Home Blog Page 8

ಕಾರ್ಕಳ:ಮಗಳನ್ನೇ ಹತ್ಯೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ತಾಯಿ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲು

0

ಕಾರ್ಕಳ:ಮಗಳನ್ನೇ ಹತ್ಯೆಗೈದು ಆತ್ಮಹತ್ಯೆ ಎಂದು ಬಿಂಬಿಸಿದ್ದ ತಾಯಿ ಮರಣೋತ್ತರ ಪರೀಕ್ಷೆಯಲ್ಲಿ ಸತ್ಯ ಬಯಲು

ಕಾರ್ಕಳ: ಹೆತ್ತ ತಾಯಿಯೇ ಮಗಳ ಪ್ರಾಣ ಕಿತ್ತ ಭೀಕರ ಘಟನೆ ಕಾರ್ಕಳ ತಾಲೂಕಿನ ಹಿರ್ಗಾನ ಗ್ರಾಮದಲ್ಲಿ ನಡೆದಿದೆ. ಶಿಫನಾಜ್‌ (17) ಕೊಲೆಯಾದ ಯುವತಿ.

ಸೆ. 20ರಂದು ಸ್ನೇಹಿತನನ್ನು ಭೇಟಿಯಾಗಲು ಉಡುಪಿ ಹೋಗುವುದಾಗಿ ಶಿಫನಾಜ್‌ ತಾಯಿಗೆ ತಿಳಿಸಿದ್ದಳು. ಇದಕ್ಕೆ ತಾಯಿ ಗುಲ್ಜಾರ್‌ ಬಾನು (45) ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ತಾಯಿ–ಮಗಳ ನಡುವೆ ಜಗಳ ಉಂಟಾಯಿತು. ಜಗಳ ತೀವ್ರಗೊಂಡ ಪರಿಣಾಮ ಕೋಪಭರಿತ ತಾಯಿ ಮಗಳ ಕುತ್ತಿಗೆ ಬಿಗಿದು ಉಸಿರುಗಟ್ಟಿಸಿ ಹತ್ಯೆಗೈದಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಆರಂಭದಲ್ಲಿ ಈ ಪ್ರಕರಣವನ್ನು ಆತ್ಮಹತ್ಯೆ ಎಂದು ದಾಖಲಿಸಲಾಗಿತ್ತು. ಶಿಫನಾಜ್‌ ತಂದೆ ಶೇಖ್‌ ಮುಸ್ತಾಫ್‌ ಅವರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ತನಿಖೆ ಮುಂದುವರಿಸಿದ್ದರು. ಆದರೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಸಾವಿನ ನಿಜಾಂಶ ಬಹಿರಂಗವಾಗಿದೆ. ಶಿಫನಾಜ್‌ ಆತ್ಮಹತ್ಯೆ ಮಾಡಿಕೊಳ್ಳದೆ, ಉಸಿರುಗಟ್ಟಿಸಿ ಕೊಲೆಗೀಡಾಗಿರುವುದು ದೃಢಪಟ್ಟಿದೆ‌.

ಪೊಲೀಸರು ಗುಲ್ಜಾರ್‌ ಬಾನು ಅವರನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ಕೊಲೆ ಮಾಡಿರುವುದು ಒಪ್ಪಿಕೊಂಡಿದ್ದಾರೆ. ಅ. 2ರಂದು ಆಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ಬಳಿಕ ಮಂಗಳೂರು ಜೈಲಿನಲ್ಲಿರಿಸಲಾಗಿದೆ. ಕಾರ್ಕಳ ನಗರ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಕಾರ್ಕಳ: SVT ಕಾಲೇಜಿನ ವಾಣಿಜ್ಯ ಸಂಘದ ಉದ್ಘಾಟನೆ; ಬ್ಯಾಂಕಿಂಗ್, KSET ಪರೀಕ್ಷೆಗಳ ತಯಾರಿ ಬಗ್ಗೆ ಮಾಹಿತಿ ಕಾರ್ಯಾಗಾರ

0

 

ಶ್ರೀ ವೆಂಕಟರಮಣ ಮಹಿಳಾ ಕಾಲೇಜಿನಲ್ಲಿ ಪ್ರಸ್ತುತ ಸಾಲಿನ ವಾಣಿಜ್ಯ
ಸಂಘದ ಉದ್ಘಾಟನಾ ಕಾರ್ಯಕ್ರಮವು ಜರುಗಿತು.

ಕಾರ್ಯಕ್ರಮದಲ್ಲಿ ಯೂನಿಯನ್ ಬ್ಯಾಂಕ್ ಕಾರ್ಕಳ ಇಲ್ಲಿನ ಅಧಿಕಾರಿಯಾದ ಕು. ಪ್ರತೀಕ್ಷಾ ಪೈ ಇವರು ಉದ್ಘಾಟಿಸಿ ವಿದ್ಯಾರ್ಥಿಗಳಿಗೆ ಸ್ಪರ್ಧಾತ್ಮಕ ಪರೀಕ್ಷೆಗಳಾದ Banking, KSET ಪರೀಕ್ಷೆಗಳ ತಯಾರಿಯನ್ನು ಯಾವ ರೀತಿ ಮಾಡಬಹುದು ಎಂಬುವುದರ ಬಗ್ಗೆ ಮಾಹಿತಿಯನ್ನು ನೀಡಿದರು.

ಕಾಲೇಜಿನ ಪ್ರಾಂಶುಪಾಲೆಯಾದ ಪ್ರೊ. ಗೀತಾ ಜಿ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ವಾಣಿಜ್ಯ ವಿಭಾಗದ ಮುಖ್ಯಸ್ಥರಾದ ಸೀತಾರಾಮ ನಾಯಕ್, ವಾಣಿಜ್ಯ ಸಂಘದ ಉಪನ್ಯಾಸಕರಾಗಿರುವ ಕು. ಭಾಗ್ಯ, ವಿಜೇತಾ, ಅರ್ಪಿತಾ ಉಪಸ್ಥಿತರಿದ್ದರು. ಕು. ಅರ್ಪಿತಾ ಸ್ವಾಗತಿಸಿದರು. ಕಾರ್ಯದರ್ಶಿಗಳಾದ ಕು.ವೈಷ್ಣವಿ ಪೈ ದ್ವಿತೀಯ ಬಿ.ಕಾಂ ವಂದಿಸಿದರು. ಕು. ಮುನೀರಾ ಪ್ರಥಮ ಬಿ.ಕಾಂ ಕಾರ್ಯಕ್ರಮ ನಿರೂಪಿಸಿದರು.

ಸೌಹಾರ್ದಯುತ ದಸರಾಗೆ ಸಾಕ್ಷಿಯಾದ ಬೈಲೂರು ದಸರಾ ಮಹೋತ್ಸವ

0

 

 

ನೀರೆ ಬೈಲೂರು ದಸರಾ ಮಹೋತ್ಸವದಲ್ಲಿ ಸೌಹಾರ್ದಯುತ ವಾತಾವರಣ ಜೆ.ಎಂ. ಟವರ್ಸ್ ಬಳಿ ಕಂಡು ಬಂದಿದೆ.

ಮೆರವಣಿಗೆ ನೀರೆ ಮಸೀದಿ ಬಳಿ ಬಂದಾಗ ಮುಸ್ಲಿಂ ಸಮುದಾಯದ ಬಾಂಧವರು ಸಡಗರದಿಂದ ನೆರೆದ ಜನಸ್ತೋಮಕ್ಕೆ ತಂಪು ಪಾನೀಯವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಅತ್ತೂರು ಬಸಲಿಕಾ ಚರ್ಚ್: ರೋಟರಿ ಕ್ಲಬ್ ಕಾರ್ಕಳ – ಕೆಎಂಸಿ ಮಣಿಪಾಲ್ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರ

0

 

ಗಾಂಧಿ ಜಯಂತಿ ಪ್ರಯುಕ್ತ ಅತ್ತೂರು ಬಸಲಿಕಾ ಚರ್ಚ್ ಹಾಗೂ ರೋಟರಿ ಕ್ಲಬ್ ಕಾರ್ಕಳ ಮತ್ತು ಕೆಎಂಸಿ ಮಣಿಪಾಲ್ ಇವರ ಜಂಟಿ ಆಶ್ರಯದಲ್ಲಿ ರಕ್ತದಾನ ಶಿಬಿರವು ಯಶಸ್ವಿಯಾಗಿ ನೆರವೇರಿತು.

ಜಾನ್ ಆರ್. ಡಿ’ಸಿಲ್ವ ಅವರು ರಕ್ತದಾನ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಕಾರ್ಯಕ್ರಮದಲ್ಲಿ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ಕೆ. ನವೀನ್ಚಂದ್ರ ಶೆಟ್ಟಿ ಅವರು ಮಾತನಾಡಿ, “ರಕ್ತದಾನವು ಸಮಾಜಕ್ಕೆ ನೀಡಬಹುದಾದ ಅತ್ಯುತ್ತಮ ಕೊಡುಗೆ. ಒಂದು ಹನಿ ರಕ್ತ ಜೀವ ಉಳಿಸಲು ಕಾರಣವಾಗಬಹುದು. ಪ್ರತಿಯೊಬ್ಬರೂ ಸಾಧ್ಯವಾದಷ್ಟೂ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು” ಎಂದು ಕೋರಿದರು.

ಕಾರ್ಯದರ್ಶಿ ಚೇತನ್ ನಾಯಕ್, ಮಾಜಿ ಅಧ್ಯಕ್ಷರಾದ ಇಕ್ಬಾಲ್ ಅಹಮದ್, ಸುರೇಶ ನಾಯಕ್, ಬಾಲಕೃಷ್ಣ ದೇವಾಡಿಗ ಮತ್ತು Icym ಅತ್ತೂರು ಪ್ರೆಸಿಡೆಂಟ್ ಪ್ರೀತಮ್ ಡಿ ಸೋಜ, ಹೆಲ್ತ್ ಕಮಿಷನ್ ಕೋಆರ್ಡಿನೇಟರ್ ಅತ್ತೂರು ಸಿರಿಲ್ ಪಿಂಟು ಕಾರ್ಯಕ್ರಮದಲ್ಲಿ ಹಾಜರಿದ್ದರು.

ಅತ್ತೂರು ಬಸಲಿಕಾ ಚರ್ಚಿನ ಫಾದರ್ ರೋಬಿನ್ ಸಂತಾಮಯೂರ್ ಅವರು ರಕ್ತದಾನದ ಮಹತ್ವವನ್ನು ವಿವರಿಸಿ, “ರಕ್ತದಾನ ಮಾನವೀಯತೆಯ ಉನ್ನತ ಸೇವೆ” ಎಂದು ಅಭಿಪ್ರಾಯಪಟ್ಟರು. ಕೆಎಂಸಿ ಮಣಿಪಾಲ್‌ನ ವೈದ್ಯಕೀಯ ತಂಡದ ಡಾಕ್ಟರ್‌ಗಳು ರಕ್ತದಾನ ಪ್ರಕ್ರಿಯೆ, ಅದರ ವೈಜ್ಞಾನಿಕ ಅಂಶಗಳು ಹಾಗೂ ಸುರಕ್ಷತೆ ಬಗ್ಗೆ ಮಾಹಿತಿಯನ್ನು ಹಂಚಿಕೊಂಡರು.

ಶಿಬಿರದಲ್ಲಿ ಗಣನೀಯ ಸಂಖ್ಯೆಯಲ್ಲಿ ದಾನಿಗಳು ಪಾಲ್ಗೊಂಡು 47 ಯೂನಿಟ್ ಗಳಷ್ಟು ರಕ್ತವನ್ನು ಸಂಗ್ರಹ ಮಾಡಲಾಯಿತು.

ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಲು ಶ್ರಮಿಸಿದ ಸಂಘಟಕರು, ಸ್ವಯಂಸೇವಕರು, ಚರ್ಚ್ ಹಾಗೂ ವೈದ್ಯಕೀಯ ತಂಡಕ್ಕೆ ರೋಟರಿ ಕ್ಲಬ್ ಕಾರ್ಕಳದ ಪರವಾಗಿ ಧನ್ಯವಾದಗಳು ಅರ್ಪಿಸಲಾಯಿತು.

ಬ್ಲಾಕ್ ಕಾಂಗ್ರೆಸ್ ವತಿಯಿಂದ ಮಹಾತ್ಮಾ ಗಾಂಧೀಜಿ ಹಾಗೂ ಶಾಸ್ತ್ರಿ ಜಯಂತಿ ಆಚರಣೆ

0

 

ದೇಶದಲ್ಲಿ ಸಮಾನತೆಯನ್ನು ಬಯಸಿದ್ದೇ ಗಾಂಧೀಜಿಯವರ ಹತ್ಯೆಗೆ ಕಾರಣವಾಯಿತು, ಶೂದ್ರ ಮತ್ತು ಅತ್ಯಂತ ತಳ‌ ಸಮುದಾಯದ ಜನರಿಗೆ ದೇವಸ್ಥಾನ ಪ್ರವೇಶ ನೀಡಬೇಕು, ಯಾವ ದೇವಸ್ಥಾನದಲ್ಲಿ ತಳ ಸಮುದಾಯದ ಜನರಿಗೆ ಪ್ರವೇಶವಿಲ್ಲವೋ ಅಂತಹ ದೇವಸ್ಥಾನಕ್ಕೆ ನಾನು ಹೋಗುವುದಿಲ್ಲ ಎನ್ನುವ ಜಾತಿ ವ್ಯವಸ್ಥೆಯ ವಿರುದ್ದದ ಸಮಾನತೆಯ ಪರವಾದ ಹೋರಾಟವೇ ಗಾಂಧಿ ವಿರೋದಿಗಳ ಹುಟ್ಟಿಗೆ ಕಾರಣವಾಯಿತು ಎಂದು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದರಾವ್ ಅಭಿಪ್ರಾಯಪಟ್ಟರು. ಅವರು ಇಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹಾತ್ಮಾ ಗಾಂಧೀಜಿ ಹಾಗೂ
ಬಹುದ್ದೂರು ಶಾಸ್ತ್ರಿ ಜಯಂತಿಯನ್ನು ಆಚರಿಸಿ ಮಾತನಾಡಿದರು.

