ಕ್ರಿಯೇಟಿವ್ ಸಂಸ್ಥೆಯ ಪ್ರಥಮ ಪಿಯು ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೆ ಅವಕಾಶ
2025 -26ನೇ ಶೈಕ್ಷಣಿಕ ಸಾಲಿನ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ 90%ಕ್ಕಿಂತ ಅಧಿಕ ಅಂಕ ಗಳಿಸಿದ ಕಾರ್ಕಳದ ಸ್ಥಳೀಯ ವಿದ್ಯಾರ್ಥಿಗಳು ವಾಣಿಜ್ಯ ವಿಭಾಗವನ್ನು ಸೇರಬಯಸುವುದಾದರೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯು ವಿಶೇಷ ರಿಯಾಯಿತಿಯನ್ನು ಘೋಷಿಸಿದೆ. ಅತ್ಯಧಿಕ ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ವಾಣಿಜ್ಯ ವಿಭಾಗದಲ್ಲಿ ಉಚಿತ ಶಿಕ್ಷಣಕ್ಕೂ ಅವಕಾಶ ಕಲ್ಪಿಸಲಾಗಿದೆ.
ಕಳೆದ ಬಾರಿ ಸಾನ್ವಿರಾವ್ ಎಂಬ ವಿದ್ಯಾರ್ಥಿನಿ 598 ಅಂಕಗಳನ್ನು ಗಳಿಸುವುದರ ಮೂಲಕ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗಿ ಗುರುತಿಸಿಕೊಂಡಿರುವುದು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಹೆಗ್ಗಳಿಕೆಯಾಗಿದೆ. ಸಿಎ ಫೌಂಡೇಶನ್ ನಲ್ಲಿ 13 ವಿದ್ಯಾರ್ಥಿಗಳಲ್ಲಿ 07 ವಿದ್ಯಾರ್ಥಿಗಳು ಅರ್ಹತೆಯನ್ನು ಗಳಿಸಿರುವುದಲ್ಲದೆ, CSEET ಪರೀಕ್ಷೆಯಲ್ಲಿ 34 ವಿದ್ಯಾರ್ಥಿಗಳಲ್ಲಿ 24 ವಿದ್ಯಾರ್ಥಿಗಳು ಪ್ರಥಮ ಪ್ರಯತ್ನದಲ್ಲೇ ಅರ್ಹತೆಯನ್ನು ಪಡೆದುಕೊಂಡಿರುವುದು ವಾಣಿಜ್ಯ ವಿಭಾಗದ ಗುಣಾತ್ಮಕ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿಯಾಗಿದೆ. ಹತ್ತಾರು ಕ್ರೀಯಾಶೀಲ ಕಾರ್ಯಕ್ರಮಗಳೊಂದಿಗೆ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪ್ರಗತಿಯ ಜೊತೆಗೆ ಬದುಕಿನ ಪಾಠವನ್ನು ಕಲಿಸುವ ಮೂಲಕ ಅವರ ಉತ್ತಮ ಭವಿಷ್ಯಕ್ಕೆ ಸಂಸ್ಥೆ ಕಾರಣವಾಗಿದೆ.
ಪ್ರತಿಭಾನ್ವಿತ ವಿದ್ಯಾರ್ಥಿಗಳಿಗೆ ನೀಡುವ ಈ ಉಚಿತ ಶಿಕ್ಷಣ ಸೌಲಭ್ಯವನ್ನು ಅರ್ಹ ಫಲಾನುಭವಿಗಳು ಪಡೆದುಕೊಳ್ಳುವಂತೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಆಡಳಿತ ಮಂಡಳಿ ಪ್ರಕಟಣೆಯಲ್ಲಿ ತಿಳಿಸಿದೆ.
ಕಾರ್ಕಳ ಜ್ಞಾನಸುಧಾ : ವಾಣಿಜ್ಯ ವಿಭಾಗಕ್ಕೆ ಉಚಿತ ಶಿಕ್ಷಣಕ್ಕೆ ಅರ್ಜಿ ಆಹ್ವಾನ
ಗಣಿತನಗರ:ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್(ರಿ.) ಇದರ ಆಡಳಿತಕ್ಕೆ ಒಳಪಟ್ಟ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳಲ್ಲಿ ಸಮಾಜಮುಖಿ ಕಾರ್ಯಗಳಲ್ಲಿ ಒಂದು ಭಾಗವಾಗಿ ಕಳೆದ ವರ್ಷದಿಂದ ವಾಣಿಜ್ಯ ವಿಬಾಗದಲ್ಲಿ ಅರ್ಹ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡಲಾಗುತ್ತಿದೆ.
