ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ:ಕೃಷ್ಣ ಶೆಟ್ಟಿ ಸೋಲಿಸಲು ಬೆಂಬಲ ಪಡೆದರೇ ಕಾಂಗ್ರೆಸ್ ಅಭ್ಯರ್ಥಿ?
ಯಶ್ ಪಾಲ್ ಸುವರ್ಣಗೂ ಯುವ ಕಾಂಗ್ರೆಸ್ ಆಂತರಿಕ ಚುನಾವಣೆಗೂ ಏನು ಸಂಭಂದ?
ಕೃಷ್ಣ ಶೆಟ್ಟಿ ಬಜಗೋಳಿಗೆ ಮತ ಚಲಾಯಿಸದಂತೆ ಕಾಂಗ್ರೆಸ್ ನ ಮಾಜಿ ಸಚಿವರ ಆಪ್ತನಿಂದಲೇ ಧಮ್ಕಿ?ಆಡಿಯೋ ವೈರಲ್
ಯುವ ಕಾಂಗ್ರೆಸ್ ಆಂತರಿಕ ಚುನಾವಣೆ ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿರುವ ಅಭ್ಯರ್ಥಿಯೊಬ್ಬರು ಎದುರಾಳಿಯನ್ನು ಸೋಲಿಸಲು ಬಿಜೆಪಿ ಶಾಸಕರೋರ್ವರ ಬೆಂಬಲ ಕೋರಿದ್ದಾರೆ ಎಂಬ ಸುದ್ದಿ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.ಈ ಕುರಿತಾಗಿ ಫೋಟೋ ಒಂದು ವೈರಲ್ ಆಗುತ್ತಿದ್ದು ಸಾಕಷ್ಟು ಚರ್ಚೆಗೆ ಕಾರಣವಾಗಿದೆ.
ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಅಭ್ಯರ್ಥಿಯಾಗಿ ಅರ್ಜುನ್ ನಾಯರಿ ಎಂಬುವವರು ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣ ಎಂಬುವವರ ಬೆಂಬಲ ಕೋರಿದ್ದಾರೆ ಎಂದು ಹೇಳಲಾಗುತ್ತಿದೆ.ಯಶ್ ಪಾಲ್ ಜತೆಗಿನ ಫೋಟೋ ವೈರಲ್ ಆಗುತ್ತಿದ್ದಂತೆ ಕಾಂಗ್ರೆಸ್ಸಿಗರು ಗರಂ ಆಗಿದ್ದಾರೆ.ಕಳೆದ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಸಾದ್ ರಾಜ್ ಕಾಂಚನ್ ಸೋಲಿಸಿದ್ದ ಯಶ್ಪಾಲ್ ಸುವರ್ಣ ಹಿಜಾಬ್ ಗಲಾಟೆ ಸಂದರ್ಭದಲ್ಲೂ ಮುಂಚೂಣಿಯಲ್ಲಿ ಗುರುತಿಸಿಕೊಂಡಿದ್ದವರು.ಅಲ್ಲದೆ ಇತ್ತೀಚಿಗೆ ಸಿಎಂ ಸಿದ್ದರಾಮಯ್ಯರವರ ಪ್ರತಿಕೃತಿ ದಹನ ಪ್ರಕರಣದಲ್ಲಿ ಯಶಪಾಲ್ ಸುವರ್ಣ ವಿರುದ್ಧ ಪ್ರಕರಣ ದಾಖಲಾಗಿತ್ತು.ಇಂತಹವರೊಂದಿಗೆ ಕಾಂಗ್ರೆಸ್ ನ ಅಭ್ಯರ್ಥಿ ಅರ್ಜುನ್ ನಾಯರಿಗೆ ಏನು ಕೆಲಸ ಎಂದು ಕಾಂಗ್ರೆಸಿಗರು ಪ್ರಶ್ನೆ ಮಾಡುತ್ತಿದ್ದಾರೆ.
ಆಮಂತ್ರಣ ನೀಡಲು ಹೋಗಿದ್ದರು.
