
ಕಾರ್ಕಳ ನಗರ ಪೊಲೀಸ್ ಠಾಣೆ ಇವರ ಸಹಭಾಗಿತ್ವದಲ್ಲಿ ಸರಕಾರಿ ಪದವಿ ಪೂರ್ವ ಕಾಲೇಜು ಸಾಣೂರಿನಲ್ಲಿ ಮಾದಕ ದ್ರವ್ಯ ವ್ಯಸನದ ವಿರುದ್ಧ ಜಾಗೃತಿಯ ಅರಿವು ಕಾರ್ಯಕ್ರಮ ಆ.9 ರಂದು ಕಾಲೇಜಿನ ಸಭಾಂಗಣದಲ್ಲಿ ನಡೆಯಿತು.
ಕಾರ್ಕಳ ನಗರ ಪೊಲೀಸ್ ಠಾಣೆಯ ಸಬ್ ಇನ್ಸ್ಪೆಕ್ಟರ್ ಶಿವಕುಮಾರ, ವಿದ್ಯಾರ್ಥಿಗಳಿಗೆ ಮಾದಕ ದ್ರವ್ಯ ದುರ್ಬಳಕೆ, ಮಾದಕ ದ್ರವ್ಯ ವ್ಯಸನಕ್ಕೆ ಬಲಿಯಾಗುವಿಕೆ, ಅದರ ದುಷ್ಪರಿಣಾಮ ಹಾಗೂ ಕಾನೂನು ಕ್ರಮಗಳ ಬಗ್ಗೆ ಮಾಹಿತಿಯನ್ನು ನೀಡುತ್ತಾ, ವಿದ್ಯಾರ್ಥಿಗಳು ಮಾದಕ ವ್ಯಸನಕ್ಕೆ ಬಲಿಯಾಗದಿರುವಂತೆ ಎಚ್ಚರ ವಹಿಸಬೇಕೆಂದರು. ಜೊತೆಗೆ ವಾಹನ ಚಾಲನಾ ನಿಯಮಗಳು,ನಿಯಮ ಉಲ್ಲಂಘಿಸಿದರೆ ಎದುರಿಸಬೇಕಾದ ಕಾನೂನು ಕ್ರಮಗಳು,ಚಾಲನಾ ನಿಯಮ ಪಾಲಿಸುವ ಅಗತ್ಯ ಹಾಗೂ ಪೋಕ್ಸೊ ಮುಂತಾದ ಸಮಾಜಘಾತುಕ ಚಟುವಟಿಕೆಗಳ ಬಗ್ಗೆ ವಿವರವಾದ ಮಾಹಿತಿಯನ್ನು ನೀಡಿದರು.
ಕಾಲೇಜಿನಲ್ಲಿ ರಚಿಸಲಾದ ಮಾದಕ ದ್ರವ್ಯ ವಿರೋಧಿ ಸಮಿತಿ, ಈ ಬಗ್ಗೆ ಕಾಳಜಿ ವಹಿಸಬೇಕು. ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳ ಬಗ್ಗೆ ತಿಳಿದುಬಂದಲ್ಲಿ,ತಕ್ಷಣ ಮಾಹಿತಿಯನ್ನು ನೀಡಿ, ಅದನ್ನು ತಡೆಗಟ್ಟುವಲ್ಲಿ ಮಹತ್ತರವಾದ ಪಾತ್ರವನ್ನು ವಹಿಸಬೇಕೆಂದು ಕರೆ ನೀಡಿದರು .ಕಾರ್ಕಳ ನಗರ ಬೀಟ್ ಪೊಲೀಸ್ ಶೋಭಾರವರು ಕಾರ್ಯಕ್ರಮಕ್ಕೆ ಸಹಕರಿಸಿದರು.
ಕಾಲೇಜಿನ ಮಾದಕ ದ್ರವ್ಯ ವಿರೋಧಿ ಸಮಿತಿಯ ಅಧ್ಯಕ್ಷರಾದ ಪ್ರಾಂಶುಪಾಲೆ ಸುಚೇತ ಕಾಮತ್ ರವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮಕ್ಕೆ ಸಮಿತಿಯ ನೋಡಲ್ ಅಧಿಕಾರಿ ಡಾ .ಸುಮತಿ ಪಿ. ಸ್ವಾಗತಿಸಿ, ಕಾರ್ಯಕ್ರಮವನ್ನು ನಿರೂಪಿಸಿದರು. ಸಮಿತಿಯ ಸದಸ್ಯರಾದ ಅರವಿಂದ ಕೆ. ಎನ್. ಹಾಗೂ ಸ್ಮಿತಾ ಜೊಷ್ಮಾ ಪೆರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಕಾರ್ಯಕ್ರಮದಲ್ಲಿ ಸಮಿತಿಯ ಎಲ್ಲ ವಿದ್ಯಾರ್ಥಿ ಪ್ರತಿನಿಧಿಗಳು, ಕಾಲೇಜಿನ ಎಲ್ಲ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.



































