ನನ್ನ ಆರಂಭದ ಓದಿನ ಸ್ಫೂರ್ತಿ ಗೋವಿಂದ ಮಾಮ್ ನಿರ್ಗಮನ.
ಅವರ ಆತ್ಮಕ್ಕೆ ದೇವರು ಶಾಂತಿ ನೀಡಲಿ.
ನನ್ನ ಬಾಲ್ಯದ ಓರಗೆಯ ಗೆಳೆಯರು ಕುಂಟೆಬಿಲ್ಲೆ, ಕ್ರಿಕೆಟ್ ಎಂದು ಕಾಲ ಕಳೆಯುತ್ತಿದ್ದಾಗ ನಾನು ಕಾರ್ಕಳದ ಸರಕಾರಿ ಗ್ರಂಥಾಲಯದಲ್ಲಿ ಮುಖ ಹುದುಗಿಸಿ ಕುಳಿತುಬಿಡುತ್ತಿದ್ದೆ! ಅದಕ್ಕೆ ಕಾರಣ ಆಗ ಗ್ರಂಥಪಾಲಕ ಆಗಿದ್ದ ಗೋವಿಂದರಾಯರ ಪ್ರೀತಿ ಹೊರತು ಬೇರೇನಿಲ್ಲ.
ಅವರು ಕೇವಲ ಗ್ರಂಥಪಾಲಕ ಆಗಿರಲಿಲ್ಲ.
ಲೈಬ್ರರಿಗೆ ಬರುವ ಪ್ರತಿಯೊಬ್ಬ ಓದುಗರ ಪರಿಚಯ ಅವರಿಗಿತ್ತು. ಮಕ್ಕಳು ಬಂದರೆ ತುಂಬಾ ಖುಷಿ. ಹಾಗೆ ನನ್ನ ಬಗ್ಗೆ ಅವರಿಗೆ ವಿಶೇಷ ಅಕ್ಕರೆ. ರಜೆ ಬಂದ ಕೂಡಲೇ ಬೈಸಿಕಲ್ ಏರಿ ಗ್ರಂಥಾಲಯಕ್ಕೆ ಓಡಿಕೊಂಡು ಬರುತ್ತಿದ್ದ ನನಗೆ ಪುಸ್ತಕಗಳ ಪ್ರಪಂಚ ಖುಷಿ ಕೊಡುತ್ತಿತ್ತು. ಅವರು ನನ್ನ ಜೊತೆ ಮಾತಾಡುತ್ತಿದ್ದದ್ದು ನನ್ನ ಮಾತೃಭಾಷೆ ಕೊಂಕಣಿಯಲ್ಲಿ. ಪುಟ್ಟಾ, ನೀನು ತುಂಬಾ ಓದಬೇಕು. ಅದನ್ನು ಓದು, ಈ ಪುಸ್ತಕ ಓದು, ಅದು ಚೆನ್ನಾಗಿದೆ. ಇದು ಚೆನ್ನಾಗಿದೆ ಎಂದು ಅವರು ಒಳ್ಳೆಯ ಪುಸ್ತಕಗಳನ್ನು ಹುಡುಕಿ ತಂದು ನನ್ನ ಮುಂದೆ ಸುರಿಯುತ್ತಿದ್ದರು. ಯಾವುದೇ ಹೊಸ ಪುಸ್ತಕ ಗ್ರಂಥಾಲಯಕ್ಕೆ ಬಂದರೆ ಮೊದಲು ನೀನು ಓದು ಪುಟ್ಟ ಎಂಬ ಕಕ್ಕುಲಾತಿ! ಅವರಿಗೆ ಎಲ್ಲ ಓದುಗರ ಅಭಿರುಚಿ ಗೊತ್ತಿತ್ತು. ಯಾವ ಪುಸ್ತಕ ಯಾವ ಶೆಲ್ಫನಲ್ಲಿ ಇದೆ ಎಂದು ಸರಿಯಾಗಿ ಗೊತ್ತಿರುತ್ತಿತ್ತು.
ಅವರ ಪುಸ್ತಕ ಪ್ರೀತಿ ಅದ್ಭುತ!
ಪುಟ್ಟ, ನೀನು ಅನಕೃ ಅವರ ನಾಟ್ಯರಾಣಿ ಶಾಂತಲಾ ಕಾದಂಬರಿ ಓದಬೇಕು ಮತ್ತು ಅದೇ ಕಥೆ ಇಟ್ಟುಕೊಂಡು ನಾಟಕ ಬರೆಯಬೇಕು. ನಾನು ನಾಟಕ ನೋಡಲು ಖಂಡಿತ ಬರುತ್ತೇನೆ ಎಂಬುದು ಅವರು ನನಗೆ ನೀಡುತ್ತಿದ್ದ ಸ್ಫೂರ್ತಿ! ದೇವುಡು ಅವರು ಬರೆದ ವಿಶ್ವಾಮಿತ್ರನ ಬಗ್ಗೆ ಒಳ್ಳೆಯ ಕಾದಂಬರಿ ಇದೆ. ನೀನು ಓದಲೇ ಬೇಕು ಅನ್ನುವುದು ಅವರ ಒತ್ತಾಯ.
ನಿನ್ನ ಬರವಣಿಗೆ ಚೆನ್ನಾಗಿದೆ. ನೀನು ಪತ್ರಿಕೆಗೆ ಬರೆಯಬೇಕು ಎಂದು ನನ್ನಿಂದ ಹತ್ತಾರು ಲೇಖನಗಳನ್ನು ಬರೆಸಿ ಪತ್ರಿಕೆಗೆ ಅವರೇ ಕಳುಹಿಸುತ್ತದ್ದರು. ನನ್ನ ಹಲವು ಲೇಖನಗಳು ಉದಯವಾಣಿ, ತುಷಾರ, ಮಯೂರ ಪತ್ರಿಕೆಗಳಲ್ಲಿ ಪ್ರಕಟವಾದಾಗಲೆಲ್ಲ ಅವರು ತುಂಬಾ ಖುಷಿ ಪಡುತ್ತಿದ್ದರು. ಆಗ ಲೈಬ್ರರಿ ಕಾರ್ಡ್ ಮಾಡಲು ನಮ್ಮ ಬಳಿ ದುಡ್ಡಿರಲಿಲ್ಲ. ಆಗೆಲ್ಲ ಒಳ್ಳೆಯ ಪುಸ್ತಕ ಗುಟ್ಟಾಗಿ ನನಗೆ ಕೊಟ್ಟು ಪೂರ್ತಿ ಓದಿ ತಂದುಕೊಡು ಎಂದು ನನಗೆ ಹೇಳುತ್ತಿದ್ದರು. ಕಾರಂತರ, ಕುವೆಂಪು ಅವರ ಹಲವು ಕಾದಂಬರಿಗಳನ್ನು ನನ್ನಿಂದ
ಓದಿಸಿದವರು ಗೋವಿಂದ ಮಾಮ್ ಅವರೇ. ಭೈರಪ್ಪ ಅವರ ಹೆಚ್ಚಿನ ಕಾದಂಬರಿಗಳನ್ನು ನನಗೆ ಕೊಟ್ಟು ನನಗೆ ಭೈರಪ್ಪನ ಮೇಲೆ ಅಭಿಮಾನ ಮೂಡಿಸಿದವರು ಅವರೇ. ನನಗೆ ಆಶ್ಚರ್ಯ ಅಂದರೆ ಅವರು ನನಗೆ ಕೊಡುವ ಎಲ್ಲ ಪುಸ್ತಕಗಳನ್ನು ಅವರು ಮೊದಲಾಗಿ ಓದಿರುತ್ತಿದ್ದರು! ನನಗೆ ಬೀಚಿ ಮತ್ತು ರವಿ ಬೆಳಗೆರೆ ಅವರ ಮೇಲೆ ಅಭಿಮಾನ ಮೂಡಲು ಕಾರಣ ಅವರೇ.
ತಿಂಗಳಿಗೊಮ್ಮೆಗ್ರಂಥಾಲಯದಲ್ಲಿ ಪುಟ್ಟ ಮಕ್ಕಳ ಕಲರವ.
ಗ್ರಂಥಾಲಯದಲ್ಲಿ ಆಗ ತುಂಬಾ ಮಕ್ಕಳು ರಜೆಯಲ್ಲಿ ಓದಲು ಬರುತ್ತಿದ್ದರು. ಅವರಿಗೆ ಚಂದಮಾಮ, ಬೊಂಬೆಮನೆ, ಪಂಚತಂತ್ರದ ಕಥೆಗಳು, ಕಾಮಿಕ್ಸ್, ಕಪೀಶ, ಚಿಂಟು ಮೊದಲಾದ ಪುಸ್ತಕಗಳನ್ನು ತಂದುಕೊಟ್ಟು ಓದಲೇಬೇಕು ಎಂದು ಆಗ್ರಹಿಸುತ್ತಿದ್ದರು. ತಿಂಗಳಿಗೊಮ್ಮೆ ಆ ಮಕ್ಕಳನ್ನು ಒಟ್ಟು ಸೇರಿಸಿ ಅವರಿಗೆ ಹಲವು ಸ್ಪರ್ಧೆಗಳನ್ನು ಮಾಡಿ ಪುಸ್ತಕಗಳ ಉಡುಗೊರೆ ಕೊಡುವುದನ್ನು ಖುಷಿಯಿಂದ ಮಾಡುತ್ತಿದ್ದರು. ಗ್ರಂಥಾಲಯಕ್ಕೆ ಹೆಚ್ಚು ಓದುಗರನ್ನು ಸೆಳೆಯಲು ಅವರು ಹಲವು ರೀತಿಯ ಪ್ರಯತ್ನಗಳನ್ನು ಮಾಡಿದ್ದರು. ಕ್ರಿಕೆಟ್ ಪಂದ್ಯಗಳಿದ್ದಾಗ ಆ ಕಾರಣಕ್ಕೆ ಓದುಗರು ಕಡಿಮೆ ಆಗಬಾರದು ಎಂಬ ಕಾರಣಕ್ಕೆ ಸಣ್ಣದಾಗಿ ರೇಡಿಯೋ ಕಾಮೆಂಟರಿ ವ್ಯವಸ್ಥೆ ಮಾಡಿದ್ದರು. ಅದು ಓದುಗರ ಏಕಾಗ್ರತೆಗೆ ತೊಂದರೆ ಕೊಡುತ್ತಾ ಇದೆ ಎಂದು ಉದಯವಾಣಿ ಓದುಗರ ಕಾಲಮಿನಲ್ಲಿ ಯಾರೋ ಅನಾಮಧೇಯ ಪತ್ರ ಬರೆದಾಗ ನೊಂದುಕೊಂಡರು.
ಕಾರ್ಕಳದ ಗ್ರಂಥಾಲಯಕ್ಕೆ ಸ್ವಂತ ಕಟ್ಟಡ ಬೇಕು ಎಂದು ಕಾರ್ಡ್ ಚಳುವಳಿ.
ದಿನವೂ ನೂರಾರು ಓದುಗರು ಬರುತ್ತಿದ್ದ ಕಾರ್ಕಳದ ಗ್ರಂಥಾಲಯಕ್ಕೆ ಒಂದು ಸ್ವಂತ ಕಟ್ಟಡ ಬೇಕು ಎನ್ನುವುದು ಅವರ ಆಸೆ. ಆದರೆ ಅವರ ಮಾತುಗಳನ್ನು ಇಲಾಖೆಯು ಕಿವಿಗೆ ಹಾಕಿಕೊಳ್ಳದೆ ಹೋದಾಗ ಅವರು ಓದುಗರ ಮೂಲಕ ಸರಕಾರಕ್ಕೆ ಕಾರ್ಡ್ ಚಳುವಳಿಗೆ ಪ್ರೇರಣೆ ಕೊಟ್ಟರು. ಅದು ಆಗ ಕಾರ್ಕಳದ ಶಾಸಕರಾಗಿ, ಮುಖ್ಯಮಂತ್ರಿ ಕೂಡ ಆಗಿದ್ದ ವೀರಪ್ಪ ಮೊಯ್ಲಿಯವರ ಸಿಟ್ಟಿಗೆ ಕಾರಣ ಆಯಿತು. ಆದರೆ ಗೋವಿಂದ ಮಾಮ್ ಹಿಡಿದ ಹಟ ಬಿಡುವವರಲ್ಲ.ಕಾರ್ಕಳದ ಗಾಂಧಿ ಮೈದಾನದ ಎದುರು ಇರುವ ವಿಸ್ತಾರವಾದ ಸ್ವಂತ ಕಟ್ಟಡದಲ್ಲಿ ಗ್ರಂಥಾಲಯವು ಉದ್ಘಾಟನೆ ಆದಾಗ ಗೋವಿಂದ ಮಾಮ್ ತುಂಬಾ ಖುಷಿಪಟ್ಟರು. ಆ ದಿನ ವೀರಪ್ಪ ಮೊಯ್ಲಿ ಅವರು ನೂತನ ಕಟ್ಟಡ ಉದ್ಘಾಟನೆ ಮಾಡಿ ಗೋವಿಂದರಾಯರ ಬೆನ್ನು ತಟ್ಟಿ ಹೋದರು. ಆನಂತರ ವೀರಪ್ಪ ಮೊಯ್ಲಿ ಮತ್ತು ಗೋವಿಂದ ಮಾಮ್ ಅವರ ಗೆಳೆತನವು ಮತ್ತೆ ಗಟ್ಟಿಯಾಯ್ತು.
ಕಾರ್ಕಳದ ಮೊದಲ ಚೆಸ್ ಕ್ಲಬ್.
ಕಾರ್ಕಳದಲ್ಲಿ ಆಗ ಹಲವಾರು ಚೆಸ್ ಆಟಗಾರರು ಇದ್ದರು. ಆದರೆ ಅವರಿಗೆ ಜೊತೆ ಸೇರಿ ಆಡಲು ಸ್ಥಳ ಇರಲಿಲ್ಲ. ನಮ್ಮ ಗೋವಿಂದ ಮಾಮ್ ಒಳ್ಳೆಯ ಚೆಸ್ ಆಟಗಾರ ಆಗಿದ್ದರು. ಅವರು ಎಲ್ಲ ಚೆಸ್ ಆಟಗಾರರನ್ನು ಒಂದೆಡೆ ಸೇರಿಸಿ ಕಾರ್ಕಳದ ಮೊದಲ ಚೆಸ್ ಕ್ಲಬ್ ಸ್ಥಾಪನೆ ಮಾಡಿದರು. ಕಾರ್ಕಳದಲ್ಲಿ ಹಲವು ಚೆಸ್ ಪಂದ್ಯಾಟಗಳನ್ನು ಸಂಘಟನೆ ಮಾಡಿದ ಕೀರ್ತಿ ಅವರಿಗೆ ಸಲ್ಲುತ್ತದೆ.
ಗೋವಿಂದ ಮಾಮ್ ಅವರಿಗೆ ಕಾರ್ಕಳದ ತುಂಬೆಲ್ಲ ಗೆಳೆಯರು. ಅವರು ತುಂಬಾ ಜೋವಿಯಲ್ ಮನುಷ್ಯ. ಗೆಳೆತನಕ್ಕೆ ಅವರು ತಕ್ಷಣ ಸ್ಪಂದಿಸುತ್ತಿದ್ದರು. ಅಷ್ಟೇ ಸಿಟ್ಟು ಅವರಿಗೆ. ಆದರೆ ಆ ಸಿಟ್ಟು, ಹೋರಾಟದ ಮನೋಭಾವ ಯಾವಾಗಲೂ ಉತ್ತಮ ಫಲಿತಾಂಶವನ್ನು ತಂದು ಕೊಡುತ್ತಿದ್ದವು. ಆದರೆ ಗ್ರಂಥಾಲಯದ ಒಳಗೆ ಅವರು ಸಿಟ್ಟು ತೋರಿಸಿದ್ದನ್ನು ನಾನು ಎಂದಿಗೂ ನೋಡಿಲ್ಲ. ವೀರಪ್ಪ ಮೊಯ್ಲಿ ಅವರು ಗೋವಿಂದ ಮಾಮ್ ಅವರ ನಿಡುಗಾಲದ ಗೆಳೆಯರು. ಮೊಯ್ಲಿಯವರು ಕಾರ್ಕಳಕ್ಕೆ ಬಂದಾಗಲೆಲ್ಲ ಗೋವಿಂದ ಮಾಮ್ ಅವರ ಆರೋಗ್ಯ ವಿಚಾರಣೆ ಮಾಡುತ್ತಿದ್ದರು. ಭೇಟಿ ಆದಾಗ ಉಭಯ ಕುಶಲೋಪರಿ, ಜೋರು ನಗು ಇದ್ದೇ ಇರುತ್ತಿತ್ತು.
ಇತ್ತೀಚೆಗೆ ಹಲವು ಬಾರಿ ನನಗೆ ದೊರೆತಾಗಲೂ ಪುಟ್ಟ ಹೇಗಿದ್ದೀ ಎಂದೇ ಅವರು ಮಾತು ಆರಂಭ ಮಾಡುತ್ತಿದ್ದರು. ಇದೆಲ್ಲದರ ಜೊತೆಗೆ ಅವರು ನನಗೆ ಮತ್ತು ನನ್ನಂತಹ ಹಲವರ ಬಾಲ್ಯದ ಮತ್ತು ಯೌವ್ವನದ ಓದುವಿಕೆಗೆ ಮಾಡಿದ ಉಪಕಾರವನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ. ನಾನು ಆಗ ಓದಿದ ಪುಸ್ತಕಗಳೇ ಇಂದು ನನ್ನ ಭಾಷಣ, ತರಬೇತಿಗಳ ಮೂಲದ್ರವ್ಯ ಆಗಿದೆ ಎಂದು ನೆನಪು ಮಾಡಿಕೊಂಡಾಗ ಗೋವಿಂದ ಮಾಮ್ ಬಗ್ಗೆ ಹೃದಯ ಭಾರವಾಗುತ್ತದೆ.
ಅವರಿಗೆ ನಮ್ಮ ಶ್ರದ್ಧಾಂಜಲಿ.
ರಾಜೇಂದ್ರ ಭಟ್ ಕೆ.