ನಾಯಕತ್ವ ವಹಿಸಲು ಜಿಎಸ್‌ಬಿ ಸಮಾಜದ ಯುವಶಕ್ತಿ ಸಿದ್ದರಾಗಬೇಕು:ಬೋಳ ಪ್ರಶಾಂತ್ ಕಾಮತ್ ಕರೆ
ಜಿಎಸ್‌ಬಿ ಯುವಜನ ಸಭಾ ಹೆಬ್ರಿ ಇದರ ಸ್ವರ್ಣ ಮಹೋತ್ಸವ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ
ಹೆಬ್ರಿ:ಸಮಾಜಸೇವೆ ಮತ್ತು ಶಿಕ್ಷಣ ಪ್ರಸಾರದಲ್ಲಿಜಿಎಸ್‌ಬಿ ಸಮಾಜ ಮಹತ್ವಪೂರ್ಣ ಕೆಲಸ ಮಾಡಿದೆ.ಕಳೆದ 50 ವರ್ಷಗಳಲ್ಲಿ ಈವರೆಗೆ ಯಾವುದೇ ರೀತಿಯ ಸ್ವಾರ್ಥಚಿಂತನೆ ಇಲ್ಲದೆ ಮಾಡಿರುವ ಸೇವೆ ಪ್ರತಿಯೊಬ್ಬರ ಹೃದಯದಲ್ಲಿ ಅಚ್ಚೊತ್ತಿದೆ.ಮುಂದಿನ ದಿನಗಳಲ್ಲಿ ಸಾಮಾಜಿಕ ಸೇವೆಯ ಜೊತೆ ಜಿಲ್ಲೆಯ ಅನ್ಯಾನ್ಯ ಚಟುವಟಿಕೆಗಳಲ್ಲಿ ತೊಡಗಲಿದ್ದು,ತತ್ಸಂಬಂಧ ನಾಯಕತ್ವ ಒದಗಿಸುವ ನಿಟ್ಟಿನಲ್ಲಿ ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ಕಾರ್ಯ ಪ್ರವೃತ್ತರಾಗಬೇಕಿದೆ ಎಂದು ಕಾರ್ಕಳ ಟೈಗರ್ಸ್ ಸಂಸ್ಥಾಪಕ, ಉದ್ಯಮಿ ಬೋಳ ಪ್ರಶಾಂತ್ ಕಾಮತ್ ಹೇಳಿದ್ದಾರೆ.
ಅವರು ಹೆಬ್ರಿ ರಾಮ ಮಂದಿರದಲ್ಲಿ ನಡೆದ ಜಿಎಸ್‌ಬಿ ಯುವಜನ ಸಭಾ ಹೆಬ್ರಿ ಇದರ ಸ್ವರ್ಣ ಮಹೋತ್ಸವ ವರ್ಷದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭದ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು.
ಜಿಎಸ್‌ಬಿ ಸಮುದಾಯ ಮಿಕ್ಕ ಸಮುದಾಯಗಳ ಜೊತೆ ಕೂಡಿಕೊಂಡು ಅರ್ಹರಿಗೆ ಸೂಕ್ತ ಪ್ರಾತಿನಿಧ್ಯ ಮತ್ತು ಅವಕಾಶಗಳಿಗಾಗಿ ಹೋರಾಟ ಮಾಡಬೇಕಾದ ಅಗತ್ಯತೆ ಬಂದೊದಗಿದೆ.ಇದಕ್ಕೆ ಸಮಸ್ತ ಯುವ ಸಮೂಹದ ಶಕ್ತಿ ಮತ್ತು ಬೆಂಬಲ ಹರಿದು ಬರಬೇಕು ಎಂದು ಬೋಳ ಪ್ರಶಾಂತ್ ಕಾಮತ್ ಹೇಳಿದರು.
ರಾಮ ಮಂದಿರ ಅಧ್ಯಕ್ಷ ಗುಂಡು ನಾಯಕ್ ಎಚ್. ಅಧ್ಯಕ್ಷತೆ ವಹಿಸಿದ್ದರು.ನೂತನ ಅಧ್ಯಕ್ಷ ನಾರಾಯಣ ಪ್ರಭು,ಕಾರ್ಯದರ್ಶಿ ಮಹೇಂದ್ರ ನಾಯಕ್,ನಿಕಟಪೂರ್ವ ಅಧ್ಯಕ್ಷ ಸುದೇಶ್ ಪ್ರಭು, ಕಾರ್ಯದರ್ಶಿ ವಿಕ್ರಂ ಪೈ ವೇದಿಕೆಯಲ್ಲಿ ಉಪಸ್ಥಿತರಿದ್ದರು.ನಿವೃತ್ತ ಶಿಕ್ಷಕಿ ಅರುಣಾ ಎಸ್. ಪ್ರಭು ಕಾರ್ಯಕ್ರಮ ಸಂಯೋಜಿಸಿದರು.