2025-26ನೇ ಶೈಕ್ಷಣಿಕ ಸಾಲಿನ ವಾಣಿಜ್ಯ ವಿಭಾಗಕ್ಕೆ ದಾಖಲಾತಿ ಬಯಸುವ, ಹತ್ತನೇ ತರಗತಿಯಲ್ಲಿ ಶೇ 95ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಹಾಗೂ ಸ್ಪರ್ಧಾತ್ಮಕ ಪರೀಕ್ಷೆಗಳ ಸಂಪೂರ್ಣ ಉಚಿತ ಶಿಕ್ಷಣ, ಶೇ90ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಕಾಲೇಜು ಶುಲ್ಕದಲ್ಲಿ ಸಂಪೂರ್ಣ ವಿನಾಯಿತಿ, ಶೇ 85ಕ್ಕಿಂತ ಅಧಿಕ ಅಂಕ ಗಳಿಸುವ ವಿದ್ಯಾರ್ಥಿಗಳಿಗೆ ಶೇ.25ರಷ್ಟು ಕಾಲೇಜು ಶುಲ್ಕದಲ್ಲಿ ವಿನಾಯಿತಿ ನೀಡಲಾಗುತ್ತದೆ. ಹೆಚ್ಚಿನ ಮಾಹಿತಿಗಾಗಿ ಆಸಕ್ತ ವಿದ್ಯಾರ್ಥಿಗಳು ಮತ್ತು ಪೋಷಕರು ಸಂಸ್ಥೆಯ ಕಛೇರಿಯನ್ನು ಸಂಪರ್ಕಿಸಿ ಮಾಹಿತಿ ಪಡೆದು ಕೊಳ್ಳಬಹುದು ಎಂದು ಸಂಸ್ಥೆಯು ಪ್ರಕಟಣೆಯಲ್ಲಿ ತಿಳಿಸಿದೆ. ಮಾಹಿತಿಗಾಗಿ :8147454906
2024-25ರ ಫಲಿತಾಂಶದಲ್ಲಿ ರಕ್ಷಾ ರಾಮ್‌ಚಂದ್ರ ನಾಯಕ್ 597 ಅಂಕಗಳೊAದಿಗೆ ರಾಜ್ಯಕ್ಕೆ 3ನೇ ಸ್ಥಾನಿಯಾಗಿ ಹಾಗೂ ಉಡುಪಿ ಜಿಲ್ಲೆಗೆ ದ್ವಿತೀಯ ಸ್ಥಾನಿಯಾಗಿ ಸಹನಾ ನಾಯಕ್ ಹಾಗೂ ತನ್ವಿ ರಾವ್ 594 ಅಂಕ ಗಳಿಸಿ ರಾಜ್ಯಕ್ಕೆ 6ನೇ ರ‍್ಯಾಂಕ್ ಹಾಗೂ ಜಿಲ್ಲೆಗೆ 3ನೇ ಸ್ಥಾನಿಯಾಗಿ ಹೊರಹೊಮ್ಮಿದ್ದು, ವಿದ್ಯಾರ್ಥಿಗಳಾದ ವಿ. ಯಶಸ್ವಿ ನಾಯ್ಕ್ (591 ಅಂಕ) ಹಾಗೂ ಪ್ರಜ್ಞಾ ಹೆಗ್ಡೆ (591)ಗಳಿಸಿದ್ದಾರೆ. ಈ ಬಾರಿ 2025ರ ಜನವರಿಯಲ್ಲಿ ನಡೆದ ಸಿ.ಎಸ್.ೆಇ.ಇ.ಟಿ ಪರೀಕ್ಷೆ ಬರೆದ 32 ವಿದ್ಯಾರ್ಥಿಗಳಲ್ಲಿ 28 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಅತ್ಯುತ್ತಮ ಫಲಿತಾಂಶ ದಾಖಲಿಸಿರುತ್ತಾರೆ.
ಪಠ್ಯೇತರ ಚಟುವಟಿಕೆಯಲ್ಲಿ ಎನ್.ಸಿ.ಸಿ ಮತ್ತು ಎನ್.ಎಸ್.ಎಸ್ ಕಾರ್ಯಚರಿಸುತ್ತಿದ್ದು, ವಿದ್ಯಾರ್ಥಿಗಳಲ್ಲಿ ನಾಯಕತ್ವದ ಗುಣವನ್ನು ಬೆಳೆಸಿ ಈಗಾಗಲೇ ರಿತಿಕಾ ಕಾಮತ್, ವೃದ್ಧಿ ಶೆಟ್ಟಿ ಮತ್ತು ಸಮಿಯಾ ಹೆಗ್ಡೆ ರಾಜ್ಯಗಣರಾಜ್ಯೋತ್ಸವ ಪಥಸಂಚಲನದಲ್ಲಿ ಭಾಗವಹಿಸಿದ ಹಿರಿಮೆಗೆ ಪಾತ್ರರಾಗಿದ್ದಾರೆ. ಕ್ರೀಡೆಯಲ್ಲಿ ವಿದ್ಯಾರ್ಥಿಗಳು ಬಾಸ್ಕೆಟ್ ಬಾಲ್, ತ್ರೋಬಾಲ್, ವಾಲಿಬಾಲ್, ಶಟಲ್ ಬ್ಯಾಡ್ಮಿಂಟನ್, ಫೂಟ್ಬಾಲ್ ಮತ್ತು ಅಥ್ಲೇಟಿಕ್ಸ್ ತರಬೇತಿ ಪಡೆದು ರಾಷ್ಟ್ರ ಹಾಗೂ ರಾಜ್ಯಮಟ್ಟದಲ್ಲಿ ಭಾಗವಹಿಸಿರುತ್ತಾರೆ. ಮಕ್ಕಳಲ್ಲಿ ವ್ಯವಹಾರ ಜ್ಞಾನವನ್ನು ಹೆಚ್ಚಿಸಲು ವ್ಯಾಪಾರ ಮೇಳಗಳನ್ನು ಹಾಗೂ ಕೈಗಾರಿಕಾ ಭೇಟಿಯನ್ನು ಆಯೋಜಿಸಲಾಗುತ್ತಿದೆ.
ಕ್ರೈಸ್ಟ್ ಕಿಂಗ್: ಹತ್ತನೇ ತರಗತಿಯಲ್ಲಿ 624 ಅಂಕಗಳನ್ನು ಪಡೆದ ಪ್ರಕೃತಿ ಪಿ ಗುಡಿಗಾರ್ ರಾಜ್ಯಕ್ಕೆ ಎರಡನೇ ರ‍್ಯಾಂಕ್
618 ಅಂಕಗಳನ್ನು ಪಡೆದ ಆದಿಶ್ರೀ ಎಂ ಆಚಾರ್ಯ ರಾಜ್ಯಮಟ್ಟದಲ್ಲಿ ಎಂಟನೇ ರ‍್ಯಾಂಕ್
ಕಾರ್ಕಳ: ಈ ಬಾರಿಯ ಹತ್ತನೇ ತರಗತಿ ಫಲಿತಾಂಶದಲ್ಲಿ ಕಾರ್ಕಳದ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಶಾಲೆಯ ಹತ್ತನೇ ತರಗತಿಯ ವಿದ್ಯಾರ್ಥಿನಿ ಪ್ರಕೃತಿ ಪಿ ಗುಡಿಗಾರ್ 625 ಕ್ಕೆ 624 ಅಂಕಗಳನ್ನು ಪಡೆದು ರಾಜ್ಯಕ್ಕೆ ಎರಡನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ.
