ಜೀರ್ಣೋದ್ಧಾರಗೊಳ್ಳುತ್ತಿರುವ ಹೆಬ್ರಿ ತಾಲ್ಲೂಕಿನ ಶಿವಪುರ ಶಂಕರದೇವ ದೇವಸ್ಥಾನ
ಎಪ್ರಿಲ್ 26 ರಿಂದ ಮೇ ೦6 ರ ತನಕ ವಿವಿಧ ಧಾರ್ಮಿಕ ಕಾರ್ಯಕ್ರಮಗಳು.
ಶಿವಪುರ ಶಂಕರದೇವ ದೇವಸ್ಥಾನದ ಬ್ರಹ್ಮಕಲಶಾಭಿಷೇಕ : ಶ್ರೀಗಣಪತಿ, ಶ್ರೀ ಅನ್ನಪೂರ್ಣೇಶ್ವರೀ ದೇವರ ಪ್ರತಿಷ್ಠೆ : ಧ್ವಜಸ್ತಂಭ ಪ್ರತಿಷ್ಠೆ.
ಶಿವಪುರ ( ಹೆಬ್ರಿ ) : ಇತಿಹಾಸ ಪ್ರಸಿದ್ಧ ಶಿವಪುರ ಶಂಕರದೇವ ದೇವಸ್ಥಾನದ 2ನೇ ಹಂತದ ಬ್ರಹ್ಮಕಲಶಾಭಿಷೇಕಕ್ಕೆ ಸಿದ್ಧತೆಗಳು ಭರದಿಂದ ನಡೆಯುತ್ತಿದೆ. ನೂತನ ಶಿಲಾಮಯ ಗರ್ಭಗುಡಿ, ತೀರ್ಥಮಂಟಪ ಸಹಿತ 5ಕೋಟಿ ರೂಪಾಯಿ ವೆಚ್ಚದಲ್ಲಿ ವಿವಿಧ ಕಾರ್ಯಗಳು ನಡೆದು ಪ್ರಥಮ ಹಂತದ ಜೀರ್ಣೋದ್ಧಾರ ಕಾರ್ಯ 2023ರಲ್ಲಿ ನಡೆದು ಇದೀಗ ಶಿಲಾಮಯ ಸುತ್ತುಪೌಳಿ, ಶ್ರೀಗಣಪತಿ, ಶ್ರೀ ಅನ್ನಪೂರ್ಣೇಶ್ವರೀ ದೇವರ ಗುಡಿಗಳು, ನೂತನ ಧ್ವಜಸ್ತಂಭ ಸಹಿತ ವಿವಿಧ ಕಾರ್ಯಗಳು ಸುಮಾರು 7 ಕೋಟಿ ರೂಪಾಯಿ ವೆಚ್ಚದಲ್ಲಿ ನಡೆದು ಇದೇ 26ರಿಂದ ಮೇ 06 ರ ತನಕ ಬ್ರಹ್ಮಕಲಶಾಭಿಷೇಕದ ಜೊತೆಗೆ ವಾರ್ಷಿಕ ಕಾಲಾವಧಿ ಜಾತ್ರಾ ಮಹೋತ್ಸವ ಸೇರಿ ವಿವಿಧ ಧಾರ್ಮಿಕ ವಿಧಿವಿಧಾನಗಳು ಜರುಗಲಿದೆ.
ಐತಿಹಾಸಿಕ ಹಿನ್ನಲೆ :
ಶಿವಪುರ ಶಂಕರದೇವ ದೇವಸ್ಥಾನಕ್ಕೆ ವಾಸ್ತುಶಾಸ್ತ್ರದ ಪ್ರಕಾರ 1200 ವರ್ಷದ ಐತಿಹಾಸಿಕ ಹಿನ್ನಲೆಯಿದೆ ಎಂದು ತಿಳಿದುಬಂದಿದೆ. ವಿಜಯನಗರ ಸಾಮ್ರಾಜ್ಯದ ಕಾಲದಲ್ಲಿ ಸ್ಥಾಪನೆಗೊಂಡು ಸುಮಾರು 616 ವರ್ಷಗಳ ಹಿಂದೆ ಜೀರ್ಣೋದ್ಧಾರಗೊಂಡಿರುವ ಬಗ್ಗೆ ಶಿಲಾ ಶಾಸನದ ದಾಖಲೆ ಇದೆ.
ಜೀರ್ಣೋದ್ಧಾರ ಕಾರ್ಯದ ಜೊತೆಗೆ ವಿವಿಧ ಹಂತದ ಸಿದ್ಧತೆಗಳು ಬ್ರಹ್ಮಕಲಶಾಭಿಷೇಕಕ್ಕೆ ನಡೆಯುತ್ತಿದೆ. ಪೇಜಾವರ ಮಠಾದೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ, ತಂತ್ರಿವರೇಣ್ಯ ಶ್ರೀ ಹೆರ್ಗ ರಾಘವೆಂದ್ರ ತಂತ್ರಿಯವರ ಮಾರ್ಗದರ್ಶನದಲ್ಲಿ ಜೀರ್ಣೋದ್ಧಾರ ಸಮಿತಿಯ ಗೌರವಾಧ್ಯಕ್ಷರಾದ ಶಾಸಕ ಸುನೀಲ್ ಕುಮಾರ್, ಕಾರ್ಯಾಧ್ಯಕ್ಷರಾದ ಉದಯ ಕುಮಾರ್ ಶೆಟ್ಟಿ ಮುನಿಯಾಲು, ಅಜಿತ್ ಎಸ್ ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಮೂರ್ಸಾಲು ಗೋಕುಲದಾಸ ನಾಯಕ್, ಶಿವಪುರ ವಾಸುದೇವ ಭಟ್ ನೇತ್ರತ್ವದ ಜೀರ್ಣೋದ್ಧಾರ ಸಮಿತಿ, ಮಾರ್ಮಕ್ಕಿ ವಿಶ್ವನಾಥ ನಾಯಕ್ ಅಧ್ಯಕ್ಷತೆಯ ವ್ಯವಸ್ಥಾಪನಾ ಸಮಿತಿ, ಹುಣ್ಸೆಯಡಿ ಸುರೇಶ ಶೆಟ್ಟಿ ನೇತ್ರತ್ವದ ಆರ್ಥಿಕ ಸಮಿತಿ, ದೇವಸ್ಥಾನಬೆಟ್ಟು ಶ್ರೀನಿವಾಸ ಹೆಬ್ಬಾರ್ ನೇತ್ರತ್ವದ ಅಭಿವೃದ್ಧಿ ಕಾಮಗಾರಿ ಸಮಿತಿಯ ಜೊತೆಗೆ ಜೀರ್ಣೋದ್ಧಾರ ಸಮಿತಿ, ವ್ಯವಸ್ಥಾಪನಾ ಸಮಿತಿ, ಅರ್ಚಕ ವೃಂದ, ಸಿಬ್ಬಂದಿ ವರ್ಗ, ಪ್ರಧಾನ ಸಲಹೆಗಾರರು, ಉಪಾಧ್ಯಕ್ಷರು, ವಿವಿಧ ಉಪಸಮಿತಿಗಳು ಮತ್ತು ಗ್ರಾಮಸ್ಥರ ಸಹಕಾರದಲ್ಲಿ ಕಾರ್ಯಗಳು ನಡೆಯುತ್ತಿದೆ. ಭವ್ಯವಾದ ದೇವಸ್ಥಾನ ನಿರ್ಮಾಣಗೊಂಡಿದೆ. ಶಿಲಾಶಿಲ್ಪಿ ಮುರ್ಡೇಶ್ವರ ಕೇಶವ ನಾಯಕ್ ನೇತ್ರತ್ವದಲ್ಲಿ ಸುತ್ತುಪೌಳಿ ಸಹಿತ ಶಿಲೆಯ ಕೆಲಸಗಳು ಮತ್ತು ಕಾಷ್ಠಶಿಲ್ಪಿ ಉಡುಪಿಯ ನಾರಾಯಣ ಆಚಾರ್ಯ ನೇತ್ರತ್ವದಲ್ಲಿ ಮರದ ಕೆಲಸಗಳು ನಡೆದಿದೆ. ಮುಂದಿನ ಹಂತದಲ್ಲಿ ಮೂಲಸೌಕರ್ಯಗಳ ಜೊತೆಗೆ ಇನ್ನಷ್ಟು ಅಭಿವೃದ್ಧಿ ಕಾರ್ಯಗಳು ನಡೆಯಬೇಕಿದೆ.
ಎಪ್ರಿಲ್ 29 ದೇವರ ಪ್ರತಿಷ್ಠೆ – ಮೇ 01 ರಂದು ಬ್ರಹ್ಮಕಲಶಾಭಿಷೇಕ
ಎಪ್ರಿಲ್ 26ರಿಂದ ಆರಂಭಗೊಂಡು ವಿವಿಧ ಧಾರ್ಮಿಕ ಕಾರ್ಯಗಳು ನಡೆಯಲಿದೆ. 29ರಂದು ಶ್ರೀಗಣಪತಿ, ಶ್ರೀ ಅನ್ನಪೂರ್ಣೇಶ್ವರೀ ದೇವರ ಪ್ರತಿಷ್ಠೆ ಮತ್ತು ಧ್ವಜಸ್ತಂಭ ಪ್ರತಿಷ್ಠೆ ಸಹಿತ ವಿವಿಧ ವಿಧಿವಿಧಾನಗಳು ನಡೆಯಲಿದೆ. ಮೇ 01 ರಂದು ಬ್ರಹ್ಮಕಲಶಾಭಿಷೇಕ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದೆ.
ಮೇ ೦4 ಶ್ರೀ ಮನ್ಮಾಹಾರಥೋತ್ಸವ : ಮೇ ೦2ರಿಂದ ಕಾಲಾವಧಿ ರಥೋತ್ಸವದ ವಿವಿಧ ಕಾರ್ಯಗಳು ಆರಂಭಗೊಂಡು ೦೪ರಂದು ಮಧ್ಯಾಹ್ನ ಅನ್ನಸಂತರ್ಪಣೆ ನಡೆದು ಸಂಜೆ ಶ್ರೀ ಮನ್ಮಾಹಾರಥೋತ್ಸವ ನಡೆಯಲಿದೆ ಎಂದು ಕ್ಷೇತ್ರದ ಅರ್ಚಕ ಮಹಾಬಲೇಶ್ವರ ಅಡಿಗ ತಿಳಿಸಿದರು.