ಹಿರಿಯ‌ ಕಾಂಗ್ರೆಸ್ ಮುಖಂಡ ಶೇಖರ್ ಮಡಿವಾಳ ಮಾತನಾಡಿ ಗಾಂಧಿ ಪ್ರತಿಪಾದಿಸಿ ತತ್ವ ಸಿದ್ದಾಂತಗಳು ಸರ್ವ ಕಾಲಕ್ಕೂ ಪ್ರಸ್ತುತ ಮತ್ತು ಆ ತತ್ವ ಸಿದ್ದಾಂತಗಳು ದೇಶದ ಅಭಿವೃದ್ಧಿಗೆ ಪೂರಕವಾಗಿವೆ. ಈ ಸಿದ್ದಾಂತಗಳನ್ನು ಅನುಸರಿಸಿದರೆ ಮಾತ್ರವೇ ದೇಶ ಪ್ರಗತಿ ಕಾಣಲು ಸಾದ್ಯ ಎಂದು ದೇಶದ ಚುಕ್ಕಾಗಿ ಹಿಡಿದವರು ಮನಗಾಣಬೇಕು. ಆ ಮೂಲಕವೆ ದೇಶ ಸರ್ವ ಜನಾಂಗದ ಶಾಂತಿಯ ತೋಟವಾಗಿರಲು ಸಾದ್ಯ ಎಂದರು.

ತಾಲೂಕು ಪಂಚಾಯತ್ ಮಾಜಿ ಅಧ್ಯಕ್ಷ ನಾಗಪ್ಪ ಮೇರ ಮಹನೀಯರ ಭಾವಚಿತ್ರಕ್ಕೆ ಪುಪ್ಪ ನಮನ ಸಲ್ಲಿಸಿ ದೀಪ ಬೆಳಗಿ ಉದ್ಗಾಟಿಸಿ ಸಂಧರ್ಬೋಜಿತ ಮಾತನಾಡಿದರು.

ಈ ಸಂದರ್ಭದಲ್ಲಿ ಪುರಸಭೆಯ ಮಾಜಿ ಅಧ್ಯಕ್ಷರಾದ ಸುಬಿತ್ ಕುಮಾರ್, ಪ್ರತಿಮಾ ರಾಣೆ, ಸೀತಾರಾಮ್ , ರೆಹಮತ್ ಶೇಖ್, ಜಿಲ್ಲಾ ಕಾಂಗ್ರೇಸ್ ಉಪಾದ್ಯಕ್ಷ ಸುಧಾಕರ್ ಕೋಟ್ಯಾನ್, ಬ್ಲಾಕ್ ಮಹಿಳಾ ಅಧ್ಯಕ್ಷೆ ಬಾನು ಭಾಸ್ಕರ್ ಪೂಜಾರಿ, ಬ್ಲಾಕ್ ‌ಉಪಾದ್ಯಕ್ಷ ಪ್ರಭಾಕರ ಬಂಗೇರ, ಪುರಸಭಾ ಸದಸ್ಯ ವಿವೇಕ್ ಶೆಣೈ, ಸೇವಾದಳ ಅದ್ಯಕ್ಷ ಅಬ್ದುಲ್ಲಾ ಸಾಣೂರು, ಅಲ್ಪಸಂಖ್ಯಾತ ಘಟಕದ ತನ್ವೀರ್ ತೆಳ್ಳಾರ್, ಭೂನ್ಯಾಯ ಮಂಡಲಿ ಸದಸ್ಯ ಸುನೀಲ್ ಭಂಡಾರಿ, ಗ್ಯಾರಂಟಿ ಸದಸ್ಯರಾದ ಹೇಮಂತ್, ಪಿಲಿಫ್ಸ್, ಯುವ ಕಾಂಗ್ರೆಸ್ ಮಂಜುನಾಥ್ ಜೋಗಿ, ಪ್ರಕಾಶ್ ಆಚಾರ್ಯ, ಬ್ಲಾಕ್ ಪಧಾದಿಕಾರಿಗಳು ಉಪಸ್ಥಿತರಿದ್ದರು. ಜಾರ್ಜ್ ಕ್ಯಾಸ್ಟಲೀನೋ ಸ್ವಾಗತಿಸಿ, ರಮೇಶ್ ಪತೊಂಜಿಕಟ್ಟೆ ಧನ್ಯವಾದವಿತ್ತರು.

ಕ್ರೈಸ್ಟ್ ಕಿಂಗ್: ಸಂಭ್ರಮದ ಅರ್ಥಪೂರ್ಣ ಗಾಂಧಿ ಜಯಂತಿ ಆಚರಣೆ

0

 

ಕಾರ್ಕಳದ ಇಲ್ಲಿನ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ರಾಷ್ಟ್ರಪಿತ ಮಹಾತ್ಮ ಗಾಂಧಿ ಹಾಗೂ ಲಾಲ್ ಬಹದ್ದೂರು ಶಾಸ್ತ್ರಿ ಅವರ ಜಯಂತಿಯನ್ನು ಸಂಭ್ರಮದಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.

ಡಾ. ಶ್ರೀರಾಮ ಮೊಗೆರಾಯ ಆಯುರ್ವೇದಿಕ್ ವೈದ್ಯರು ಮತ್ತು ಸಮಾಜ ಸೇವಕರು ಮುಖ್ಯ ಅತಿಥಿಗಳಾಗಿ ಆಗಮಿಸಿದ್ದರು. ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು, ಗಾಂಧೀಜಿಯವರು ಸರಳ ವ್ಯಕ್ತಿತ್ವದೊಂದಿಗೆ ಅಹಿಂಸೆ, ಸತ್ಯ ಹಾಗೂ ಶಾಂತಿಯುತ ಹೋರಾಟದಿಂದ ಭಾರತಕ್ಕೆ ಸ್ವಾತಂತ್ರ್ಯ ತಂದು ಕೊಟ್ಟರು. ಅವರ ಈ ಗುಣಗಳನ್ನು ಇಂದಿನ ಮಕ್ಕಳು ತಮ್ಮಲ್ಲಿ ಅಳವಡಿಸಿಕೊಳ್ಳುದರ ಜೊತೆಗೆ ದೇಶದ ಸೈನಿಕರಾಗಿ, ಸ್ವಚ್ಚತಾ ಸೇನಾನಿಗಳಾಗಿ ಕರ್ತವ್ಯ ನಿರ್ವಹಿಸಬೇಕೆಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.

ಕಾರ್ಯಕ್ರಮದ ಇನ್ನೋರ್ವ ಅತಿಥಿಯಾಗಿದ್ದ ಡಾ. ಉದಯ ಕುಮಾರ್ ಇರ್ವತ್ತೂರುರವರು ಮಾತನಾಡುತ್ತಾ, ಗಾಂಧೀಜಿಯವರು ವಿದ್ಯಾರ್ಥಿಯಾಗಿದ್ದಾಗಲೇ ಸತ್ಯ, ಧರ್ಮ, ನ್ಯಾಯ, ನಿಷ್ಠೆಯ ಗುಣವನ್ನು ತಮ್ಮಲ್ಲಿ ಅಳವಡಿಸಿಕೊಂಡಿದ್ದು, ಸ್ವಷ್ಟ ಮನೋಭಾವ ಹಾಗೂ ಇಚ್ಚಾಶಕ್ತಿಯನ್ನು ಹೊಂದಿದ್ದರು. ಇಂತಹ ವ್ಯಕ್ತಿತ್ವವನ್ನು ಇಂದಿನ ವಿದ್ಯಾರ್ಥಿಗಳು ತಮ್ಮಲ್ಲಿ ಅಳವಡಿಸಿಕೊಂಡಾಗ ಬದುಕಿನಲ್ಲಿ ಯಶಸ್ಸು ಸಾಧಿಸಲು ಸಾಧ್ಯ’ ಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಸದಸ್ಯ ಡಾ. ಪೀಟರ್ ಫೆರ್ನಾಂಡಿಸ್ ಅವರು ಮಾತನಾಡಿ, ‘ಜಯಂತಿಗಳನ್ನು ಆಚರಿಸುವ ಉದ್ದೇಶ ಮಹಾನ್ ವ್ಯಕ್ತಿಗಳ ಶ್ರೇಷ್ಠ ಗುಣಗಳು ಹಾಗೂ ಆದರ್ಶಗಳನ್ನು ನಮ್ಮಲ್ಲಿ ಅಳವಡಿಸಿಕೊಳ್ಳುವುದಾಗಿದೆ. ಗಾಂಧೀಜಿ ಅವರ ಆದರ್ಶಗಳನ್ನು ಇಡೀ ಜಗತ್ತೇ ತನ್ನಲ್ಲಿ ಅಳವಡಿಸಿಕೊಂಡಿದೆ. ಸ್ವಚ್ಚ ಪರಿಸರದ ಜೊತೆಗೆ ಸ್ವಚ್ಚ ಮನಸ್ಸು ಕೂಡಾ ನಮ್ಮದಾಗಬೇಕು. ಸ್ವಚ್ಚ ಮನಸ್ಸಿನಿಂದ ಸ್ವಚ್ಚ ದೇಶ ನಿರ್ಮಾಣವಾಗುತ್ತದೆ” ಎಂದು ಹೇಳಿದರು. ಅತಿಥಿಗಳು ಮಹಾತ್ಮ ಗಾಂಧೀಜಿ ಹಾಗೂ ಲಾಲ್‌ಬಹದ್ದೂರು ಶಾಸ್ತ್ರಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆಗೈದರು. ಸರ್ವಧರ್ಮ ಪ್ರಾರ್ಥನೆ ನಡೆಯಿತು.

