ಬ್ರಹ್ಮಾವರ ಪೇಟೆಯಲ್ಲಿ ಪಿಗ್ಮಿ ಏಜೆಂಟ್ ನ ಬೈಕ್ ನಲ್ಲಿದ್ದ ಹಣ ಕಳವು ಮಾಡಿದ ಆರೋಪಿ ವಿಜಯಪುರ ಮೂಲದ ಸಂತೋಷ್ ಹನುಮಂತ ಕಟ್ಟಿಮನಿಯನ್ನು ಉಡುಪಿಯಲ್ಲಿ ಬಂಧಿಸಲಾಗಿದೆ.
ಬ್ರಹ್ಮಾವರದ ಸಹಕಾರಿ ಸಂಘವೊಂದರಲ್ಲಿ ಪಿಗ್ಮಿ ಏಜೆಂಟ್ ಮಟಪಾಡಿಯ ಸುಭಾಸ್ ಸೋಮವಾರ ಎಂದಿನಂತೆ ಪಿಗ್ಮಿ ಸಂಗ್ರಹಿಸುತ್ತಾ ಹೋಟೆಲ್ ಗೆ ತೆರಳಿ ವಾಪಾಸ್ಸಾಗುವಾಗ ಬೈಕ್ ನ ಸೈಡ್ ಬಾಕ್ಸ್ ನಲ್ಲಿದ್ದ 65000 ರೂ. ನಗದು ಕಳವಾಗಿತ್ತು. ಬ್ರಹ್ಮಾವರ ಪೊಲೀಸರು ತಕ್ಷಣ ಕಾರ್ಯಪ್ರವೃತ್ತರಾಗಿ ಸಿಸಿಟಿವಿ ಪರಿಶೀಲಿಸಿ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾದರು.
ಉದ್ಯೋಗಕ್ಕೆಂದು ಕರಾವಳಿ ಜಿಲ್ಲೆಗಳಿಗೆ ಬಂದ ಸಂತೋಷ್ ಹನುಮಂತ ಕಟ್ಟಿಮನಿ ಕದಿಯುವುದನ್ನು ವೃತ್ತಿಯಾಗಿಸಿಕೊಂಡಿದ್ದ. ಬೈಕ್ ನಲ್ಲಿ ಬ್ಯಾಗ್ ಬಿಟ್ಟು ಹೋಗುವವರನ್ನೇ ಹೊಂಚುಹಾಕಿ ಬಲೆ ಬೀಸುತ್ತಿದ್ದ. ಈತನ ಮೇಲೆ ಉಡುಪಿ, ಮಂಗಳೂರು, ಕಾರವಾರ, ಗೋವಾದಲ್ಲಿ 10 ಕ್ಕೂ ಹೆಚ್ಚು ಕಳವು ಪ್ರಕರಣಗಳಿವೆ.



































