Saturday, April 11, 2026
Google search engine
Homeಕಾರ್ಕಳಶಿವಮೊಗ್ಗ:ಶಾಲಾ ಬಾಲಕನ ಹತ್ಯೆ-ಸರ್ಕಾರದ ವತಿಯಿಂದ 15 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಶಿವಮೊಗ್ಗ:ಶಾಲಾ ಬಾಲಕನ ಹತ್ಯೆ-ಸರ್ಕಾರದ ವತಿಯಿಂದ 15 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಶಿವಮೊಗ್ಗ: ಶಿವಮೊಗ್ಗದಲ್ಲಿ ನಡೆದ ಶಾಲಾ ಬಾಲಕನ ಹತ್ಯೆಯನ್ನು ಸಿಎಂ ಸಿದ್ದರಾಮಯ್ಯ ಖಂಡಿಸಿದ್ದು, ಮೃತ ಬಾಲಕನ ಪೋಷಕರಿಗೆ ಸರ್ಕಾರದ ವತಿಯಿಂದ 15 ಲಕ್ಷ ರೂ. ಪರಿಹಾರವನ್ನು ಘೋಷಿಸಿದ್ದಾರೆ.

ಈ ಕುರಿತು ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ಶಾಲಾ ವಿದ್ಯಾರ್ಥಿಯನ್ನು ಥಳಿಸಿ, ಹತ್ಯೆಗೈದಿರುವುದನ್ನು ತೀವ್ರವಾಗಿ ಖಂಡಿಸುತ್ತೇನೆ. ಮೃತ ವಿದ್ಯಾರ್ಥಿಯ ಕುಟುಂಬಕ್ಕೆ ನೆರವಾಗುವುದರ ಜೊತೆಗೆ ಕೃತ್ಯದಲ್ಲಿ ಭಾಗಿಯಾದ ಪ್ರತಿಯೊಬ್ಬ ಅಪರಾಧಿಗೂ ಕಾನೂನಿನ ಮೂಲಕ ತಕ್ಕ ಶಿಕ್ಷೆಯಾಗುವಂತೆ ಕ್ರಮವಹಿಸಿ, ಆತನ ಸಾವಿಗೆ ನ್ಯಾಯ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡಲಿದ್ದೇವೆ ಎಂದು ಭರವಸೆ ನೀಡಿದ್ದಾರೆ.

ಕೊಲೆಯಲ್ಲಿ ಭಾಗಿಯಾದವರು ಇನ್ನೂ ಚಿಕ್ಕಪ್ರಾಯದ ಹುಡುಗರು ಎಂದು ಕೇಳಿ ದಿಗ್ಭ್ರಮೆಯಾಯಿತು. ಚೆನ್ನಾಗಿ ಓದಿ, ಭವಿಷ್ಯ ರೂಪಿಸಿಕೊಂಡು, ಕುಟುಂಬಕ್ಕೆ ಆಸರೆಯಾಗಬೇಕಿದ್ದ ಮಕ್ಕಳು ದುಶ್ಚಟಗಳಿಗೆ ಬಲಿಯಾಗಿ, ಹೀಗೆ ಕಾನೂನು ಬಾಹಿರ ಕೃತ್ಯಗಳಲ್ಲಿ ತೊಡಗುವುದು ದುರದೃಷ್ಟಕರ. ಕೊಲೆಯ ಹಿಂದಿನ ಉದ್ದೇಶವೇನೇ ಇರಲಿ, ಕೊಲೆಗೈದವರು ಯಾರೇ ಆಗಿರಲಿ, ಅವರನ್ನು ಕಾನೂನಿನ ಮೂಲಕ ಹೆಡೆಮುರಿ ಕಟ್ಟಿ, ಭವಿಷ್ಯದಲ್ಲಿ ಇಂತಹ ಕೃತ್ಯಗಳನ್ನು ಎಸಗುವ ಮುನ್ನ ನೂರು ಬಾರಿ ಯೋಚಿಸಬೇಕಾದಂತಹ ಸ್ಥಿತಿ ನಿರ್ಮಾಣ ಮಾಡುವಂತೆ ಪೊಲೀಸ್ ಇಲಾಖೆಗೆ ಸೂಚನೆ ನೀಡಿದ್ದೇನೆ.

