Wednesday, October 21, 2026
Google search engine
Homeಕಾರ್ಕಳರಾಜ್ಯ ಮಟ್ಟದ ವಾಲಿಬಾಲ್‌ನಲ್ಲಿ ಅಮೃತ ಭಾರತಿ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ: ಅ.22ರಂದು ವಿಜಯೋತ್ಸವ ಮೆರವಣಿಗೆ...

ರಾಜ್ಯ ಮಟ್ಟದ ವಾಲಿಬಾಲ್‌ನಲ್ಲಿ ಅಮೃತ ಭಾರತಿ ತಂಡ ರಾಷ್ಟ್ರ ಮಟ್ಟಕ್ಕೆ ಆಯ್ಕೆ: ಅ.22ರಂದು ವಿಜಯೋತ್ಸವ ಮೆರವಣಿಗೆ ಹಾಗೂ ಸನ್ಮಾನ ಸಮಾರಂಭ

ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಯ ರಾಜ್ಯ ಪಠ್ಯಕ್ರಮದ ವಿದ್ಯಾಲಯದ 17 ವರ್ಷ ವಯೋಮಿತಿಯೊಳಗಿನ ಬಾಲಕರ ವಾಲಿಬಾಲ್ ತಂಡವು ಬೆಳ್ವೆಯಲ್ಲಿ ಇತ್ತೀಚೆಗೆ ನಡೆದ ರಾಜ್ಯಮಟ್ಟದ ವಾಲಿಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿ ಪ್ರಥಮ ಸ್ಥಾನ ಪಡೆದುಕೊಂಡಿದೆ. ಈ ಮೂಲಕ ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದು, ಹೆಬ್ರಿ ಭಾಗಕ್ಕೆ ಕೀರ್ತಿ ತಂದಿದೆ.

ತಂಡದ ಈ ಸಾಧನೆಯನ್ನು ಗುರುತಿಸಿ ಗೌರವಿಸುವ ಉದ್ದೇಶದಿಂದ ಅಮೃತ ಭಾರತಿ ಟ್ರಸ್ಟ್ ವತಿಯಿಂದ ಅಕ್ಟೋಬರ್ 22ರಂದು ಬೆಳಿಗ್ಗೆ 10 ಗಂಟೆಗೆ ವಿಜಯೋತ್ಸವ ಮೆರವಣಿಗೆ ಹಾಗೂ ಸನ್ಮಾನ ಸಮಾರಂಭವನ್ನು ಆಯೋಜಿಸಲಾಗಿದೆ.

ವಿಜಯೋತ್ಸವ ಮೆರವಣಿಗೆಯು ಬೆಳಿಗ್ಗೆ 10 ಗಂಟೆಗೆ ಶ್ರೀ ಅನಂತ ಪದ್ಮನಾಭ ದೇವಸ್ಥಾನದ ಆವರಣದಿಂದ ಪ್ರಾರಂಭವಾಗಿ, ಹೆಬ್ರಿ ಪಟ್ಟಣದ ಪ್ರಮುಖ ಬೀದಿಗಳ ಮೂಲಕ ಸಾಗಿ ಅಮೃತ ಭಾರತಿ ಕ್ಯಾಂಪಸ್ ತಲುಪಲಿದೆ. ಪಟಾಕಿ ಹಾಗೂ ವಾದ್ಯಘೋಷಗಳೊಂದಿಗೆ ವಿಜೇತ ಕ್ರೀಡಾಪಟುಗಳನ್ನು ಅದ್ಧೂರಿಯಾಗಿ ಸ್ವಾಗತಿಸಲಾಗುವುದು.

ಮೆರವಣಿಗೆಯ ಬಳಿಕ ಅಮೃತ ಭಾರತಿ ಸಂಸ್ಥೆಯ ಅನ್ನಪೂರ್ಣ ಸಭಾಂಗಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಮೃತ ಭಾರತಿ ಟ್ರಸ್ಟ್‌ನ ಅಧ್ಯಕ್ಷರು, ಪದಾಧಿಕಾರಿಗಳು, ಶಿಕ್ಷಣ ಇಲಾಖೆ ಹಾಗೂ ದೈಹಿಕ ಶಿಕ್ಷಣ ಇಲಾಖೆಯ ಅಧಿಕಾರಿಗಳು, ಹೆಬ್ರಿ ತಾಲೂಕಿನ ವಿವಿಧ ಸಂಘ-ಸಂಸ್ಥೆಗಳ ಮುಖಂಡರು ಮತ್ತು ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಈ ಸಂದರ್ಭದಲ್ಲಿ ಸಾಧನೆ ಮಾಡಿದ ಪ್ರತಿಯೊಬ್ಬ ಆಟಗಾರ ಹಾಗೂ ತರಬೇತುದಾರರನ್ನು ಸನ್ಮಾನಿಸಲಾಗುವುದು.

ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಕ್ರೀಡಾ ಕ್ಷೇತ್ರದಲ್ಲಿ ರಾಷ್ಟ್ರಮಟ್ಟದ ಅವಕಾಶ ದೊರೆಯುವುದು ಮಹತ್ವದ ಸಾಧನೆಯಾಗಿದೆ ಎಂದು ಕಾರ್ಕಳ ಶಾಸಕ ವಿ. ಸುನೀಲ್ ಕುಮಾರ್ ಅಭಿನಂದನೆ ಸಲ್ಲಿಸಿದ್ದು, ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿಯೂ ತಂಡವು ಗೆಲುವು ಸಾಧಿಸಲಿ ಎಂದು ಶುಭ ಹಾರೈಸಿದ್ದಾರೆ.

ವಿದ್ಯಾರ್ಥಿಗಳು ತಮ್ಮ ಪರಿಶ್ರಮ, ಶಿಸ್ತು ಹಾಗೂ ತರಬೇತುದಾರರ ಮಾರ್ಗದರ್ಶನದಿಂದ ಈ ಸಾಧನೆ ಮಾಡಿದ್ದಾರೆ. ಅವರ ಮುಂದಿನ ರಾಷ್ಟ್ರಮಟ್ಟದ ಪಯಣಕ್ಕೆ ಎಲ್ಲರೂ ಶುಭ ಹಾರೈಸಬೇಕು ಎಂದು ಅಮೃತ ಭಾರತಿ ಟ್ರಸ್ಟ್ ಪ್ರಕಟಣೆಯಲ್ಲಿ ತಿಳಿಸಿದೆ.

ಈ ವಿಜಯೋತ್ಸವದಲ್ಲಿ ಹೆಬ್ರಿ ಸುತ್ತಮುತ್ತಲಿನ ಸಾರ್ವಜನಿಕರು, ಪೋಷಕರು, ಹಳೆ ವಿದ್ಯಾರ್ಥಿಗಳು, ಕ್ರೀಡಾಭಿಮಾನಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಸಾಧಕ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸುವಂತೆ ಅಮೃತ ಭಾರತಿ ಟ್ರಸ್ಟ್ ಮನವಿ ಮಾಡಿದೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments