ಕೋಲ್ಕತ್ತಾದ ಆರ್‌ಜಿ ಕರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ತರಬೇತಿ ವೈದ್ಯೆಯನ್ನು ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆ ದೇಶದಾದ್ಯಂತ ಆಕ್ರೋಶಕ್ಕೆ ಕಾರಣವಾಗಿರುವ ನಡುವೆ, ನರ್ಸ್ ಮೇಲೆ ಅತ್ಯಾಚಾರವೆಸಗಿ ಕೊಲೆ ಮಾಡಿರುವ ಘಟನೆಯೊಂದು ಉತ್ತರ ಪ್ರದೇಶದಲ್ಲಿ ಬೆಳಕಿಗೆ ಬಂದಿದೆ.
ಉತ್ತರ ಪ್ರದೇಶದ ಬಿಲಾಸ್‌ಪುರದ ಕಾಶಿಪುರ ರಸ್ತೆಯ ಬಾಡಿಗೆ ಮನೆಯಲ್ಲಿ ವಾಸವಿದ್ದ ನರ್ಸ್, ಪಕ್ಕದ ರಾಜ್ಯ ಉತ್ತರಾಖಂಡದ ಉಧಮ್ ನಗರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು.
ಜುಲೈ 30ರ ಸಂಜೆ ಆಸ್ಪತ್ರೆಯಿಂದ ಹೊರಬಂದ ನರ್ಸ್, ಉತ್ತಾರಾಖಂಡದ ರುದ್ರಪುರದ ಇಂದ್ರ ಚೌಕ್‌ನಿಂದ ಇ-ರಿಕ್ಷಾ ಹತ್ತಿ ಮನೆ ಕಡೆ ಹೊರಟ್ಟಿದ್ದರು. ಈ ದೃಶ್ಯ ಅಲ್ಲಿನ ಸಿಸಿಟಿವಿಯಲ್ಲಿ ರೆಕಾರ್ಡ್ ಆಗಿದೆ. ಆದರೆ, ಆಕೆ ಮನೆ ತಲುಪಿರಲಿಲ್ಲ.
ಮರುದಿನ ನರ್ಸ್ ಸಹೋದರಿ ತನ್ನ ಅಕ್ಕ ಕಾಣೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದರು. ಇದಾಗಿ 8 ದಿನಗಳ ಬಳಿಕ, ಆಗಸ್ಟ್ 8ರಂದು ಉತ್ತರ ಪ್ರದೇಶ ಪೊಲೀಸರು ದಿಬ್ದಿಬಾ ಗ್ರಾಮದ ಆಕೆಯ ಮನೆಯಿಂದ ಸುಮಾರು 1.5 ಕಿಮೀ ದೂರದಲ್ಲಿರುವ ಖಾಲಿ ಜಾಗದಲ್ಲಿ ಶವ ಪತ್ತೆ ಹಚ್ಚಿದ್ದಾರೆ.
ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿ, ಹಂತಕನ ಪತ್ತೆಗೆ ತಂಡ ರಚಿಸಿದ್ದರು. ಮೃತ ಮಹಿಳೆಯ ಕಳವಾದ ಮೊಬೈಲ್ ಫೋನ್ ಅನ್ನು ಪೊಲೀಸರು ಟ್ರೇಸ್ ಮಾಡಿದಾಗ ಅದು ಧರ್ಮೇಂದ್ರ ಕುಮಾರ್ ಎಂಬಾತನ ಬಳಿ ಇರುವುದು ಗೊತ್ತಾಗಿದೆ. ಇದರಿಂದ ಅತ್ಯಾಚಾರ ಮತ್ತು ಕೊಲೆ ಆರೋಪಿ ಧರ್ಮೇಂದ್ರ ಎಂಬುವುದು ಪೊಲೀಸರಿಗೆ ಖಚಿತವಾಗಿದೆ.