ಇವರು ಕೆರ್ವಾಶೆ ನಿವಾಸಿ ಪ್ರಕಾಶ್ ಗುಡಿಗಾರ್ ಹಾಗೂ ಶ್ರೀಮತಿ ವಸಂತಿ ದಂಪತಿಗಳ ಪುತ್ರಿ.
ಜೊತೆಗೆ ಇದೇ ಸಂಸ್ಥೆಯ ಆದಿಶ್ರೀ ಎಂ ಆಚಾರ್ಯ 618 ಅಂಕಗಳನ್ನು ಪಡೆದುಕೊಂಡು ರಾಜ್ಯಕ್ಕೆ ಎಂಟನೇ ರ‍್ಯಾಂಕ್ ಪಡೆದುಕೊಂಡಿದ್ದಾರೆ. ಈಕೆ ಪರಪ್ಪು ನಿವಾಸಿ ತ್ಯಾಗರಾಜ್ ಎಂ ಹಾಗೂ ಶ್ರೀಮತಿ ಶಶಿರೇಖಾ ಎಚ್ ಎಂ ದಂಪತಿಗಳ ಪುತ್ರಿಯಾಗಿದ್ದಾಳೆ.
ಸಾಧಕರನ್ನು ಸಂಸ್ಥೆಯ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರು ಅಭಿನಂದಿಸಿದ್ದಾರೆ.
2. ADISHREE M ACHARYA, 618, 98.88% (1)1. PRAKRUTHI P GUDIGAR, 624, 99.84% (1)
ಜ್ಞಾನಸುಧಾ ವಿದ್ಯಾರ್ಥಿನಿ ಸ್ವಸ್ತಿ ಕಾಮತ್ ರಾಜ್ಯಕ್ಕೆ ಟಾಪರ್
ಕಾರ್ಕಳ: ರಾಜ್ಯದಲ್ಲಿ 2024-25 ಶೈಕ್ಷಣಿಕ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳ ಜ್ಞಾನಸುಧಾ ವಿದ್ಯಾರ್ಥಿನಿ ಸ್ವಸ್ತಿ ಕಾಮತ್ 625ಕ್ಕೆ 625 ಅಂಕಗಳಿಸುವ ಮೂಲಕ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ರಾಜ್ಯದಲ್ಲಿ22 ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆದಿದ್ದು, ಅದರಲ್ಲಿ ಸ್ಬಸ್ತಿ ಕಾಮತ್ ಒಬ್ಬಳಾಗಿದ್ದಾರೆ. ಇವರು ಪಳ್ಳಿ ಕಣಜಾರು ಗ್ರಾಮದ ಜನಾರ್ದನ್ ಕಾಮತ್, ಶಾಂತಿ ಕಾಮತ್ ದಂಪತಿ ಪುತ್ರಿ. ತಂದೆಯ ಹುಟ್ಟುಹಬ್ಬದ ದಿನದಂದೆ ಪುತ್ರಿ ಸ್ವಸ್ತಿ ಕಾಮತ್ ಶೈಕ್ಷಣಿಕ ಸಾಧನೆಯ ಉಡುಗೊರೆ ನೀಡಿದ್ದಾರೆ.
ಬಾಗಲಕೋಟೆ:ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿಆರು ವಿಷಯದಲ್ಲಿ ಫೇಲ್ ಆದ ಪುತ್ರನಿಗೆ ಪೋಷಕರು ಕೇಕ್ ತಿನ್ನಿಸಿ ಆತ್ಮಸ್ಥೈರ್ಯ ತುಂಬಿದ್ದಾರೆ.
ಪರೀಕ್ಷೆಯಲ್ಲಿ ಫೇಲ್ ಆದರೂ ಆತ್ಮಸ್ಥೈರ್ಯ ಕುಗ್ಗಬಾರದು ಎಂಬ ಎಂಬ ಕಾರಣಕ್ಕೆ ತಂದೆ, ತಾಯಿ ಸಹೋದರ, ಸಹೋದರಿ, ಅಜ್ಜಿ ಹಾಗೂ ಕುಟುಂಬವರು ಕೇಕ್ ತಿನ್ನಿಸಿದ್ದಾರೆ.
ಬಸವೇಶ್ವರ ಹೈಸ್ಕೂಲ್‌ನಲ್ಲಿ ಆಂಗ್ಲ ಮಾಧ್ಯಮದಲ್ಲಿ 10ನೇ ತರಗತಿ ಓದಿದ್ದ ಅಭಿಷೇಕ್ ಯಲ್ಲಪ್ಪ ಚೊಳಚಗುಡ್ಡ 625ಕ್ಕೆ 200 ಅಂಕ ಪಡೆದು ಫೇಲ್ ಆಗಿದ್ದ.
6ಕ್ಕೆ 6 ವಿಷಯಗಳಲ್ಲಿ ಫೇಲ್ ಆದ ಹಿನ್ನೆಲೆಯಲ್ಲಿ ನವನಗರದಲ್ಲಿರುವ ನಿವಾಸದಲ್ಲಿ ಅಭಿಷೇಕ್ ಬೇಸರದಲ್ಲಿದ್ದ. ಬೇಸರದಲ್ಲಿದ್ದ ಅಭಿಷೇಕ್‌ಗೆ ಆತ್ಮಸ್ಥೈರ್ಯ ತುಂಬಲು ಅಚ್ಚರಿ ಎಂಬಂತೆ ಪೋಷಕರು ಕೇಕ್ ತಿನ್ನಿಸಿ ಸಿಹಿ ಮುತ್ತು ನೀಡಿ ಸಮಾಧಾನ ಮಾಡಿದ್ದಾರೆ. ಪರೀಕ್ಷೆ ಒಂದೇ ಜೀವನವಲ್ಲ ಮರಳಿ ಪ್ರಯತ್ನ ಮಾಡು ಎಂದು ಹೆಗಲ ಮೇಲೆ ಕೈ ಇಟ್ಟು ತಂದೆ ಧೈರ್ಯ ತುಂಬಿದ್ದಾರೆ.
