟ್ಟಿ ತೀವ್ರ ಆಕ್ರೋಶ.
ರಾಜ್ಯದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಗ್ರಾಮೀಣ ಜನತೆಯ, ರೈತರ ಹಾಗೂ ಬಡವರ್ಗದ ಹಿತಾಸಕ್ತಿಯನ್ನು ಸಂಪೂರ್ಣವಾಗಿ ಕಡೆಗಣಿಸಿದೆ. ಜನಸಾಮಾನ್ಯರ ಕಷ್ಟ-ಕಾರ್ಪಣ್ಯಗಳಿಗೆ ಸ್ಪಂದಿಸಬೇಕಾದ ಸರ್ಕಾರ, ದಿನಕ್ಕೊಂದು ಜನವಿರೋಧಿ ನಿಯಮಗಳನ್ನು ಹೇರಿ ಸಾರ್ವಜನಿಕರನ್ನು ಕಚೇರಿಗಳಿಗೆ ಅಲೆದಾಡಿಸುತ್ತಿದೆ. ರಾಜ್ಯ ಸರ್ಕಾರದ ಈ ದ್ರೋಹ ನೀತಿಯನ್ನು ಖಂಡಿಸಿ ಅಕ್ಟೋಬರ್ 5ರಂದು ಕಾರ್ಕಳ ತಾಲೂಕು ಕಚೇರಿ ಎದುರು ನಡೆಯಲಿರುವ ಬೃಹತ್ ಪ್ರತಿಭಟನೆಯಲ್ಲಿ ತಾಲೂಕಿನ ಜನತೆ ಒಕ್ಕೊರಲಿನಿಂದ ಪಾಲ್ಗೊಳ್ಳಬೇಕು ಎಂದು ಬಿಜೆಪಿ ಹಿರಿಯ ಮುಖಂಡರು ಹಾಗೂ ಕರ್ನಾಟಕ ಗೇರು ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷರಾದ ಮಣಿರಾಜ್ ಶೆಟ್ಟಿ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ತಲೆತಲಾಂತರಗಳಿಂದ ಕೃಷಿ ಮಾಡಿಕೊಂಡು, ಸಣ್ಣ ಸೂರು ಕಟ್ಟಿಕೊಂಡು ಬದುಕುತ್ತಿರುವ ಬಡ ಕುಟುಂಬಗಳ 10,090ಕ್ಕೂ ಹೆಚ್ಚು ಅಕ್ರಮ-ಸಕ್ರಮ ಅರ್ಜಿಗಳನ್ನು ಯಾವುದೇ ನ್ಯಾಯಸಮ್ಮತ ಪರಿಶೀಲನೆ ನಡೆಸದೆ ರದ್ದುಪಡಿಸಿ ರೈತರಿಗೆ, ಬಡವರಿಗೆ ದ್ರೋಹ ಬಗೆಯಲಾಗಿದೆ.
ಜಾಗದ ದಾಖಲೆಗಳಿಲ್ಲದ ಬಡವರ ಮನೆಗಳನ್ನು ಇ-ಸ್ವತ್ತು ತಂತ್ರಾಂಶದಿಂದಲೇ ಕೈಬಿಡುವ ಸರ್ಕಾರದ ಅವಿವೇಕದ ಆದೇಶದಿಂದ ಗ್ರಾಮೀಣ ಜನತೆ ಸ್ವಂತ ಮನೆಯ ಹಕ್ಕನ್ನೇ ಕಳೆದುಕೊಳ್ಳುವ ಭೀತಿಯಲ್ಲಿದ್ದಾರೆ.
ಕಾರ್ಕಳವೊಂದರಲ್ಲೇ 1,000ಕ್ಕೂ ಹೆಚ್ಚು ಅರ್ಹ ಕುಟುಂಬಗಳ ಬಿಪಿಎಲ್ ರೇಷನ್ ಕಾರ್ಡ್‌ಗಳನ್ನು ರದ್ದುಗೊಳಿಸಿ ಬಡವರ ಅನ್ನಕ್ಕೆ ಕಲ್ಲು ಹಾಕಲಾಗಿದೆ. ಜತೆಗೆ, ಅಸಹಾಯಕ ವೃದ್ಧರು, ವಿಧವೆಯರು ಮತ್ತು ಸಂಧ್ಯಾ ಸುರಕ್ಷಾ ಯೋಜನೆಯ 10,732ಕ್ಕೂ ಮಿಕ್ಕಿ ಪಿಂಚಣಿಗಳನ್ನು ಕಡಿತಗೊಳಿಸಲು ಆದೇಶಿಸಿರುವುದು ಸರ್ಕಾರದ ಅಮಾನವೀಯತೆಗೆ ಸಾಕ್ಷಿ.
ಸುನಿಲ್ ಕುಮಾರ್ ಅವರ ನೇತೃತ್ವದಲ್ಲಿ ನಡೆಯುತ್ತಿರುವ ಈ ಹೋರಾಟ ಕೇವಲ ರಾಜಕೀಯ ಪ್ರತಿಭಟನೆಯಲ್ಲ. ಇದು ಪ್ರತಿಯೊಬ್ಬ ಬಡವನ, ರೈತನ, ಶೋಷಿತನ ಸ್ವಾಭಿಮಾನದ ಹಕ್ಕಿನ ಹೋರಾಟ. ಆದ್ದರಿಂದ ಅಕ್ಟೋಬರ್ 5ರ ಸೋಮವಾರ ಬೆಳಗ್ಗೆ 10:00 ಗಂಟೆಗೆ ಕಾರ್ಕಳ ತಾಲೂಕು ಕಚೇರಿ ಮುಂಭಾಗ ನಡೆಯುವ ಪ್ರತಿಭಟನೆಯಲ್ಲಿ ತಾಲ್ಲೂಕಿನ ಪ್ರತಿಯೊಬ್ಬ ನಾಗರಿಕರು, ಕೃಷಿಕರು, ಪಕ್ಷದ ಹಿರಿಯ-ಕಿರಿಯ ಕಾರ್ಯಕರ್ತರು ಬೃಹತ್ ಸಂಖ್ಯೆಯಲ್ಲಿ ಭಾಗವಹಿಸಿ ಎಂದು ಮಣಿರಾಜ್ ಶೆಟ್ಟಿ ಕರೆ ನೀಡಿದ್ದಾರೆ.



