ಕಾರ್ಯಕ್ರಮವೊಂದರ ಆಹ್ವಾನ ಪತ್ರಿಕೆ ನೀಡಲು ಬಿಜೆಪಿ ಶಾಸಕ ಯಶಪಾಲ್ ಸುವರ್ಣರನ್ನು ಭೇಟಿ ಮಾಡಿದ್ದರು.ಈ ಸಂದರ್ಭದಲ್ಲಿ ತೆಗೆದಿದ್ದ ಫೋಟೋ ಇದಾಗಿದೆ.ಆದರೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಚುನಾವಣೆಗೆ ನಿಂತ ಅಭ್ಯರ್ಥಿಯೋರ್ವ ಬಿಜೆಪಿ ಶಾಸಕರೊಂದಿಗೆ ಪ್ರತ್ಯಕ್ಷವಾಗಿರುವುದು ಮಾತ್ರ ಕಾಂಗ್ರೆಸಿಗರಿಗೆ ಅನುಮಾನ ಹುಟ್ಟುಹಾಕಿದೆ.
ಕೃಷ್ಣ ಶೆಟ್ಟಿ ಸೋಲಿಸಲು ಬಿಜೆಪಿ ಸಾಥ್?
ಉಡುಪಿ ಜಿಲ್ಲೆಯ ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಐದು ಮಂದಿ ನಾಮಪತ್ರ ಸಲ್ಲಿಸಿದ್ದಾರೆ.ಆದರೆ ಇದರಲ್ಲಿ ಪ್ರಬಲ ಸ್ಪರ್ಧಿಯಾಗಿ ಕೃಷ್ಣ ಶೆಟ್ಟಿ ಬಜಗೋಳಿ ಹೊರಹೊಮ್ಮಿದ್ದಾರೆ.ಕೃಷ್ಣ ಶೆಟ್ಟಿ ಬಜಗೋಳಿ ಕಾರ್ಕಳದಲ್ಲಿ ನಡೆದಿದೆ ಎನ್ನಲಾದ ಪರಶುರಾಮ ಮೂರ್ತಿ ಅಕ್ರಮ ವಿವಾದದಲ್ಲಿ ಅವಿರತವಾಗಿ ಹೋರಾಟ ಮಾಡಿದವರು. ಕಾರ್ಕಳ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ,ಉಡುಪಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ,ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸಿರುವ ಕೃಷ್ಣ ಶೆಟ್ಟಿ ಉಡುಪಿ ಜಿಲ್ಲಾಧ್ಯಕ್ಷ ಸ್ಥಾನದ ಪ್ರಬಲ ಸ್ಪರ್ಧಿ.
ಪರಶುರಾಮ ಥೀಮ್ ಪಾರ್ಕ್ ವಿವಾದ ರಾಜ್ಯದ ಗಮನ ಸೆಳೆದು ಬಿಜೆಪಿಯನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿದೆ. ಪರಶುರಾಮ ಥೀಮ್ ಪಾರ್ಕ್ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡದ್ದೇ ಈ ಕೃಷ್ಣ ಶೆಟ್ಟಿ ಬಜಗೋಳಿ .ಪರಶುರಾಮ ಥೀಮ್ ಪಾರ್ಕ್ ಸಂರಕ್ಷಣಾ ಸಮಿತಿ ಯನ್ನು ಕಟ್ಟಿ ಹೋರಾಟವನ್ನು ಕಾನೂನು ದಿಕ್ಕಿಗೆ ತಿರುಗಿಸಿದ್ದರು.ಕೇವಲ ಹೇಳಿಕೆಗಳಿಗೆ ಸೀಮಿತವಾಗಿದ್ದ ವಿಚಾರವನ್ನು ಕೋರ್ಟ್ ಕಟಕಟೆಗೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದರು.ಬಿಜೆಪಿಗೆ ನುಂಗಲಾರದ ತುತ್ತಾಗಿರುವ ಪರಶುರಾಮ ವಿಚಾರದ ಮುಂಚೂಣಿ ವ್ಯಕ್ತಿ ಕೃಷ್ಣ ಶೆಟ್ಟಿಯನ್ನು ಜಿಲ್ಲಾ ಯುವ ಕಾಂಗ್ರೆಸ್ ಚುನಾವಣೆಯಲ್ಲಿ ಸೋಲಿಸಲು ಬಿಜೆಪಿಯವರೂ ಸಾಥ್ ನೀಡಿದ್ದಾರೆ ಎಂಬ ಗುಮಾನಿ ಇದೆ.