15 ತಿಂಗಳ ಮಗುವಾಗಿದ್ದಾಗ ಎರಡು ಪಾದ ಸುಟ್ಟು ಹೋಗಿದ್ದರಿಂದ ಅಭಿಷೇಕ್ ನೆನಪಿನ ಶಕ್ತಿಯನ್ನು ಕಳೆದುಕೊಂಡಿದ್ದಾನೆ. ಇದರಿಂದಾಗಿ ಉತ್ತರ ನೆನಪಿಟ್ಟುಕೊಂಡು ಬರೆಯಲು ಅಭಿಷೇಕ್‌ಗೆ ಸಾಧ್ಯವಾಗಿಲ್ಲ.
ಫೇಲ್ ಆಗಿದ್ದರಿಂದ ಬಹಳ ಬೇಸರವಾಗಿತ್ತು. ತಂದೆ, ತಾಯಿ ಎಲ್ಲರೂ ಈಗ ಧೈರ್ಯ ತುಂಬಿದ್ದಾರೆ. ಫೇಲ್ ಆದರೂ ಧೈರ್ಯ ತುಂಬಿ ಕೇಕ್ ತಿನ್ನಿಸಿ ಸಂಭ್ರಮಿಸಿದ್ದಾರೆ. ನಾನು ಪರೀಕ್ಷೆಯಲ್ಲಿ ಫೇಲ್ ಆಗಿರಬಹುದು, ಜೀವನದಲ್ಲಿ ಫೇಲ್ ಆಗಲ್ಲ. ಮತ್ತೆ ಪ್ರಯತ್ನ ಮಾಡಿ ಪಾಸ್ ಆಗುತ್ತೇನೆ. ಪರೀಕ್ಷೆಯಲ್ಲಿ ಫೇಲ್ ಆದರೂ ಜೀವನದಲ್ಲಿ ಸಾಧಿಸಿ ತೋರಿಸುತ್ತೇನೆ ಎಂದು ಅಭಿಷೇಕ್ ಹೇಳಿದ್ದಾನೆ.
ಕ್ರಿಯೇಟಿವ್ ಸಂಸ್ಥೆಯ 9 ವಿದ್ಯಾರ್ಥಿಗಳು NDA&NA ಪರೀಕ್ಷೆಯಲ್ಲಿ ಅರ್ಹತೆ
ಕೇಂದ್ರ ಲೋಕಸೇವಾ ಆಯೋಗ (UPSC) ನಡೆಸುವ NDA&NA ಅರ್ಹತಾ ಪರೀಕ್ಷೆಯಲ್ಲಿ ಕ್ರಿಯೇಟಿವ್ ಸಂಸ್ಥೆಯ ಒಂಬತ್ತು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳಾದ ಟಿ. ಪ್ರದೀಪ್, ಸಾಚಿ ಶಿವಕುಮಾರ್ ಕಡಿ., ಸಮೃದ್ದ್ ಕೆ., ಚೇತನ್ ಗೌಡ ಎನ್. ಎಸ್., ತ್ರಿಶ್ಲಾ ಗಾಂಧಿ, ತನಿಷಾ, ಸಂಗೀತಾ ಬಿ. ಎಮ್., ಮೊನಿಷಾ ಡಿ. ಮತ್ತು ಅಭಿಷೇಕ್ ಜೊಯಲ್ ಜಿ. ಯು. ಎಪ್ರಿಲ್ 13ರಂದು ನಡೆದ ಎನ್ ಡಿ ಎ ಲಿಖಿತ ಪರೀಕ್ಷೆಯಲ್ಲಿ ತೇರ್ಗಡೆಯಾಗುವ ಮೂಲಕ ಮುಂದಿನ ಹಂತದಲ್ಲಿ ನಡೆಯುವ ಸರ್ವಿಸ್ ಸೆಲೆಕ್ಷನ್ ಬೋರ್ಡ್(SSB) ಸುತ್ತಿಗೆ ಅರ್ಹತೆ ಪಡೆದಿದ್ದಾರೆ.
ಪುಣೆಯ ಖಡಕ್ ವಾಸ್ಲಾದಲ್ಲಿರುವ NDA&NA ತರಬೇತಿ ಸಂಸ್ಥೆಯಲ್ಲಿ ಬಿ.ಟೆಕ್ ಅಥವಾ ಬಿ.ಎಸ್ಸಿ ಪದವಿಗೆ ಸೇರ ಬಯಸುವ ವಿದ್ಯಾರ್ಥಿಗಳಿಗಾಗಿ ನಡೆಯುವ NDA&NAಪರೀಕ್ಷೆ ಬಲು ಕಠಿಣ ಪರೀಕ್ಷೆ ಯಾಗಿದ್ದು ಪರೀಕ್ಷೆಗೆ ಕುಳಿತ 6 ಲಕ್ಷ ವಿದ್ಯಾರ್ಥಿಗಳಲ್ಲಿ 7800 ವಿದ್ಯಾರ್ಥಿ ಎಸ್. ಎಸ್. ಬಿ ಸುತ್ತಿಗೆ ತೇರ್ಗಡೆಯಾಗಿದ್ದಾರೆ.
