ಬಜಗೋಳಿ ಅಪ್ಪಾಯಿ ಶ್ರೀ 1008 ಅನಂತನಾಥ ಸ್ವಾಮಿ ಬಸದಿಯ ಸಭಾಂಗಣದಲ್ಲಿ ಬಜಗೋಳಿ ಜೈನ ಮಿಲನ್ ಮತ್ತು ಯುವ ಜೈನ್ ಮಿಲನ್ ಸಹಯೋಗದಲ್ಲಿ 79 ನೇ ಸ್ವಾತಂತ್ರ ದಿನಾಚರಣೆ ಹಾಗೂ ಆಟಿದ ಕೂಟ ಕಾರ್ಯಕ್ರಮ ಆ.15 ರಂದು ಜರುಗಿತು.
ಅತಿಥಿಗಳು ದೀಪವನ್ನು ಪ್ರಜ್ವಲಿಸಿ ಚೆನ್ನೆಮಣೆಗೆ ಕಾಯಿ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುನಿರಾಜ್ ರೆಂಜಾಳ ಅವರು ಆಟಿ ತಿಂಗಳಿನ ಮಹತ್ವ, ಅದರ ಹಿಂದಿರುವ ವೈಜ್ಞಾನಿಕ ಕಾರಣಗಳು, ಅಂದಿನ ಆಟಿ ತಿಂಗಳಿನ ಆಚರಣೆಗೂ ಇಂದಿನ ಆಚರಣೆಗೂ ಇರುವ ವ್ಯತ್ಯಾಸ ಇತ್ಯಾದಿಗಳನ್ನು ತಿಳಿಸುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಸ್ಥಳೀಯ ಜೈನರ ಪರಿಚಯ ಮತ್ತು ಪಾತ್ರವನ್ನುಸಭೆಗೆ ತಿಳಿಸಿದರು.
ಇದೇ ಕಾರ್ಯಕ್ರಮದಲ್ಲಿ ಅನಾಥ ಶ್ವಾನ ಹಾಗೂ ಗೋವುಗಳಿಗಾಗಿ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ನಡೆಸುತ್ತಿರುವ ವೀರಾಂಜಯ ಜೈನ್ ರನ್ನು ಮಿಲನ್ ಅಧ್ಯಕ್ಷರಾದ ವರ್ಧಮಾನ್ ಜೈನ್ ಹಾಗೂ ಅವರ ಪುತ್ರಿ ಶ್ರದ್ದಾ ಜೈನ್ (ಅಯ್ಯೋ ಶ್ರದ್ದಾ) ನಗದು ಪುರಸ್ಕಾರ ನೀಡಿ ಗೌರವಿಸಿದರು.
ಮುಡಾರು ನಲ್ಲೂರು ಮತ್ತು ಮಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ 2024-25ರ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡ 90 ಅಥವಾ ಅದಕ್ಕಿಂತ ಮೇಲ್ಪಟ್ಟು ಅಂಕಗಳಿಸಿದ ಪ್ರತಿಭಾನ್ವಿತ ಜೈನ ವಿದ್ಯಾರ್ಥಿಗಳನ್ನು ಹಾಗೂ ಬಸದಿಯಲ್ಲಿ ಪ್ರತಿ ಆದಿತ್ಯವಾರ ಜರಗುವ ವಿತರಾಗ ಪಾಠಶಾಲೆಯ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.
ಇದೇ ಸಂದರ್ಭದಲ್ಲಿ ಜೈನ ಮುನಿಗಳ ಬಗ್ಗೆ ಜೈನ ಸಮಾಜದ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಖಾವಂದರ ಬಗ್ಗೆ ಅವಹೇಳನಕಾರಿಯಾಗಿ ಅಪಪ್ರಚಾರ ಮಾಡುತ್ತಿರುವ ಅವರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.
ನವೀನ್ ಕುಮಾರ್ ಜೈನ್ ಅವರು ಮಾತನಾಡಿ ಧರ್ಮಸ್ಥಳ ಕ್ಷೇತ್ರದಿಂದ ಹಾಗೂ ಖಾವಂದರಿಂದ ಸಮಾಜಕ್ಕೆ ಆಗುತ್ತಿರುವ ಸತ್ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.
ಜೈನ ಧರ್ಮದ ಬಗ್ಗೆ ಜೈನಮನಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಜೈನ ಸಮಾಜದ ಪ್ರತಿಕ್ರಿಯೆ ಹೇಗಿರಬೇಕು ಎಂಬುವುದರ ಜಾಗೃತಿ ಸಂದೇಶವನ್ನು ಧರ್ಮ ಚಿಂತಕರಾದ ಭರತ್ ರಾಜ್ ತಿಳಿಸಿದರು.
ಜೈನ್ ಮಿಲನ್ ಅಧ್ಯಕ್ಷರಾದ ವರ್ಧಮಾನ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮಕ್ಕೆ ಅಪ್ಪಾಯಿ ಬಸದಿಯ ಆಡಳಿತ ಮುಕ್ತೇಸರರಾದ ಸುಮ್ಮಗುತ್ತು ಜಯವರ್ಮ ಹೆಗ್ಡೆ, ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷ ನವೀನ್ ಕುಮಾರ್ ಜೈನ್, ಖ್ಯಾತ ಸಾಹಿತಿ ಹಾಗೂ ಚಿಂತಕ ಮುನಿರಾಜ್ ರೆಂಜಾಳ, ಭಾರತೀಯ ಜೈನ್ ಮಿಲನ್ ವಲಯ 8 ಇದರ ವಲಯ ನಿರ್ದೇಶಕರಾದ ಶ್ರೀವರ್ಮ ಅಜ್ರಿ ಅತಿಥಿಗಳಾಗಿ ಆಗಮಿಸಿದ್ದರು. ಜೈನ್ ಮಿಲನ್ ಕಾರ್ಯದರ್ಶಿ ಓಂ ಪ್ರಕಾಶ್ ಜೈನ್, ಯುವ ಜೈನ್ ಮಿಲನ್ ಅಧ್ಯಕ್ಷರಾದ ಪ್ರಧಾನ್ ಜೈನ್ ಕಾರ್ಯದರ್ಶಿ ಸಾತ್ವಿಕ್ ಜೈನ್ ಉಪಸ್ಥಿತರಿದ್ದರು.
ವಿರಾಜ್ ಜೈನ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಓಂ ಪ್ರಕಾಶ್ ಜೈನ್ ಸ್ವಾಗತಿಸಿದರು. ಕಾವ್ಯ ಪ್ರಮೋದ್ ಜೈನ್ ಧನ್ಯವಾದ ಮತ್ತು ಶ್ರೇಯಾಂಸ ಜೈನ್ ಕಾರ್ಯಕ್ರಮ ನಿರೂಪಿಸಿದರು.
ಆಟಿ ತಿಂಗಳಿನ ಕಂದ ಮೂಲ ರಹಿತ ತಿಂಡಿ ತಿನಿಸುಗಳನ್ನು ಸವಿದರು. ‘ಹುಲ್ಸೇ ಫ್ಯಾಷನ್’ ಮೂಡಬಿದಿರೆ ಇವರ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ವಿದ್ಯಾ ವಿನುತ ಇವರ ಮಣಿಸರಗಳ ಮಾರಾಟ, ಕಾರ್ಯಕ್ರಮದ ವಿಶೇಷ ಆಕರ್ಷಣೆ ಎನಿಸಿತು.