ಆನ್ಲೈನ್ ಮೂಲಕ ನಡೆಯುವ ವೋಟ್ ಆದುದರಿಂದ ಯಾರೂ ಕೂಡ ವೋಟ್ ಮಾಡಬಹುದು.ಕಾಂಗ್ರೆಸ್ ಕಾರ್ಯಕರ್ತರು ಮಾತ್ರವಲ್ಲದೆ ಬೇರೆ ಪಕ್ಷದ ಕಾರ್ಯಕರ್ತರೂ ವೋಟ್ ಹಾಕಬಹುದು.ಈ ವ್ಯವಸ್ಥೆಯ ಉಪಯೋಗಕ್ಕಿಂತ ದುರುಪಯೋಗವೇ ಹೆಚ್ಚು.ಇದನ್ನೇ ಬಂಡವಾಳವನ್ನಾಗಿಸಿಕೊಳ್ಳುವ ಅವಕಾಶ ಹೆಚ್ಚಾಗಿದ್ದು ಕೃಷ್ಣ ಶೆಟ್ಟಿಯನ್ನು ಶತಾಯಗತಾಯ ಸೋಲಿಸಲೇ ಬೇಕೆಂಬ ಸಂಚು ಹೂಡಲಾಗಿದೆ ಎನ್ನಲಾಗುತ್ತಿದೆ.
ಆಡಿಯೋ ವೈರಲ್!
ಕೃಷ್ಣ ಶೆಟ್ಟಿ ಬಜಗೋಳಿಯವರಿಗೆ ವೋಟ್ ಹಾಕದಂತೆ ಸ್ವತಃ ಕಾಂಗ್ರೆಸ್ ನ ಮಾಜಿ ಸಚಿವರೋರ್ವರ ಆಪ್ತನಿಂದ ಕಾಂಗ್ರೆಸ್ ನ ಕಾರ್ಯಕರ್ತರಿಗೆ ಬೆದರಿಕೆ ಕರೆ ಬಂದಿದೆ ಎನ್ನಲಾಗುತ್ತಿದ್ದು ಇದೀಗ ಆ ಆಡಿಯೋ ವಾಟ್ಸಾಪ್ ಗ್ರೂಪ್ ಗಳಲ್ಲಿ ಸಾಕಷ್ಟು ವೈರಲ್ ಆಗುತ್ತಿದೆ.ಹಗಲು ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡು ರಾತ್ರಿ ಬಿಜೆಪಿಯವರೊಂದಿಗೆ ಸೇರುವ ಅವಕಾಶವಾದಿ,ಸೈದ್ದಂತಿಕ ಸ್ಪಷ್ಟತೆ ಇಲ್ಲದ ಇಂತಹ ನಾಯಕರು ಕಾಂಗ್ರೆಸ್ ಪಕ್ಷವನ್ನು ಪಾತಾಳಕ್ಕೆ ತಳ್ಳುವುದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ಕಾಂಗ್ರೆಸಿಗರು ಆಡಿಕೊಳ್ಳುತ್ತಿದ್ದ್ದಾರೆ.
ಸದ್ಯ ವೈರಲ್ ಆಗುತ್ತಿರುವ ಫೋಟೋ ಮತ್ತು ಆಡಿಯೋದ ಅಸಲಿಯತ್ತು ಬಯಲಾಗಬೇಕು ಎಂಬುದು ಕಾಂಗ್ರೆಸ್ ಕಾರ್ಯಕರ್ತರ ಆಶಯವಾಗಿದ್ದು ಈ ನಿಟ್ಟಿನಲ್ಲಿ ಕೆಪಿಸಿಸಿ ಗಮನಹರಿಸಬೇಕಾಗಿದೆ.ಇಲ್ಲದಿದ್ದಲ್ಲಿ ಕಾಂಗ್ರೆಸ್ ಕಾರ್ಯಕರ್ತರೇ ಹೊಡೆದಾಡಿಕೊಳ್ಳುವ ದಿನ ದೂರವಿಲ್ಲ.
ಸಾಮಾಜಿಕ ಜಾಲತಾಣದಲ್ಲಿ ಬಿಜೆಪಿ ಶಾಸಕ ಯಶ್ ಪಾಲ್ ಸುವರ್ಣರವರೊಂದಿಗೆ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಸ್ಥಾನದ ಅಭ್ಯರ್ಥಿ ಅರ್ಜುನ್ ನಾಯರಿರವರ ಫೋಟೋ ವೈರಲ್ ಆಗುತ್ತಿದೆ.