900 ಅಂಕಗಳಿಗೆ ನಡೆಯುವ ಈ ಪರೀಕ್ಷೆಯಲ್ಲಿ 300 ಅಂಕಗಳಿಗೆ ಗಣಿತದ ಪ್ರಶ್ನೆಗಳೇ ಬರುವುದು ವಿದ್ಯಾರ್ಥಿಗಳಿಗಿರುವ ಬಹುದೊಡ್ಡ ಸವಾಲು. ಕ್ರಿಯೇಟಿವ್ ಸಂಸ್ಥೆಯ ನಿರಂತರ ಬೋಧನೆ ಹಾಗು NDA&NA ಗಾಗಿ ನಡೆಯುವ ವಿಶೇಷ ತರಬೇತಿ ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣವಾಗಿದೆ.
NDA&NAಪರೀಕ್ಷೆಯಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳನ್ನು ಸಂಸ್ಥೆಯ ಸಂಸ್ಥಾಪಕರು, ಪ್ರಾಂಶುಪಾಲರು, NDAಪರೀಕ್ಷೆಯ ಸಂಯೋಜಕರಾದ ಸುಮಂತ್ ದಾಮ್ಲೆ, ರಕ್ಷಿತ್ ಬಿ ಎಸ್ ಮತ್ತು ಶರತ್ ಅಭಿನಂದಿಸಿದ್ದಾರೆ.
T PRADEEPTHANISHASANGEETHA B MTRISHLA GANDHICHETHAN GOWDA N SSAMRUDDH KSACHI SHIVKUMAR KADIMONISHA DABHISHEKJOEL GANGADHAR ULLIKASHI
ಮರಾಠ ಸಮಾಜದ ಸಂಸ್ಕಾರದ ಸಂಸ್ಕೃತಿ:ಆಡಳಿತ ಮೊಕ್ತೆಸರ ಗಿರೀಶ್ ರಾವ್ ನೇತೃತ್ವದಲ್ಲಿ 50 ವಟುಗಳಿಗೆ ಸಾಮೂಹಿಕ ಬ್ರಹ್ಮೋಪದೇಶ.
ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಆಡಳಿತ ಮಂಡಳಿ ಹಾಗೂ ಬ್ರಹ್ಮೋಪದೇಶ ಸಮಿತಿಯ ವತಿಯಿಂದ ದಿನಾಂಕ 04.05.2025 ರ ಭಾನುವಾರ ಮರಾಠ ವಟು ಸಾಮೂಹಿಕ ಬ್ರಹ್ಮೋಪದೇಶ ಶ್ರೀ ಕ್ಷೇತ್ರ ಹಿರಿಯoಗಡಿ ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಜರಗಲಿದೆ.
ಕ್ಷೇತ್ರದ ಆಡಳಿತ ಮೊಕ್ತೇಸರ ಗಿರೀಶ್ ರಾವ್ ಇವರ ನೇತೃತ್ವದಲ್ಲಿ ಸಮಾಜದ ಐವತ್ತಕ್ಕಿಂತ ಹೆಚ್ಚು ವಟುಗಳ ಸಾಮೂಹಿಕ ಬ್ರಹ್ಮೋಪದೇಶ ಜರಗಲಿದ್ದು ಇದರ ಜೊತೆಗೆ ಸಾರ್ವಜನಿಕ ಸತ್ಯನಾರಾಯಣ ಪೂಜೆ ಕೂಡ ಜರಗಲಿದೆ.
ಸುಮಾರು ಒಂದು ಸಾವಿರಕ್ಕಿಂತ ಹೆಚ್ಚು ಭಕ್ತಾಭಿಮಾನಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು. ಮಧ್ಯಾಹ್ನ ಅನ್ನ ಸಂತರ್ಪಣೆ ನಂತರ ಯಕ್ಷಗಾನ ಕಾರ್ಯಕ್ರಮ ನೆರವೇರಲಿದೆ
ಕಾರ್ಕಳ:ಉದ್ಯಮಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ಕಾರಿನೊಳಗೆ ಗುಂಡು ಹಾರಿಸಿಕೊಂಡು ಉದ್ಯಮಿ ಆತ್ಮಹತ್ಯೆಗೆ ಶರಣಾಗಿದ್ದಾರೆ.
ದಿಲೀಪ್ ಎನ್.ಆರ್ ಆತ್ಮಹತ್ಯೆ ಮಾಡಿಕೊಂಡ ವ್ಯಕ್ತಿ. ಕಾರ್ಕಳದ ನಿಟ್ಟೆ ದೂಪದಕಟ್ಟೆ ರಾಜ್ಯ ಹೆದ್ದಾರಿ ಬಳಿ ಘಟನೆ ನಡೆದಿದೆ. ದಿಲೀಪ್ ಮಂಗಳೂರಿನಲ್ಲಿ ಉದ್ಯಮ ನಡೆಸುತ್ತಿದ್ದರು. ಉದ್ಯಮ ನಷ್ಟ ಹಾಗೂ ವಿಪರೀತ ಸಾಲ ಆತ್ಮಹತ್ಯೆಗೆ ಕಾರಣ ಆಗಿರಬಹುದು ಎಂದು ಶಂಕಿಸಲಾಗಿದೆ.
ಕುಟುಂಬದ ಜೊತೆ ಮಂಗಳೂರಿನಲ್ಲಿ ಉದ್ಯಮಿ ವಾಸವಾಗಿದ್ದರು. ಕಳೆದ ತಡರಾತ್ರಿ, ಬೆಳಗಿನ ಜಾವ ಘಟನೆ ನಡೆದಿದೆ. ಕಾರಿನಲ್ಲಿ ಸ್ವೀಟ್ ಬಾಕ್ಸ್ , ರಿವಾಲ್ವರ್ ಪತ್ತೆಯಾಗಿದೆ.
ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮಣಿಪಾಲ ಕೆಎಂಸಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ.
ನನ್ನ ಬಾಲ್ಯದ ಓರಗೆಯ ಗೆಳೆಯರು ಕುಂಟೆಬಿಲ್ಲೆ, ಕ್ರಿಕೆಟ್ ಎಂದು ಕಾಲ ಕಳೆಯುತ್ತಿದ್ದಾಗ ನಾನು ಕಾರ್ಕಳದ ಸರಕಾರಿ ಗ್ರಂಥಾಲಯದಲ್ಲಿ ಮುಖ ಹುದುಗಿಸಿ ಕುಳಿತುಬಿಡುತ್ತಿದ್ದೆ! ಅದಕ್ಕೆ ಕಾರಣ ಆಗ ಗ್ರಂಥಪಾಲಕ ಆಗಿದ್ದ ಗೋವಿಂದರಾಯರ ಪ್ರೀತಿ ಹೊರತು ಬೇರೇನಿಲ್ಲ.
ಅವರು ಕೇವಲ ಗ್ರಂಥಪಾಲಕ ಆಗಿರಲಿಲ್ಲ.
ಲೈಬ್ರರಿಗೆ ಬರುವ ಪ್ರತಿಯೊಬ್ಬ ಓದುಗರ ಪರಿಚಯ ಅವರಿಗಿತ್ತು. ಮಕ್ಕಳು ಬಂದರೆ ತುಂಬಾ ಖುಷಿ. ಹಾಗೆ ನನ್ನ ಬಗ್ಗೆ ಅವರಿಗೆ ವಿಶೇಷ ಅಕ್ಕರೆ. ರಜೆ ಬಂದ ಕೂಡಲೇ ಬೈಸಿಕಲ್ ಏರಿ ಗ್ರಂಥಾಲಯಕ್ಕೆ ಓಡಿಕೊಂಡು ಬರುತ್ತಿದ್ದ ನನಗೆ ಪುಸ್ತಕಗಳ ಪ್ರಪಂಚ ಖುಷಿ ಕೊಡುತ್ತಿತ್ತು. ಅವರು ನನ್ನ ಜೊತೆ ಮಾತಾಡುತ್ತಿದ್ದದ್ದು ನನ್ನ ಮಾತೃಭಾಷೆ ಕೊಂಕಣಿಯಲ್ಲಿ. ಪುಟ್ಟಾ, ನೀನು ತುಂಬಾ ಓದಬೇಕು. ಅದನ್ನು ಓದು, ಈ ಪುಸ್ತಕ ಓದು, ಅದು ಚೆನ್ನಾಗಿದೆ. ಇದು ಚೆನ್ನಾಗಿದೆ ಎಂದು ಅವರು ಒಳ್ಳೆಯ ಪುಸ್ತಕಗಳನ್ನು ಹುಡುಕಿ ತಂದು ನನ್ನ ಮುಂದೆ ಸುರಿಯುತ್ತಿದ್ದರು. ಯಾವುದೇ ಹೊಸ ಪುಸ್ತಕ ಗ್ರಂಥಾಲಯಕ್ಕೆ ಬಂದರೆ ಮೊದಲು ನೀನು ಓದು ಪುಟ್ಟ ಎಂಬ ಕಕ್ಕುಲಾತಿ! ಅವರಿಗೆ ಎಲ್ಲ ಓದುಗರ ಅಭಿರುಚಿ ಗೊತ್ತಿತ್ತು. ಯಾವ ಪುಸ್ತಕ ಯಾವ ಶೆಲ್ಫನಲ್ಲಿ ಇದೆ ಎಂದು ಸರಿಯಾಗಿ ಗೊತ್ತಿರುತ್ತಿತ್ತು.
ಅವರ ಪುಸ್ತಕ ಪ್ರೀತಿ ಅದ್ಭುತ!
ಪುಟ್ಟ, ನೀನು ಅನಕೃ ಅವರ ನಾಟ್ಯರಾಣಿ ಶಾಂತಲಾ ಕಾದಂಬರಿ ಓದಬೇಕು ಮತ್ತು ಅದೇ ಕಥೆ ಇಟ್ಟುಕೊಂಡು ನಾಟಕ ಬರೆಯಬೇಕು. ನಾನು ನಾಟಕ ನೋಡಲು ಖಂಡಿತ ಬರುತ್ತೇನೆ ಎಂಬುದು ಅವರು ನನಗೆ ನೀಡುತ್ತಿದ್ದ ಸ್ಫೂರ್ತಿ! ದೇವುಡು ಅವರು ಬರೆದ ವಿಶ್ವಾಮಿತ್ರನ ಬಗ್ಗೆ ಒಳ್ಳೆಯ ಕಾದಂಬರಿ ಇದೆ. ನೀನು ಓದಲೇ ಬೇಕು ಅನ್ನುವುದು ಅವರ ಒತ್ತಾಯ.