ಪ್ರಾಥಮಿಕ ವಿಭಾಗದ ಮುಖ್ಯೋಪಾಧ್ಯಾಯರಾದ ರುಡಾಲ್ಫ್ ಕಿಶೋರ್ ಲೋಬೊರವರು ಪ್ರತಿಜ್ಞಾ ವಿಧಿಯನ್ನು ನಡೆಸಿಕೊಟ್ಟರು. ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮಿ ನಾರಾಯಣ ಕಾಮತ್, ಉಪಪ್ರಾಚಾರ್ಯರಾದ ಡಾ. ಪ್ರಕಾಶ್ ಭಟ್, ಸಂಸ್ಥೆಯ ಆಡಳಿತಾಧಿಕಾರಿ ಕಿರಣ್ ಕ್ರಾಸ್ತರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಪ್ರಾಥಮಿಕ ವಿಭಾಗದ ಸಹಾಯಕ ಶಿಕ್ಷಕಿ ಆಲಿಸ್ ಲೋಬೋ ಸ್ವಾಗತಿಸಿ, ಪ್ರೌಢ ಶಾಲಾ ಸಹಾಯಕ ಶಿಕ್ಷಕಿ ನೀತಿ ಆಚಾರ್ಯರವರು ಕಾರ್ಯಕ್ರಮ ನಿರ್ವಹಿಸಿದರು.

ಮಣಿಪಾಲ ಜ್ಞಾನಸುಧಾದಲ್ಲಿ ವಿದ್ಯಾದೇವತೆ ಶಾರದಾ ಪೂಜೆಯ ಸಂಭ್ರಮ

0

 

ನಾಡಿನೆಲ್ಲೆಡೆ ವಿಜಯ ದಶಮಿಯ ಸಂಭ್ರಮ ಕಳೆಗಟ್ಟಿರುವ ಸಂದರ್ಭದಲ್ಲಿ, ಅಕ್ಟೋಬರ್ 2ರಂದು ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು ವಿದ್ಯಾ ನಗರದಲ್ಲಿ ಶಾರದ ಪೂಜೆಯನ್ನು ವಿಜೃಂಭಣೆಯಿಂದ ಆಚರಿಸಲಾಯಿತು.

ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ವಿದ್ಯಾ ನಗರ, ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜು, ನಾಗಬನ ಕ್ಯಾಂಪಸ್ ನ ವಿದ್ಯಾರ್ಥಿಗಳು ಭಕ್ತಿ ಸುಧೆಯ ಗೀತ ಗಾಯನ, ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು.

ಕಾರ್ಯಕ್ರಮದಲ್ಲಿ ಅಜೆಕಾರು ಪದ್ಮಗೋಪಾಲ ಎಜ್ಯುಕೇಶನ್ ಟ್ರಸ್ಟ್ನ ಅಧ್ಯಕ್ಷರಾದ ಡಾ. ಸುಧಾಕರ ಶೆಟ್ಟಿ, ಮನೋವೈದ್ಯರಾದ ಡಾ.ವಿರೂಪಾಕ್ಷ ದೇವರಮನೆ, ಮಣಿಪಾಲ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಗಣೇಶ್ ಶೆಟ್ಟಿ, ಉಪಪ್ರಾಂಶುಪಾಲ ರವಿ ಜಿ, ಹೇಮಂತ್ , ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಸಂತೋಷ್, ಉಪಪ್ರಾಂಶುಪಾಲ ಪ್ರಕಾಶ್ ಜೋಗಿ ಉಪಸ್ಥಿತರಿದ್ದರು. ಮಣಿಪಾಲ ಜ್ಞಾನಸುಧಾ ಮತ್ತು ಉಡುಪಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಪೋಷಕರು ಸಂಭ್ರಮದಿಂದ ಈ ಕಾರ್ಯಕ್ರಮದಲ್ಲಿ ಪಾಲ್ಗೊಂಡರು. ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಶಮಿತಾ ಕಾರ್ಯಕ್ರಮ ನಿರೂಪಿಸಿದರು.

 

 

ಅಖಿಲ ಭಾರತ ಮಟ್ಟದ NDA ಮತ್ತು NA-2 ಪರೀಕ್ಷೆಯಲ್ಲಿ ಕ್ರಿಯೇಟಿವ್ ಸಂಸ್ಥೆಯ 14 ವಿದ್ಯಾರ್ಥಿಗಳು ತೇರ್ಗಡೆ

0

 

ಕೇಂದ್ರ ಲೋಕಸೇವಾ ಆಯೋಗ ನಡೆಸುವ ರಾಷ್ಟ್ರೀಯ ರಕ್ಷಣಾ ಅಕಾಡೆಮಿಯ ಹುದ್ದೆಗೆ ನಡೆದ 2ನೇ ಹಂತದ ಲಿಖಿತ ಪರೀಕ್ಷೆಯಲ್ಲಿ ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನದ 14 ವಿದ್ಯಾರ್ಥಿಗಳು ತೇರ್ಗಡೆ ಹೊಂದಿ ಎಸ್.ಎಸ್.ಬಿ. ( ಸರ್ವಿಸ್ ಸೆಲೆಕ್ಷನ್ ಬೋರ್ಡ್ ) ಸಂದರ್ಶನಕ್ಕೆ ಅರ್ಹತೆಯನ್ನು ಪಡೆದುಕೊಂಡಿದ್ದಾರೆ.

ವಿದ್ಯಾರ್ಥಿಗಳಾದ ನಾಗದೇವ ಎಂ.ಜಿ, ಪ್ರಥಮ್ ತಮ್ಮಣ್ಣಗೌಡರ್, ನಿಶಾಂತ್ ಹೊನ್ನಾವರ, ನಮಿತ್ ಕೃಷ್ಣಮೂರ್ತಿ ಹೆಗ್ಡೆ, ಸಂವಿತ್ ಅಮಿತ್ ಗೋಕರ್ಣ, ಸುಕ್ಷಿತ್ ಗಿರೀಶ್ ಗೌಡ, ಅಭಿರಾಮ್ ಭಟ್ ಜಿ.ಪಿ, ಪ್ರಜ್ವಲ್ ಭಟ್, ಆರ್ಯ. ವಿ, ಸೃಜನಾ. ಎಸ್, ಯಜತ್ ಗೌಡ ಎಸ್.ಪಿ, ವಿಶ್ವೇಶ್ ಎನ್.ಎಚ್, ನಿನಾದ್ ರಾಜೇಶ್ ನಾಯ್ಕ್, ಅನುರಾಗ್ ಎಸ್. ಶಿರ್ಸಟ್ ತಮ್ಮ ಮೊದಲ ಪ್ರಯತ್ನದಲ್ಲೇ ಅತ್ಯುತ್ತಮ ಸಾಧನೆಗೈದಿದ್ದಾರೆ.

ಅಖಿಲ ಭಾರತ ಮಟ್ಟದಲ್ಲಿ ಪರೀಕ್ಷೆ ಬರೆದ ವಿದ್ಯಾರ್ಥಿಗಳಲ್ಲಿ ತೇರ್ಗಡೆಗೊಂಡ 7,650 ವಿದ್ಯಾರ್ಥಿಗಳಲ್ಲಿ 14 ಜನ ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿಗಳಾಗಿದ್ದು, ತೇರ್ಗಡೆಗೊಂಡ 500 ವಿದ್ಯಾರ್ಥಿನಿಯರಲ್ಲಿ ಒಬ್ಬರು ಕ್ರಿಯೇಟಿವ್ ಸಂಸ್ಥೆಯ ವಿದ್ಯಾರ್ಥಿನಿ ಎಂಬುದು ಶ್ಲಾಘನೀಯ ವಿಚಾರ.

ಎನ್. ಡಿ. ಎ. ದೇಶಮಟ್ಟದಲ್ಲಿ ನಡೆಯುವ ಅತ್ಯಂತ ಕ್ಲಿಷ್ಟಕರ ಪರೀಕ್ಷೆಯಾಗಿದ್ದು, ಇದನ್ನು 900 ಅಂಕಗಳಿಗೆ ನಡೆಸಲಾಗುತ್ತದೆ. 300 ಅಂಕಗಳಿಗೆ ಗಣಿತ ವಿಷಯವೇ ಇರುವುದರಿಂದ ಇದಕ್ಕೆ ಹೆಚ್ಚಿನ ಮಾರ್ಗದರ್ಶನದ ಅಗತ್ಯವಿರುತ್ತದೆ. ಕ್ರಿಯೇಟಿವ್ ಸಂಸ್ಥೆಯು ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೂ ಸೂಕ್ತ ಮಾರ್ಗದರ್ಶನ ನೀಡುವುದರ ಜೊತೆಗೆ, ಪ್ರತಿ ವರ್ಷವೂ ಗರಿಷ್ಠ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ತೇರ್ಗಡೆ ಹೊಂದುತ್ತಿರುವುದು ಗಮನಾರ್ಹ.

ಸಾಧಕರನ್ನು ಆಡಳಿತ ಮಂಡಳಿ, ಪ್ರಾಂಶುಪಾಲರು, ಪರೀಕ್ಷಾ ಸಂಯೋಜಕರಾದ ಸುಮಂತ್ ದಾಮ್ಲೆ, ರಕ್ಷಿತ್ ಬಿ.ಎಸ್, ಶರತ್ ಕುಮಾರ್ ಹಾಗೂ ಎಲ್ಲಾ ಬೋಧಕ- ಬೋಧಕೇತರ ಸಿಬ್ಬಂದಿಗಳು ಶ್ಲಾಘಿಸಿ ಅಭಿನಂದಿಸಿದ್ದಾರೆ.

ಕಾರ್ಕಳ: ಮನೆಯ ನವರಾತ್ರಿ ಪೂಜೆಯ ದಿನವೇ ಮನೆ ಮಾಲೀಕ ಆತ್ಮಹತ್ಯೆ

0

 

ಮನೆಯಲ್ಲಿ ಎಲ್ಲರೂ ನವರಾತ್ರಿ ಪೂಜೆಯ ಸಂಭ್ರಮದಲ್ಲಿದ್ದ ವೇಳೆ ಮನೆ ಮಾಲೀಕ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ಕಾರ್ಕಳದ ನಂದಳಿಕೆಯಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಸಂತೋಷ ಆಚಾರ್ಯ ಎಂದು ಗುರ್ತಿಸಲಾಗಿದ್ದು, ಪ್ರತಿವರ್ಷದಂತೆ ಮನೆಯಲ್ಲಿ ನವರಾತ್ರಿ ಪೂಜೆಯಲ್ಲಿ ಕುಳಿತುಕೊಳ್ಳಬೇಕಿದ್ದ ಮೃತ ಸಂತೋಷ್ ರವರು ಮದ್ಯಪಾನ ಮಾಡಿದ್ದ ಕಾರಣ ಅವರ ಅಣ್ಣನ ಮಗನನ್ನು ಪೂಜೆಗೆ ಕುಳ್ಳಿರಿಸಲಾಯಿತು. ಪೂಜೆ ಬಳಿಕ ಸಂಜೆ ವೇಳೆ ಎಲ್ಲರೂ ಅವರವರ ಕೆಲಸದಲ್ಲಿದ್ದ ವೇಳೆ ಸಂತೋಷ್ ರವರು ಏಕಾಏಕಿ ಮನೆಯೊಳಗೆ ಹೋಗಿ, ನೇಣು ಬಿಗಿದುಕೊಂಡಿದ್ದಾರೆ. ಕೂಡಲೇ ಅವರನ್ನು ಕಾರ್ಕಳದ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತಾದರೂ, ಆಸ್ಪತ್ರೆಯಲ್ಲಿ ವೈದ್ಯರು ಪರೀಕ್ಷಿಸಿ ಈಗಾಗಲೇ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.

ಮೃತರ ಪತ್ನಿ ನೀಡಿದ ದೂರಿನ ಅನ್ವಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಕಾರ್ಕಳ ಜ್ಞಾನಸುಧಾ : ಕ್ರಿಸ್ತ ಸೇವಕೀ ಆಶ್ರಮ ಸಂದರ್ಶನ

0

 

ಕಾರ್ಕಳ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಘಟಕದ ವತಿಯಿಂದ ವಿದ್ಯಾರ್ಥಿಗಳು ನಿಟ್ಟೆಯ ಪರ್ಪಲೆಯಲ್ಲಿರುವ ಕ್ರಿಸ್ತ ಸೇವಕೀ ಆಶ್ರಮವನ್ನು ಸಂದರ್ಶಿಸಿದರು.

ಅಲ್ಲಿನ ನಿವಾಸಿಗಳಿಗೆ ಆಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮವನ್ನು ನಡೆಸಿಕೊಟ್ಟು ಸುಮಾರು ಎರಡು ಗಂಟೆಗೂ ಹೆಚ್ಚು ಹೊತ್ತು ಬೆರೆತರು. ಇದೇ ಸಂದರ್ಭ ಆಶ್ರಮದ ನಿವಾಸಿಗಳಿಗೆ ವಿದ್ಯಾರ್ಥಿಗಳು ತಂದ ದಿನಸಿ ಸಾಮಾಗ್ರಿಗಳನ್ನು ಹಂಚಿ ಖುಷಿಪಟ್ಟರು.

ಇದೇ ಸಂದರ್ಭ ಸಂಸ್ಥೆಯ ಉಪಪ್ರಾಂಶುಪಾಲ ಶ್ರೀ ಸಾಹಿತ್ಯ, ಘಟಕಾಧಿಕಾರಿ, ವಾಣಿಜ್ಯ ವಿಭಾಗದ ಉಪನ್ಯಾಸಕ ಶ್ರೀ ಶೈಲೇಶ್, ಕನ್ನಡ ಉಪನ್ಯಾಸಕ ಸಂತೋಷ್ ನೆಲ್ಲಿಕಾರು ಆಂಗ್ಲಭಾಷಾ ಉಪನ್ಯಾಸಕಿ ಶ್ರೀಮತಿ ಕೀರ್ತಿ ಆಚಾರ್ಯ, ಹಿಂದಿ ಉಪನ್ಯಾಸಕಿ ಶ್ರೀಮತಿ ಅಶ್ವಿನಿ, ಕ್ಷೇಮಪಾಲಕರಾದ ಸುಕೇಶ್, ಮಂಜುನಾಥ್, ಚಾಲಕರಾದ ಚಂದ್ರಶೇಖರ್ ಮತ್ತು ಅಕ್ಷಯ್ ಕುಮಾರ್ ಉಪಸ್ಥಿತರಿದ್ದರು.