ಬಾಲ್ಯದಲ್ಲೇ ದ್ವೇಷ, ಹಿಂಸೆ, ಅಪರಾಧ ಕೃತ್ಯಗಳ ದುರ್ಬುದ್ದಿ ಬೆಳೆಸಿಕೊಳ್ಳುವುದು ಅತ್ಯಂತ ಅಪಾಯಕಾರಿ. ಇಂತಹ ಮನಸ್ಥಿತಿಯಿರುವವರು ದುಶ್ಚಟಗಳಿಗೆ ದಾಸರಾದರೆ ಪರಿಸ್ಥಿತಿ ಕೈಮೀರಿ ಹೋಗುವುದು ಖಚಿತ. ಪೋಷಕರು ಸಹ ತಮ್ಮ ಮಕ್ಕಳ ಚಲನವಲನಗಳ ಮೇಲೆ ನಿಗಾ ವಹಿಸಬೇಕು. ಮಕ್ಕಳು ಹಾದಿ ತಪ್ಪಿದ್ದರೆ ತಿದ್ದಿ ಬುದ್ದಿ ಹೇಳಬೇಕು. ಶಾಲೆಯ ಸುತ್ತಮುತ್ತ ಕಾನೂನು ಬಾಹಿರ ಕೃತ್ಯಗಳು ನಡೆಯದಂತೆ ಆಡಳಿತ ಮಂಡಳಿ ನಿಗಾ ವಹಿಸಬೇಕು. ಅಗತ್ಯಬಿದ್ದರೆ ಪೊಲೀಸರ ನೆರವನ್ನು ಪಡೆಯಬೇಕು.

ಮಗನನ್ನು ಕಳೆದುಕೊಂಡು ಸಂಕಷ್ಟದಲ್ಲಿರುವ ಕುಟುಂಬವನ್ನು ಸಂತೈಸುವ ಉದ್ದೇಶದಿಂದ ಮೃತನ ಪೋಷಕರಿಗೆ ಸರ್ಕಾರದ ವತಿಯಿಂದ 15 ಲಕ್ಷ ಪರಿಹಾರವನ್ನು ನೀಡಲಾಗುವುದು. ಈ ದುಷ್ಕೃತ್ಯ ಎಸಗಿದ ಎಲ್ಲರನ್ನೂ ಈಗಾಗಲೇ ಬಂಧಿಸಲಾಗಿದ್ದು, ನಿಷ್ಪಕ್ಷಪಾತ ತನಿಖೆ ನಡೆಸಿ ಗರಿಷ್ಠ ಶಿಕ್ಷೆಯಾಗುವಂತೆ ನೋಡಿಕೊಳ್ಳುವ ವಾಗ್ದಾನವನ್ನು ಕೂಡ ಆ ನೊಂದ ಕುಟುಂಬಕ್ಕೆ ಈ ವೇಳೆ ನೀಡುತ್ತಿದ್ದೇನೆ. ಸಾರ್ವಜನಿಕರು ಯಾವುದೇ ಪ್ರಚೋದನೆಗಳಿಗೆ ಕಿವಿಗೊಡದೆ ಶಾಂತಿ – ಸಂಯಮದಿಂದ ವರ್ತಿಸಬೇಕು ಎಂದು ಮನವಿ ಮಾಡುತ್ತಿದ್ದೇನೆ. ಪರಿಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಸಾರ್ವಜನಿಕ ಶಾಂತಿಗೆ ಭಂಗ ಉಂಟುಮಾಡುವ ಕೃತ್ಯದಲ್ಲಿ ತೊಡಗುವವರ ವಿರುದ್ಧವೂ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

ಜಾಹೀರಾತು
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments