ಸಾಧನೆಗೆ ವಯಸು ಅಡ್ಡಿಯಾಗುವುದಿಲ್ಲ..! ಮನಸ್ಸಿದ್ದರೆ ಮಾರ್ಗ ಎನ್ನುವುದನ್ನು ಇಲ್ಲೊಬ್ಬ ರಿಕ್ಷಾ ಚಾಲಕ ಸಾಧಿಸಿ ತೋರಿಸಿದ್ದಾರೆ. ನಲ್ವತ್ತಮೂರರ ಹರೆಯದಲ್ಲಿ ಪಿಯುಸಿ ತೇರ್ಗಡೆಯಾದ ಆತನ ಸಾಧನೆಗೆ ಪ್ರಶಂಸೆ ವ್ಯಕ್ತವಾಗಿದೆ.
ಪ್ರಶಾಂತ್ ಪೂಜಾರಿ ವಯಸ್ಸು 43. ವೃತ್ತಿಯಲ್ಲಿ ರಿಕ್ಷಾ ಚಾಲಕ. ನಿಟ್ಟೆ ಗ್ರಾಮದ ಅತ್ತೂರು ನಿವಾಸಿಯಾಗಿರುವ ಅವರಿಗೆ ಬಾಲ್ಯದಲ್ಲಿದ್ದ ಬಡತನ ಓದುಗೆ ಅವಕಾಶ ಕಲ್ಪಿಸಿಕೊಡಲಿಲ್ಲ. ಅತ್ತೂರು ಸೈಂಟ್ ಲಾರೆನ್ಸ್ ಹೈಸ್ಕೂಲ್‌ನಲ್ಲಿ1996-97ರ ಸಾಲಿನಲ್ಲಿ 9ನೇ ತರಗತಿಯಲ್ಲಿ ಅನುತ್ತೀರ್ಣಗೊಂಡ ಬಳಿಕ, ಶಾಲೆಯ ಮೆಟ್ಟಿಲು ಹತ್ತಲಿಲ್ಲ. ಛಲ ಹಿಡಿದು ಕಲಿಸುವ ವಾತಾವರಣ ಕೂಡಾ ಮನೆಯಲ್ಲಿ ಇರಲಿಲ್ಲ. ಆದರೆ ತಾನೊಬ್ಬ ಹೆಚ್ಚಿನ ವಿದ್ಯಾಭ್ಯಾಸದ ಮೂಲಕ ವಿದ್ಯಾವಂತನಾಗಬೇಕೆಂಬ ನಿರ್ಧಾರ ಮನಸ್ಸಿನಲ್ಲಿ ಅಚಲವಾಗಿತ್ತು. ಅದಕ್ಕಾಗಿ ಛಲ ಬಿಡದೆ ಈ ಪ್ರಯತ್ನ ಮುಂದುವರೆಸಿದ್ದಾರೆ. ವೃತ್ತಿ ಜೀವನದ ಜಂಜಾಟದ ನಡುವೆ ಹಿಡಿದ ಕಾರ್ಯದ ಫಲಿತಾಂಶವನ್ನು ಸಮಾಜದ ಮುಂದೆ ಪ್ರಕಟಿಸಿದ್ದಾರೆ.
ಎಸ್‌ಎಸ್‌ಎಲ್‌ಸಿ/ಪಿಯುಸಿ..!
ಅತ್ತೂರು ಹೈಸ್ಕೂಲಿನ ಶಿಕ್ಷಕರ ನೆರವಿನಿಂದ 2024-25ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆದು ತೇರ್ಗಡೆ ಹೊಂದಲಾಯಿತು. ಮುಂದೆ ಕಲಿಯಬೇಕೆಂಬ ಹಂಬಲವಿದ್ದ ಕಾರಣ, ಕಾರ್ಕಳ ಯಶಸ್ವಿ ಟ್ಯುಟೋರಿಯಲ್‌ನಲ್ಲಿ ಮೂರು ತಿಂಗಳ ಕಾಲ ಪಿಯುಸಿ ಕೋಚಿಂಗ್ ಪಡೆದು ಪರೀಕ್ಷೆ ಬರೆಯಲಾಯಿತು. ಕಲಾ ವಿಭಾಗದಲ್ಲಿ334 ಅಂಕ ಪಡೆದುಕೊಂಡಿರುವ ಅವರು, ವಿದ್ಯಾವಂತನಾಗಬೇಕೆಂಬ ಕನಸಿಗೆ ಮುನ್ನುಡಿಯಿಟ್ಟಿದ್ದಾರೆ.ಪತ್ನಿ ದೀಪಾ ಸುರತ್ಕಲ್‌ನಲ್ಲಿ ಉದ್ಯೋಗದಲ್ಲಿದ್ದು, ಇಬ್ಬರು ಪುತ್ರರು ಅವರಿಗಿದ್ದಾರೆ. ಪ್ರಸ್ತುತ ಅತ್ತೂರುನಲ್ಲಿ ರಿಕ್ಷಾ ಚಾಲಕರಾಗಿ ದುಡಿಯುತ್ತಿದ್ದಾರೆ.
ಕಠಿಣ ಪರಿಶ್ರಮ:
ಮುಂಜಾನೆ 3 ಗಂಟೆಗೆ ಎದ್ದು ಓದುವ ಅಭ್ಯಾಸವನ್ನು ರೂಢಿಸಿಕೊಂಡಿದ್ದೆ. ಪ್ರತಿ ವಿಷಯದಲ್ಲೂ ಸಾಧ್ಯವಾದಷ್ಟು ಅರ್ಥೈಸಿಕೊಂಡು ಕಲಿಕೆಯಲ್ಲಿ ತೊಡಗಿಸಿಕೊಂಡಿದ್ದೆ. ಒಂಬತ್ತನೇ ತರಗತಿ ಅನುತ್ತೀರ್ಣವಾದ ಕೆಲವೇ ವರ್ಷಗಳಲ್ಲಿ ಕಲಿಕೆ ಮುಂದುವರೆಸಬೇಕೆಂಬ ಮನಸು ನನ್ನಲ್ಲಿತ್ತು. ಅದು ಈಗ ಯಶಸ್ಸಾಗಿದೆ. ಮುಂದೆ ಡಿಗ್ರಿ ಪಡೆಯಬೇಕೆಂಬ ಪ್ರಯತ್ನ ಮುಂದುವರೆಸುತ್ತೇನೆ. ಕಲಿತ ವಿದ್ಯೆ ಮುಂದಿನ ಬದುಕಿಗೆ ದಾರಿದೀಪವಾಗುತ್ತದೆ ಎನ್ನುವ ಬಲವಾದ ನಂಬಿಕೆ ನನ್ನಲ್ಲಿದೆ.
– ಪ್ರಶಾಂತ್ ಪೂಜಾರಿ, ಅತ್ತೂರು (ರಿಕ್ಷಾ ಚಾಲಕ)
















