
ಕಾರ್ಕಳದಲ್ಲಿ ಕ್ಯಾನ್ಸರ್ ಜಾಗೃತಿ ಜಾಥಾ ಉದ್ಘಾಟಿಸಿ ಬೋಳ ಪ್ರಶಾಂತ್ ಕಾಮತ್ ಅಭಿಮತ
ಕ್ಯಾನ್ಸರ್ ಕಾಯಿಲೆ ಇಡೀ ಜಗತ್ತನ್ನು ಆವರಿಸಿದ್ದು, ನಮ್ಮ ದೇಶ ಭಾರತದಲ್ಲೂ ಕೂಡ ಇದರ ಪ್ರಮಾಣ ಏರು ಗತಿಯಲ್ಲಿ ಸಾಗುತ್ತಾ ಇದೆ. ವೈದ್ಯ ವಿಜ್ಞಾನ ಕ್ಯಾನ್ಸರ್ ನಿರ್ಮೂಲನೆಗಾಗಿ ಆವಿಷ್ಕಾರಗಳನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದರೂ ಖಚಿತ ಯಶಸ್ಸು ದೊರಕಿಲ್ಲ. ಈ ಹಿನ್ನೆಲೆಯಲ್ಲಿ ಕ್ಯಾನ್ಸರ್ ನ ಕುರಿತಾದ ಜಾಗೃತಿಯನ್ನು ಮೂಡಿಸುವುದೊಂದೇ ಸದ್ಯಕ್ಕೆ ಇರುವ ಪರಿಹಾರ. ಕ್ಯಾನ್ಸರ್ ನ ವಿಧಗಳು ಮತ್ತು ಆರಂಭದ ದೆಸೆಯಲ್ಲಿ ರೋಗಿಗಳು ಅನುಸರಿಸ ಬೇಕಾದ ಎಚ್ಚರಿಕೆ ಮತ್ತು ಸುಲಭ ಪರಿಹಾರ ಗಳನ್ನು ಈ ಜಾಗೃತಿ ಕಾರ್ಯಕ್ರಮಗಳಲ್ಲಿ ತಿಳಿಯುವುದು ಸಾಧ್ಯ ಎಂದು ಕಾರ್ಕಳ ಟೈಗರ್ಸ್ ಸಂಸ್ಥಾಪಕ ಬೋಳ ಪ್ರಶಾಂತ್ ಕಾಮತ್ ಹೇಳಿದರು.
ಮಂಗಳೂರು ಇನ್ಸ್ಟಿಟ್ಯೂಟ್ ಆಫ್ ಆಂಕಾಲಜಿ ಹಾಗೂ ಸಂಜೀವಿನಿ ಕ್ಯಾನ್ಸರ್ ಸೇವಾ ಟ್ರಸ್ಟ್, ಕ್ಯಾನ್ಸರ್ ಮಾಹಿತಿ ಕೇಂದ್ರ ಕಾರ್ಕಳ ನೇತೃತ್ವದಲ್ಲಿ, ಟೀಮ್ ಸಿಂಧೂರ್ ಕಾರ್ಕಳ, ಹೊಸ ಸಂಜೆ ಬಳಗ , ಕಾರ್ಕಳ ಟೈಗರ್ಸ್, ಸೌತ್ ಕೆನರಾ ಫೋಟೋಗ್ರಾಫರ್ಸ್
ಅಸೋಸಿಯೇಷನ್ ಕಾರ್ಕಳ ವಲಯ , ಜೆಸಿಐ ಕಾರ್ಕಳ, ಎಸ್ ವಿಟಿ ಮಹಿಳಾ ಕಾಲೇಜು ರಾಷ್ಟ್ರೀಯ ಸೇವಾ ಯೋಜನೆಯ ಘಟಕ ಸಹಯೋಗದಲ್ಲಿ ನ.22 ರಂದು ಆಯೋಜಿಸಿದ್ದ ” ಕ್ಯಾನ್ಸರ್ ಜಾಗೃತಿ ಜಾಥಾ ” ಉದ್ಘಾಟಿಸಿ ಮಾತನಾಡಿದರು .
ಪುರಸಭಾ ಸದಸ್ಯ ಲಕ್ಷ್ಮೀನಾರಾಯಣ ಮಲ್ಯ, ಕಾರ್ಕಳ ಜೆಸಿಐ ಅಧ್ಯಕ್ಷೆ ಶ್ವೇತಾ ಎಸ್ ಜೈನ್ , ಸೌತ್ ಕೆನರಾ ಫೋಟೋಗ್ರಾಫರ್ಸ್ ಅಸೋಸಿಯೇಷನ್
ಕಾರ್ಕಳ ವಲಯ ಅಧ್ಯಕ್ಷ ಪ್ರಮೋದ್ ಚಂದ್ರ ಪೈ ಮುನಿಯಾಲು , ಕಾರ್ಯದರ್ಶಿ ಶೇಖರ್, ಮನಶ್ಯಾಸ್ತ್ರಜ್ಞೆ ಜ್ಯೇಷ್ಠಲಕ್ಷ್ಮೀ ಮಂಗಳೂರು, ಹೊಸಸಂಜೆ ಬಳಗದ ಅಧ್ಯಕ್ಷ ಆರ್ ದೇವರಾಯ ಪ್ರಭು , ಲಯನ್ಸ್ ಕ್ಲಬ್ ಸೆಂಟ್ರಲ್ ಕಾರ್ಯದರ್ಶಿ ದತ್ತಾತ್ರೇಯ ಹಿರಿಯಂಗಡಿ , ಟೀಮ್ ಸಿಂಧೂರದ ಶೋಭಾ ಭಾಸ್ಕರ್ ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದು ಶುಭ ಹಾರೈಸಿದರು.
ನಯನಾ ಸ್ವಾಗತಿಸಿದರು. ದಿವ್ಯಶ್ರೀ ಪ್ರಾಸ್ತಾವಿಕ ಮಾತನಾಡಿದರು. ಲಾವಣ್ಯ ಕಾರ್ಯಕ್ರಮ ನಿರೂಪಿಸಿದರು. ಅಮೃತಾ ವಂದಿಸಿದರು.