ನಿನ್ನ ಬರವಣಿಗೆ ಚೆನ್ನಾಗಿದೆ. ನೀನು ಪತ್ರಿಕೆಗೆ ಬರೆಯಬೇಕು ಎಂದು ನನ್ನಿಂದ ಹತ್ತಾರು ಲೇಖನಗಳನ್ನು ಬರೆಸಿ ಪತ್ರಿಕೆಗೆ ಅವರೇ ಕಳುಹಿಸುತ್ತದ್ದರು. ನನ್ನ ಹಲವು ಲೇಖನಗಳು ಉದಯವಾಣಿ, ತುಷಾರ, ಮಯೂರ ಪತ್ರಿಕೆಗಳಲ್ಲಿ ಪ್ರಕಟವಾದಾಗಲೆಲ್ಲ ಅವರು ತುಂಬಾ ಖುಷಿ ಪಡುತ್ತಿದ್ದರು. ಆಗ ಲೈಬ್ರರಿ ಕಾರ್ಡ್ ಮಾಡಲು ನಮ್ಮ ಬಳಿ ದುಡ್ಡಿರಲಿಲ್ಲ. ಆಗೆಲ್ಲ ಒಳ್ಳೆಯ ಪುಸ್ತಕ ಗುಟ್ಟಾಗಿ ನನಗೆ ಕೊಟ್ಟು ಪೂರ್ತಿ ಓದಿ ತಂದುಕೊಡು ಎಂದು ನನಗೆ ಹೇಳುತ್ತಿದ್ದರು. ಕಾರಂತರ, ಕುವೆಂಪು ಅವರ ಹಲವು ಕಾದಂಬರಿಗಳನ್ನು ನನ್ನಿಂದ
ಓದಿಸಿದವರು ಗೋವಿಂದ ಮಾಮ್ ಅವರೇ. ಭೈರಪ್ಪ ಅವರ ಹೆಚ್ಚಿನ ಕಾದಂಬರಿಗಳನ್ನು ನನಗೆ ಕೊಟ್ಟು ನನಗೆ ಭೈರಪ್ಪನ ಮೇಲೆ ಅಭಿಮಾನ ಮೂಡಿಸಿದವರು ಅವರೇ. ನನಗೆ ಆಶ್ಚರ್ಯ ಅಂದರೆ ಅವರು ನನಗೆ ಕೊಡುವ ಎಲ್ಲ ಪುಸ್ತಕಗಳನ್ನು ಅವರು ಮೊದಲಾಗಿ ಓದಿರುತ್ತಿದ್ದರು! ನನಗೆ ಬೀಚಿ ಮತ್ತು ರವಿ ಬೆಳಗೆರೆ ಅವರ ಮೇಲೆ ಅಭಿಮಾನ ಮೂಡಲು ಕಾರಣ ಅವರೇ.
ತಿಂಗಳಿಗೊಮ್ಮೆಗ್ರಂಥಾಲಯದಲ್ಲಿ ಪುಟ್ಟ ಮಕ್ಕಳ ಕಲರವ.
ಗ್ರಂಥಾಲಯದಲ್ಲಿ ಆಗ ತುಂಬಾ ಮಕ್ಕಳು ರಜೆಯಲ್ಲಿ ಓದಲು ಬರುತ್ತಿದ್ದರು. ಅವರಿಗೆ ಚಂದಮಾಮ, ಬೊಂಬೆಮನೆ, ಪಂಚತಂತ್ರದ ಕಥೆಗಳು, ಕಾಮಿಕ್ಸ್, ಕಪೀಶ, ಚಿಂಟು ಮೊದಲಾದ ಪುಸ್ತಕಗಳನ್ನು ತಂದುಕೊಟ್ಟು ಓದಲೇಬೇಕು ಎಂದು ಆಗ್ರಹಿಸುತ್ತಿದ್ದರು. ತಿಂಗಳಿಗೊಮ್ಮೆ ಆ ಮಕ್ಕಳನ್ನು ಒಟ್ಟು ಸೇರಿಸಿ ಅವರಿಗೆ ಹಲವು ಸ್ಪರ್ಧೆಗಳನ್ನು ಮಾಡಿ ಪುಸ್ತಕಗಳ ಉಡುಗೊರೆ ಕೊಡುವುದನ್ನು ಖುಷಿಯಿಂದ ಮಾಡುತ್ತಿದ್ದರು. ಗ್ರಂಥಾಲಯಕ್ಕೆ ಹೆಚ್ಚು ಓದುಗರನ್ನು ಸೆಳೆಯಲು ಅವರು ಹಲವು ರೀತಿಯ ಪ್ರಯತ್ನಗಳನ್ನು ಮಾಡಿದ್ದರು. ಕ್ರಿಕೆಟ್ ಪಂದ್ಯಗಳಿದ್ದಾಗ ಆ ಕಾರಣಕ್ಕೆ ಓದುಗರು ಕಡಿಮೆ ಆಗಬಾರದು ಎಂಬ ಕಾರಣಕ್ಕೆ ಸಣ್ಣದಾಗಿ ರೇಡಿಯೋ ಕಾಮೆಂಟರಿ ವ್ಯವಸ್ಥೆ ಮಾಡಿದ್ದರು. ಅದು ಓದುಗರ ಏಕಾಗ್ರತೆಗೆ ತೊಂದರೆ ಕೊಡುತ್ತಾ ಇದೆ ಎಂದು ಉದಯವಾಣಿ ಓದುಗರ ಕಾಲಮಿನಲ್ಲಿ ಯಾರೋ ಅನಾಮಧೇಯ ಪತ್ರ ಬರೆದಾಗ ನೊಂದುಕೊಂಡರು.
ಕಾರ್ಕಳದ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಬೇಕು ಎಂದು ಕಾರ್ಡ್ ಚಳುವಳಿ.
