
ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಸಂಸ್ಥೆಯ ಮಕ್ಕಳ ರಕ್ಷಣಾ ಸಮಿತಿಯ ಆಶ್ರಯದಲ್ಲಿ ಪ್ರೌಢಶಾಲಾ ಮತ್ತು ಪದವಿಪೂರ್ವ ವಿದ್ಯಾರ್ಥಿಗಳಿಗೆ ಆರೋಗ್ಯ ರಕ್ಷಣೆ, ಮಕ್ಕಳ ಹಕ್ಕುಗಳು ಮತ್ತು ವೈಯಕ್ತಿಕ ಸುರಕ್ಷತೆಗಳ ಕುರಿತಾಗಿ ಮಾಹಿತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು.
ಕಾರ್ಯಕ್ರಮಕ್ಕೆ ಆಗಮಿಸಿದ್ದ ಜಿಲ್ಲಾ ಮಕ್ಕಳ ರಕ್ಷಣಾ ಅಧಿಕಾರಿ ನಾಗರತ್ನಾ ನಾಯಕ್ ಅವರು ಸಾಮಾಜಿಕ ಜಾಲತಾಣಗಳಿಂದ ಹಾಗೂ ಅಪರಿಚಿತರೊಂದಿಗಿನ ಸಂಬಂಧಗಳಿಂದ ಒದಗಬಹುದಾದ ಅಪಾಯ, ಪೋಕ್ಸೋ ಕಾಯಿದೆ ಮತ್ತು ಮಕ್ಕಳಿಗೆ ಸಂವಿಧಾನದತ್ತವಾಗಿ ಮತ್ತು ಕಾನೂನುಬದ್ಧವಾಗಿ ದೊರೆಯುವ ಹಕ್ಕುಗಳ ಬಗ್ಗೆ ಮಾಹಿತಿ ನೀಡಿದರು.
ಹಿರಿಯ ವೈದ್ಯಾಧಿಕಾರಿ ಡಾ.ಶಮಾ ಶುಕೂರ್, ಮಾದಕ ದ್ರವ್ಯಗಳ ಸೇವನೆಯ ದುಷ್ಪರಿಣಾಮಗಳು, ಮೊಬೈಲ್ ವ್ಯಸನ ಹಾಗೂ ಅದರಿಂದ ಹೊರಬರುವ ಪರಿಹಾರ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಪ್ರಾಂಶುಪಾಲರಾದ ಲಕ್ಷ್ಮಿ ನಾರಾಯಣ ಕಾಮತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಸುಶೀಲ, ಉಪ ಪ್ರಾಚಾರ್ಯ ಪ್ರಕಾಶ್ ಭಟ್, ಸಂಸ್ಥೆಯ ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನಾ ಸ್ನೇಹಲತಾ, ಪ್ರಾಥಮಿಕ ವಿಭಾಗದ ಮುಖ್ಯ ಶಿಕ್ಷಕ ರುಡಾಲ್ಫ್ ಕಿಶೋರ್ ಲೋಬೊ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತಾ, ಸಂಸ್ಥೆಯ ಮಕ್ಕಳ ರಕ್ಷಣಾ ಸಮಿತಿಯ ಬೋಧಕ ಪ್ರತಿನಿಧಿಗಳಾದ ಆಂಗ್ಲಭಾಷಾ ಉಪನ್ಯಾಸಕಿ ಶಿಜಿ ಸಿ ಕೆ, ಪ್ರೌಢಶಾಲಾ ಸಹಶಿಕ್ಷಕಿ ಮಂಗಳಾ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಮಕ್ಕಳ ರಕ್ಷಣಾ ಸಮಿತಿಯ ಸಂಯೋಜಕಿ ಆಂಗ್ಲಭಾಷಾ ಉಪನ್ಯಾಸಕಿ ಪಾವನಾ ಧನ್ಯರಾಜ್ ಕಾರ್ಯಕ್ರಮ ನಿರೂಪಿಸಿ ನಿರ್ವಹಿಸಿದರು.



































