ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಅಂಗವಾಗಿ ಗ್ರೇಟರ್ ಬೆಂಗಳೂರು ಪ್ರಾಧಿಕಾರವು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಮಹಿಳೆಯರನ್ನು ಗೌರವಿಸುವ *‘ದಿಟ್ಟ ಮಹಿಳಾ ಪ್ರಶಸ್ತಿ’*ಗೆ ಉಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ ಹಾಗೂ ಅಂತರಾಷ್ಟ್ರೀಯ ಈಜುಗಾರ್ತಿ ಶ್ರೀಮತಿ ಸಂಧ್ಯಾ ಯು. ಪ್ರಭು ಅವರು ಭಾಜನರಾಗಿದ್ದಾರೆ.
ಕಾನೂನು ಕ್ಷೇತ್ರದಲ್ಲಿ ದೀರ್ಘಕಾಲ ಸೇವೆ ಸಲ್ಲಿಸುತ್ತಾ ವಕೀಲರ ಸಮಸ್ಯೆಗಳ ವಿಚಾರದಲ್ಲಿ ಮುಂಚೂಣಿಯಲ್ಲಿ ನಿಂತು, ಅವರ ಹಿತರಕ್ಷಣೆ ಮತ್ತು ಶ್ರೇಯೋಭಿವೃದ್ಧಿಗಾಗಿ ನಿರಂತರವಾಗಿ ಕಾರ್ಯನಿರ್ವಹಿಸುತ್ತಿರುವ ಇವರ ಸೇವೆಯನ್ನು ಪರಿಗಣಿಸಿ ಈ ಗೌರವ ನೀಡಲಾಗಿದೆ.
ಈ ಹಿಂದೆ ಬೆಂಗಳೂರು ವಕೀಲರ ಸಂಘದ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿದ ಅವರು ವಕೀಲ ಸಮುದಾಯದ ಅಭಿವೃದ್ಧಿಗೆ ಶ್ರಮಿಸಿದ್ದಾರೆ. ಕೋವಿಡ್-19 ಸಂಕಷ್ಟದ ಸಂದರ್ಭದಲ್ಲಿ ವಕೀಲರನ್ನು ‘ಫ್ರಂಟ್ ಲೈನ್ ವಾರಿಯರ್ಸ್’ ಎಂದು ಪರಿಗಣಿಸಿ ಸೌಲಭ್ಯಗಳನ್ನು ಒದಗಿಸುವಂತೆ ಸರ್ಕಾರಕ್ಕೆ ಒತ್ತಾಯಿಸಿ ಹೋರಾಟ ನಡೆಸಿದ್ದರು.
ಕಾನೂನು ಕ್ಷೇತ್ರದ ಜೊತೆಗೆ ಕ್ರೀಡಾ ಕ್ಷೇತ್ರದಲ್ಲಿಯೂ ಸಾಧನೆ ಮಾಡಿದ ಅವರು ಅಂತರಾಷ್ಟ್ರೀಯ ಮಟ್ಟದ ಈಜುಗಾರ್ತಿಯಾಗಿ ದೇಶಕ್ಕೆ ಕೀರ್ತಿ ತಂದಿದ್ದಾರೆ. ಪ್ರಸ್ತುತ ಅವರು ಕರ್ನಾಟಕ ರಾಜ್ಯ ವಕೀಲರ ಪರಿಷತ್ (KSBC) ಚುನಾವಣೆಯ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಅವರು, “ಈ ಗೌರವವು ನನ್ನ ಜವಾಬ್ದಾರಿಯನ್ನು ಇನ್ನಷ್ಟು ಹೆಚ್ಚಿಸಿದೆ. ವಕೀಲರ ಕಲ್ಯಾಣ ಮತ್ತು ಕಾನೂನು ಕ್ಷೇತ್ರದ ಅಭಿವೃದ್ಧಿಗಾಗಿ ನನ್ನ ಹೋರಾಟ ಮುಂದುವರಿಯುತ್ತದೆ,” ಎಂದು ತಿಳಿಸಿದ್ದಾರೆ.













