
ರೋಟರಿ ಕ್ಲಬ್ ಕಾರ್ಕಳ ಇವರು ಮಾಡುವ ಸಮಾಜಮುಖಿ ಕಾರ್ಯಕ್ರಮಗಳು ಶ್ಲಾಘನೀಯ. ಕಾರ್ಕಳದಲ್ಲಿ ಶೈಕ್ಷಣಿಕ ಆರೋಗ್ಯ ಮತ್ತು ಸಮುದಾಯ ಸೇವೆಗಳನ್ನು ಮಾಡಿಕೊಂಡು ಬರುತ್ತಿರುವ ರೋಟರಿ ಸಂಸ್ಥೆಯು ಎಲ್ಲರಿಗೂ ಮಾದರಿಯಾಗಿದೆ ಎಂದು ಕಾರ್ಕಳ ಕ್ಷೇತ್ರದ ಶಾಸಕರಾದ ವಿ ಸುನಿಲ್ ಕುಮಾರ್ ಹೇಳಿದರು.ಅವರು ಕಾರ್ಕಳ ಮುಖ್ಯ ಬಸ್ಸು ನಿಲ್ದಾಣದಲ್ಲಿ ನಿರ್ಮಿಸಿದ ವಕೀಲ ವಾಸುದೇವ ಕಾಮತ್ ರೋಟರಿವೃತ್ತವನ್ನು ಲೋಕಾರ್ಪಣೆಗೊಳಿಸಿ ಮಾತನಾಡಿದರು.
ತಮ್ಮ ತಂದೆ ವಕೀಲ ವಾಸುದೇವ ಕಾಮತ್ ರವರ ಹೆಸರಿನ ವೃತ್ತದ ನಿರ್ಮಾಣದಲ್ಲಿ ಸಹಕರಿಸಿದ ದಾನಿಗಳಾದ ಕೆ. ಕಮಲಾಕ್ಷ ಕಾಮತ್ ಲೆಕ್ಕಪರಿಶೋಧಕರು ಮಾತನಾಡುತ್ತಾ ಅಂತರಾಷ್ಟ್ರೀಯ ರೋಟರಿ ಸಂಸ್ಥೆಯ ಕೆಲಸ ಕಾರ್ಯಗಳು ಪ್ರಶಂಸಣೀಯವಾಗಿದ್ದು, ಸಮಾಜಕ್ಕೆ ಇನ್ನು ಹೆಚ್ಚಿನ ಸೇವೆಯು ಲಭಿಸುವಂತಾಗಲಿ ಎಂದರು.
ವೇದಿಕೆಯಲ್ಲಿ ಕಾರ್ಕಳ ಪುರಸಭಾ ಅಧ್ಯಕ್ಷರಾದ ಯೋಗೀಶ್ ದೇವಾಡಿಗ, ಪುರಸಭೆಯ ಸ್ಥಳೀಯ ಸದಸ್ಯೆ ಸುಮಾ ಕೇಶವ್, ರೋಟರಿ ಜಿಲ್ಲಾ ಮಾಜಿ ಗವರ್ನರ್ ಡಾ. ಭರತೇಶ್ ಆದಿರಾಜ್, ವಲಯ ಸೇನಾನಿ ಜಾನ್ ಆರ್ ಡಿ’ಸಿಲ್ವ, ಮೇಜರ್ ಡೋನರ್ ಸುವರ್ಣ ನಾಯಕ್, ಅರುಣ್ ಪುರಾಣಿಕ್, ಕಾರ್ಯದರ್ಶಿ ಚೇತನ್ ನಾಯಕ್ ಉಪಸ್ಥಿತರಿದ್ದು ಶುಭ ಹಾರೈಸಿದರು.
ಕ್ಲಬ್ ನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಪ್ರಾಸ್ತಾವಿಕ ಮಾತುಗಳೊಂದಿಗೆ ಎಲ್ಲರನ್ನೂ ಸ್ವಾಗತಿಸಿದರು. ಕ್ಲಬ್ ನ ಸಮುದಾಯ ಸೇವಾ ಚೇರ್ಮನ್ ವಸಂತ್ ಎಂ. ನಿರೂಪಿಸಿದರು. ನಿಕಟ ಪೂರ್ವ ಅಧ್ಯಕ್ಷ ಇಕ್ಬಾಲ್ ಅಹಮದ್ ವಂದಿಸಿದರು.



