ದಿನವೂ ನೂರಾರು ಓದುಗರು ಬರುತ್ತಿದ್ದ ಕಾರ್ಕಳದ ಗ್ರಂಥಾಲಯಕ್ಕೆ ಒಂದು ಸ್ವಂತ ಕಟ್ಟಡ ಬೇಕು ಎನ್ನುವುದು ಅವರ ಆಸೆ. ಆದರೆ ಅವರ ಮಾತುಗಳನ್ನು ಇಲಾಖೆಯು ಕಿವಿಗೆ ಹಾಕಿಕೊಳ್ಳದೆ ಹೋದಾಗ ಅವರು ಓದುಗರ ಮೂಲಕ ಸರಕಾರಕ್ಕೆ ಕಾರ್ಡ್ ಚಳುವಳಿಗೆ ಪ್ರೇರಣೆ ಕೊಟ್ಟರು. ಅದು ಆಗ ಕಾರ್ಕಳದ ಶಾಸಕರಾಗಿ, ಮುಖ್ಯಮಂತ್ರಿ ಕೂಡ ಆಗಿದ್ದ ವೀರಪ್ಪ ಮೊಯ್ಲಿಯವರ ಸಿಟ್ಟಿಗೆ ಕಾರಣ ಆಯಿತು. ಆದರೆ ಗೋವಿಂದ ಮಾಮ್ ಹಿಡಿದ ಹಟ ಬಿಡುವವರಲ್ಲ.ಕಾರ್ಕಳದ ಗಾಂಧಿ ಮೈದಾನದ ಎದುರು ಇರುವ ವಿಸ್ತಾರವಾದ ಸ್ವಂತ ಕಟ್ಟಡದಲ್ಲಿ ಗ್ರಂಥಾಲಯವು ಉದ್ಘಾಟನೆ ಆದಾಗ ಗೋವಿಂದ ಮಾಮ್ ತುಂಬಾ ಖುಷಿಪಟ್ಟರು. ಆ ದಿನ ವೀರಪ್ಪ ಮೊಯ್ಲಿ ಅವರು ನೂತನ ಕಟ್ಟಡ ಉದ್ಘಾಟನೆ ಮಾಡಿ ಗೋವಿಂದರಾಯರ ಬೆನ್ನು ತಟ್ಟಿ ಹೋದರು. ಆನಂತರ ವೀರಪ್ಪ ಮೊಯ್ಲಿ ಮತ್ತು ಗೋವಿಂದ ಮಾಮ್ ಅವರ ಗೆಳೆತನವು ಮತ್ತೆ ಗಟ್ಟಿಯಾಯ್ತು.
ಕಾರ್ಕಳದ ಮೊದಲ ಚೆಸ್ ಕ್ಲಬ್.
ಕಾರ್ಕಳದಲ್ಲಿ ಆಗ ಹಲವಾರು ಚೆಸ್ ಆಟಗಾರರು ಇದ್ದರು. ಆದರೆ ಅವರಿಗೆ ಜೊತೆ ಸೇರಿ ಆಡಲು ಸ್ಥಳ ಇರಲಿಲ್ಲ. ನಮ್ಮ ಗೋವಿಂದ ಮಾಮ್ ಒಳ್ಳೆಯ ಚೆಸ್ ಆಟಗಾರ ಆಗಿದ್ದರು. ಅವರು ಎಲ್ಲ ಚೆಸ್ ಆಟಗಾರರನ್ನು ಒಂದೆಡೆ ಸೇರಿಸಿ ಕಾರ್ಕಳದ ಮೊದಲ ಚೆಸ್ ಕ್ಲಬ್ ಸ್ಥಾಪನೆ ಮಾಡಿದರು. ಕಾರ್ಕಳದಲ್ಲಿ ಹಲವು ಚೆಸ್ ಪಂದ್ಯಾಟಗಳನ್ನು ಸಂಘಟನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಗೋವಿಂದ ಮಾಮ್ ಅವರಿಗೆ ಕಾರ್ಕಳದ ತುಂಬೆಲ್ಲ ಗೆಳೆಯರು. ಅವರು ತುಂಬಾ ಜೋವಿಯಲ್ ಮನುಷ್ಯ. ಗೆಳೆತನಕ್ಕೆ ಅವರು ತಕ್ಷಣ ಸ್ಪಂದಿಸುತ್ತಿದ್ದರು. ಅಷ್ಟೇ ಸಿಟ್ಟು ಅವರಿಗೆ. ಆದರೆ ಆ ಸಿಟ್ಟು, ಹೋರಾಟದ ಮನೋಭಾವ ಯಾವಾಗಲೂ ಉತ್ತಮ ಫಲಿತಾಂಶವನ್ನು ತಂದು ಕೊಡುತ್ತಿದ್ದವು. ಆದರೆ ಗ್ರಂಥಾಲಯದ ಒಳಗೆ ಅವರು ಸಿಟ್ಟು ತೋರಿಸಿದ್ದನ್ನು ನಾನು ಎಂದಿಗೂ ನೋಡಿಲ್ಲ. ವೀರಪ್ಪ ಮೊಯ್ಲಿ ಅವರು ಗೋವಿಂದ ಮಾಮ್ ಅವರ ನಿಡುಗಾಲದ ಗೆಳೆಯರು. ಮೊಯ್ಲಿಯವರು ಕಾರ್ಕಳಕ್ಕೆ ಬಂದಾಗಲೆಲ್ಲ ಗೋವಿಂದ ಮಾಮ್ ಅವರ ಆರೋಗ್ಯ ವಿಚಾರಣೆ ಮಾಡುತ್ತಿದ್ದರು. ಭೇಟಿ ಆದಾಗ ಉಭಯ ಕುಶಲೋಪರಿ, ಜೋರು ನಗು ಇದ್ದೇ ಇರುತ್ತಿತ್ತು.
ಇತ್ತೀಚೆಗೆ ಹಲವು ಬಾರಿ ನನಗೆ ದೊರೆತಾಗಲೂ ಪುಟ್ಟ ಹೇಗಿದ್ದೀ ಎಂದೇ ಅವರು ಮಾತು ಆರಂಭ ಮಾಡುತ್ತಿದ್ದರು. ಇದೆಲ್ಲದರ ಜೊತೆಗೆ ಅವರು ನನಗೆ ಮತ್ತು ನನ್ನಂತಹ ಹಲವರ ಬಾಲ್ಯದ ಮತ್ತು ಯೌವ್ವನದ ಓದುವಿಕೆಗೆ ಮಾಡಿದ ಉಪಕಾರವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ನಾನು ಆಗ ಓದಿದ ಪುಸ್ತಕಗಳೇ ಇಂದು ನನ್ನ ಭಾಷಣ, ತರಬೇತಿಗಳ ಮೂಲದ್ರವ್ಯ ಆಗಿದೆ ಎಂದು ನೆನಪು ಮಾಡಿಕೊಂಡಾಗ ಗೋವಿಂದ ಮಾಮ್ ಬಗ್ಗೆ ಹೃದಯ ಭಾರವಾಗುತ್ತದೆ.