Home Blog Page 31

ನಟಿ ನೊರಾ ಫತೇಹಿ ರೀತಿ ದೇಹ ಹೊಂದುವಂತೆ ಹಿಂಸೆ : ಪತ್ನಿ ದೂರು

0

ನಟಿ ನೊರಾ ಫತೇಹಿ ರೀತಿ ದೈಹಿಕ ಸೌಂದರ್ಯ ಹೊಂದುವಂತೆ ಪತಿ ಕಿರುಕುಳ ನೀಡುತ್ತಾನೆ ಎಂದು ಉತ್ತರ ಪ್ರದೇಶದ ಮಹಿಳೆಯೊಬ್ಬಳು ಆರೋಪಿಸಿದ್ದಾಳೆ.

ದೈಹಿಕ ಶಿಕ್ಷಣ ಶಿಕ್ಷಕನಾಗಿರುವ ಪತಿ ತನ್ನನ್ನು ದಪ್ಪ ಹಾಗೂ ಕುರೂಪಿ ಎಂದು ಹಿಂಸಿಸುತ್ತಾನೆ. ಜೊತೆಗೆ ನಿತ್ಯ 3 ಗಂಟೆ ವ್ಯಾಯಾಮ ಮಾಡದಿದ್ದರೆ ಊಟ ನೀಡದೆ ಬೆದರಿಸುತ್ತಾನೆ. ಅಲ್ಲದೆ ವಿವಾಹವಾದಾಗ ತನ್ನ ಪೋಷಕರು 76 ಲಕ್ಷ ವ್ಯಯಿಸಿದ್ದರು. ಈಗ ಮತ್ತೆ ವರದಕ್ಷಿಣೆಗಾಗಿ ಪತಿಯ ಪೋಷಕರು ಚಿತ್ರಹಿಂಸೆ ನೀಡುತ್ತಿದ್ದಾರೆ ಎಂದು ತನ್ನ ದೂರಿನಲ್ಲಿ ಮಹಿಳೆ ದಾಖಲಿಸಿದ್ದಾಳೆ.

ಹೊಸ್ಮಾರಿನಲ್ಲಿ ತಿಮರೋಡಿಯನ್ನು ಕರೆದೊಯ್ಯುವಾಗ ಅಡಿಷನಲ್ ಎಸ್ಪಿಯ ಕಾರಿಗೆ ಗ ಬೆಂಬಲಿಗರ ಕಾರು ಢಿಕ್ಕಿ – ಪ್ರಕರಣ ದಾಖಲು

0

 

ಬ್ರಹ್ಮಾವರ ಪೊಲೀಸರು ಪ್ರಕರಣ ಒಂದರ ವಿಚಾರಣೆಗೆ ಮಹೇಶ್‌ ಶೆಟ್ಟಿ ತಿಮರೋಡಿ ಅವರನ್ನು ಕರೆದೊಯುತ್ತಿದ್ದ ವೇಳೆ ಕಾರ್ಕಳ ಹೊಸ್ಮಾರಿನಲ್ಲಿ ಅಡಿಷನಲ್ ಎಸ್ಪಿ ಅವರ ವಾಹನಕ್ಕೆ ತಿಮರೋಡಿ ಅವರ ಬೆಂಬಲಿಗರ ಕಾರು ಢಿಕ್ಕಿಯಾದ ಘಟನೆ ಸಂಭವಿಸಿದೆ. ಈ ಬಗ್ಗೆ ಕಾರ್ಕಳ ಗ್ರಾಮಾಂತರ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.

ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದ ಮೇಲೆ ಮಹೇಶ್ ಶೆಟ್ಟಿ ತಿಮರೋಡಿ ಅವರ ವಿರುದ್ಧ ರಾಜೀವ್‌ ಕುಲಾಲ್‌ ಅವರು ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಬ್ರಹ್ಮಾವರ ಪೊಲೀಸರು ಉಜಿರೆಯಲ್ಲಿರುವ ತಿಮರೋಡಿ ಮನೆಯಲ್ಲೇ ಅವರನ್ನು ವಶಕ್ಕೆ ಪಡೆದು ಬ್ರಹ್ಮಾವರಕ್ಕೆ ಕರೆದೊಯ್ಯುತ್ತಿದ್ದರು. ಈ ವೇಳೆ ಅವರ ಹಿಂದೆ ಬರುತ್ತಿದ್ದ ತಿಮರೋಡಿ ಬೆಂಬಲಿಗರ ಕಾರು ಪೊಲೀಸ್ ವಾಹನಕ್ಕೆ ಗುದ್ದಿ ಕರ್ತವ್ಯಕ್ಕೆ ಅಡ್ಡಿ ಪಡಿಸಲಾಗಿದೆ ಎಂದು ಆರೋಪಿಸಲಾಗಿದೆ. ಸದ್ಯಕ್ಕೆ ಕಾರು ಸಹಿತ ವಾಹನದಲ್ಲಿದ್ದ ಸೃಜನ್, ಹಿತೇಶ್ ಶೆಟ್ಟಿ, ಸುಜಿತ್ ಮಡಿವಾಳ ಅವರ‌ನ್ನು ಕಾರ್ಕಳ ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡರು‌.

ಕಾರ್ಕಳ: ಕೇವಲ ಪುಸ್ತಕ ಓದಿದ್ರೆ ಮಾತ್ರ ಸಾಧ್ಯವಾಗುವುದಿಲ್ಲ ಯೋಚನೆ ಮಾಡುವ ಶಕ್ತಿಬೇಕು – ಹೆಚ್ ರಾಜೇಶ್ ಪ್ರಸಾದ್

0

 

ಯಾವುದೇ ಒಂದು ಪ್ರಶ್ನೆಗೆ ಕನಿಷ್ಠ ಸಮಯದಲ್ಲಿ ಅತಿ ಸೂಕ್ತ ಉತ್ತರವನ್ನು , ಸುಲಭವಾಗಿ ಪರಿಹಾರ ಕಂಡುಕೊಳ್ಳುವುದು ಮುಖ್ಯ. ಅಂತಹ ಪ್ರಶ್ನೆಗಳನ್ನು ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಕಾಣಬಹುದು. ಅದಕ್ಕೆ ಸಿದ್ಧತೆ ನಡೆಸುವುದು ಅತಿ ಮುಖ್ಯ. ಅದು ಪ್ರಾಥಮಿಕ, ಪ್ರೌಢ, ಪಿಯುಸಿ, ಪದವಿ ಹಂತದ ವಿದ್ಯಾಭ್ಯಾಸದ ಜೊತೆ ಜೊತೆಗೆ ನಡೆಯಬೇಕು.ಜಮ್ಮು ಮತ್ತು ಕಾಶ್ಮೀರ ಸರಕಾರದ ಪ್ರಧಾನ ಕಾರ್ಯದರ್ಶಿ, ಐಎಎಸ್ ಅಧಿಕಾರಿ ಹೆಚ್ ರಾಜೇಶ್ ಪ್ರಸಾದ್ ಹೇಳಿದರು.

ಅವರು ಎಸ್‌.ವಿ.ಟಿ ವನಿತಾ ವನಿತಾ ಪದವಿಪೂರ್ವ ಕಾಲೇಜು ಕಾರ್ಕಳ ಇಲ್ಲಿ “ಮೌಲ್ಯ ಸಂಗಮ” ವರ್ಷದ ಸರಣಿ ಕಾರ್ಯಕ್ರಮದಡಿ ಆಯೋಜಿಸಿದ್ದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ, ಸ್ಪರ್ಧಾತ್ಮಕ ಪರೀಕ್ಷೆಗಳ ಬಗ್ಗೆ ಮಾಹಿತಿ ನೀಡಿ ಮಾತನಾಡಿದರು.

ಮುಂದಕ್ಕೆ ಮಾತನಾಡಿ, ಪದವಿ ಪಡೆದ ನಂತರ ಅದು ಪೂರ್ಣ ಪ್ರಮಾಣದ ಸಿದ್ಧತೆಯೊಂದಿಗೆ ನಡೆದಾಗ ಯಶಸ್ಸು ಪಡೆಯಬಹುದು. ಕೇವಲ ಪುಸ್ತಕ ಓದಿ್ದರೆ ಮಾತ್ರ ಸಾಧ್ಯವಾಗುವುದಿಲ್ಲ ಯೋಚನೆ ಮಾಡುವ ಶಕ್ತಿ ಬೇಕು ಎಂದರು.

ಕಾರ್ಯಕ್ರಮದಲ್ಲಿ ಎಸ್‌ವಿ ಎಜುಕೇಶನ್ ಟ್ರಸ್ಟಿನ ಕೋಶಾಧಿಕಾರಿ ಐ. ರವೀಂದ್ರನಾಥ ಪೈ , ಉಡುಪಿ ಜಿಲ್ಲಾ ಮಾನವ ಆಯೋಗದ ಅಧ್ಯಕ್ಷರಾದ ಉದಯಕುಮಾರ್, ಕಾಲೇಜಿನ ಪ್ರಾಚಾರ್ಯರಾದ ನೇಮಿರಾಜ ಶೆಟ್ಟಿ ಕೆ, ಪ್ರೌಢಶಾಲೆ ವಿಭಾಗದ ಹಿರಿಯ ಸಹ ಶಿಕ್ಷಕರಾದ ಯೋಗೇಂದ್ರ ನಾಯಕ್ ಮತ್ತು ಕಾಲೇಜಿನ ಉಪನ್ಯಾಸಕರು, ಅಧ್ಯಾಪಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಎಸ್‌ವಿ ಎಜುಕೇಶನ್ ಟ್ರಸ್ಟಿನ ಕಾರ್ಯದರ್ಶಿ ಕೆ. ಪಿ. ಶೆಣೈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಇತಿಹಾಸ ಉಪನ್ಯಾಸಕರಾದ ಪ್ರಕಾಶ್ ನಾಯ್ಕ್ ಸ್ವಾಗತಿಸಿದರು. ವಿಜ್ಞಾನ ಶಿಕ್ಷಕಿ ಪ್ರತೀಕ್ಷಾ ಆರ್ ವಂದಿಸಿದರು. ಸಮಾಜಶಾಸ್ತ್ರ ಉಪನ್ಯಾಸಕ ಪ್ರಭಾತ್ ರಂಜನ್ ನಿರೂಪಿಸಿದರು.

ಗೋಲ್ಡನ್ ಬುಕ್ ದಾಖಲೆ ಸೇರಿದ ಕಾಂಗ್ರೆಸ್ ಗ್ಯಾರಂಟಿ ಶಕ್ತಿ ಯೋಜನೆ: ಹರ್ಷ ವ್ಯಕ್ತಪಡಿಸಿದ ಗ್ಯಾರಂಟಿ ಸಮಿತಿ ಅಧ್ಯಕ್ಷರಾದ ಅಜಿತ್ ಹೆಗ್ಡೆ ಮಾಳ

0

 

ಕಾಂಗ್ರೆಸ್ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳಲ್ಲಿ ಒಂದಾಗಿರುವ‌ ಮಹಿಳೆಯರಿಗೆ ಉಚಿತ ಬಸ್ ಪ್ರಯಾಣದ “ಶಕ್ತಿ ಯೋಜನೆ”ಯು ಪ್ರತಿಷ್ಠಿತ “Golden Book of World Record” ನಲ್ಲಿ ದಾಖಲಾಗಿದ್ದು, ಈ ಐತಿಹಾಸಿಕ ಸಾಧನೆಗೆ ಕಾರಣರಾದ ಸನ್ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿಗಳಾದ ಡಿ.ಕೆ. ಶಿವಕುಮಾರ್ ಹಾಗೂ ಸಾರಿಗೆ ಸಚಿವರಾದ ಸನ್ಮಾನ್ಯ ರಾಮಲಿಂಗಾ ರೆಡ್ಡಿಯವರಿಗೆ ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಅಲ್ಲದೆ ಗ್ಯಾರಂಟಿ ಯೋಜನೆಗಳ ಸಮರ್ಪಕ ಅನುಷ್ಠಾನಕ್ಕೆ ಹರ್ಷ ವ್ಯಕ್ತಪಡಿಸಿದ್ದಾರೆ.

ನಾಡಿನ ಬಡ ಮಹಿಳೆಯರಿಗೆ ಉಪಯೋಗವಾಗಲಿ ಎನ್ನುವ ಸದುದ್ದೇಶದಿಂದ ಕಾಂಗ್ರೆಸ್ ನೇತೃತ್ವದ ಸರ್ಕಾರ ಜಾರಿಗೊಳಿಸಿದ ಶಕ್ತಿ ಯೋಜನೆಯಡಿ 2023 ಜೂನ್ 11 ತಾರೀಖಿನಿಂದ 2025 ಜುಲೈ 25 ರವರೆಗೆ 504 ಕೋಟಿ 90 ಲಕ್ಷಕ್ಕೂ ಹೆಚ್ಚು ಬಾರಿ ಮಹಿಳಾ ಪ್ರಯಾಣಿಕರು ಉಚಿತವಾಗಿ ಪ್ರಯಾಣಿಸುವ ಮೂಲಕ ಐತಿಹಾಸಿಕ ದಾಖಲೆ ನಿರ್ಮಿಸಿದ್ದಾರೆ.

ಇದು ಮಹಿಳಾ ಸಬಲೀಕರಣ ಹಾಗೂ ಜನರ ಸರ್ವಾಂಗೀಣ ಅಭಿವೃದ್ಧಿಯ ಕುರಿತು ಕಾಂಗ್ರೆಸ್ ಪಕ್ಷ ಹೊಂದಿರುವ ದೂರದೃಷ್ಟಿಯನ್ನು ಸೂಚಿಸುತ್ತದೆ. ಕಾಂಗ್ರೆಸ್ ಸರ್ಕಾರದ ಶಕ್ತಿ ಯೋಜನೆಯಿಂದಾಗಿ ಉದ್ಯೋಗಕ್ಕೆ ತೆರಳುವ ಮಹಿಳೆಯರು, ಶಾಲಾ ಕಾಲೇಜಿಗೆ, ವೈದ್ಯಕೀಯ ಚಿಕಿತ್ಸೆಗೆ ಆಸ್ಪತ್ರೆಗೆ ತೆರಳುವ, ಉದ್ಯೋಗಕ್ಕಾಗಿ ನಿತ್ಯ ಸಂಚರಿಸುವ ಮಹಿಳೆಯರಿಗೆ ಅತ್ಯಂತ ಉಪಕಾರಿಯಾಗಿದೆ ಹಾಗೂ ಮಹಿಳಾ ಸಬಲೀಕರಣಕ್ಕೆ ಪೂರಕವಾಗಿದೆ.

ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಂದ ರಾಜ್ಯದ ಜನತೆಗೆ ಆಗುತ್ತಿರುವ ಉಪಯೋಗಗಳನ್ನು ಇಂದು ವಿಶ್ವ ದಾಖಲೆಯ ಪುಸ್ತಕಗಳು ಗುರುತಿಸಿರುವುದು ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸಿ ರಾಜ್ಯ ದಿವಾಳಿಯಾಗುತ್ತದೆ ಎಂದು ಹುಯಿಲೆಬ್ಬಿಸಿದ ಬಿಜೆಪಿ ಪಕ್ಷದ ಅಪಪ್ರಚಾರಗಳಿಗೆ ಇದು ಸರಿಯಾದ ಉತ್ತರವಾಗಿದೆ. ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳನ್ನು ಟೀಕಿಸುತ್ತಿರುವ ಬಿಜೆಪಿ ನಾಯಕರು ಬಿಜೆಪಿಯ ಚುನಾವಣಾ ಪ್ರಣಾಳಿಕೆಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಯನ್ನು ನಕಲು ಮಾಡುತ್ತಿದ್ದಾರೆ. ಹಾಗಾಗಿ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ವಿಶ್ವ ದಾಖಲೆಯ ಪುಸ್ತಕ ಸೇರಿದ್ದು ಮಾತ್ರವಲ್ಲದೇ ಬಿಜೆಪಿ ನಾಯಕರ ಕಣ್ಣನ್ನು ತೆರೆಸುವಲ್ಲಿಯೂ ಯಶಸ್ವಿಯಾಗಿದೆ ಎಂದು ಕಾರ್ಕಳ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಅಧ್ಯಕ್ಷ ಅಜಿತ್ ಹೆಗ್ಡೆ ಮಾಳ ತಮ್ಮ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಕಾರ್ಕಳ: ಬ್ಲಾಕ್ ಕಾಂಗ್ರೆಸ್ ಆಶ್ರಯದಲ್ಲಿ ಮಹನೀಯರ ಜನ್ಮದಿನ ಆಚರಣೆ

0

 

ಕಾರ್ಕಳ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಮಹನೀಯರಾದ ಬ್ರಹ್ಮಶ್ರೀ ನಾರಾಯಣ ಗುರು ಹಾಗೂ ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಮತ್ತು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಭಾವಚಿತ್ರಕ್ಕೆ ದೀಪ ಬೆಳಗಿಸಿ ಪುಷ್ಪಾರ್ಚನೆಗೈದು ಗೌರವ ಸಲ್ಲಿಸುವ ಮೂಲಕ ಜನ್ಮ ದಿನಾಚರಣೆಯನ್ನು ಆಚರಿಸಲಾಯಿತು.

ಸಭೆಯಲ್ಲಿ ಕಾರ್ಕಳ ಕಾಂಗ್ರೆಸ್ ಮುಖಂಡರಾದ ಉದಯ ಶೆಟ್ಟಿ ಮುನಿಯಾಲು ಅವರು ಭಾಗವಹಿಸಿ ಮಾತನಾಡಿ ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ಭಾರತ ಮಾತ್ರವಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಅನುಸರಿಸಲಾಗುತ್ತಿರುವುದು ಗುರುಗಳ ಸಂದೇಶಕ್ಕಿರುವ ಶಕ್ತಿಯನ್ನು ಸೂಚಿಸುತ್ತದೆ ಎಂದರು.

