
ರೋಟರಿ ಕ್ಲಬ್ ಕಾರ್ಕಳ ವತಿಯಿಂದ ದೀಪಾವಳಿ ಸಡಗರದಿಂದ ಆಚರಿಸಲಾಯಿತು. ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಆಗಮಿಸಿದ ರಾಜೇಶ್ವರಿ ನ್ಯಾಷನಲ್ ಸ್ಕೂಲ್ ಇದರ ಅಧ್ಯಕ್ಷ ದೇವಿ ಪ್ರಸಾದ್ ಶೆಟ್ಟಿ ಅವರು ಮಾತನಾಡುತ್ತಾ ದೀಪಾವಳಿಯ ಆಚರಣೆಯು ಎಲ್ಲರ ಬಾಳಿನಲ್ಲಿ ಬೆಳಕನ್ನು ನೀಡುವ ಹಬ್ಬವಾಗಿದೆ. ಹಬ್ಬಗಳ ಆಚರಣೆಯ ಮೂಲಕ ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ವರ್ಗಾಯಿಸುವ ಕೆಲಸವಾಗಬೇಕು, ಸಾಂಸ್ಕೃತಿಕ ಜಾಗೃತಿ ಮೂಡಿಸುವುದರ ಜೊತೆಗೆ ಸಾಮಾಜಿಕ ಸಾಮರಸ್ಯವನ್ನು ಜಾಗ್ರತೆಗೊಳಿಸುವ ಕೆಲಸವು ಇಂದಿನ ಕಾಲಘಟ್ಟದಲ್ಲಿ ಅನಿವಾರ್ಯವಾಗಿದೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ರೋಟರಿ ಕ್ಲಬ್ ಕಾರ್ಕಳ ಇದರ ಅಧ್ಯಕ್ಷರಾದ ನವೀನ್ ಚಂದ್ರ ಶೆಟ್ಟಿ ಅವರು ಮಾತನಾಡುತ್ತಾ ರೋಟರಿ ಸಂಸ್ಥೆಯು ತನ್ನ ಸಹ ಸಂಸ್ಥೆಗಳ ಜೊತೆಗೂಡಿ ಮಾಡುವ ದೀಪಾವಳಿಯ ಆಚರಣೆಯು ಹೀಗೆಯೇ ಮುಂದುವರಿಯಲು ಎಲ್ಲರೂ ಪ್ರಯತ್ನಿಸೋಣ ಎಂದರು.
ವೇದಿಕೆಯಲ್ಲಿ ಇಂಟರ್ಯಾಕ್ಟ್ ಕ್ಲಬ್ಬಿನ ಅಧ್ಯಕ್ಷ ಸಂದೇಶ್ ಕುಮಾರ್, ಎಂ.ಪಿ.ಎಂ ಕಾಲೇಜಿನ ಇಂಟರ್ಯಾಕ್ಟ್ ಅಧ್ಯಕ್ಷೆ ಸುವೀಕ್ಷಾ ಪೂಜಾರಿ, ಆರ್‌ಸಿಸಿ ಕ್ಲಬ್ & ಕಾಳಿಕಾಂಬ ಅಧ್ಯಕ್ಷೆ ಆಶಾ ಜಗದೀಶ್ ಆಚಾರ್ಯ, ಕಲ್ಲಂಬಾಡಿ ಪದವಿನ ಅಧ್ಯಕ್ಷ ಸುರೇಶ್ ಆಚಾರ್ಯ, ಆನ್ಸ್ ಕ್ಲಬ್ಬಿನ ಉಪಾಧ್ಯಕ್ಷೆ ನವ್ಯ ನವೀನ್ ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ಪ್ರಯುಕ್ತ ಸುಡುಮದ್ದು ಪ್ರದರ್ಶನ, ಗೂಡು ದೀಪಗಳ ಅಲಂಕಾರ ರಂಗೋಲಿಯ ಚಿತ್ತಾರವು ಕ್ಲಬ್ ಗಳ ಸದಸ್ಯರಿಂದ ಯೋಜಿಸಲಾಗಿತ್ತು.
ಗೀತಾ ಕಾಮತ್ ಪ್ರಾರ್ಥಿಸಿದರು. ಅಧ್ಯಕ್ಷರು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಚೇತನ್ ನಾಯಕ್ ವಂದಿಸಿದರು.











