Saturday, January 31, 2026
Google search engine
Homeಹೆಬ್ರಿಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಮುದ್ರಾಡಿ ಸಮಸ್ತ ಬಿಲ್ಲವ...

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಮುದ್ರಾಡಿ ಸಮಸ್ತ ಬಿಲ್ಲವ ಸಮಾಜದ ಪರವಾಗಿ ಕಾರ್ಕಳ ಬಿಲ್ಲವ ಸಂಘದಿಂದ ಅಭಿನಂದನೆ

ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಮಂಜುನಾಥ ಪೂಜಾರಿ ಮುದ್ರಾಡಿ

ಸಮಸ್ತ ಬಿಲ್ಲವ ಸಮಾಜದ ಪರವಾಗಿ ಕಾರ್ಕಳ ಬಿಲ್ಲವ ಸಂಘದಿಂದ ಅಭಿನಂದನೆ

ಹೆಬ್ರಿ :ಸಮುದಾಯದ ಸರ್ವತೋಮುಖ ಅಭಿವೃದ್ಧಿಗಾಗಿ ಬ್ರಹ್ಮಶ್ರೀ ನಾರಾಯಣ ಗುರು ನಿಗಮ ರಚನೆಯ ಬಹುದಿನಗಳ ಬೇಡಿಕೆಯನ್ನು ತಡವಾಗಿಯಾದರೂ ಸರಕಾರ ಈಡೇರಿಸಿರುವುದು ಸಂತಸದಾಯಕ. ನಿಗಮದ ಪ್ರಥಮ ಅಧ್ಯಕ್ಷ ಸ್ಥಾನವನ್ನು ಸಮುದಾಯ ಮತ್ತು ಸಮಾಜದ ಅಭಿವೃದ್ಧಿಗಾಗಿ‌ ಸದಾ ಹಾತೊರೆಯುವ ಪ್ರಬುದ್ಧ ನಾಯಕ ಮಂಜುನಾಥ ಪೂಜಾರಿ ಅವರಿಗೆ ನೀಡಿರುವುದು ಅಭಿನಂದನಾರ್ಹ ಎಂದು ಶ್ರೀ ನಾರಾಯಣ ಗುರು ವಿಚಾರ ವೇದಿಕೆ (ಎಸ್‌ಎನ್‌ಜಿವಿ) ರಾಜ್ಯಾಧ್ಯಕ್ಷ ಸತ್ಯಜಿತ್‌ ಸುರತ್ಕಲ್ ಅಭಿಪ್ರಾಯಪಟ್ಟರು.

ಅವರು ಸೆ. 26ರಂದು ಶ್ರೀ ನಾರಾಯಣ ಗುರು ನಿಗಮದ ಅಧ್ಯಕ್ಷರಾಗಿ ಆಯ್ಕೆಯಾದ ಮಂಜುನಾಥ ಪೂಜಾರಿ ಮುದ್ರಾಡಿ ಅವರನ್ನು ಸಮಸ್ತ ಬಿಲ್ಲವ ಸಮಾಜದ ಪರವಾಗಿ ಕಾರ್ಕಳ ಬಿಲ್ಲವ ಸಂಘದಿಂದ ಅಭಿನಂದನೆ ಕಾರ್ಯಕ್ರಮದಲ್ಲಿ ಮಾತನಾಡಿದರು.

500 ಕೋ. ರೂ. ಅನುದಾನ ಒದಗಿಸಲಿ
ಇಂದಿಗೂ ಅಭಿವೃದ್ಧಿ ನಿಗಮದ ಸಂಪೂರ್ಣ ರಚನೆಯಾಗಿಲ್ಲ. ಕೇವಲ ಆದೇಶ ಆಗಿದ್ದು, ಇದೀಗ ಅಧ್ಯಕ್ಷರ ನಿಯುಕ್ತಿಯಾಗಿದೆ. ಇನ್ನು ಕಂಪೆನಿ ಆಕ್ಟ್‌ನಡಿಯಲ್ಲಿ ರಿಜಿಸ್ಟ್ರೇಶನ್‌ ಆಗಿ ನಂತರ ಸರಕಾರದಿಂದ ಅನುದಾನ ಬಂದಾಗಲೇ ಅಭಿವೃದ್ಧಿ ನಿಗಮದ ರಚನೆ ಅರ್ಥಪೂರ್ಣವಾಗುತ್ತದೆ ಎಂದ ಸತ್ಯಜಿತ್‌ ಸುರತ್ಕಲ್ ಸಮುದಾಯದ ಸ್ವಾಮೀಜಿಗಳು, ಬ್ರಹ್ಮಾವರದ ಸಮಾವೇಶ, ಶಿವಮೊಗ್ಗದ ಸಮಾವೇಶ ಸೇರಿದಂತೆ ನಿಗಮಕ್ಕಾಗಿ ನಡೆದ ವಿವಿಧ ಹೋರಾಟಗಳ ಬೇಡಿಕೆಯಂತೆ ವರ್ಷಕ್ಕೆ ಕನಿಷ್ಠ 500 ಕೋ. ರೂ. ಅನುದಾನವನ್ನು ನಿಗಮಕ್ಕೆ ಒದಗಿಸಬೇಕು. ಹಾಗಾದಲ್ಲಿ ಮಾತ್ರ ಬಿಲ್ಲವ, ಈಡಿಗ, ದಿವಾರು, ನಾಮಧಾರಿ, ದೇವರ ಮಕ್ಕಳು ಸೇರಿದಂತೆ 26 ಪಂಗಡ ಶೈಕ್ಷಣಿಕವಾಗಿ ಆರ್ಥಿಕವಾಗಿ ಪ್ರಗತಿಯಾಗಲು ಸಾಧ್ಯ ಎಂದರು.

ಜಾತಿ ಗಣತಿಯಿಂದ ಹೊರಗುಳಿಯದೆ, ಯಾವುದೇ ಗೊಂದಲಕ್ಕೆ ಅವಕಾಶ ನೀಡದೆ 26 ಪಂಗಡಗಳೂ ತಮ್ಮ ಹೆಸರಿನಲ್ಲಿ ನೋಂದಾಯಿಸಿಕೊಂಡು, ಆರ್ಥಿಕ, ಸಾಮಾಜಿಕ ಸ್ಥಿತಿಗತಿಯನ್ನು ಮುಕ್ತವಾಗಿ ಹಂಚಿಕೊಂಡು ಮುಂದಿನ ದಿನಗಳಲ್ಲಿ ಅಭಿವೃದ್ಧಿ ನಿಗಮಕ್ಕೆ ಅನುದಾನ ಒದಗಿಸುವಲ್ಲಿ ಸಹಕರಿಸಿ ಎಂದು ಹೇಳಿದರು.

ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸುವೆ
ಸನ್ಮಾನ ಸ್ವೀಕರಿಸಿ ಮಾತನಾಡಿದ ಮಂಜುನಾಥ್‌ ಪೂಜಾರಿ ಮುದ್ರಾಡಿ, ಅನೇಕ ಹೋರಾಟಗಳ ಫಲವಾಗಿ ಇಂದು ನಿಗಮ ರಚನೆಗೊಂಡಿದೆ. ನಿಗಮದ ಬಗ್ಗೆ ನಮ್ಮ ಸಮಾಜದ 26 ಪಂಗಡದವರು ಅನೇಕ ನಿರೀಕ್ಷೆಯನ್ನು ಇಟ್ಟಿದ್ದಾರೆ. ಈ ನಿಟ್ಟಿನಲ್ಲಿ ಅವರ ಬೇಡಿಕೆಗಳನ್ನು ಈಡೇರಿಸುವಲ್ಲಿ ಸರಕಾರ ನನಗೆ ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿಭಾಯಿಸುತ್ತೇನೆ ಎಂದು ಹೇಳಿದರು.

ನಿಗಮದ ಮೂಲಕ ಸಮಾಜ ಸದೃಢವಾಗಲಿ – ಪ್ರಮಲ್‌ ಕುಮಾರ್
ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಲ್‌ ಕುಮಾರ್‌ ಮಾತನಾಡಿ, ಬಿಲ್ಲವ ಸೇರಿದಂತೆ 26 ಪಂಗಡಗಳ ಕನಸು ಇಂದು ಜೀವ ಪಡೆದುಕೊಂಡಿದೆ. ಸಮುದಾಯ ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮತ್ತು ಆರ್ಥಿಕವಾಗಿ ಮುಂದುವರಿದಾಗ ಮಾತ್ರ ಸದೃಢವಾಗಲು ಸಾಧ್ಯ. ಇದಕ್ಕೆ ಸರಕಾರದ ಶಕ್ತಿ ಅವಶ್ಯ. ಈ ನಿಟ್ಟಿನಲ್ಲಿ ಸಮುದಾಯ ಮತ್ತು ಸಮಾಜದ ಅಭಿವೃದ್ಧಿಯಾಗಿ ಮಿಡಿಯುವ ಹಿರಿಯ ಮುಖಂಡ ಮಂಜುನಾಥ ಮುದ್ರಾಡಿಯವರಿಗೆ ನಿಗಮದ ಅಧ್ಯಕ್ಷ ಸ್ಥಾನ ಒದಗಿ ಬಂದಿರುವುದು ಶ್ಲಾಘನೀಯ. ನಿಗಮದ ಮೂಲಕ ಮಂಜುನಾಥ ಪೂಜಾರಿಯವರ ನೇತೃತ್ವದಲ್ಲಿ ಸಮುದಾಯ ಏಕೀಕರಣಗೊಂಡು ಬಲಿಷ್ಠಗೊಳ್ಳಲಿ ಎಂದು ಹೇಳಿದರು.

ಈ ಸಂದರ್ಭ ಶ್ರೀ ನಾರಾಯಣ ಗುರು ವಿಚಾರ ವೇದಿಕೆಯ ಉಪಾಧ್ಯಕ್ಷ ಅಚ್ಯುತ್ ಕಲ್ಮಾಡಿ, ಉಡುಪಿ ಜಿಲ್ಲಾ ಗೌರವಾಧ್ಯಕ್ಷ ರಾಜು ಪೂಜಾರಿ ಉಪ್ಪೂರು, ಜಿಲ್ಲಾಧ್ಯಕ್ಷ ಜಗನ್ನಾಥ ಕೋಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪ್ರದೀಪ್ ಸನಿಲ್, ಉಡುಪಿ ತಾಲೂಕು ಅಧ್ಯಕ್ಷ ಶಶಿಧರ್ ಅಮೀನ್, ಬ್ರಹ್ಮಾವರ ತಾಲೂಕು ಅಧ್ಯಕ್ಷ ಕರುಣಾಕರ ಪೂಜಾರಿ ಹಂದಾಡಿ, ಬ್ರಹ್ಮಾವರ ತಾಲೂಕು ಗೌರವ ಅಧ್ಯಕ್ಷ ಮಧುಸೂದನ್ ಹೇರೂರು, ಎಸ್‌ಎನ್‌ಜಿವಿ ರಾಜ್ಯ ಮಾಧ್ಯಮ ಸಾಮಾಜಿಕ ಜಾಲತಾಣ ಪ್ರಮುಖರಾದ ಸಂದೀಪ್ ಪಂಪುವೆಲ್, ಬಿಲ್ಲವ ಮಹಾಮಂಡಲದ ಕೋಶಾಧಿಕಾರಿ ಪ್ರಭಾಕರ ಬಂಗೇರ, ಸತೀಶ್ ಎಸ್. ಬಂಗೇರ, ಜಯಕರ್ ಕೊಡವೂರು, ಅಶೋಕ್‌ ಸುವರ್ಣ, ಸುಭಾಶ್‌ ಸುವರ್ಣ, ರಘುನಾಥ್‌ ಕೆ. ಎಸ್.‌, ಅಕ್ಷಯ್‌ ಬಂಗೇರ, ರತ್ನಾಕರ್‌ ಅಮೀನ್‌ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.

 

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments