ಜೈಲಿನಲ್ಲಿರುವ ಜೆಡಿಯು (JDU) ಅಭ್ಯರ್ಥಿ ಅನಂತ್ ಕುಮಾರ್ ಸಿಂಗ್ 28,206 ಮತಗಳ ಅಂತರದಿಂದ ಜಯಗಳಿಸಿದ್ದಾರೆ.
ಮೊಕಾಮಾ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದ ಅವರು 91,416 ಮತಗಳನ್ನು ಪಡೆದರೆ ಆರ್‌ಜೆಡಿಯ ವೀಣಾ ದೇವಿ ಅವರು 63,210 ಮತಗಳನ್ನು ಪಡೆದರು.
ಜನ್ ಸುರಾಜ್ ಪಾರ್ಟಿ (JSP) ಬೆಂಬಲಿಗನನ್ನು ಕೊಲೆಗೈದ ಪ್ರಕರಣದಲ್ಲಿ ಅನಂತ್ ಕುಮಾರ್ ಸಿಂಗ್ ಈಗ ನ್ಯಾಯಾಂಗ ಬಂಧನದಲ್ಲಿದ್ದಾರೆ. 2005 ರಲ್ಲಿ ಮೊದಲ ಚುನಾವಣೆ ಗೆದ್ದ ಬಳಿಕ ಇಲ್ಲಿಯವರೆಗೆ ಐದು ಬಾರಿ ಮೊಕಾಮಾದಿಂದ ಆಯ್ಕೆ ಆಗುತ್ತಲೇ ಬಂದಿದ್ದಾರೆ.
2010 ರಲ್ಲಿ ಅವರು ಜೆಡಿಯು ಅಭ್ಯರ್ಥಿಯಾಗಿ ಸ್ಪರ್ಧಿಸಿದರೆ 2015 ರಲ್ಲಿ ಜೆಡಿಯು ತೊರೆದು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. 2020 ರ ಚುನಾವಣೆಗೆ ಮೊದಲು ಅವರು ಆರ್‌ಜೆಡಿ ಸೇರಿದ್ದರು.
28 ಕ್ರಿಮಿನಲ್ ಪ್ರಕರಣಗಳನ್ನು ಎದುರಿಸುತ್ತಿದ್ದರೂ, ಶಸ್ತ್ರಾಸ್ತ್ರ ಪ್ರಕರಣದಲ್ಲಿ ಶಿಕ್ಷೆಗೊಳಗಾದ ನಂತರ ಸಿಂಗ್ 2022 ರಲ್ಲಿ ತಮ್ಮ ವಿಧಾನಸಭಾ ಸದಸ್ಯತ್ವವನ್ನು ಕಳೆದುಕೊಂಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಅವರ ಪತ್ನಿ ನೀಲಂ ದೇವಿ ಸ್ಪರ್ಧಿಸಿ ಜಯಗಳಿಸಿದ್ದರು.
ನವೆಂಬರ್ 2 ರಂದು ಜನ ಸುರಾಜ್ ಅಭ್ಯರ್ಥಿ ಪ್ರಿಯದರ್ಶಿ ಪಿಯೂಷ್ ಪರ ಪ್ರಚಾರ ನಡೆಸುತ್ತಿದ್ದ ದರೋಡೆಕೋರ, ರಾಜಕಾರಣಿ ದುಲಾರ್ ಸಿಂಗ್ ಯಾದವ್ ಹತ್ಯೆ ನಡೆದಿತ್ತು. ಈ ಪ್ರಕರಣದಲ್ಲಿ ಪೊಲೀಸರು ಅನಂತ್ ಕುಮಾರ್ ಸಿಂಗ್ ಅವರನ್ನು ಬಂಧಿಸಿದ್ದು ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.
ಜನಮನ ಸೂರೆಗೊಂಡ ಮಕ್ಕಳ ಕಲಾಪ್ರದರ್ಶನ, ಅಹಾರ ಮತ್ತು ಮನೋರಂಜನಾ ಮಳಿಗೆಗಳು
ಕಾರ್ಕಳದ ಕ್ರೈಸ್ಟ್ ಕಿಂಗ್ ಶಿಕ್ಷಣ ಸಂಸ್ಥೆಗಳಲ್ಲಿ ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಆಶ್ರಯದಲ್ಲಿ ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ “ಮಕ್ಕಳ ಹಬ್ಬ” ಕಾರ್ಯಕ್ರಮ ಅದ್ದೂರಿಯಾಗಿ ಸಂಭ್ರಮ ಸಡಗರದೊಂದಿಗೆ ಸ್ಥಳೀಯ ಗಾಂಧಿ ಮೈದಾನದಲ್ಲಿ ನಡೆಯಿತು.
ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಾರುತಿಯವರು ದೀಪ ಬೆಳಗಿ ಮಕ್ಕಳ ಹಬ್ಬಕ್ಕೆ ಚಾಲನೆ ನೀಡಿದರು. ನಂತರ ಮಾತನಾಡಿದ ಅವರು “ಕ್ರೈಸ್ಟ್ ಕಿಂಗ್ ವಿದ್ಯಾಸಂಸ್ಥೆಯು ಅನೇಕ ಹೊಸ ಹೊಸ ಯೋಜನೆಗಳನ್ನು ವಿದ್ಯಾರ್ಥಿಗಳಿಗಾಗಿ ಜಾರಿಗೆ ತಂದಿರುವುದು ಸಂತೋಷದ ವಿಷಯವಾಗಿದೆ. ನೀವು ಅದರ ಸದುಪಯೋಗ ಪಡೆದುಕೊಂಡು ಭವಿಷ್ಯದಲ್ಲಿ ಉತ್ತಮ ಪ್ರಜೆಗಳಾಗಿ ಬಾಳಿ” ಎಂದು ಹೇಳಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಲೋಕೇಶ್ ಸಿ ಅವರು ಮಾತನಾಡಿ “ಮಕ್ಕಳು ಬಾಲ್ಯದಲ್ಲಿಯೇ ಕನಸುಗಳನ್ನು ಕಾಣಬೇಕು. ನೀವು ಕಾಣುವ ಕನಸುಗಳು ನನಸಾಗಬೇಕಾದರೆ ನಿರಂತರ ಪ್ರಯತ್ನ ಪಡಬೇಕು. ಹಾಗಾದಾಗ ಮಾತ್ರ ನೀವು ಬದುಕಿನಲ್ಲಿ ಯಶಸ್ವಿಯಾಗಲು ಸಾಧ್ಯ” ಎಂದು ಹೇಳಿದರು.
ಇನ್ನೋರ್ವ ಅತಿಥಿ ಕುದುರೆಮುಖ ವನ್ಯಜೀವಿ ವಿಭಾಗದ ಉಪ ಅರಣ್ಯ ಸಂರಕ್ಷಕ ಶಿವರಾಮ್‌ಬಾಬು ಎಂ. ಅವರು ಮಾತನಾಡಿ “ಪಾಠದ ಜೊತೆಗೆ ಕ್ರೀಡೆಗೆ ಕೂಡಾ ವಿದ್ಯಾರ್ಥಿಗಳು ಗಮನ ನೀಡಿದಾಗ ಅವರ ದೈಹಿಕ ಆರೋಗ್ಯ ಉತ್ತಮವಾಗಿರಲು ಸಾಧ್ಯ. ನೀವು ನಿಮ್ಮ ಆರೋಗ್ಯ ಉತ್ತಮವಾಗಿರಿಸಿಕೊಳ್ಳುವುದರ ಜೊತೆಗೆ ನಿಮ್ಮ ಮನೆಗಳಲ್ಲಿ ಒಂದೊಂದು ಗಿಡವನ್ನು ನೆಟ್ಟು, ಬೆಳೆಸಿ ಪರಿಸರ ಸಂರಕ್ಷಣೆಯನ್ನು ಮಾಡಿ” ಎಂದು ಕರೆ ನೀಡಿದರು.
ಕಾರ್ಕಳ ರೋಟರಿ ಕ್ಲಬ್‌ನ ಅಧ್ಯಕ್ಷ ನವೀನ್ ಚಂದ್ರ ಶೆಟ್ಟಿ ಅವರು ಮಾತನಾಡಿ, “ವಿದ್ಯಾರ್ಥಿಗಳು ಎಳವೆಯಲ್ಲಿಯೇ ನಾಯಕತ್ವದ ಗುಣಗಳನ್ನು ಬೆಳೆಸಿಕೊಳ್ಳಿ” ಎಂದು ಹೇಳಿದರು.
ಕರಾಟೆಯಲ್ಲಿ ರಾಜ್ಯ ಮಟ್ಟದಲ್ಲಿ ಕ್ರೀಡಾಸ್ಫೂರ್ತಿಯನ್ನು ಮೆರೆದು ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವ ಕುಮಾರಿ ಸುಧೀಕ್ಷಾರವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ಧರು. ನಂತರ ಗಣ್ಯರು ಮಕ್ಕಳು ತಯಾರಿಸಿದ ವಿವಿಧ ವಿಜ್ಞಾನ ಮಾದರಿಗಳ ಪ್ರದರ್ಶನ, ಚಿತ್ರಕಲೆ ಹಾಗೂ ಕ್ರಾಫ್ಟ್, ಮಕ್ಕಳಿಂದಲೇ ನಡೆಸಲ್ಪಡುವ ಆಹಾರ ಮಳಿಗೆಗಳು, ಮನೋರಂಜನಾ ಆಟಗಳ ಮಳಿಗೆಗಳನ್ನು ಉದ್ಘಾಟಿಸಿದರು.