ಕಾಂಗ್ರೆಸ್ ಉಡುಪಿ ಜಿಲ್ಲಾ ವಕ್ತಾರ ಬಿಪಿನ್ ಚಂದ್ರಪಾಲ್ ನಕ್ರೆ ಅವರು ಮಾತನಾಡಿ, ಬ್ರಹ್ಮಶ್ರೀ ನಾರಾಯಣ ಗುರುಗಳು ಜಾತಿ ತಾರತಮ್ಯದ ವ್ಯವಸ್ಥೆಯನ್ನು ಕ್ರಾಂತಿಕಾರಿ ನಿಲುವುಗಳ ಮೂಲಕ ಎದುರಿಸಿ ಸ್ವಾಭಿಮಾನಿ ಸಮೂಹವನ್ನು ಕಟ್ಟುವಲ್ಲಿ ಶ್ರಮಿಸಿದರು, ಸಮಾನತಯೆ ಹರಿಕಾರನಾಗಿ ನಾರಾಯಣ ಗುರುಗಳ ಸಂದೇಶ ಇಂದಿಗೂ ಅನುಕರಣೀಯ ಎಂದರು. ಮಾಜಿ ಪ್ರಧಾನಿ ದಿ. ರಾಜೀವ್ ಗಾಂಧಿ ಅವರು ಪಂಚಾಯತ್ ರಾಜ್ ವ್ಯವಸ್ಥೆಯನ್ನು ಸಮರ್ಪಕವಾಗಿ ಅನುಷ್ಠಾನಿಸಿದ ಪರಿಣಾಮ ಇಂದು ಜನ ಸಾಮಾನ್ಯನಿಗೂ ಸ್ಥಳೀಯಾಡಳಿತ ಸಂಸ್ಥೆಯಲ್ಲಿನ ಅಧಿಕಾರ ದೊರಕುವಂತಾಯಿತು ಎಂದರು.

ಮಾಜಿ ತಾಲೂಕು ಪಂಚಾಯತ್ ಸದಸ್ಯರಾದ ದಯಾನಂದ ಬಂಗೇರ ಅವರು ಮಾತನಾಡಿ ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರು ಭೂಸುಧಾರಣಾ ಕಾಯ್ದೆಯನ್ನು ಕರ್ನಾಟಕ ರಾಜ್ಯದಲ್ಲಿ ಸಮರ್ಪಕವಾಗಿ ಅನುಷ್ಠಾನಗೊಳಿಸಿ ಬಡವರಿಗೆ, ಭೂರಹಿತ ಕೃಷಿ ಕಾರ್ಮಿಕರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿ ಕೊಟ್ಟರು. ಆದರೆ ಇಂದು ದೇವರಾಜ ಅರಸು ಅವರು ಅನುಷ್ಠಾನಗೊಳಿಸಿದ ಭೂಸುಧಾರಣಾ ಕಾಯ್ದೆಯ ಮೂಲಕ ಭೂಮಿ ಪಡೆದವರು ಕಾಂಗ್ರೆಸ್ ಪಕ್ಷವನ್ನು ಪ್ರಶ್ನಿಸುತ್ತಿರುವುದು ವಿಪರ್ಯಾಸ ಎಂದರು.

ಬ್ಲಾಕ್ ಅಧ್ಯಕ್ಷರಾದ ಶುಭದ್ ರಾವ್ ಅವರು ಮಾತನಾಡಿ ಬ್ರಹ್ಮಶ್ರೀ ನಾರಾಯಣಗುರುಗಳ ತತ್ವಾದರ್ಶನವನ್ನು ಜೀವನದಲ್ಲಿ ಅಳವಡಿಸುವುದೇ ಗುರುಗಳಿಗೆ ಸಲ್ಲಿಸುವ ಗೌರವ ಎಂದರು. ಕಾಂಗ್ರೆಸ್ ಸಮಿತಿಯ ಜಿಲ್ಲಾ ಉಪಾದ್ಯಕ್ಷರಾದ ಸುಧಾಕರ ಕೋಟ್ಯಾನ್ ಸಂದರ್ಭೋಚಿತವಾಗಿ ಮಾತನಾಡಿದರು.

ಕಾರ್ಕಳ ಬ್ಲಾಕ್ ಹಿಂದುಳಿದ ವರ್ಗಗಳ ಘಟಕದ ಅಧ್ಯಕ್ಷ ಅನಿಲ್ ಪೂಜಾರಿ ನೆಲ್ಲಿಗುಡ್ಡೆಯವರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಂದೇಶವನ್ನು ವಾಚಿಸಿದರು. ತಾಲೂಕು ಗ್ಯಾರಂಟಿ ಸಮಿತಿಯ ಸದಸ್ಯರಾದ ಸಂತೋಷ್ ದೇವಾಡಿಗ, ಮಾಜಿ ಪ್ರಧಾನಿ ದಿವಂಗತ ರಾಜೀವ್ ಗಾಂಧಿಯವರ ಸಾಧನೆಗಳನ್ನು ವಾಚಿಸಿದರು. ಮತ್ತು ಯುವ ಕಾಂಗ್ರೆಸ್ ಬ್ಲಾಕ್ ಅಧ್ಯಕ್ಷ ಮಲಿಕ್ ಅತ್ತೂರು ಅವರು ಮಾಜಿ ಮುಖ್ಯಮಂತ್ರಿ ದಿ. ದೇವರಾಜ ಅರಸು ಅವರ ಕ್ರಾಂತಿಕಾರಿ ಯೋಜನೆಗಳ ಮಾಹಿತಿಯನ್ನು ವಾಚಿಸಿದರು.

ಈ ಸಂದರ್ಭದಲ್ಲಿ ಹೆಬ್ರಿ ಬ್ಲಾಕ್ ಅಧ್ಯಕ್ಷ ಗೋಪಿನಾಥ ಭಟ್, ಕೆಡಿಪಿ ಸದಸ್ಯರಾದ ಮೊಯಿದಿನಬ್ಬ ಇನ್ನಾ, ರುಕ್ಮಯ ಶೆಟ್ಟಿಗಾರ್, ಅಮಿತಾ ಶೆಟ್ಟಿ, ಕೆಪಿಸಿಸಿ ಕೃಷಿ ಘಟಕದ ರಾಜ್ಯ ಪ್ರಧಾನ ಕಾರ್ಯದರ್ಶಿ ಉದಯ ಶೆಟ್ಟಿ ಕುಕ್ಕುಂದೂರು, ಕುಕ್ಕುಂದೂರು ಗ್ರಾಮ ಪಂಚಾಯತಿ ಅದ್ಯಕ್ಷ ಉಪಾದ್ಯಕ್ಷರಾದ ಶ್ರೀಮತಿ ಉಷಾ.ಕೆ, ಶ್ರೀಮತಿ ಶಿಶಿಕಲಾ, ಮಹಿಳಾ ಕಾಂಗ್ರೆಸಿನ ಮಾಲಿನಿ ರೈ ಸಾಣೂರು, ಮುಸ್ಲಿಂ ಜಮಾತ್ ಅಧ್ಯಕ್ಷ ಪುರಸಭಾ ಸದಸ್ಯ ಅಷ್ಪಕ್ ಅಹಮ್ಮದ್, ಬ್ಲಾಕ್ ಮಹಿಳಾ ಕಾಂಗ್ರೆಸ್ ಅದ್ಯಕ್ಷೆ ಶ್ರೀಮತಿ ಭಾನು ಬಾಸ್ಕರ್ ಪೂಜಾರಿ, ನಗರ ಕಾಂಗ್ರೆಸಿನ ಅದ್ಯಕ್ಷರಾದ ರಾಜೇಂದ್ರ ದೇವಾಡಿಗ, ಶ್ರೀಮತಿ ರೀನಾ ಡಿಸೋಜ, ಬ್ಲಾಕ್ ಉಪಾದ್ಯಕ್ಷ ಜಾರ್ಜ್ ಕ್ಯಾಸ್ಟಲಿನೋ, ಬಿಎಲ್ಎ‌2 ವಿಶ್ವನಾಥ್ ಭಂಡಾರಿ, ಕಾಂತಿ ಶೆಟ್ಟಿ ,ಶೊಭಾ ಪ್ರಸಾದ್, ವಿವಿಧ ಘಟಕದ ಅದ್ಯಕ್ಷರುಗಳು, ಗ್ರಾಮೀಣ ಸಮಿತಿ ಅಧ್ಯಕ್ಷರು, ಗ್ಯಾರಂಟಿ ಸಮಿತಿ ಸದಸ್ಯರು, ಚುನಾಯಿತ ಪ್ರತಿನಿಧಿಗಳು, ಉಪಸ್ಥಿತರಿದ್ದರು.

ಬ್ಲಾಕ್ ವಕ್ತಾರ ಪ್ರದೀಪ್ ಬೇಲಾಡಿ ಕಾರ್ಯಕ್ರಮ ನಿರ್ವಹಿಸಿ ಬ್ಲಾಕ್ ಪ್ರಧಾನ ಕಾರ್ಯದರ್ಶಿ ಅನಿಲ್ ಪೂಜಾರಿ ಮಾಳ ಧನ್ಯವಾದವಿತ್ತರು.

ಸೌಜನ್ಯ ಪರ ಹೋರಾಟಗಾರ ಮಹೇಶ್​ ಶೆಟ್ಟಿ ತಿಮರೋಡಿ ಪೊಲೀಸ್​ ವಶಕ್ಕೆ

0

 

ಸೌಜನ್ಯ ಪರ ಹೋರಾಟಗಾರ ಮಹೇಶ್​ ಶೆಟ್ಟಿ ತಿಮರೋಡಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಉಡುಪಿಯ ಬ್ರಹ್ಮಾವರ ಪೊಲೀಸರು ಬೆಳ್ತಂಗಡಿಗೆ ಆಗಮಿಸಿ ಮಹೇಶ್​ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆದಿದ್ದಾರೆ. ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ದಾಖಲಾದ ಒಂದು ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರ್ಯಕರ್ತ ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆಯಲಾಗಿದೆ. ಎಎಸ್ಪಿ ಸುಧಾಕರ್ ನಾಯಕ್ ನೇತೃತ್ವದ ತಂಡ ಅರೆಸ್ಟ್​ ಮಾಡಿ ಕರೆದುಕೊಂಡು ಹೋಗಿದ್ದಾರೆ.

ಉಡುಪಿ ಪೊಲೀಸರ ತಂಡ ಬೆಳ್ತಂಗಡಿಗೆ ಆಗಮಿಸಿದ್ದು, ಎಎಸ್ಪಿ ಸುಧಾಕರ್ ನಾಯಕ್, ಮಣಿಪಾಲ ಇನ್ ಸ್ಪೆಕ್ಟರ್, ಮಹೇಶ್ ಪ್ರಸಾದ್, ಡಿವೈಎಸ್ಪಿ ಪ್ರಭು ಡಿ.ಟಿ,ಬ್ರಹ್ಮಾವರ, ಇನ್ ಸ್ಪೆಕ್ಟರ್ ಗೋಪಿ ಕೃಷ್ಣ,ಕಾರ್ಕಳ ಗ್ರಾಮಂತರ ಪ್ರಸನ್ನ ಕುಮಾರ್ ಒಳಗೊಂಡ ತಂಡ ಆಗಮಿಸಿ ವಶಕ್ಕೆ ಪಡೆದಿದ್ದಾರೆ.

ಮಹೇಶ್ ​​ಶೆಟ್ಟಿ ತಿಮರೋಡಿ ವಿರುದ್ಧ ಉಡುಪಿಯ ಬ್ರಹ್ಮಾವರ ಠಾಣೆಯಲ್ಲಿ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಬಿ.ಎಲ್. ಸಂತೋಷ್ ವಿರುದ್ಧ ಅವಹೇಳನಕಾರಿ ಹೇಳಿಕೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿತ್ತು. ಈ ದೂರಿನನ್ವಯ ಈ ಕ್ರಮ ಕೈಗೊಳ್ಳಲಾಗಿದೆ.

ಬೆಳ್ತಂಗಡಿಯ ಕಬ್ಬಳ್ಳಿಗೆರೆ ಗ್ರಾಮಕ್ಕೆ ಆಗಮಿಸಿದ ಉಡುಪಿ ಪೊಲೀಸರ ತಂಡವು ಮಹೇಶ್ ಶೆಟ್ಟಿ ತಿಮರೋಡಿಯನ್ನು ವಶಕ್ಕೆ ಪಡೆಯುವ ಉದ್ದೇಶದಿಂದ ಕಾರ್ಯಾಚರಣೆಯನ್ನು ಆರಂಭಿಸಿತು. ನಂತರ ತಿಮರೋಡಿ ನಿವಾಸದಲ್ಲಿ ಭಾರೀ ಹೈಡ್ರಾಮಾ ಸೃಷ್ಟಿಯಾದರೂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಶಕ್ಕೆ ಪಡೆದು ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾರೆ.

ಈ ಆರೋಪವು ಸಾಮಾಜಿಕ ಜಾಲತಾಣದಲ್ಲಿ ತಿಮರೋಡಿಯ ಪೋಸ್ಟ್‌ಗಳಿಗೆ ಸಂಬಂಧಿಸಿದ್ದು, ಧರ್ಮಸ್ಥಳದ ಧಾರ್ಮಿಕ ಮತ್ತು ಸಾಮಾಜಿಕ ಮೌಲ್ಯಗಳನ್ನು ಅವಮಾನಿಸುವ ಉದ್ದೇಶದಿಂದ ಮಾಡಲಾದ ಕೃತ್ಯವೆಂದು ಬಿಜೆಪಿ ದೂರಿದೆ. ಈ ಹಿನ್ನೆಲೆಯಲ್ಲಿ, ಉಡುಪಿ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಾನೂನು ಕ್ರಮಕ್ಕಾಗಿ ತಿಮರೋಡಿಯನ್ನು ವಶಕ್ಕೆ ಪಡೆಯಲಾಗಿದೆ.

 

ಕ್ರೈಸ್ಟ್ ಕಿಂಗ್ : ಕರಾಟೆ ಪಂದ್ಯಾಟದಲ್ಲಿ ಎಂಟನೇ ತರಗತಿಯ ಸುದೀಕ್ಷಾ ರಾಜ್ಯಮಟ್ಟಕ್ಕೆ ಆಯ್ಕೆ

0

 

ಸಾರ್ವಜನಿಕ ಶಿಕ್ಷಣ ಇಲಾಖೆ, ಕರ್ನಾಟಕ ಸರಕಾರ, ಜಿಲ್ಲಾ ಉಪನಿರ್ದೇಶಕರ ಕಛೇರಿ ಉಡುಪಿ ಹಾಗೂ ಜಿಲ್ಲಾ ಪಂಚಾಯತ್ ಉಡುಪಿ ಇವರ ಆಶ್ರಯದಲ್ಲಿ ಸಂತ ಫ್ರಾನ್ಸಿಸ್ ಆಂಗ್ಲಮಾಧ್ಯಮ ಶಾಲೆ ಉದ್ಯಾವರ ಇಲ್ಲಿ ನಡೆದ ಉಡುಪಿ ಜಿಲ್ಲಾಮಟ್ಟದ 14/17 ರ ವಯೋಮಿತಿಯ ಬಾಲಕಿಯರ ಕರಾಟೆ ಪಂದ್ಯಾಟದಲ್ಲಿ ಕಾರ್ಕಳ ಕ್ರೈಸ್ಟ್ ಕಿಂಗ್ ಆಂಗ್ಲಮಾದ್ಯಮ ಪ್ರೌಢಶಾಲೆಯ ಎಂಟನೇ ತರಗತಿಯ ವಿದ್ಯಾರ್ಥಿನಿ ಸುದೀಕ್ಷಾ ರಾಜ್ಯಮಟ್ಟದ ಕರಾಟೆ ಪಂದ್ಯಾಟಕ್ಕೆ ಆಯ್ಕೆಯಾಗಿದ್ದಾರೆ.

ಉಡುಪಿ ಜಿಲ್ಲಾಮಟ್ಟದ ಪಂದ್ಯಾಟದಲ್ಲಿ ಪ್ರಥಮ ಸ್ಥಾನ ಗಳಿಸುವುದರ ಮೂಲಕ ಸುದೀಕ್ಷಾ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದು, ಉಳಿದಂತೆ ಏಳನೇ ತರಗತಿಯ ಶಾರ್ವಿ ಹಾಗೂ ಎಂಟನೇ ತರಗತಿಯ ಅದ್ವಿತ್ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.

 

ಜೇಸಿಐ ಕಾರ್ಕಳ ರೂರಲ್ ಹಾಗೂ ಎಸ್.ವಿ.ಟಿ. ಕಾಲೇಜಿನ ಸಹಯೋಗದಲ್ಲಿ ವ್ಯಕ್ತಿತ್ವ ವಿಕಸನ ತರಬೇತಿ

0

 

ಶ್ರೀ ವೆಂಕಟರಮಣ ಮಹಿಳಾ ಕಾಲೇಜು ಕಾರ್ಕಳ ಮತ್ತು ಜೇಸಿಐ ಕಾರ್ಕಳ ಇದರ ಜಂಟಿ ಆಶ್ರಯದಲ್ಲಿ ವ್ಯಕ್ತಿತ್ವ ವಿಕಸನ ತರಬೇತಿಯನ್ನು ಜೆಸಿಐ ಇಂಡಿಯಾ ರಾಷ್ಟ್ರೀಯ ತರಬೇತುದಾರಾದ ಜೆಸಿ ಸುಧಾಕರ್ ಪೂಜಾರಿ ಕಾರ್ಕಳ ನಡೆಸಿಕೊಟ್ಟರು.

ಈ ಕಾರ್ಯಕ್ರಮದಲ್ಲಿ ಜೆಸಿಐ ಕಾರ್ಕಳ ರೂರಲ್ ಅಧ್ಯಕ್ಷರಾದ ಜೆಸಿ ಅರುಣ್ ಮಾಂಜ, ಜೆಸಿಐ ಕಾರ್ಕಳ ರೂರಲ್ ಪೂರ್ವಾಧ್ಯಕ್ಷರು ಕಾರ‍್ಯಕ್ರಮದ ಸಂಯೋಜಕರಾದ ಜೆಸಿ ವೀಣಾ ರಾಜೇಶ್, ನಿಕಟ ಪೂರ್ವ ಅಧ್ಯಕ್ಷರಾದ ಜೆಸಿ ಸಂತೋಷ್ ಬಂಗೇರ ಉಪಸ್ಥಿತರಿದ್ದರು. ಪ್ರಾಂಶುಪಾಲರಾದ ಪ್ರೋ| ಗೀತಾ.ಜಿ. ಇವರು ಸ್ವಾಗತಿಸಿದರು. ಜೇಸಿ ವೀಣಾ ರಾಜೇಶ್ ವಂದಿಸಿದರು. ಕು.ದೀಪಾ ಇವರು ಕಾರ್ಯಕ್ರಮ ನಿರೂಪಿಸಿದರು.

ಬಜಗೋಳಿ ಜೈನ್ ಮಿಲನ್ ಮತ್ತು ಯುವ ಜೈನ್ ಮಿಲನ್ ಆಶ್ರಯದಲ್ಲಿ ಆಟಿದ ಕೂಟ ಕಾರ್ಯಕ್ರಮ

0

 

ಬಜಗೋಳಿ ಅಪ್ಪಾಯಿ ಶ್ರೀ 1008 ಅನಂತನಾಥ ಸ್ವಾಮಿ ಬಸದಿಯ ಸಭಾಂಗಣದಲ್ಲಿ ಬಜಗೋಳಿ ಜೈನ ಮಿಲನ್ ಮತ್ತು ಯುವ ಜೈನ್ ಮಿಲನ್ ಸಹಯೋಗದಲ್ಲಿ 79 ನೇ ಸ್ವಾತಂತ್ರ ದಿನಾಚರಣೆ ಹಾಗೂ ಆಟಿದ ಕೂಟ ಕಾರ್ಯಕ್ರಮ ಆ.15 ರಂದು ಜರುಗಿತು.

ಅತಿಥಿಗಳು ದೀಪವನ್ನು ಪ್ರಜ್ವಲಿಸಿ ಚೆನ್ನೆಮಣೆಗೆ ಕಾಯಿ ಹಾಕುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮುನಿರಾಜ್ ರೆಂಜಾಳ ಅವರು ಆಟಿ ತಿಂಗಳಿನ ಮಹತ್ವ, ಅದರ ಹಿಂದಿರುವ ವೈಜ್ಞಾನಿಕ ಕಾರಣಗಳು, ಅಂದಿನ ಆಟಿ ತಿಂಗಳಿನ ಆಚರಣೆಗೂ ಇಂದಿನ ಆಚರಣೆಗೂ ಇರುವ ವ್ಯತ್ಯಾಸ ಇತ್ಯಾದಿಗಳನ್ನು ತಿಳಿಸುವುದರ ಜೊತೆಗೆ ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿದ ಸ್ಥಳೀಯ ಜೈನರ ಪರಿಚಯ ಮತ್ತು ಪಾತ್ರವನ್ನುಸಭೆಗೆ ತಿಳಿಸಿದರು.

ಇದೇ ಕಾರ್ಯಕ್ರಮದಲ್ಲಿ ಅನಾಥ ಶ್ವಾನ ಹಾಗೂ ಗೋವುಗಳಿಗಾಗಿ ಅಹಿಂಸಾ ಅನಿಮಲ್ ಕೇರ್ ಟ್ರಸ್ಟ್ ನಡೆಸುತ್ತಿರುವ ವೀರಾಂಜಯ ಜೈನ್ ರನ್ನು ಮಿಲನ್ ಅಧ್ಯಕ್ಷರಾದ ವರ್ಧಮಾನ್ ಜೈನ್ ಹಾಗೂ ಅವರ ಪುತ್ರಿ ಶ್ರದ್ದಾ ಜೈನ್ (ಅಯ್ಯೋ ಶ್ರದ್ದಾ) ನಗದು ಪುರಸ್ಕಾರ ನೀಡಿ ಗೌರವಿಸಿದರು.

ಮುಡಾರು ನಲ್ಲೂರು ಮತ್ತು ಮಾಳ ಗ್ರಾಮಗಳ ವ್ಯಾಪ್ತಿಯಲ್ಲಿ ಬರುವ 2024-25ರ ಶೈಕ್ಷಣಿಕ ಸಾಲಿನ ಎಸ್ ಎಸ್ ಎಲ್ ಸಿ ಮತ್ತು ಪಿಯುಸಿಯಲ್ಲಿ ಶೇಕಡ 90 ಅಥವಾ ಅದಕ್ಕಿಂತ ಮೇಲ್ಪಟ್ಟು ಅಂಕಗಳಿಸಿದ ಪ್ರತಿಭಾನ್ವಿತ ಜೈನ ವಿದ್ಯಾರ್ಥಿಗಳನ್ನು ಹಾಗೂ ಬಸದಿಯಲ್ಲಿ ಪ್ರತಿ ಆದಿತ್ಯವಾರ ಜರಗುವ ವಿತರಾಗ ಪಾಠಶಾಲೆಯ ವಾರ್ಷಿಕ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳನ್ನು ಪ್ರಮಾಣ ಪತ್ರ ನೀಡಿ ಸನ್ಮಾನಿಸಲಾಯಿತು.

ಇದೇ ಸಂದರ್ಭದಲ್ಲಿ ಜೈನ ಮುನಿಗಳ ಬಗ್ಗೆ ಜೈನ ಸಮಾಜದ ಬಗ್ಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಖಾವಂದರ ಬಗ್ಗೆ ಅವಹೇಳನಕಾರಿಯಾಗಿ ಅಪಪ್ರಚಾರ ಮಾಡುತ್ತಿರುವ ಅವರ ವಿರುದ್ಧ ಖಂಡನಾ ನಿರ್ಣಯ ಕೈಗೊಳ್ಳಲಾಯಿತು.

ನವೀನ್ ಕುಮಾರ್ ಜೈನ್ ಅವರು ಮಾತನಾಡಿ ಧರ್ಮಸ್ಥಳ ಕ್ಷೇತ್ರದಿಂದ ಹಾಗೂ ಖಾವಂದರಿಂದ ಸಮಾಜಕ್ಕೆ ಆಗುತ್ತಿರುವ ಸತ್ಕಾರ್ಯಗಳ ಬಗ್ಗೆ ಮಾಹಿತಿಯನ್ನು ನೀಡಿದರು.

ಜೈನ ಧರ್ಮದ ಬಗ್ಗೆ ಜೈನಮನಿಗಳ ಬಗ್ಗೆ ಅಪಪ್ರಚಾರ ಮಾಡುತ್ತಿರುವವರ ವಿರುದ್ಧ ಜೈನ ಸಮಾಜದ ಪ್ರತಿಕ್ರಿಯೆ ಹೇಗಿರಬೇಕು ಎಂಬುವುದರ ಜಾಗೃತಿ ಸಂದೇಶವನ್ನು ಧರ್ಮ ಚಿಂತಕರಾದ ಭರತ್ ರಾಜ್ ತಿಳಿಸಿದರು.

ಜೈನ್ ಮಿಲನ್ ಅಧ್ಯಕ್ಷರಾದ ವರ್ಧಮಾನ ಜೈನ್ ಇವರ ಅಧ್ಯಕ್ಷತೆಯಲ್ಲಿ ಜರುಗಿದ ಈ ಕಾರ್ಯಕ್ರಮಕ್ಕೆ ಅಪ್ಪಾಯಿ ಬಸದಿಯ ಆಡಳಿತ ಮುಕ್ತೇಸರರಾದ ಸುಮ್ಮಗುತ್ತು ಜಯವರ್ಮ ಹೆಗ್ಡೆ, ಬೆಳ್ತಂಗಡಿ ಜೈನ್ ಮಿಲನ್ ಅಧ್ಯಕ್ಷ ನವೀನ್ ಕುಮಾರ್ ಜೈನ್, ಖ್ಯಾತ ಸಾಹಿತಿ ಹಾಗೂ ಚಿಂತಕ ಮುನಿರಾಜ್ ರೆಂಜಾಳ, ಭಾರತೀಯ ಜೈನ್ ಮಿಲನ್ ವಲಯ 8 ಇದರ ವಲಯ ನಿರ್ದೇಶಕರಾದ ಶ್ರೀವರ್ಮ ಅಜ್ರಿ ಅತಿಥಿಗಳಾಗಿ ಆಗಮಿಸಿದ್ದರು. ಜೈನ್ ಮಿಲನ್ ಕಾರ್ಯದರ್ಶಿ ಓಂ ಪ್ರಕಾಶ್ ಜೈನ್, ಯುವ ಜೈನ್ ಮಿಲನ್ ಅಧ್ಯಕ್ಷರಾದ ಪ್ರಧಾನ್ ಜೈನ್ ಕಾರ್ಯದರ್ಶಿ ಸಾತ್ವಿಕ್ ಜೈನ್ ಉಪಸ್ಥಿತರಿದ್ದರು.

ವಿರಾಜ್ ಜೈನ್ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಓಂ ಪ್ರಕಾಶ್ ಜೈನ್ ಸ್ವಾಗತಿಸಿದರು. ಕಾವ್ಯ ಪ್ರಮೋದ್ ಜೈನ್ ಧನ್ಯವಾದ ಮತ್ತು ಶ್ರೇಯಾಂಸ ಜೈನ್ ಕಾರ್ಯಕ್ರಮ ನಿರೂಪಿಸಿದರು.

ಆಟಿ ತಿಂಗಳಿನ ಕಂದ ಮೂಲ ರಹಿತ ತಿಂಡಿ ತಿನಿಸುಗಳನ್ನು ಸವಿದರು. ‘ಹುಲ್ಸೇ ಫ್ಯಾಷನ್’ ಮೂಡಬಿದಿರೆ ಇವರ ಸೀರೆಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ವಿದ್ಯಾ ವಿನುತ ಇವರ ಮಣಿಸರಗಳ ಮಾರಾಟ, ಕಾರ್ಯಕ್ರಮದ ವಿಶೇಷ ಆಕರ್ಷಣೆ ಎನಿಸಿತು.

 

ಕಾರ್ಕಳ: ನೇಣು ಬಿಗಿದು ಆತ್ಮಹತ್ಯೆ

0

 

ವ್ಯಕ್ತಿಯೋರ್ವರು ವಿದ್ಯುತ್ ತಂತಿ ಬಳಸಿ ನೇಣಿಗೆ ಶರಣಾದ ಘಟನೆ ಆ. 19 ರಂದು ಹಿರ್ಗಾನದ ಸ್ವಾಗತ್ ವೈನ್ಸ್ ಪಕ್ಕದ ಕಟ್ಟಡದಲ್ಲಿ ನಡೆದಿದೆ.

ಮೃತ ವ್ಯಕ್ತಿಯನ್ನು ಹಿರ್ಗಾನ ಗ್ರಾಮದ ಕಾನಾಂಗಿ ನಿವಾಸಿ ಮಂಜುನಾಥ ಎಂದು ಗುರ್ತಿಸಲಾಗಿದ್ದು, ಇವರು ಕಣ್ಣಿನ ಸಮಸ್ಯೆಯಿಂದ ಬಳಲುತ್ತಿದ್ದು, ಇದೇ ಕಾರಣ ಅಥವಾ ಇನ್ಯಾವುದೋ ಕಾರಣದಿಂದ ಜೀವನದಲ್ಲಿ ಜಿಗುಪ್ಸೆಗೊಂಡು ಸಾವಿಗೆ ಶರಣಾಗಿದ್ದಾರೆ.

ಈ ಬಗ್ಗೆ ಮೃತರ ಮಗ ನೀಡಿದ ದೂರಿನ ಅನ್ವಯ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.