
ಉಡುಪಿ ಪುತ್ತೂರಿನಲ್ಲಿ ತಡರಾತ್ರಿ ಮನೆಗೆ ನುಗ್ಗಿದ ದುಷ್ಕರ್ಮಿಗಳು ವಿನಯ್ ದೇವಾಡಿಗ (35) ಎಂಬ ವ್ಯಕ್ತಿಯನ್ನ ಬರ್ಬರವಾಗಿ ಹತ್ಯೆಗೈದಿದ್ದಾರೆ.
ಕರಾವಳಿ ಜಿಲ್ಲೆಯಲ್ಲಿ ಮತ್ತೆ ರಕ್ತ ಹರಿದಿದೆ. ಉಡುಪಿಯ ಪುತ್ತೂರಿನಲ್ಲಿ ತಡರಾತ್ರಿ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ತಿಳಿದು ಬಂದಿದೆ. ಕಳೆದ ರಾತ್ರಿ ಸುಮಾರು 11 ಗಂಟೆಗೆ ವಿನಯ್ ಎಂಬಾತನ ಮನೆಗೆ ಮೂವರು ದುಷ್ಕರ್ಮಿಗಳು ನುಗ್ಗಿ, ಮನೆಯವರ ಮುಂದೆಯೇ ಕೃತ್ಯವೆಸಗಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ರಾತ್ರಿ ಬಾಗಿಲು ಬಡಿದ ದುಷ್ಕರ್ಮಿಗಳು ಮೊದಲು ಮನೆಯಲ್ಲಿ ವಿನಯ್ ಇದ್ದಾನಾ ಎಂದು ವಿಚಾರಿಸಿದ್ದಾರೆ. ಸ್ನೇಹಿತರು ಇರಬಹುದು ಎಂದು ಮನೆಯವರು ಒಳಗೆ ಕರೆದುಕೊಂಡಿದ್ದಾರೆ. ಬಳಿಕ ಒಳಗೆ ಬಂದವರೇ ಏಕಾಏಕಿ ವಿನಯ್ ರೂಮಿಗೆ ನುಗ್ಗಿದ್ದಾರೆ.
ಮನೆಯಲ್ಲಿ ಹೆಂಡತಿ ಮತ್ತು ಮಗುವಿನ ಜೊತೆ ಮಲಗಿದ್ದ ವಿನಯ್ ರೂಮಿಗೆ ಮೂವರು ನುಗ್ಗಿದ್ದಾರೆ. ಕೈಯಲ್ಲಿ ಹಿಡಿದಿದ್ದ ತಲವಾರ್ ಬೀಸಿದ್ದಾರೆ. ಎಲ್ಲೆಂದರಲ್ಲಿ ಇರಿದು ಕೊಚ್ಚಿ ವಿನಯ್ ನನ್ನು ಹತ್ಯೆಗೈದಿದ್ದಾರೆ ಎನ್ನಲಾಗಿದೆ.
ಪತಿಯ ಪ್ರಾಣ ಉಳಿಸಿಕೊಳ್ಳಲು ದುಷ್ಕರ್ಮಿಗಳ ಜೊತೆ ವಿನಯ್ ಪತ್ನಿ ಹೋರಾಡಿದ್ದಾರೆ. ಈ ವೇಳೆ ಆಕೆಗೂ ಗಂಭೀರ ಗಾಯಗಳಾಗಿವೆ. ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ.



