ಕ್ರೈಸ್ಟ್ ಕಿಂಗ್ ಎಜುಕೇಷನ್ ಟ್ರಸ್ಟ್ನ ಕಾರ್ಯದರ್ಶಿ ಆವೆಲಿನ್ ಲೂಯಿಸ್, ಸದಸ್ಯರಾದ ಡಾ.ಪೀಟರ್ ಫೆರ್ನಾಂಡಿಸ್, ಸಂಸ್ಥೆಯ ಪದವಿಪೂರ್ವ ವಿಭಾಗದ ಪ್ರಾಚಾರ್ಯ ಲಕ್ಷ್ಮಿ ನಾರಾಯಣ ಕಾಮತ್, ಪ್ರಾಥಮಿಕ ಶಾಲಾ ಮುಖ್ಯ ಶಿಕ್ಷಕ ರುಡಾಲ್ಪ್ ಕಿಶೋರ್ ಲೋಬೊ, ಸಂಸ್ಥೆಯ ಉಪ ಪ್ರಾಚಾರ್ಯ ಡಾ.ಪ್ರಕಾಶ್ ಭಟ್, ಸಂಸ್ಥೆಯ ಆಪ್ತ ಸಮಾಲೋಚಕಿ ಸಿ.ಡಾ. ಶಾಲೆಟ್ ಸಿಕ್ವೇರಾ, ಆಡಳಿತಾಧಿಕಾರಿ ಕಿರಣ್ ಕ್ರಾಸ್ತ, ಶಿಕ್ಷಕ ರಕ್ಷಕ ಸಂಘದ ಅಧ್ಯಕ್ಷ ದಯಾನಂದ್ ಪದವಿಪೂರ್ವ ವಿಭಾಗ, ಸರಿಟಾ ನೊರೊನ್ಹ ಪ್ರೌಢಶಾಲಾ ವಿಭಾಗ ಹಾಗೂ ಉದಯರವಿ ಪ್ರಾಥಮಿಕ ವಿಭಾಗ ಮುಂತಾದವರು ವೇದಿಕೆಯಲ್ಲಿ ಉಪಸ್ಥಿತರಿದ್ದರು.
ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಜ್ಞಾನ ಮಾದರಿಗಳ ಪ್ರದರ್ಶನ, ಕಲೆ ಮತ್ತು ಕರಕುಶಲ ವಸ್ತುಗಳ ಪ್ರದರ್ಶನ, ವಿವಿಧ ತಿಂಡಿ ತಿನಿಸುಗಳು ಹಾಗೂ ಮನೋರಂಜನಾ ಆಟಗಳ ಸ್ಟಾಲ್, ಸ್ಥಳದಲ್ಲಿಯೇ ಚಿತ್ರ ಬಿಡಿಸುವುದು ಮುಂತಾದವುಗಳು ನಡೆಯಿತು. ಮಕ್ಕಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಜೋಸ್ನ ಸ್ನೇಹಲತಾರವರು ಸ್ವಾಗತಿಸಿ, ಪ್ರಾಥಮಿಕ ವಿಭಾಗದ ಆಂಗ್ಲಭಾಷಾ ಶಿಕ್ಷಕಿ ಶ್ರೀಮತಿ ಆಲಿಸ್ ಲೋಬೋ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.
ತಾಯಿಯೊಂದಿಗೆ ಹೊಸ ಮೊಬೈಲ್ ಕೊಡಬೇಕೆಂದು ಜಗಳವಾಡಿ ಮನೆ ಬಿಟ್ಟು ಹೋಗಿದ್ದ ಬಾಲಕ ನೀರಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ನಂದಳಿಕೆ ಬಳಿ ನಡೆದಿದೆ.
ಸುಮಂತ್ (16) ಮೃತ ಬಾಲಕ ಎಂದು ತಿಳಿದು ಬಂದಿದೆ. ಈತನು ನಿಟ್ಟೆ ಕಾಲೇಜಿನಲ್ಲಿ ಪ್ರಥಮ ಪಿಯುಸಿ ವ್ಯಾಸಂಗ ಮಾಡುತ್ತಿದ್ದನು. ನ. ೧೨ ರಂದು ಮನೆಯಲ್ಲಿ ತನ್ನ ತಾಯಿಯೊಂದಿಗೆ ಹೊಸ ಮೊಬೈಲ್ ತೆಗೆದುಕೊಡಬೇಕೆಂದು ಜಗಳ ಮಾಡಿ ಮನೆ ಬಿಟ್ಟು ಹೋಗಿದ್ದು, ಆತನನ್ನು ಎಲ್ಲಾ ಕಡೆ ಹುಡುಕಾಡಿದರೂ ಪತ್ತೆಯಾಗಿಲ್ಲ.
ಕೊಡ್ಸರಬೆಟ್ಟು ಎಂಬಲ್ಲಿ ಸೂರ್ಯಕಾಂತ ಶೆಟ್ಟಿ ಎಂಬುವವರ ಜಾಗದಲ್ಲಿರುವ ಕಲ್ಲಿನ ಕೋರೆಯ ನಿಂತ ನೀರಿನ ಬಳಿ ಆತನ ಚಪ್ಪಲಿ ಕಂಡುಬಂದಿದ್ದು, ಅನುಮಾನಗೊಂಡು ನೀರಿನಲ್ಲಿ ಹುಡುಕಾಡಿದಾಗ ಆತನ ಮೃತದೇಹ ಪತ್ತೆಯಾಗಿದೆ.
ಈ ಬಗ್ಗೆ ಮೃತನ ಸಂಬಂಧಿ ನೀಡಿದ ದೂರಿನ ಅನ್ವಯ ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಪದ್ಮಶ್ರೀ ಪುರಸ್ಕೃತರಾದ ಸಾಲುಮರದ ತಿಮ್ಮಕ್ಕ (114) ವಿಧಿವಶರಾಗಿದ್ದಾರೆ. ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಆದರೆ ಚಿಕಿತ್ಸೆ ಫಲಿಸದೆ ಇಂದು ಮಧ್ಯಾಹ್ನ 12 ಗಂಟೆಗೆ ನಿಧನ ಹೊಂದಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ.
ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನಲ್ಲಿ 1911ರ ಜೂನ್ 30ರಂದು ಜನಿಸಿದ್ದ ಸಾಲುಮರದ ತಿಮ್ಮಕ್ಕ, ಹುಲಿಕಲ್ ಗ್ರಾಮದ ಚಿಕ್ಕಯ್ಯರನ್ನು ವಿವಾಹವಾಗಿದ್ದರು. ಆದರೆ ದುರದೃಷ್ಟವಶಾತ್, ಇವರಿಗೆ ಮಕ್ಕಳಿರಲಿಲ್ಲ. ಹೀಗಾಗಿ ತಮಗೆ ಮಕ್ಕಳಿರದ ದುಃಖವನ್ನು ಮರೆಯಲು ರಸ್ತೆಯ ಬದಿಯಲ್ಲಿ ಆಲದ ಸಸಿಗಳನ್ನು ನೆಟ್ಟು ಅವುಗಳನ್ನೇ ಮಕ್ಕಳಂತೆ ಭಾವಿಸಿ ಬೆಳೆಸಿದ್ದರು. ಸಾಲು ಮರದ ತಿಮ್ಮಕ್ಕೆ ಎಂದೇ ಪ್ರಸಿದ್ಧರಾಗಿದ್ದ ಇವರಿಗೆ 2019ರಲ್ಲಿ ಪದ್ಮಶ್ರೀ ಲಭಿಸಿತ್ತು.
ಅನಕ್ಷರಸ್ಥೆಯಾಗಿದ್ದರೂ ಪರಿಸರ ಸಂರಕ್ಷಣೆಯಲ್ಲಿ ತಿಮ್ಮಕ್ಕ ಅವರ ಮಹತ್ತರ ಸಾಧನೆಗೆ ಹಲವಾರು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಸಂಸ್ಥೆಗಳು ಪ್ರಶಸ್ತಿ ನೀಡಿ ಸನ್ಮಾನಿಸಿವೆ. ರಾಜ್ಯೋತ್ಸವ ಪ್ರಶಸ್ತಿ, ಆರ್ಟ್ ಆಫ್ ಲಿವಿಂಗ್ ಸಂಸ್ಥೆಯಿಂದ ವಿಶಾಲಾಕ್ಷಿ ಪ್ರಶಸ್ತಿ, 2010ನೇ ಸಾಲಿನ ಪ್ರತಿಷ್ಠಿತ ‘ನಾಡೋಜ’ ಪ್ರಶಸ್ತಿ ಸೇರಿ 2019ರಲ್ಲಿ ಪದ್ಮಶ್ರೀ ಪ್ರಶಸ್ತಿ ಪ್ರಶಸ್ತಿಗೂ ಇವರು ಪಾತ್ರರಾಗಿದ್ದಾರೆ. 2020ರಲ್ಲಿ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ ತಿಮ್ಮಕ್ಕನವರಿಗೆ ಗೌರವ ಡಾಕ್ಟರೇಟ್ ನೀಡಿ ಗೌರವಿಸಿದೆ.
2026ನೇ ಸಾಲಿನ ಜೇಸಿಐ ಕಾರ್ಕಳದ ನೂತನ ಅಧ್ಯಕ್ಷರಾಗಿ ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್‌ನ ಅಧ್ಯಕ್ಷರಾಗಿರುವ ಅವಿನಾಶ್ ಜಿ. ಶೆಟ್ಟಿ, ಕಾರ್ಯದರ್ಶಿಯಾಗಿ ಸಿವಿಲ್ ಇಂಜಿನೀಯರ್ ಸುಶಾಂತ್ ಶೆಟ್ಟಿ ಹಿರಿಯಂಗಡಿ ಅವರು ಆಯ್ಕೆಯಾಗಿದ್ದಾರೆ.
ಅವಿನಾಶ್ ಜಿ. ಶೆಟ್ಟಿಯವರು ಕೆಲವು ವರ್ಷಗಳಿಂದ ಕಾರ್ಕಳದ ಆಸುಪಾಸಿನ ಸರ್ಕಾರಿ ಶಾಲೆಗಳಲ್ಲಿ ಕಲಿತು ಉನ್ನತ ಶ್ರೇಣಿಯ ಅಂಕ ಗಳಿಸಿದ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಟ್ಟು ವಿದ್ಯಾರ್ಥಿಗಳ ಜೀವನ ಬೆಳಗಿಸುವಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಅಲ್ಲದೇ, ಪ್ರತಿ ದೀಪಾವಳಿಯಂದು ಗಾಂಧಿ ಮೈದಾನದಲ್ಲಿ ಪಟಾಕಿ ಅಂಗಡಿ ಇಟ್ಟು, ಬಂದಂತಹ ಲಾಭವನ್ನು ಭಜನಾ ತಂಡಗಳ ಸಮವಸ್ತ್ರ ಸೇರಿದಂತೆ ಹತ್ತು ಹಲವು ಸಮಾಜಮುಖಿ ಕಾರ್ಯಗಳಿಗೆ ಮುಡಿಪಾಗಿಟ್ಟಿದ್ದಾರೆ.
ನ. 13ರಂದು ಜೇಸಿಐ ಕಾರ್ಯಾಲಯದಲ್ಲಿ ಜೇಸಿಐ ಅಧ್ಯಕ್ಷೆ ಶ್ವೇತಾ ಜೈನ್ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆದಿದ್ದು, ಈ ವೇಳೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ನಡೆಯಿತು. ಉಪಾಧ್ಯಕ್ಷರಾಗಿ ಸುಶ್ಮಿತಾ ರಾವ್, ರಕ್ಷಿತ್ ರಾವ್, ಶಿವ ಕುಮಾರ್, ಶಾಹಿನ್ ರಿಜ್ವಾನ್ ಖಾನ್, ರೇವತಿ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ರಿಜ್ವಾನ್ ಖಾನ್, ಕೋಶಾಧಿಕಾರಿಯಾಗಿ ಮಂಜುನಾಥ್ ಡಿ. ಅವರು ಆಯ್ಕೆಗೊಂಡರು.
ಚುನಾವಣಾಧಿಕಾರಿಯಾಗಿ ಪ್ರಚಿತ್ ಕುಮಾರ್, ಸದಸ್ಯರಾಗಿ ಡಾ. ಮುರಳೀಧರ್ ಭಟ್, ವಿಶ್ವೇಶ್ ಪ್ರಸಾದ್ ಚುನಾವಣಾ ಪ್ರಕ್ರಿಯೆ ನಡೆಸಿಕೊಟ್ಟರು. ಜೇಸಿಐ ಪೂರ್ವಾಧ್ಯಕ್ಷರು, ಸದಸ್ಯರು ಉಪಸ್ಥಿತರಿದ್ದರು.
ಕಾರ್ಕಳ ಕಾಬೆಟ್ಟು ಹಾಡಿ ಮನೆ ನಿವಾಸಿ ಆಗಿದ್ದ ಅವರು ಪತ್ನಿ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಇವರು ಕಾಬೆಟ್ಟು ಗಣೇಶೋತ್ಸವ ಸಮಿತಿಯ ಅಧ್ಯಕ್ಷರಾಗಿ ಹಲವಾರು ಸಂಘ ಸಂಸ್ಥೆಗಳಲ್ಲಿ ಸೇವೆ ಸಲ್ಲಿಸಿದ್ದಾರೆ.
ಸ್ಥಳೀಯ ಕಾಂಗ್ರೆಸ್ ಬೆಂಬಲದಿಂದ ನಡೆಯುತ್ತಿದೆಯೇ? ಎಂದು ಸಾರ್ವಜನಿಕ ವಲಯದಲ್ಲಿ ಅನುಮಾನ ಮೂಡುತ್ತಿದೆ -ರಾಕೇಶ್ ಶೆಟ್ಟಿ ಕುಕ್ಕುಂದೂರು
ಕಾರ್ಕಳ ತಾಲೂಕಿನಲ್ಲಿ ನಿರಂತರವಾಗಿ ಗೋ ಕಳ್ಳತನ, ಗೋ ಹತ್ಯೆ ಆಗುತ್ತಿದೆ. ಇದರಲ್ಲಿ ಸಿಕ್ಕ ಅಪರಾಧಿಗಳೂ ಎಲ್ಲರೂ ಕಾಂಗ್ರೆಸ್ ಕಾರ್ಯಕರ್ತರೆ. ಹಾಗಾಗಿ ಇವರಿಗೆ ಯಾರು ಬೆಂಬಲವಾಗಿ ನಿಂತಿದ್ದಾರೆ ಎಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ಮೂಡುತ್ತಿದೆ. ಕಾಂಗ್ರೆಸ್ ಸರ್ಕಾರದ ಆಡಳಿತದಲ್ಲಿ ನಿರಂತರವಾಗಿ ಕಾನೂನು ಬಾಹಿರ ಚಟುವಟಿಕೆಗಳು ನಡೆಯುತ್ತಿದೆ ಎಂದು ಗೊತ್ತಿದ್ದರೂ ಯಾರನ್ನು ಓಲೈಸುವುದಕ್ಕಾಗಿ ಅಂತ ಸಮಾಜ ಘಾತುಕ ಶಕ್ತಿಗಳಿಗೆ ಬೆಂಬಲ ನೀಡುತ್ತಿದ್ದಾರೆ? ಕೇವಲ ಓಟ್ ಬ್ಯಾಂಕ್ ರಾಜಕಾರಣಕ್ಕಾಗಿ ಅವರು ಮಾಡಿದ ಸಮಾಜ ಘಾತುಕ ಕೃತ್ಯಗಳಿಗೆ ಬೆಂಬಲಿಸಿತ್ತಿರುವುದು ಸರಿಯೇ ಎಂಬುವುದು ಎಲ್ಲೆಡೆ ಚರ್ಚೆಯಾಗುತ್ತಿದೆ.
ತಮ್ಮ ರಾಜ್ಯಾಧ್ಯಕ್ಷರು ಇಂತಹ ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವವರನ್ನು ಬ್ರದರ್ಸ್ ಎಂದಿದ್ದರು. ಇದೀಗ ಅವರ ಅನುಯಾಯಿಗಳು ತಮ್ಮ ಬ್ರದರ್ಸ್‌ಗೆ ಬೇಸರವಾಗುತ್ತದೆ ಎಂದು ಅವರು ಮಾಡುವ ದುಷ್ಕೃತ್ಯಗಳಿಗೆ ಬೆಂಬಲಿಸುತ್ತಿರುವುದು ಅರ್ಥವಾಗುತ್ತದೆ. ಇನ್ನೊಂದೆಡೆ ಕಾರ್ಕಳದ ಶಿರ್ಲಾಲು, ನಲ್ಲೂರು, ಹಾಗೂ ತೆಳ್ಳಾರಿನಲ್ಲಿ ನಡೆದ ಈ ಮೂರು ಪ್ರಕರಣಗಳಲ್ಲಿ ಭಾಗಿಯಾಗಿರುವವರು ಕಾಂಗ್ರೆಸ್‌ನಲ್ಲಿ ತೊಡಗಿಸಿಕೊಂಡಿರುವವರೇ ಆಗಿದ್ದಾರೆ. ಅಪರಾಧಿಗಳು ಮತ್ತು ಅದರ ಜೊತೆಗೆ ಮುಖ್ಯವಾಗಿ ಅವರನ್ನು ಬೆಂಬಲಿಸುವವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸಬೇಕು. ಈ ಮೂಲಕ ಮುಂದೆ ಇಂತಹ ಕೃತ್ಯಗಳಲ್ಲಿ ತೊಡಗುವರಿಗೆ ಇದೊಂದು ಪಾಠವಾಗುವಂತೆ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಈ ಮೂಲಕ ಪೊಲೀಸ್ ಇಲಾಖೆಗೆ ವಿನಂತಿಸುತ್ತೇನೆ.
ಗೋಮಾಂಸ ರಪ್ತಿನಲ್ಲಿ ಭಾರತವು ಜಗತ್ತಿನಲ್ಲಿ ಮೊದಲ ಸ್ಥಾನದಲ್ಲಿದೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು ಮೊದಲು ಈ ಬಗ್ಗೆ ಕ್ರಮ ಕೈಗೊಂಡರೆ ದೇಶದ ವಿವಿದೆಡೆಗಳಲ್ಲಿ ನಡೆಯುತ್ತಿರುವ ಗೋಹತ್ಯೆಗೆ ಕಡಿವಾಣ ಬೀಳಲು ಸಾಧ್ಯವಿದೆ, ಅಕ್ರಮ ಗೋಹತ್ಯೆ ನಿಗ್ರಹವನ್ನು ಕೇಂದ್ರ ಸರ್ಕಾರ ಕಟ್ಟುನಿಟ್ಟಾಗಿ ಜಾರಿಗೊಳಿಸಲಿ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಿಳಿಸಿದ್ದಾರೆ.
ಸಾಂಬಾರ ಪದಾರ್ಥಗಳ ರಪ್ತಿಗೆ ಹೆಸರುವಾಸಿಯಾಗಿದ್ದ ಭಾರತವು ಪ್ರಸ್ತುತ ಬಿಜೆಪಿ ಆಡಳಿತದಲ್ಲಿ ಗೋಮಾಂಸ ರಪ್ತಿಗೆ ಜಗತ್ತಿನಲ್ಲಿ ಮೊದಲ ಸ್ಥಾನವನ್ನು ಪಡೆದಿರುವುದು ಅತ್ಯಂತ ದುರದೃಷ್ಟಕರ. ಭಾಷಣದಲ್ಲಿ ಗೋಪ್ರೇಮವನ್ನು ತೋರ್ಪಡಿಸಿ ಲಾಭದ ಆಸೆಗೆ ಗೋಮಾಂಸವನ್ನು ರಪ್ತು ಮಾಡುವವರಿಂದ ಕಾಂಗ್ರೆಸ್ ಪಾಠ ಕಲಿತುಕೊಳ್ಳಬೇಕಿಲ್ಲ.
ಅಕ್ರಮ ಗೋಹತ್ಯೆ ಪ್ರಕರಣದಲ್ಲಿ ಕೇಳಿ ಬರುತ್ತಿರುವ ಹೆಸರುಗಳನ್ನು ಕಾಂಗ್ರೆಸ್ ಪಕ್ಷದ ಕಾರ್ಯಕರ್ತರು ಎಂದು ಆರೋಪ ಮಾಡಿರುವ ಸುನೀಲ್ ಕುಮಾರ್ ಹೇಳಿಕೆಯಲ್ಲಿ ಯಾವುದೇ ಹುರುಳಿಲ್ಲ. ಗೋವಿನ ರಕ್ಷಣೆಯ ಹೆಸರು ಹೇಳಿಕೊಂಡು ನಾಲ್ಕು ಅವಧಿಗೆ ಶಾಸಕರಾಗಿ ಅಧಿಕಾರ ಅನುಭವಿಸಿದ ಸುನಿಲ್ ಕುಮಾರ್ ಶಾಸಕರಾಗಿರುವ ಕ್ಷೇತ್ರದಲ್ಲಿಯೇ ಈ ಪರಿ ಗೋಹತ್ಯೆ ನಡೆಯಲು ಅವರ ಪರೋಕ್ಷ ಬೆಂಬಲವೇ ಕಾರಣ, ಮುಂದಿನಿಂದ ಗೋಭಕ್ತಿ ಹಿಂಬಾಗಲಿನಿಂದ ಗೋಹಂತಕರೊಂದಿಗೆ ದೋಸ್ತಿ ಇದು ಅವರ ನೀತಿಯಾಗಿರುದೇ ಅಕ್ರಮ ಗೋಹತ್ಯೆಗೆ ಕಾರಣ. ನಾಲ್ಕು ಅವಧಿಗೆ ಶಾಸಕರಾಗಿರುವ ಆಡಳಿತರೂಡ ಪರೋಕ್ಷ ಬೆಂಬಲವೇ ಇದಕ್ಕೆ ನೇರ ಹೊಣೆಯಾಗಿದೆ.
ಕಾಂಗ್ರೆಸ್ ಪಕ್ಷ ಯಾವತ್ತೂ ಕೂಡ ಅಕ್ರಮಗಳಿಗೆ ಬೆಂಬಲ ನೀಡಿದ ಪಕ್ಷವಲ್ಲ, ಇನ್ನು ಮುಂದೆಯೂ ಅಕ್ರಮ ಹಾಗೂ ಸಮಾಜಘಾತುಕ ಕೃತ್ಯಗಳನ್ನು ನಡೆಸುವವರಿಗೆ ಬೆಂಬಲ ನೀಡುವುದಿಲ್ಲ ಎನ್ನುವುದನ್ನು ಸುನೀಲ್ ಕುಮಾರ್ ಅರ್ಥಮಾಡಿಕೊಂಡು ಹೇಳಿಕೆ ನೀಡಬೇಕು ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ 15 ವರ್ಷದ ಬಾಲಕಿಯೊಬ್ಬಳು ನ. 12ರಂದು ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.
ಮೃತ ವಿದ್ಯಾರ್ಥಿನಿಯನ್ನು ಬೆಳ್ತಂಗಡಿ ತಾಲೂಕಿನ ಇಳಂತಿಲ ಗ್ರಾಮದ ಪಾರಡ್ಕ ನಿವಾಸಿ ಶ್ರೀಧರ ಕುಂಬಾರ ಅವರ ಮಗಳು ಹರ್ಷಿತಾ (15) ಎಂದು ಗುರುತಿಸಲಾಗಿದೆ.
ಉಪ್ಪಿನಂಗಡಿ ಪ್ರೌಢಶಾಲೆಯಲ್ಲಿ 10ನೇ ತರಗತಿಯಲ್ಲಿ ಓದುತ್ತಿದ್ದ ಹರ್ಷಿತಾ ಅವರು, ನ. 4ರಂದು ತಲೆನೋವು ಎಂದು ಶಾಲೆಗೆ ರಜೆ ಹಾಕಿ ಮನೆಯಲ್ಲಿದ್ದಳು. ಈ ವೇಳೆ ಮನೆಯಲ್ಲಿ ಕೀಟನಾಶಕವನ್ನು ಸೇವಿಸಿ ಅಸ್ವಸ್ಥಳಾಗಿದ್ದ ಅವಳನ್ನು ತಕ್ಷಣವೇ ತಾಯಿ ಚಿಕಿತ್ಸೆಗೆಂದು ಪುತ್ತೂರಿನ ಆಸ್ಪತ್ರೆಗೆ ದಾಖಲಿಸಿದರು. ನಂತರ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹರ್ಷಿತಾ ಚಿಕಿತ್ಸೆ ಫಲಕಾರಿಯಾಗದೇ ನ. 12ರಂದು ಮೃತಪಟ್ಟಿದ್ದಾರೆ.
ಕಡಬದ ರಾಜೇಶ್ ಎಂಬಾತ ಹರ್ಷಿತಾಗೆ ಫೋನ್ ಮಾಡಿ ಕಿರುಕುಳ ನೀಡಿರುವ ಸಾಧ್ಯತೆ ಇದೆ. ಹೀಗಾಗಿ ಹರ್ಷಿತಾ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಸಂಶಯವಿದೆ ಎಂದು ಆಕೆಯ ತಂದೆ ಶ್ರೀಧರ ಕುಂಬಾರ ಅವರು ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಈ ಬಗ್ಗೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಮಂಗಳೂರಿನ ಮಾಲ್‌ವೊಂದರಲ್ಲಿ ಉದ್ಯೋಗಿಯಾಗಿರುವ 24 ವರ್ಷದ ಯುವತಿಯೊಬ್ಬರು ನವೆಂಬರ್ 11ರ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಯುವತಿಯನ್ನು ಜಪ್ಪು ಸೂಟರ್ ಪೇಟೆಯ ನಿವಾಸಿ ಕುಮಾರ್ ಅವರ ಪತ್ನಿ ಸುಮಾ ಎನ್. (24) ಎಂದು ಗುರುತಿಸಲಾಗಿದೆ.
ಸುಮಾ ಅವರು ಸೋಮವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಹೊರಟಿದ್ದರು, ಆದರೆ ಅವರು ಕೆಲಸದ ಸ್ಥಳವನ್ನು ತಲುಪಿಲ್ಲ. ಅವರ ಪತಿ ಕುಮಾರ್ ಅವರು ಸುಮಾ ಅವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ, ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಸಂಬಂಧಿಕರು ಮತ್ತು ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಕಾರಣ, ಕುಮಾರ್ ಅವರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಸುಮಾ ಅವರು ಸುಮಾರು 5 ಅಡಿ ಎತ್ತರ, ಮಧ್ಯಮ ಮೈಕಟ್ಟು ಮತ್ತು ಗೋಧಿ ಬಣ್ಣದ ಮೈಕಟ್ಟು ಹೋಂದಿದ್ದಾರೆ. ಅವರು ಕೊನೆಯದಾಗಿ ಕಪ್ಪು ಪ್ಯಾಂಟ್ ಮತ್ತು ಕಪ್ಪು ಉದ್ದ ತೋಳಿನ ಶರ್ಟ್ ಧರಿಸಿದ್ದರು. ಅವರು ಕನ್ನಡ, ತುಳು ಮತ್ತು ಹಿಂದಿ ಭಾಷೆಗಳಲ್ಲಿ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.