ಉಡುಪಿ:ಯುವ ಕಾಂಗ್ರೆಸ್ ಜಿಲ್ಲಾ ಅಧ್ಯಕ್ಷ ಸ್ಥಾನಕ್ಕೆ ಆನ್ ಲೈನ್ ನಲ್ಲಿ ನಡೆದಿದ್ದ ಚುನಾವಣೆಯಲ್ಲಿ ಕೃಷ್ಣ ಶೆಟ್ಟಿ ಬಜಗೋಳಿ 6399 ಮತ ಪಡೆದು ಗೆಲುವು ಸಾಧಿಸಿದ್ದಾರೆ.ಚುನಾವಣೆಯಲ್ಲಿ ಐದು ಮಂದಿ ಸ್ಪರ್ಧಿಸಿದ್ದು ಕೃಷ್ಣ ಶೆಟ್ಟಿ ಅತೀ ಹೆಚ್ಚು ಮತಗಳನ್ನು ಪಡೆದುಕೊಂಡಿದ್ದಾರೆ.ಈ ಮೂಲಕ ಮುಂದಿನ 3 ವರ್ಷಕ್ಕೆ ಉಡುಪಿ ಜಿಲ್ಲೆಯ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಕೃಷ್ಣ ಶೆಟ್ಟಿ ಆಯ್ಕೆಯಾಗಿದ್ದಾರೆ.
ಉಡುಪಿ ಜಿಲ್ಲೆಯ ಯುವ ಕಾಂಗ್ರೆಸ್ ಜಿಲ್ಲಾದ್ಯಕ್ಷ ಸ್ಥಾನಕ್ಕೆ ಐದು ಮಂದಿ ನಾಮಪತ್ರ ಸಲ್ಲಿಸಿದ್ದರು.ಕೃಷ್ಣ ಶೆಟ್ಟಿ ಬಜಗೋಳಿ ಕಾರ್ಕಳ ಯುವ ಕಾಂಗ್ರೆಸ್ ಉಪಾಧ್ಯಕ್ಷರಾಗಿ,ಉಡುಪಿ ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ,ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಯಾಗಿ ಕರ್ತ್ಯವ ನಿರ್ವಹಿಸಿದ್ದಾರೆ.
ರಾಜ್ಯದ ಗಮನ ಸೆಳೆದು ಬಿಜೆಪಿಯನ್ನೇ ಇಕ್ಕಟ್ಟಿನಲ್ಲಿ ಸಿಲುಕಿಸಿದ್ದ ಪರಶುರಾಮ ಥೀಮ್ ಪಾರ್ಕ್ ಹೋರಾಟದಲ್ಲಿ ಪ್ರಮುಖವಾಗಿ ಗುರುತಿಸಿಕೊಂಡದ್ದೇ ಈ ಕೃಷ್ಣ ಶೆಟ್ಟಿ.ಪರಶುರಾಮ ಥೀಮ್ ಪಾರ್ಕ್ ಸಂರಕ್ಷಣಾ ವೇದಿಕೆಯನ್ನು ಕಟ್ಟಿ ಹೋರಾಟವನ್ನು ಕಾನೂನು ದಿಕ್ಕಿಗೆ ತಿರುಗಿಸಿದ್ದರು.ಕೇವಲ ಹೇಳಿಕೆಗಳಿಗೆ ಸೀಮಿತವಾಗಿದ್ದ ವಿಚಾರವನ್ನು ಕೋರ್ಟ್ ಕಟಕಟೆಗೆ ಎಳೆದು ತರುವಲ್ಲಿ ಯಶಸ್ವಿಯಾಗಿದ್ದರು.
ಕ್ರೀಡಾ ಚಟುವಟಿಕೆಯ ಅವಕಾಶ ನಿರಾಕರಿಸದಿರಿ:ಬೋಳ ಪ್ರಶಾಂತ್ ಕಾಮತ್
ಕಾರ್ಕಳ: ಚೇತೋಹಾರಿ ಬದುಕಿಗೆ ಕ್ರೀಡೆ ಅತ್ಯುತ್ತಮ ಸಾಧನ. ಸಾಮುದಾಯಿಕವಾಗಿ , ವೈಯಕ್ತಿಕವಾಗಿ ಮತ್ತು ಮನುಷ್ಯನ ಸಂಘಟನಾತ್ಮಕ ಚಟುವಟಿಕೆಗೆ ಕ್ರೀಡೆ ಶ್ರೇಷ್ಠ ಮಾಧ್ಯಮವಾಗಿ ಪರಿಣಮಿಸಬಲ್ಲುದು.ಕ್ರೀಡೆಯಿಂದ ವ್ಯಾಯಾಮ, ಉತ್ತಮ ಆರೋಗ್ಯ,ಮಾನಸಿಕ ಸಮತೋಲನ ಲಭಿಸುವುದು ಸಾಧ್ಯ.ಈ ಹಿನ್ನಲೆಯಲ್ಲಿ ಯುವ ಸಮುದಾಯ ಕ್ರೀಡೆಯ ಅವಕಾಶಗಳನ್ನು ನಿರಾಕರಿಸಬಾರದು.ಸದಾ ಕ್ರಿಯಾಶೀಲರಾ ಗಿರಲು ಪ್ರಯತ್ನಿಸಬೇಕು ಎಂದು ಕಾರ್ಕಳ ಟೈಗರ್ಸ್ ಸಂಸ್ಥಾಪಕ,ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಹೇಳಿದ್ದಾರೆ.
ಅವರು ಪಡುತಿರುಪತಿ ಕ್ರಿಕೆಟರ್ಸ್ ಸ್ವರಾಜ್ಯ ಮೈದಾನದಲ್ಲಿ ಆಯೋಜಿಸಿದ ಗೌಡ ಸಾರಸ್ವತ ಬ್ರಾಹ್ಮಣ ಸಮಾಜ ಬಾಂಧವರ ಕ್ರಿಕೆಟ್ ಪಂದ್ಯಾಟದ ಬಹುಮಾನ ವಿತರಣೆ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದರು .
ಪಡುತಿರುಪತಿ ಕ್ರಿಕೆಟರ್ಸ್ ಗೌರವಾಧ್ಯಕ್ಷ ಬೋಳ ನಾಗರಾಜ ಕಾಮತ್ ಅಧ್ಯಕ್ಷತೆ ವಹಿಸಿದ್ದರು.
ನಿವೃತ್ತ ಲೆಕ್ಕ ಪರಿಶೋಧಕ ಕಾರ್ಕಳ ಕಮಲಾಕ್ಷ ಕಾಮತ್,ಉದ್ಯಮಿಗಳಾದ ಬೋಳ ರಘುರಾಮ ಕಾಮತ್, ರಘುವೀರ ಶೆಣೈ,ಗಣೇಶ್ ಕಾಮತ್,ಸುಬ್ರಾಯ ಬಾಳಿಗಾ,ಪಡುತಿರುಪತಿ ಕ್ರಿಕೆಟರ್ಸ್ ಸಂಸ್ಥೆಯ ಅಧ್ಯಕ್ಷ ಪ್ರಕಾಶ್ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಪಂದ್ಯಾಟದ ವಿಜೇತ ತಂಡ ಪಡುತಿರುಪತಿ ಕ್ರಿಕೆಟರ್ಸ್ ಟ್ರೋಫಿ ಮತ್ತು ನಗದು 20,777 ತನ್ನದಾಗಿಸಿಕೊಂಡಿತು . ವರದ ಪಾಂಡುರಂಗ ತಂಡ ರನ್ನರ್ ಅಪ್ ಟ್ರೋಫಿ ಮತ್ತು ನಗದು13777 ಪಡೆದುಕೊಂಡಿತು. ಶ್ರೀಮದ್ ಭುವನೇಂದ್ರ ಪ್ರೌಢ ಶಾಲೆಯ ಮುಖ್ಯ ಶಿಕ್ಷಕ ರೆಂಜಾಳ ನಾರಾಯಣ ಶೆಣೈ ಕಾರ್ಯಕ್ರಮ ಸಂಯೋಜಿಸಿದರು.
ಕ್ರೈಸ್ಟ್ ಕಿಂಗ್: ಸಿ.ಎ-ಫೌಂಡೇಷನ್, ಸಿಎಸ್‌ಇಇಟಿ ಸಾಧಕ ವಿದ್ಯಾರ್ಥಿಗಳಿಗೆ ಸನ್ಮಾನ
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಪದವಿಪೂರ್ವ ಕಾಲೇಜಿನಲ್ಲಿ ಈ ಸಾಲಿನಲ್ಲಿ ಸಿಎ-ಫೌಂಡೇಷನ್, ಸಿಎಸ್‌ಇಇಟಿ ಉತ್ತೀರ್ಣರಾದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.
ಪ್ರಥಮ ಪ್ರಯತ್ನದಲ್ಲಿಯೇ ಸಿಎ-ಫೌಂಡೇಷನ್ ಉತ್ತೀರ್ಣನಾದ ಪ್ರಥೀತ್ ಆರ್ ಉಪಾಧ್ಯಾಯ, ಸಿಎಸ್‌ಇಇಟಿ ಉತ್ತೀರ್ಣರಾದ ಪ್ರಸಕ್ತ ಸಂಸ್ಥೆಯಲ್ಲಿ ದ್ವಿತೀಯ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಾದ ನಾರಾಯಣಿ ಕಿಣಿ, ಪವನ್ ಪೂಜಾರಿ, ಚರಣ್‌ರಾಜ್, ಶ್ರೇಯಸ್ ಆಚಾರ್ಯ ಅವರಿಗೆ ಸಂಸ್ಥೆಯ ವತಿಯಿಂದ ಶಾಲು ಹಾಕಿ ಗೌರವಿಸಿ ಸನ್ಮಾನಿಸಲಾಯಿತು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಿ.ಎಸ್.ಐ ಬೆಥಾನ್ಯ ದೇವಾಲಯ ಕಾರ್ಕಳ ಇಲ್ಲಿನ ಧರ್ಮಗುರುಗಳಾದ ರೆವರೆಂಡ್ ಸೊಲೊಮೋನ್ ಅವರು ಆಗಮಿಸಿದ್ದರು. ಕಾರ್ಕಳ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಮಿತ್ರಪ್ರಭ ಹೆಗ್ಡೆ, ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಕುಂದಾಪುರದ ಮೂಡ್ಲುಕಟ್ಟೆ ತಾಂತ್ರಿಕ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನೀಲ್ ಗ್ಲಾಡ್ವಿನ್ ಡಿಲೀಮ, ಪ್ರೌಢಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಪ್ರಕಾಶ್ ಡಿಸೋಜ, ಸಂಸ್ಥೆಯ ಪ್ರಾಚಾರ್ಯರಾದ ಲಕ್ಷ್ಮಿ ನಾರಾಯಣ ಕಾಮತ್, ಉಪಪ್ರಾಚಾರ್ಯರಾದ ಡಾ. ಪ್ರಕಾಶ್ ಭಟ್, ಪ್ರೌಢಶಾಲಾ ಮುಖ್ಯ ಶಿಕ್ಷಕ ಡೊಮಿನಿಕ್ ಅಂದ್ರಾದೆ, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ರುಡಾಲ್ಫ್ ಕಿಶೋರ್ ಲೋಬೋ, ಸಂಸ್ಥೆಯ ವಿದ್ಯಾರ್ಥಿ ಸಮಾಲೋಚಕಿ ಸಿಸ್ಟರ್ ಡಾ.ಶಾಲೆಟ್ ಸಿಕ್ವೇರಾರವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
ಕಾರ್ಕಳ: ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ಎಂ.ಸಿ.ಎ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿರುವ ಅನಂತ ಮೂರ್ತಿ ಅವರು ‘ಎ ಡಿಸೈನ್ ಅಂಡ್ ಡೆವಲಪ್ಮೆಂಟ್ ಆಫ್ ನೋವೆಲ್ ಮೆಥೋಡಾಲಜಿಸ್ ಟು ರೆಕಗ್ನಿಸ್ ಕ್ಯಾರೆಕ್ಟರ್ ಇನ್ ಯಕ್ಷಗಾನ’ ಎಂಬ ವಿಷಯದ ಬಗೆಗೆ ಬರೆದ ಸಂಶೋಧನಾ ಪ್ರಬಂಧಕ್ಕೆ ಮಂಗಳೂರಿನ ಶ್ರೀನಿವಾಸ ವಿಶ್ವವಿದ್ಯಾಲಯವು ಇತ್ತೀಚೆಗೆ ಡಾಕ್ಟರೇಟ್ ಪದವಿ ಘೋಷಿಸಿದೆ.
ಇವರು ಶ್ರೀನಿವಾಸ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ| ಸಂಜೀವ್ ಕುಲ್ಕರ್ಣಿ ಅವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ ಪ್ರಬಂಧವನ್ನು ಮಂಡಿಸಿದ್ದರು.
ಕುಕ್ಕುಂದೂರು ಪಂಚಾಯತ್ ಮಾಜಿ ಉಪಾದ್ಯಕ್ಷ ಸುಂದರ ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ
ಕಾರ್ಕಳ ಬ್ಲಾಕ್ ಕಾಂಗ್ರೆಸ್ ಪ್ರಥಮ ಕಾರ್ಯಕಾರಿಣಿ ಸಭೆಯು ಬ್ಲಾಕ್ ಕಾಂಗ್ರೆಸ್ ನೂತನ ಅದ್ಯಕತ ಶುಭದರಾವ್ ಅದ್ಯಕ್ಷತೆಯಲ್ಲಿ ಬ್ಲಾಕ್ ಕಾಂಗ್ರೆಸ್ ಪದಾಧಿಕಾರಿಗಳು, ಗ್ರಾಮೀಣ ಸಮಿತಿಯ ಅದ್ಯಕ್ಷರುಗಳು ಹಾಗೂ ವಿವಿಧ ಘಟಕಗಳ ಅದ್ಯಕ್ಷರುಗಳ ಉಪಸ್ಥಿತಿಯಲ್ಲಿ ನಡೆಯಿತು.
ಸಭೆಯಲ್ಲಿ ಕಾರ್ಕಳ ಕಾಂಗ್ರೆಸ್ ನಾಯಕರಾದ ಉದಯ ಶೆಟ್ಟಿ ಮುನಿಯಾಲು ಅವರು ನೂತನವಾಗಿ ಆಯ್ಕೆಯಾದ ಬ್ಲಾಕ್ ಸಮಿತಿ ಪದಾಧಿಕಾರಿಗಳು, ಗ್ರಾಮೀಣ ಸಮಿತಿಯ ಅಧ್ಯಕ್ಷರುಗಳು, ಮತ್ತು ವಿವಿಧ ಘಟಕಗಳ ಅದ್ಯಕ್ಷರುಗಳನ್ನು ಶಾಲು ಹೊದಿಸಿ ಅಭಿನಂದಿಸಿ ಪಕ್ಷ ಸಂಘಟನೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡು ಪಕ್ಷದ ಬಲವರ್ದನೆಗಾಗಿ ಶ್ರಮಿಸುವಂತೆ ಕರೆ ನೀಡಿದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಶುಭದ್ ರಾವ್ ಮಾತನಾಡಿ ವಿವಿಧ ಘಟಕಗಳ ನೂತನ ಅಧ್ಯಕ್ಷ ಪದಾಧಿಕಾರಿಗಳ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ವಿವರಿಸಿದರು.
ಹಿರಿಯ ವಕೀಲರು, ಕಾಂಗ್ರೆಸ್ ಮುಖಂಡರಾದ ಶೇಖರ ಮಡಿವಾಳರವರು ಮಾತನಾಡುತ್ತಾ ಪ್ರಸ್ತುತ ದೇಶವನ್ನು ಆಳುತ್ತಿರುವರಿಂದ ಸಂವಿಧಾನಕ್ಕೆ ಅಪಾಯ ಎದುರಾಗಿದೆ ಸಂವಿಧಾನ ಇರುವ ಕಾರಣ ಇಂದು ದೇಶದ ಜನ ಸಾಮಾನ್ಯನೂ ಸಮಾನ ಹಕ್ಕುಗಳಿಂದ ಬದುಕುವಂತಾಗಿದೆ, ಇಂತಹ ಶ್ರೇಷ್ಠ ಸಂವಿಧಾನದ ರಕ್ಷಣೆ ನಮ್ಮೆಲ್ಲರ ಹೊಣೆಯಾಗಿದೆ ಎಂದರು.
ಕೆಪಿಸಿಸಿ ಸದಸ್ಯರಾದ ನೀರೆ ಕೃಷ್ಣ ಶೆಟ್ಟಿ ಹಾಗೂ ಮಾಜಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ಸುಧಾಕರ ಕೋಟ್ಯಾನ್ ಸಂದರ್ಬೋಚಿತವಾಗಿ ಮಾತನಾಡಿದರು.
ಪಕ್ಷ ಸೇರ್ಪಡೆ: ಇದೇ ಸಂದರ್ಭದಲ್ಲಿ ಕಾಂಗ್ರೆಸ್ ಪಕ್ಷದ ತತ್ವ ಸಿದ್ದಾಂತವನ್ನು ಮೆಚ್ಚಿಕೊಂಡು ಕುಕ್ಕುಂದೂರು ಗ್ರಾಮ ಪಂಚಾಯತಿಗೆ 3 ಬಾರಿ ಚುನಾಯಿತ ಸದಸ್ಯರಾಗಿ ಮತ್ತು ಪಂಚಾಯತ್ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಸುಂದರ ಅವರು ಬಿಜೆಪಿ ತ್ಯಜಿಸಿ ಕಾಂಗ್ರೆಸ್ ಪಕ್ಷವನ್ನು ಸೇರ್ಪಡೆಯಾದರು. ಅವರನ್ನು ಪಕ್ಷದ ನಾಯಕರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷದ ಧ್ವಜವನ್ನು ನೀಡಿ ಬರಮಾಡಿಕೊಳ್ಳಲಾಯಿತು.
ಸನ್ಮಾನ: ಇತ್ತೀಚೆಗೆ ನಡೆದ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಗಳಿಗೆ ನೂತನ ಅದ್ಯಕ್ಷರಾಗಿ ಆಯ್ಕೆಯಾದ ಸಿರಿಯಣ್ಣ ಶೆಟ್ಟಿ ಹಿರ್ಗಾನ, ಕೃಷ್ಣ ಶೆಟ್ಟಿ ನಲ್ಲೂರು, ಜಾನ್ ಆರ್ ಡಿ’ಸಿಲ್ವ ಸಾಣೂರು ಇವರನ್ನು ಫಲಪುಷ್ಪ, ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಕಾಂಗ್ರೆಸ್ ನಾಯಕರು ಹಾಗೂ ಕಾರ್ಯಕರ್ತರ ಒಗ್ಗೂಡುವಿಕೆಯೊಂದಿಗೆ ಆರಂಭವಾಗಲಿರುವ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿಯ ಕಾರ್ಕಳ ಪ್ರವರ್ತಕರಾದ ಅನಿಲ್ ಪೂಜಾರಿ ಮಾಳ ಅವರು ಸೊಸೈಟಿಯ ಕುರಿತು ಮಾಹಿತಿಯನ್ನು ಹಂಚಿಕೊಂಡರು.
ಸಭೆಯಲ್ಲಿ ಬ್ಲಾಕ್ ಕಾಂಗ್ರೆಸ್ ಕೋಶಾಧಿಕಾರಿ ಉಮೇಶ್ ರಾವ್ ಬಜಗೋಳಿ, ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಶ್ರೀಮತಿ ಭಾನು ಭಾಸ್ಕರ್, ನಗರ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರೀನಾ ಡಿಸೋಜ, ಡಾ. ಪ್ರೇಮದಾಸ್ ಮತ್ತು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪದಾಧಿಕಾರಿಗಳು, ಗ್ರಾಮೀಣ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರುಗಳು, ವಿವಿಧ ಘಟಕಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು. ಅಕ್ರಮ ಸಕ್ರಮ ಸಮಿತಿಯ ಸದಸ್ಯರಾದ ರಮೇಶ್ ಬಜಕಳ ಅವರು ನಾಡ ಭಕ್ತಿ ಗೀತೆಯನ್ನು ಹಾಡಿದರು ಕಾಂಗ್ರೆಸ್ ಅಧ್ಯಕ್ಷರಾದ ಯೋಗೀಶ್ ಆಚಾರ್ಯ ಇನ್ನಾ ಅವರು ಸ್ವಾಗತಿಸಿದರು, ಗ್ಯಾರಂಟಿ ಸಮಿತಿಯ ತಾಲೂಕು ಅಧ್ಯಕ್ಷರಾದ ಅಜಿತ್ ಹೆಗ್ಡೆ ಧನ್ಯವಾದವನ್ನಿತ್ತರು ಬ್ಲಾಕ್ ಕಾಂಗ್ರೆಸ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರೂಪಿಸಿದರು.
ನಾಯಕತ್ವ ವಹಿಸಲು ಜಿಎಸ್‌ಬಿ ಸಮಾಜದ ಯುವಶಕ್ತಿ ಸಿದ್ದರಾಗಬೇಕು:ಬೋಳ ಪ್ರಶಾಂತ್ ಕಾಮತ್ ಕರೆ
ಜಿಎಸ್‌ಬಿ ಯುವಜನ ಸಭಾ ಹೆಬ್ರಿ ಇದರ ಸ್ವರ್ಣ ಮಹೋತ್ಸವ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಹೆಬ್ರಿ:ಸಮಾಜಸೇವೆ ಮತ್ತು ಶಿಕ್ಷಣ ಪ್ರಸಾರದಲ್ಲಿಜಿಎಸ್‌ಬಿ ಸಮಾಜ ಮಹತ್ವಪೂರ್ಣ ಕೆಲಸ ಮಾಡಿದೆ.ಕಳೆದ 50 ವರ್ಷಗಳಲ್ಲಿ ಈವರೆಗೆ ಯಾವುದೇ ರೀತಿಯ ಸ್ವಾರ್ಥಚಿಂತನೆ ಇಲ್ಲದೆ ಮಾಡಿರುವ ಸೇವೆ ಪ್ರತಿಯೊಬ್ಬರ ಹೃದಯದಲ್ಲಿ ಅಚ್ಚೊತ್ತಿದೆ.ಮುಂದಿನ ದಿನಗಳಲ್ಲಿ ಸಾಮಾಜಿಕ ಸೇವೆಯ ಜೊತೆ ಜಿಲ್ಲೆಯ ಅನ್ಯಾನ್ಯ ಚಟುವಟಿಕೆಗಳಲ್ಲಿ ತೊಡಗಲಿದ್ದು,ತತ್ಸಂಬಂಧ ನಾಯಕತ್ವ ಒದಗಿಸುವ ನಿಟ್ಟಿನಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ಕಾರ್ಕಳ ಟೈಗರ್ಸ್ ಸಂಸ್ಥಾಪಕ, ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಹೇಳಿದ್ದಾರೆ.
ಅವರು ಹೆಬ್ರಿ ರಾಮ ಮಂದಿರದಲ್ಲಿ ನಡೆದ ಜಿಎಸ್‌ಬಿ ಯುವಜನ ಸಭಾ ಹೆಬ್ರಿ ಇದರ ಸ್ವರ್ಣ ಮಹೋತ್ಸವ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜಿಎಸ್‌ಬಿ ಸಮುದಾಯ ಮಿಕ್ಕ ಸಮುದಾಯಗಳ ಜೊತೆ ಕೂಡಿಕೊಂಡು ಅರ್ಹರಿಗೆ ಸೂಕ್ತ ಪ್ರಾತಿನಿಧ್ಯ ಮತ್ತು ಅವಕಾಶಗಳಿಗಾಗಿ ಹೋರಾಟ ಮಾಡಬೇಕಾದ ಅಗತ್ಯತೆ ಬಂದೊದಗಿದೆ.ಇದಕ್ಕೆ ಸಮಸ್ತ ಯುವ ಸಮೂಹದ ಶಕ್ತಿ ಮತ್ತು ಬೆಂಬಲ ಹರಿದು ಬರಬೇಕು ಎಂದು ಬೋಳ ಪ್ರಶಾಂತ್ ಕಾಮತ್ ಹೇಳಿದರು.
ರಾಮ ಮಂದಿರ ಅಧ್ಯಕ್ಷ ಗುಂಡು ನಾಯಕ್ ಎಚ್. ಅಧ್ಯಕ್ಷತೆ ವಹಿಸಿದ್ದರು.ನೂತನ ಅಧ್ಯಕ್ಷ ನಾರಾಯಣ ಪ್ರಭು,ಕಾರ್ಯದರ್ಶಿ ಮಹೇಂದ್ರ ನಾಯಕ್,ನಿಕಟಪೂರ್ವ ಅಧ್ಯಕ್ಷ ಸುದೇಶ್ ಪ್ರಭು, ಕಾರ್ಯದರ್ಶಿ ವಿಕ್ರಂ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಿವೃತ್ತ ಶಿಕ್ಷಕಿ ಅರುಣಾ ಎಸ್. ಪ್ರಭು ಕಾರ್ಯಕ್ರಮ ಸಂಯೋಜಿಸಿದರು.
ಕಾರ್ಕಳ: ಚಿಕ್ಕಮಗಳೂರು ಅಥ್ಲೆಟಿಕ್ಸ್ ಅಸೋಸಿಯೇಷನ್ ಮತ್ತು ತಿಲಕ್ ರೋಡ್ ಫ್ರೆಂಡ್ಸ್, ಕೊಪ್ಪ, ಚಿಕ್ಕಮಗಳೂರು ಇವರ ಸಂಯುಕ್ತಾಶ್ರಯದಲ್ಲಿ ಜ.19 ರಂದು ನಡೆದ ಕೊಪ್ಪ ಮ್ಯಾರಥಾನ್ ನಲ್ಲಿ ಭಾಗವಹಿಸಿದ ನಿಟ್ಟೆ ಕ್ರೀಡಾಪಟುಗಳ ಪೈಕಿ ಮಹಿಳೆಯರ ಮುಕ್ತ 10 ಕಿ.ಮೀ ಓಟದಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ ಪ್ರಥಮ ಬಿಕಾಂ ವಿದ್ಯಾರ್ಥಿನಿ ನಂದಿನಿ ಜಿ., 15,000/- ರೂ.ಗಳ ನಗದು ಬಹುಮಾನದೊಂದಿಗೆ ಚಿನ್ನದ ಪದಕವನ್ನು ಪಡೆದರು.
ಮಹಿಳೆಯರ ಮುಕ್ತ 10 ಕಿ.ಮೀ ಓಟದಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಪ್ರಥಮ ದರ್ಜೆ ಕಾಲೇಜಿನ 3ನೇ ಬಿಕಾಂ ವಿದ್ಯಾರ್ಥಿನಿ ಪ್ರತೀಕ್ಷಾ ಬೆಳ್ಳಿ ಪದಕ ಹಾಗೂ 10,000 ರೂ.ಗಳ ನಗದು ಬಹುಮಾನ ಪಡೆದರು.
ಮಹಿಳೆಯರ ಮುಕ್ತ 20 ಕಿ.ಮೀ ಓಟದಲ್ಲಿ ನಿಟ್ಟೆಯ ಡಾ.ಎನ್.ಎಸ್.ಎ.ಎಂ ಕನ್ನಡ ಪ್ರೌಢಶಾಲೆಯ 9ನೇ ತರಗತಿ ವಿದ್ಯಾರ್ಥಿನಿ ದೀಕ್ಷಿತಾ ಕಂಚಿನ ಪದಕ ಹಾಗೂ 5,000 ರೂ.ಗಳ ನಗದು ಬಹುಮಾನ ಪಡೆದರು. ಪುರುಷರ ಮುಕ್ತ 10 ಕಿ.ಮೀ ಓಟದಲ್ಲಿ ನಿಟ್ಟೆಯ ಡಾ. ಎನ್.ಎಸ್.ಎ.ಎಂ ಪಿಯು ಕಾಲೇಜಿನ ಪ್ರಥಮ ಕಾಮರ್ಸ್ ವಿದ್ಯಾರ್ಥಿ ಶಾಶ್ವತ್ ರಾಜೇಶ್ ಪೂಜಾರಿ 4ನೇ ಸ್ಥಾನ ಪಡೆದರು.
ಕ್ರೈಸ್ಟ್ ಕಿಂಗ್ ಪ್ರೌಢಶಾಲೆಯಲ್ಲಿ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ
ಕಾರ್ಕಳ: ಇಲ್ಲಿನ ಕ್ರೈಸ್ಟ್ ಕಿಂಗ್ ಆಂಗ್ಲಮಾಧ್ಯಮ ಪ್ರೌಢಶಾಲೆಯಲ್ಲಿ ವಿದ್ಯಾರ್ಥಿಗಳ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸಿ.ಎಸ್.ಐ ಬೆಥಾನ್ಯ ದೇವಾಲಯ ಕಾರ್ಕಳ ಇಲ್ಲಿನ ಧರ್ಮಗುರುಗಳಾದ ರೆವರೆಂಡ್ ಸೊಲೊಮೋನ್‌ರವರು ಆಗಮಿಸಿದ್ದರು.
ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು ‘ವಿದ್ಯಾರ್ಥಿಗಳು ತಮ್ಮ ಶಕ್ತಿ ಮತ್ತು ಬುದ್ಧಿಯ ಮೇಲೆ ಹಿಡಿತ ಸಾಧಿಸಿ, ಓದಿನಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ಗುರಿಯ ಕಡೆಗೆ ಮುನ್ನುಗ್ಗಿದಾಗ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ’ ಎಂದು ಹೇಳಿದರು. ಇನ್ನೋರ್ವ ಅತಿಥಿ ವೆಂಕಟರಮಣ ಮಹಿಳಾ ಕಾಲೇಜಿನ ನಿವೃತ್ತ ಪ್ರಾಂಶುಪಾಲೆ ಶ್ರೀಮತಿ ಮಿತ್ರಪ್ರಭ ಹೆಗ್ಡೆಯವರು ಮಾತನಾಡಿ ವಿದ್ಯಾರ್ಥಿಗಳು ‘ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳುವುದರ ಜೊತೆಗೆ ಜೀವನದಲ್ಲಿ ಬರುವ ಅವಕಾಶಗಳನ್ನು ಸದುಪಯೋಗ ಪಡಿಸಿಕೊಳ್ಳಿ’ ಎಂದು ಕರೆ ನೀಡಿದರು.
ಮತ್ತೋರ್ವ ಅತಿಥಿ ಸಂಸ್ಥೆಯ ಹಿರಿಯ ವಿದ್ಯಾರ್ಥಿ, ಕುಂದಾಪುರದ ಮೂಡ್ಲುಕಟ್ಟೆ ತಾಂತ್ರಿಕ ವಿದ್ಯಾಲಯದ ಸಹಾಯಕ ಪ್ರಾಧ್ಯಾಪಕ ನೀಲ್ ಗ್ಲಾಡ್ವಿನ್ ಡಿಲೀಮ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಯ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದರು. ಪ್ರೌಢಶಾಲಾ ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷರಾದ ಪ್ರಕಾಶ್ ಡಿಸೋಜರವರು ಸಂದರ್ಭೊಚಿತವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕ್ರೈಸ್ಟ್ ಕಿಂಗ್ ಪ್ರೌಢಶಾಲೆಯ ಮುಖ್ಯೋಪಧ್ಯಾಯರಾದ ಡೊಮಿನಿಕ್ ಅಂದ್ರಾದೆಯವರು ಮಾತನಾಡಿ ‘ಪ್ರತಿಯೊಂದು ಮಗುವಿಗೂ ಕೂಡ ದೇವರು ಪ್ರತಿಭೆಯನ್ನು ನೀಡಿರುತ್ತಾನೆ. ಆ ಪ್ರತಿಭೆಯನ್ನು ಸದ್ವಿನಿಯೋಗ ಪಡಿಸಿಕೊಳ್ಳುವುದರ ಜೊತೆಗೆ ಮೌಲ್ಯಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು ಸತ್ಪ್ರಜೆಗಳಾಗಿ ಬದುಕಿ’ ಎಂದು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಈ ಸಂದರ್ಭದಲ್ಲಿ ಕ್ರೀಡೆ, ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಅತಿಥಿಗಳು ಬಹುಮಾನ ವಿತರಿಸಿದರು. ಸಂಸ್ಥೆಯ ಪ್ರಾಚಾರ್ಯರಾದ ಲಕ್ಷ್ಮಿನಾರಾಯಣ ಕಾಮತ್, ಉಪಪ್ರಾಚಾರ್ಯರಾದ ಡಾ. ಪ್ರಕಾಶ್ ಭಟ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕರಾದ ರುಡಾಲ್ಫ್ ಕಿಶೋರ್ ಲೋಬೋ ಸಂಸ್ಥೆಯ ವಿದ್ಯಾರ್ಥಿ ಸಮಾಲೋಚಕಿ ಸಿಸ್ಟರ್ ಶಾಲೆಟ್ ಸಿಕ್ವೇರಾರವರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕಿಯಾದ ಶ್ರೀಮತಿ ರೇಖಾ ಸಂತೋಷ್, ಶ್ರೀಮತಿ ಜೋಸ್ನಾ ಸ್ನೇಹಲತಾ, ಶ್ರೀಮತಿ ಶಮೀನಾ ಬಾನು, ಶ್ರೀಮತಿ ಆಶಾಜ್ಯೋತಿ, ಶ್ರೀಮತಿ ಅಶ್ವಿನಿ ಪೈ, ಶ್ರೀಮತಿ ನೀತಿ ಆಚಾರ್ಯ ಇವರು ಪ್ರಶಸ್ತಿ ವಿಜೇತರ ಹೆಸರನ್ನು ವಾಚಿಸಿದರು. 9ನೇ ತರಗತಿಯ ಆಯೇಶ ರೂಬ ಸ್ವಾಗತಿಸಿ 8ನೇ ತರಗತಿಯ ವರುಣ್ ಕಾಮತ್ ವಂದಿಸಿದರು. 9ನೇ ತರಗತಿಯ ಸಾನ್ವಿ ಮಾರ್ಟಿಸ್ ಕಾರ್ಯಕ್ರಮ ನಿರೂಪಿಸಿದರು.
ರೇಷನ್ ಕಾರ್ಡು ತಿದ್ದುಪಡಿ ಅಂತಿಮ ಗಡು ಇನ್ನೊಂದು ತಿಂಗಳು ವಿಸ್ತರಣೆ ಮಾಡಲು ಮನವಿ
ರೇಷನ್ ಕಾರ್ಡು ತಿದ್ದುಪಡಿ ಅಂತಿಮ ಗಡುವನ್ನು ರಾಜ್ಯ ಸರಕಾರ ಹಾಗು ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಇನ್ನೊಂದು ತಿಂಗಳು ವಿಸ್ತರಣೆ ಮಾಡಿದಲ್ಲಿ ಜನರಿಗೆ ತುಂಬಾ ಅನುಕೂಲವಾಗಲಿದೆ.
ಇನ್ನು ಬಾಕಿ ಉಳಿದ ಆನೇಕ ಕಾರ್ಡ್ ಗಳ ತಿದ್ದುಪಡಿ ಮಾಡಿಕೊಳ್ಳಲು ಅವಕಾಶ ನೀಡಿದಂತಾಗುತ್ತದೆ. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಈ ಮೊದಲು ರೇಷನ್ ಕಾರ್ಡು ತಿದ್ದುಪಡಿಗೆ ಡಿಸೆಂಬರ್ 31 ಅಂತಿಮ ಗಡುವನ್ನು ನೀಡಿತ್ತು. ಆದರೆ ಸಾರ್ವಜನಿಕರ ಹಿತ ದೃಷ್ಟಿಯಿಂದ ತಿದ್ದುಪಡಿ ಸಾಕಷ್ಟು ಬಾಕಿ ಉಳಿದ ಹಿನ್ನಲೆಯಲ್ಲಿ ಜನವರಿ 31 ರ ತನಕ ತಿದ್ದುಪಡಿ ದಿನಾಂಕ ಮುಂದುವರೆಸಿದ್ದಾರೆ.
ಪಡಿತರ ಚೀಟಿಯಲ್ಲಿ ಮನೆ ಯಜಮಾನರ ಹೆಸರು ಬದಲಾವಣೆ, ಹೆಸರು ಸೇರಿಸುವುದು, ಹೆಸರು ಸರಿಪಡಿಸಿಕೊಳ್ಳುವುದು, ಹೆಸರು ತೆಗೆಯುವುದು ಹಾಗು ಇನ್ನಿತರ ವಿಷಯಕ್ಕೆ ಆವಕಾಶ ಮಾಡಿಕೊಟ್ಟಿದ್ದಾರೆ. ಸಾಧ್ಯತೆ ಇದ್ದಲ್ಲಿ, ಅಂತಿಮ ಗಡುವನ್ನು ಫೆಬ್ರವರಿ 28ರ ತನಕ ವಿಸ್ತರಿಸುವುದರಿಂದ ಜನರಿಗೆ ತುಂಬಾ ಉಪಕಾರವಾದಿತು. ರಾಜ್ಯ ಸರಕಾರ ಮತ್ತು ಸಂಬಂಧ ಪಟ್ಟ ಇಲಾಖೆ ಇದರ ಬಗ್ಗೆ ಗಮನ ಹರಿಸಬೇಕಾಗಿ ಕಾರ್ಕಳ ವಿಧಾನಭಾ ಕ್ಷೇತ್ರ NSUI ಮಾಜಿ ಅಧ್ಯಕ್ಷ ದಿನಕರ್ ಶೆಟ್ಟಿ ವಿನಂತಿಸಿದ್ದಾರೆ.
ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವಕ್ಕೆ ಭಕ್ತರ ಮಹಾಪ್ರವಾಹ
ಕಾರ್ಕಳ, ಅತ್ತೂರು:ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವವು ಇಂದು ಭಕ್ತರ ಅಭೂತಪೂರ್ವ ಮಹಾಪ್ರವಾಹವನ್ನು ಕಂಡಿತು. ಸಾವಿರಾರು ಭಕ್ತರು ಹರಕೆಗಳನ್ನು ಈಡೇರಿಸಲು ಮತ್ತು ತಮ್ಮ ಬಿನ್ನಹಗಳನ್ನು ಸಲ್ಲಿಸಲು ಪುಣ್ಯಕ್ಷೇತ್ರಕ್ಕೆ ಆಗಮಿಸಿದರು.
ಬಸಿಲಿಕಾದ ವಠಾರ ಮತ್ತು ಸುತ್ತಮುತ್ತಲಿನ ಪ್ರದೇಶಗಳು ವಿಶಿಷ್ಟ ಬೆಳಕು ಮತ್ತು ಆಕರ್ಷಕ ಅಲಂಕಾರಗಳಿಂದ ಶೃಂಗಾರಗೊಂಡು ಭಕ್ತರ ಮನಸೆಳೆಯುವಂತಾಗಿತ್ತು.
ಸರ್ವಧರ್ಮ ಸೌಹಾರ್ದತೆ
ಈ ವರ್ಷದ ಮಹೋತ್ಸವದ ಕೇಂದ್ರ ವಿಷಯ “ಭರವಸೆ ನಮ್ಮನ್ನು ನಿರಾಸೆ ಮಾಡುವುದಿಲ್ಲ” (ರೋಮಾ 5:5) ಆಗಿದ್ದು, ಸರ್ವಧರ್ಮ ಸೌಹಾರ್ದತೆಯನ್ನು ಹೆಚ್ಚಿಸುತ್ತದೆ. ಬಿನ್ನಹ ಸಲ್ಲಿಸಲು ಮತ್ತು ಸಂತ ಲಾರೆನ್ಸ್ ಅವರ ಪವಾಡಗಳನ್ನು ಸ್ಮರಿಸಲು ವಿವಿಧ ಧರ್ಮದ ಜನರು ಭಾಗವಹಿಸಿದ್ದರು.
ಪ್ರಮುಖ ಬಲಿಪೂಜೆಗಳು
ಮಹೋತ್ಸವದ ಮೂರನೇ ದಿನದಲ್ಲಿ ಹತ್ತು ಬಲಿಪೂಜೆಗಳು ನಡೆದಿದ್ದು, ಬೆಳ್ತಂಗಡಿ ಧರ್ಮಕ್ಷೇತ್ರದ ಧರ್ಮಾಧ್ಯಕ್ಷ ಪರಮಪೂಜ್ಯ ಅ/ವಂ/ ಡಾ/ ಲೋರೆನ್ಸ್ ಮುಕ್ಕುಝಿ ಮುಖ್ಯ ಬಲಿಪೂಜೆಯನ್ನು ನೆರವೇರಿಸಿದರು. ಧಾರ್ಮಿಕ ಬೋಧನೆಯಲ್ಲಿ ಅವರು, “ಭರವಸೆ ಎಂದಿಗೂ ಆಶಭಂಗ ಮಾಡದು; ಕ್ರಿಸ್ತನಲ್ಲಿ ಒಂದಾಗಿ ಭರವಸೆಯ ಯಾತ್ರಾರ್ಥಿಗಳಾಗಿ ಸಾಗಬೇಕು” ಎಂದು ಸಾರಿದರು.
ಗಣ್ಯರ ಭೇಟಿ
ಮಹೋತ್ಸವದಲ್ಲಿ ಹಲವು ರಾಜಕೀಯ ಮತ್ತು ಸಾರ್ವಜನಿಕ ಗಣ್ಯರು ಪಾಲ್ಗೊಂಡರು. ಮಾಜಿ ಸಚಿವರಾದ ವಿನಯ್ ಕುಮಾರ್ ಸೊರಕೆ, ರಮಾನಾಥ್ ರೈ ಮತ್ತು ವಿಧಾನಪರಿಷತ್ ಸದಸ್ಯ ಐವನ್ ಉಪಸ್ಥಿತಿ ಮೆರೆದರು.
ಪಾದಯಾತ್ರೆ ಮತ್ತು ಭಕ್ತರ ಚಟುವಟಿಕೆಗಳು
ಶಿರ್ವ, ಪಾಂಬೂರು, ಮತ್ತು ಮೂಡುಬೆಳ್ಳೆಯಿಂದ ಬಹಳಷ್ಟು ಜನ ಪಾದಯಾತ್ರೆ ಗೈದು ಅತ್ತೂರಿನ ಪುಣ್ಯಕ್ಷೇತ್ರವನ್ನು ತಲುಪಿದರು. ಪುಷ್ಕರಣಿಗೆ ಭೇಟಿ, ಮೊಂಬತ್ತಿ ಬೆಳಗುವಿಕೆ, ಪೂಜಾ ಬಿನ್ನಹ ಸಲ್ಲಿಕೆ, ಬಲಿಪೂಜೆ, ಪಾಪ ನಿವೇದನೆ ಸಂಸ್ಕಾರ, ಮತ್ತು ಪುಷ್ಪತೀರ್ಥದಲ್ಲಿ ಭಾಗವಹಿಸುವ ಮೂಲಕ ಭಕ್ತರು ತಮ್ಮ ಧಾರ್ಮಿಕ ನಂಬಿಕೆಯನ್ನು ದೃಢಪಡಿಸಿದರು.
ಅತ್ತೂರಿನ ಸಂತ ಲಾರೆನ್ಸ್ ಬಸಿಲಿಕಾದ ಮಹೋತ್ಸವವು, ಭಕ್ತರ ಆತ್ಮಸಂತೃಪ್ತಿಯೊಂದಿಗೆ ಧಾರ್ಮಿಕ ನಂಬಿಕೆ, ಸೌಹಾರ್ದತೆ ಮತ್ತು ಸಮುದಾಯ ಭಾವೈಕ್ಯತೆಯನ್ನು ಮತ್ತಷ್ಟು ಘನಗೊಳಿಸಿತು.