ಧಾರ್ಮಿಕ ಸಭೆ : ಎಪ್ರಿಲ್ 29ರಂದು ಸಂಜೆ ಶಾಸಕ ಸುನಿಲ್ ಕುಮಾರ್ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಉಡುಪಿ ವಾದಿರಾಜ ಸಂಸ್ಥಾನದ ನಿರ್ದೇಶಕ ಡಾ. ಗೋಪಾಲ ಆಚಾರ್ಯ ಧಾರ್ಮಿಕ ಉಪನ್ಯಾಸ ನೀಡುವರು. ಕ್ಷೇತ್ರದ ತಂತ್ರಿವರೇಣ್ಯ ಹೆರ್ಗ ರಾಘವೇಂದ್ರ ತಂತ್ರಿಯವರು, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಅದಾನಿ ಗ್ರೂಪ್ಸ್ ಅಧ್ಯಕ್ಷ ಕಿಶೋರ್ ಆಳ್ವ, ಮುಂಬೈ ಉಧ್ಯಮಿ ಮುರುಳೀಧರ ಶೆಟ್ಟಿ ಒಂಬತೋಕ್ಲು, ಸುಬ್ರಹ್ಮಣ್ಯ ನಕ್ಷತಿ ಬೆಂಗಳೂರು ಸಹಿತ ವಿವಿಧ ದಾನಿಗಳು, ಗಣ್ಯರು, ಊರಿನ ಪ್ರಮುಖರು, ಜನಪ್ರತಿನಿಧಿಗಳು ಭಾಗವಹಿಸುವರು.
ಮೇ 01ರಂದು ಕಾರ್ಯಾಧ್ಯಕ್ಷ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅಧ್ಯಕ್ಷತೆಯಲ್ಲಿ ಧಾರ್ಮಿಕ ಸಭೆ ನಡೆಯಲಿದೆ. ಪೇಜಾವರ ಮಠಾದೀಶ ಶ್ರೀವಿಶ್ವಪ್ರಸನ್ನ ತೀರ್ಥ ಸ್ವಾಮೀಜಿ ಮತ್ತು ಪಲಿಮಾರು ಮಠಾದೀಶ ಶ್ರೀ ವಿದ್ಯಾಧೀಶ ಶ್ರೀಪಾದರು ಆಶೀರ್ವಚನ ನೀಡುವರು. ಅವದಾನಿ ಗುಂಡಿಬೈಲು ಸುಬ್ರಹ್ಮಣ್ಯ ಭಟ್ ಧಾರ್ಮಿಕ ಉಪನ್ಯಾಸ ನೀಡುವರು. ರಾಜ್ಯದ ನಾರಾಯಣ ಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮುದ್ರಾಡಿ ಮಂಜುನಾಥ ಪೂಜಾರಿ, ವಿಧನ ಪರಿಷತ್ ಸದಸ್ಯರಾದ ಮಂಜುನಾಥ ಭಂಡಾರಿ, ಧನಂಜಯ ಸರ್ಜಿ, ಎಂಆರ್ ಜಿ ಗ್ರೂಪ್ಸ್ ಮುಖ್ಯಸ್ಥ ಡಾ.ಕೆ.ಪ್ರಕಾಶ ಶೆಟ್ಟಿ ಸಹಿತ ವಿವಿಧ ದಾನಿಗಳು, ಗಣ್ಯರು, ಊರಿನ ಪ್ರಮುಖರು, ಜನಪ್ರತಿನಿಧಿಗಳು ಭಾಗವಹಿಸುವರು.
ಮುಖ್ಯಾಂಶ
ಕ್ಷೇತ್ರದಲ್ಲಿ 26ರಿಂದ ನಿರಂತರ ಕಾರ್ಯಕ್ರಮಗಳು ನಡೆಯಲಿದ್ದು ಅನ್ನಸಂತರ್ಪಣೆ ನಡೆಯುತ್ತದೆ. ಮೇ 01ರಂದು ಬ್ರಹ್ಮಕಲಶಾಭಿಷೇಕ ಮತ್ತು ಮಹಾ ಅನ್ನಸಂತರ್ಪಣೆ ನಡೆಯಲಿದ್ದು 8 ಸಾವಿರಕ್ಕೂ ಹೆಚ್ಚು ಮಂದಿ ಭಕ್ತಸಮೂಹ ಸೇರುವ ನಿರೀಕ್ಷೆಯಿದೆ. ಸರ್ವ ರೀತಿಯ ಸಕಲ ಸಿದ್ಧತೆ ನಡೆಸಲಾಗಿದೆ. ಸರ್ವರೂ ಯಶಸ್ಸಿಗೆ ಕೈಜೋಡಿಸುತ್ತಿದ್ದಾರೆ.

























