ದಲಿತ ಸಮುದಾಯ,ಬಾಬಾ ಸಾಹೇಬ್ ಅಂಬೇಡ್ಕರ್ ಅವಹೇಳನ ಪ್ರಕರಣ:ಉಮೇಶ್ ನಾಯ್ಕ್ ನ್ಯಾಯಾಂಗ ಬಂಧನ
ಹಿಂದೂ ಜಾಗರಣ ವೇದಿಕೆಯಿಂದ ಉಚ್ಚಾಟನೆ
ಸಮಸ್ತ ದಲಿತ ಸಮುದಾಯ ಮತ್ತು ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ ಅವಹೇಳನ ಮಾಡಿ ಮಾತಾಡಿ, ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದ ಹಿಂದೂ ಜಾಗರಣ ವೇದಿಕೆಯ ಕಾರ್ಕಳ ತಾಲೂಕು ಸಹಸಂಚಾಲಕ ಉಮೇಶ ನಾಯ್ಕ್ ಸೂಡ ಅವರನ್ನು ಪೊಲೀಸರು ಕಾರ್ಕಳದಲ್ಲಿ ಬಂಧಿಸಿದ್ದಾರೆ.
ಪೊಲೀಸರು ಆತನನ್ನು ನ್ಯಾಯಾಧೀಶರ ಮುಂದೆ ಹಾಜರು ಪಡಿಸಿದ್ದು, ನ್ಯಾಯಾಲಯ ಆತನಿಗೆ 15 ದಿನಗಳ ನ್ಯಾಯಾಂಗ ಬಂಧನ ವಿಧಿಸಿದೆ.
ಹಿಂದೂ ಜಾಗರಣ ವೇದಿಕೆಯ ಮುಖಂಡನಾದ ಉಮೇಶ ನಾಯ್ಕ್ ದಕ್ಷಿಣ ಕನ್ನಡ ಮರಾಠೆ ಸಂರಕ್ಷಣಾ ಸಮಿತಿಯ ವಾಟ್ಸ್‌ಅಪ್ ಗುಂಪಿನಲ್ಲಿ ಹಾಕಿದ ವಾಯ್ಸ್ ಮಸೇಜ್‌ನಲ್ಲಿ ಅಂಬೇಡ್ಕರ್ ಹಾಗೂ ದಲಿತರಿಗೆಅಪಮಾನಕರ ರೀತಿಯ ಸಂದೇಶವನ್ನು ಪೋಸ್ಟ್ ಮಾಡಿದ್ದು, ಅದು ವೈರಲ್ ಆದ ಬಳಿಕ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾ ಸಮಿತಿ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದವು.
ದಲಿತ ಸಮುದಾಯ ಹಾಗೂ ಅಂಬೇಡ್ಕರ್ ಅವರನ್ನು ಕೀಳುಮಟ್ಟದಲ್ಲಿ ಅಪಮಾನ ಮಾಡಿದ್ದ ಉಮೇಶ್ ನಾಯ್ಕ್‌ನನ್ನು ತಕ್ಷಣವೇ ಬಂಧಿಸಬೇಕೆಂದು ಒತ್ತಾಯಿಸಿ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾ ಸಮಿತಿ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ದಲಿತ ಸಂಘಟನೆಗಳು ಅಲ್ಲಲ್ಲಿ ಪೊಲೀಸರಿಗೆ ಮನವಿಗಳನ್ನು ಸಲ್ಲಿಸಿ ಒತ್ತಾಯಿಸಿದ್ದು, ಪೊಲೀಸರು ಅಂದು ರಾತ್ರಿಯೇ ಉಮೇಶನನ್ನು ಸೂಡಾದಲ್ಲಿ ಬಂಧಿಸಿದ್ದರೆಂದು ತಿಳಿದುಬಂದಿದ್ದು, ಆತನ ಮೇಲೆಭಾರತೀಯ ನ್ಯಾಯ ಸಂಹಿತೆ (ಬಿಎನ್‌ಎಸ್)-2023ರ 353(2)ರ ಅಡಿ ಪ್ರಕರಣ ದಾಖಲಿಸಲಾಗಿದೆ.
ನ.10ರಂದು ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದ್ರೆಯಲ್ಲಿರುವ ಆಳ್ವಾಸ್ ಕಾಲೇಜಿನ ನುಡಿಸಿರಿ ಸಭಾಂಗಣದಲ್ಲಿ ಗದ್ದಿಗೆ ಕರಾವಳಿ ಮರಾಠಿ ಸಮಾವೇಶ -2024ನ್ನು ಆಯೋಜಿಸಿದ್ದು, ಈ ಸಮಾವೇಶದ ಆಮಂತ್ರಣ ಪತ್ರಿಕೆಯ ಮುಖಪುಟದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪೋಟೊ ಮುದ್ರಿಸಿರುವುದು ಉಮೇಶ ನಾಯ್ಕ್‌ನ ಕಂಗೆಣ್ಣಿಗೆ ಗುರಿಯಾಗಿತ್ತು. ಇದನ್ನೇ ನೆಪವಾಗಿರಿಸಿ ಕೊಂಡು ಹಿಂದೂ ಜಾಗರಣ ವೇದಿಕೆಯ ಮುಖಂಡ ಅಂಬೇಡ್ಕರ್ ಹಾಗೂ ದಲಿತರನ್ನು ಅವಮಾನಿಸಿ ವಾಯ್ಸ್ ಮೆಸೇಜ್ ಹರಿಯಬಿಟ್ಟಿದ್ದ.
