ಅಮೇರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಒಬ್ಬ ಸರ್ವಾಧಿಕಾರಿ, ಪ್ರಧಾನಿ ನರೇಂದ್ರ ಮೋದಿ ಅವರ ಗುಲಾಮರಂತೆ ನಡೆದುಕೊಳ್ಳುತ್ತಿದ್ದಾರೆ. ನಮ್ಮ ದೇಶವನ್ನು ಮತ್ತೆ ಗುಲಾಮಗಿರಿಗೆ ತಳ್ಳುತ್ತಿದ್ದಾರೆ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದರು.
ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ರಷ್ಯಾದಿಂದ ತೈಲ ಖರೀದಿಗೆ ಅಮೆರಿಕ ಕೇವಲ ಒಂದು ತಿಂಗಳ ಕಾಲ ಮಾತ್ರ ಅನುಮತಿ ನೀಡಿದ್ದು, ಪ್ರಧಾನಿ ಮೋದಿ ಅಮೆರಿಕ ಹೇಳಿದಂತೆ ಕೇಳುತ್ತಿರುವುದಾಗಿ ಅಭಿಪ್ರಾಯಪಟ್ಟರು. ಟ್ರಂಪ್ ಜೊತೆ ಸ್ನೇಹ ಮಾಡಿಕೊಂಡು ದೇಶವನ್ನು ಗಿರಿವಿಟ್ಟು ಹೋಗುತ್ತಿದ್ದಾರೆ ಎಂದು ಖರ್ಗೆ ಆರೋಪಿಸಿದರು.
ಖರ್ಗೆ ಹೇಳುವಂತೆ, ಟ್ರಂಪ್ ನನ್ನ ಸ್ನೇಹಿತ ಎಂದು ಮೋದಿ ಹೇಳುತ್ತಾರೆ. ಆದರೆ ಟ್ರಂಪ್ ದೇಶದ ಮೇಲೆ ಅತಿ ಹೆಚ್ಚು ತೆರಿಗೆ ವಿಧಿಸುತ್ತಿದ್ದಾರೆ. ಇರಾನ್ ದೇಶದ ಪ್ರಧಾನ ಖಮೇನಿ ಹತ್ಯೆ ಮಾಡಲಾಗಿದೆ. ಒಂದು ದೇಶದ ಮುಖ್ಯಸ್ಥನನ್ನು ಹತ್ಯೆ ಮಾಡಿದರೆ ಆ ದೇಶದಲ್ಲಿ ಶಾಂತಿ ಹೇಗೆ ಇರುತ್ತದೆ? ಇದು ವಿಶ್ವಶಾಂತಿಗೆ ಹಾನಿ ಎಂದು ಪ್ರಶ್ನಿಸಿದರು. ಅಮೆರಿಕ ಜೊತೆಗೂಡಿ ದೇಶವನ್ನು ಹಾಳು ಮಾಡುತ್ತಿರುವುದು ತಡೆಯಬೇಕೆಂದು ಖರ್ಗೆ ವಾಗ್ದಾಳಿ ನಡೆಸಿದರು.
ಅವರು ನೆನೆಸಿಕೊಂಡಂತೆ, ಜವಾಹರ್ ಲಾಲ್ ನೆಹರು ಪ್ರಧಾನಿಯಾಗಿದ್ದಾಗ ‘ನಾನ್ ಅಲೈನ್ ಮೆಂಟ್’ ಸಿದ್ಧಾಂತ ಅಳವಡಿಸಲಾಗಿತ್ತು. ಅದು ವಿಶ್ವಶಾಂತಿಗೆ ಕಾರಣವಾಗಿತ್ತು. ಆದರೆ ಈಗ ಮೋದಿ ಮಾಡುತ್ತಿರುವುದೇನು? ಇಸ್ರೇಲ್ ಗೆ ಭೇಟಿ ನೀಡಿ ನಂತರ ಇರಾನ್ ಮೇಲೆ ಬಾಂಬ್ ಉಡಿಸಲಾಗಿದೆ. ಅಮೆರಿಕ ಖಮೇನಿಯವರನ್ನು ಹತ್ಯೆ ಮಾಡಿರುವುದು ವಿಶ್ವದಲ್ಲಿ ಶಾಂತಿ ಸ್ಥಾಪನೆಗೆ ಅಡ್ಡಿ ಎಂದು ಅವರು ಹೇಳಿದರು.
ಭಾರತದಲ್ಲಿ 65 ಶೇಕಡಾ ರೈತರು ಕೃಷಿ ಅವಲಂಬಿತರಾಗಿದ್ದು, ಅಮೆರಿಕದಲ್ಲಿ ಕೇವಲ 3 ಶೇಕಡಾ ಜನರು ಕೃಷಿ ಮೇಲೆ ಅವಲಂಬಿತರಾಗಿದ್ದಾರೆ. ಭಾರತೀಯ ಉತ್ಪನ್ನಗಳಿಗೆ ಅಮೆರಿಕ ಹೆಚ್ಚುವರಿ ತೆರಿಗೆ ವಿಧಿಸುತ್ತಿದ್ದು, ಅಮೆರಿಕದ ಉತ್ಪನ್ನಗಳಿಗೆ ಭಾರತ ಯಾವುದೇ ತೆರಿಗೆ ವಿಧಿಸಿಲ್ಲ. ಟ್ರಂಪ್ ಜೊತೆ ದಿನಾಲೂ ಮಾತನಾಡುತ್ತಿರುವುದಾಗಿ ಮೋದಿ ಹೇಳುತ್ತಾರೆ, ಆದರೆ ತೆರಿಗೆ ವಿಷಯದಲ್ಲಿ ಚರ್ಚೆಯಾಗುತ್ತಿದೆಯೇ ಎಂಬ ಪ್ರಶ್ನೆಯನ್ನು ಖರ್ಗೆ ಎತ್ತಿದರು. ಎಪ್ಸ್ಟೀನ್ ಫೈಲ್ಸ್‌ನಲ್ಲಿ ಮೋದಿ ಹೆಸರು ಇದೆ ಎಂದು ಬಳಸಿಕೊಂಡು ಟ್ರಂಪ್ ಮೋದಿ ಮೇಲೆ ಒತ್ತಡ ಹಾಕುತ್ತಿದ್ದಾರೆ ಎಂಬ ಗಂಭೀರ ಆರೋಪವನ್ನೂ ಅವರು ಮಾಡಿದರು.