ಪೊಲೀಸರು ಆರೋಪಿ ಧರ್ಮೇಂದ್ರ ಕುಮಾರ್ ಅನ್ನು ರಾಜಸ್ಥಾನದಲ್ಲಿ ಬಂಧಿಸಿದ್ದಾರೆ. ಆತ
ಉತ್ತರ ಪ್ರದೇಶದ ಬರೇಲಿಯ ದಿನಗೂಲಿ ಕಾರ್ಮಿಕ ಎಂದು ತಿಳಿದು ಬಂದಿದೆ.
ಪೊಲೀಸರ ಪ್ರಕಾರ, ಜುಲೈ 30ರಂದು ಆಸ್ಪತ್ರೆಯಲ್ಲಿ ಕೆಲಸ ಮುಗಿಸಿದ ನರ್ಸ್ ಒಂಟಿಯಾಗಿ ಮನೆಗೆ ಮರಳುತಿದ್ದರು. ಈ ವೇಳೆ ಧರ್ಮೇಂದ್ರ ಕುಮಾರ್ ಆಕೆಯನ್ನು ಅಡ್ಡಗಟ್ಟಿ ಅತ್ಯಾಚಾರವೆಸಗಿ ಕೊಲೆ ಮಾಡಿದ್ದಾನೆ.
ಪ್ರಕರಣದ ಕುರಿತು ಪ್ರತಿಕ್ರಿಯಿಸಿರುವ ಉಧಮ್ ನಗರ ಎಎಸ್‌ಪಿ ಮಂಜುನಾಥ್ ಟಿಸಿ “ನರ್ಸ್ ಕಾಣೆಯಾಗಿರುವ ಬಗ್ಗೆ ದೂರು ದಾಖಲಾಗಿತ್ತು. ಅದರಂತೆ ತನಿಖೆ ನಡೆಸಿದಾಗ, ದಾಳಿ ನಡೆಯುವುದಕ್ಕೂ ಮುನ್ನವೇ ಆಕೆ ತಮ್ಮ ಗ್ರಾಮಕ್ಕೆ ತೆರಳಿದ್ದಾರೆ ಎಂಬುವುದು ತಿಳಿದು ಬಂದಿತ್ತು. ನಂತರ ಆಗಸ್ಟ್ 8ರಂದು ಆಕೆಯ ಗ್ರಾಮದ ಸಮೀಪ ಪೊದೆಯಲ್ಲಿ ಶವ ಪತ್ತೆಯಾಗಿದೆ ಎಂದು ತಿಳಿಸಿದ್ದಾರೆ.
ಬಂಧಿತ ಆರೋಪಿಯು ಮಾದಕ ವ್ಯಸನಿಯಾಗಿದ್ದು, ಆತನಿಗೆ ನರ್ಸ್ ಪರಿಚಯವಿರಲಿಲ್ಲ. ಆಕೆ ಹೋಗುತ್ತಿರುವುದನ್ನು ನೋಡಿ ತಡೆದಿದ್ದ. ಆತನಿಂದ ತಪ್ಪಿಸಿಕೊಳ್ಳಲು ನರ್ಸ್ ಪ್ರಯತ್ನಪಟ್ಟರೂ ಆಗಿಲ್ಲ. ಆರೋಪಿ ಅತ್ಯಾಚಾರವೆಸಗಿ, ಕತ್ತು ಹಿಸುಕಿ ಕೊಲೆ ಮಾಡಿದ್ದ. ಕೃತ್ಯದ ಬಳಿಕ ಆಕೆಯ ಮೊಬೈಲ್, 3 ಸಾವಿರ ರೂಪಾಯಿ ದುಡ್ಡು ಮತ್ತಿತರ ವಸ್ತುಗಳನ್ನು ದೋಚಿ ಪರಿಯಾಗಿದ್ದಾನೆ ಎಂದು ಎಎಸ್‌ಪಿ ಹೇಳಿದ್ದಾರೆ.