ಉಮೇಶ ನಾಯ್ಕ್ ತನ್ನ ಸಂದೇಶದಲ್ಲಿ ‘ಮರಾಠಿಗರು ದಲಿತರಲ್ಲ. ಆಮಂತ್ರಣ ಪತ್ರಿಕೆಯಲ್ಲಿರುವ ಅಂಬೇಡ್ಕರ್ ಫೋಟೊ ತೆಗೆದು ಶಿವಾಜಿಯ ಫೋಟೊ ಹಾಕಬೇಕು. ದಲಿತರು ದನದ ಹಾಗೂ ಕೋಣದ ಮಾಂಸ ತಿನ್ನುವವರು. ಸ್ಮಶಾನದಲ್ಲಿ ಮಲಗುವವರು. ಅಂಬೇಡ್ಕರ್ ಫೋಟೊ ಹಾಕಲು ಆತ ನಿನ್ನ ಅಪ್ಪನೇ. ಅಂಬೇಡ್ಕರ್ ಫೋಟೊ ತೆಗೆದು ಶಿವಾಜಿ ಫೋಟೊ ಹಾಕದಿದ್ದರೆ ಕರಾವಳಿ ಮರಾಠಿ ಸಮಾವೇಶಕ್ಕೆ ಬಹಿಷ್ಕಾರ ಹಾಕುತ್ತೇವೆ’ ಎಂದು ಹೇಳಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.
ಇದೀಗ ಉಮೇಶ್ ಸೂಡರನ್ನು ಹಿಂದೂ ಜಾಗರಣಾ ವೇದಿಕೆಯ ಎಲ್ಲಾ ಜವಾಬ್ದಾರಿಯಿಂದ ಉಚ್ಚಾಟಿಸಲಾಗಿದೆ ಎಂದು ತಿಳಿದುಬಂದಿದೆ.ಉಮೇಶ್ ಸೂಡ ಮಾತಿಗೂ ಸಂಘಟನೆಗೂ ಯಾವುದೇ ರೀತಿಯ ಸಂಭಂದವಿಲ್ಲ.
ಹಿಂದು ಜಾಗರಣ ವೇದಿಕೆಯು ಎಲ್ಲಾ ಜಾತಿ ಸಮುದಾಯದ ಹಿಂದೂಗಳನ್ನು ಒಂದಾಗಿ ಜೋಡಿಸಿಕೊಂಡು ಅವರಲ್ಲಿ ರಾಷ್ಟ್ರಭಕ್ತಿ ಧರ್ಮ ನಿಷ್ಠೆ ಬೆಳೆಸುವ ಕಾರ್ಯದಲ್ಲಿ ನಿರತವಾಗಿದ್ದುಉಮೇಶ್ ಸೂಡರು ಮಾತನ್ನಾಡಿ ಇರುವಂತಹ ಅಪಸವ್ಯ ಎಂದಿಗೂ ಸಹಿಸುವುದಿಲ್ಲ ಎಂದು ಹಿಂದು ಜಾಗರಣ ವೇದಿಕೆಯ ಜಿಲ್ಲಾ ಸಂಯೋಜಕ ಶಂಕರ್ ಕೋಟ ಸ್ಪಷ್ಟಪಡಿಸಿದ್ದಾರೆ.
ಸಂವಿಧಾನ ಶಿಲ್ಪಿ ಡಾ ಬಿ ಆರ್ ಅಂಬೇಡ್ಕರ್ ಮತ್ತು ದಲಿತರರ ನಿಂದನೆ ಮಾಡಿದ ಹಿಂದೂ ಜಾಗರಣ ವೇದಿಕೆಯ ಮುಖಂಡ ಉಮೇಶ್ ನಾಯ್ಕ್ ಬಂಧಿಸುವಂತೆ ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾ ಸಮಿತಿ ಅಗ್ರಹ ಮಾಡಿತ್ತು
ದಕ್ಷಿಣ ಕನ್ನಡ ಮರಾಠಿ ಸಂರಕ್ಷಣಾ ಸಮಿತಿ ವಾಟ್ಸಾಪ್ ಗ್ರೂಪ್ ನಲ್ಲಿ ಅಂಬೇಡ್ಕರ್ ಫೋಟೋ ಹಾಕಿದ್ದಕ್ಕೆ ಉಮೇಶ್ ನಾಯ್ಕ್ ಅಂಬೇಡ್ಕರ್ ಹಾಗೂ ದಲಿತರನ್ನು ಅವಚ್ಯಾ ಶಬ್ದಗಳಿಂದ ನಿಂದನೆ ಮಾಡಿದ ಈತನನ್ನು ದೇಶ ದ್ರೋಹದ ಪ್ರಕರಣ ದಾಖಲಿಸಿ ಬಂಧಿಸಬೇಕಾಗಿ ಉಡುಪಿ ಜಿಲ್ಲಾ ಎಸ್ ಪಿ ಯವರಿಗೆ ಮನವಿ ಮಾಡುತ್ತೇವೆ. ಈ ಗಾಗಲೇ ಕೆಲವು ಜಿಲ್ಲೆಯಲ್ಲಿ ದೂರು ದಾಖಲು ಮಾಡಿದ್ದು.ತಕ್ಷಣ ಬಂಧಿಸಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಅಂಬೇಡ್ಕರ್ ಸೇನೆ ಉಡುಪಿ ಜಿಲ್ಲಾ ಸಮಿತಿ ಪ್ರಮುಖರು ಆಗ್ರಹಿಸಿದ್ದರು.




















