ಆರೋಪದ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಿರುವುದಾಗಿ ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದ್ದಾರೆ. ಅಲ್ಲದೆ, ಗೃಹ ಸಚಿವರನ್ನು ಭೇಟಿ ಮಾಡಿದ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಸಹ ನ್ಯಾಯಸಿಗುವ ಭರವಸೆ ನೀಡಿರುವುದಾಗಿ ತಿಳಿಸಿದ್ದಾರೆ.
ಮಹಿಳೆಯರ ಮೇಲೆ ಮಂಗಳೂರಿನ ಮೂಡುಬಿದಿರೆ ಪೊಲೀಸ್ ಇನ್‌ಸ್ಪೆಕ್ಟರ್ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ತಿಳಿಸಿದರು.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡುಬಿದರೆ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಹಾಗೂ ಸಂತ್ರಸ್ತೆಯ ಭೇಟಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಡಿಜಿಪಿ ಅವರಿಗೆ ಸೂಚಿಸಿದ್ದೇನೆ ಎಂದರು.
ಮೂಡುಬಿದರೆ ಪೊಲೀಸ್ ಇನ್‌ಸ್ಪೆಕ್ಟರ್ ಮೇಲೆ ಆರೋಪ ಬಂದ ಬಳಿಕ ಅಮಾನತು ಮಾಡುವ ಮೂಲಕ ತಕ್ಷಣದ ಕ್ರಮ ಕೈಗೊಳ್ಳಲಾಗಿದೆ. ವರದಿ ನೀಡುವಂತೆ ಸೂಚಿಸಲಾಗಿದ್ದು, ಕೊಡುತ್ತಾರೆ.
ಇನ್ನೂ ಅನೇಕ ವಿಚಾರಗಳನ್ನು ಕೇಳಿದ ಮೇಲೆ ಹೆಚ್ಚಿನ ತನಿಖೆ ಮಾಡಬೇಕೆಂದು ಸಿಐಡಿ ತನಿಖೆಗೆ ವಹಿಸಲಾಗಿದೆ. ತನಿಖೆ ಬಳಿಕ ಸತ್ಯಾಂಶ ಹೊರಬರುತ್ತದೆ. ಇನ್ನು ಎಷ್ಟು ಜನ ಸಂತ್ರಸ್ತರಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಲಿದೆ. ಇದಕ್ಕಾಗಿಯೇ ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಹೇಳಿದರು.
ಪ್ರಣವಾನಂದ ಸ್ವಾಮೀಜಿ ಹೇಳಿಕೆಯ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, “ಎಐಸಿಸಿ ಮ್ಯಾಂಡೇಟ್ ಬೇರೆ ಇರುತ್ತದೆ. ಜನಸಮುದಾಯದ ಭಾವನೆಗಳನ್ನು ಅರ್ಥ ಮಾಡಿಕೊಳ್ಳುವುದನ್ನು ಮಾಡುತ್ತಾರೆ. ಭೇಟಿ ಮಾಡಿ, ಅನಿಸಿಕೆಗಳನ್ನು ಕೇಳಿಕೊಂಡು ತೀರ್ಮಾನ ಮಾಡುವುದನ್ನು ನಾನು ಎಲ್ಲೂ ನೋಡಿಲ್ಲ. ಎಐಸಿಸಿ ಅವರದ್ದೆ ಆದ ವರದಿ ತೆಗೆದುಕೊಂಡು ತೀರ್ಮಾನಗಳನ್ನು ಮಾಡುತ್ತಾರೆ. ಸ್ವಾಮೀಜಿಗಳ ಹೇಳಿಕೆಗಳು ಸಾರ್ವಜನಿಕವಾಗಿ ಬರುವ ಅನಿಸಿಕೆಗಳು” ಎಂದರು.
ಗೃಹಸಚಿವರ ನಿವಾಸದ ಬಳಿ ಮಹಿಳಾ ಆಯೋಗದ ಅಧ್ಯಕ್ಷ ನಾಗಲಕ್ಷ್ಮಿ ಚೌಧರಿ ಮಾತನಾಡಿ, ” ಸಂತ್ರಸ್ತರು ಪ್ರಕರಣದ ತೀವ್ರತೆಯನ್ನು ನನ್ನ ಮುಂದೆ ತೆರೆದಿಟ್ಟಿದ್ದರು. ಇಂತಹ ವಿಚಾರವನ್ನು ಗೃಹ ಸಚಿವರ ಮುಂದೆ ಹೇಳುವುದೇ ಸೂಕ್ತ ಅಂತ ನನಗೆ ಅನ್ನಿಸಿತ್ತು. ಅವರಿಗೆ ನ್ಯಾಯ ಸಿಗಬಹುದು ಅಂತ ಅನ್ನಿಸಿತು ಹೀಗಾಗಿ ಅವರನ್ನು ಗೃಹ ಸಚಿವರ ಮುಂದೆ ಕರೆದುಕೊಂಡು ಬಂದಿದ್ದೇನೆ” ಎಂದರು.
ಮುಂದುವರದು, ಅವರ ನೋವು, ದುಃಖ ಸಾಕ್ಷಿ ಸಮೇತ ಗೃಹ ಸಚಿವರಿಗೆ ಕೊಟ್ಟಿದ್ದಾರೆ. ಗೃಹ ಸಚಿವರಿಗೆ ಅವರ ಮಾತನ್ನು ಕೇಳಿದ ಮೇಲೆ ಅದರ ಡೆಪ್ತ್ ಗೊತ್ತಾಯ್ತು. ನಿಷ್ಪಕ್ಷಪಾತವಾದ ತನಿಖೆ ಆಗಬೇಕು ಅಂತ ಅವರು ಕೂಡ ಅಭಿಪ್ರಾಯಪಟ್ಟರು. ಈ ಹಿನ್ನಲೆ ಸಿಐಡಿ ಗೆ ಪ್ರಕರಣವನ್ನು ವರ್ಗಾವಣೆ ಮಾಡಬೇಕು ಅಂತ ಪೊಲೀಸ್ ವರಿಷ್ಠಾಧಿಕಾರಿಗೆ ಫೋನ್ ಮೂಲಕ ತಿಳಿಸಿದ್ದಾರೆ. ಎಲ್ಲ ಸಂತ್ರಸ್ತರಿಗೆ ನ್ಯಾಯ ಸಿಗುವಂತೆ ಮಾಡಬೇಕು ಅಂತ ಸೂಚನೆ ನೀಡಿದ್ದಾರೆ. ಸತ್ಯ ಹಾಗೂ ಅಸತ್ಯ ಬಹಿರಂಗ ಆಗಬೇಕು ಅಂತ ತಿಳಿಸಿದ್ದಾರೆ. ಪೊಲೀಸ್ ಇಲಾಖೆ ಮೇಲೆ ನಂಬಿಕೆ ಹಾಗೂ ಭರವಸೆ ಇರಬೇಕು ಅನ್ನೋ ಕಾರಣದಿಂದಾಗಿ ಈ ಕ್ರಮ ತೆಗೆದುಕೊಂಡಿದ್ದಾರೆ ಎಂದರು.



















