
ಮಂಗಳೂರಿನ ಮಾಲ್‌ವೊಂದರಲ್ಲಿ ಉದ್ಯೋಗಿಯಾಗಿರುವ 24 ವರ್ಷದ ಯುವತಿಯೊಬ್ಬರು ನವೆಂಬರ್ 11ರ ಬೆಳಗ್ಗೆ ಕೆಲಸಕ್ಕೆಂದು ಮನೆಯಿಂದ ಹೊರಟು ನಾಪತ್ತೆಯಾಗಿದ್ದಾರೆ.
ನಾಪತ್ತೆಯಾದ ಯುವತಿಯನ್ನು ಜಪ್ಪು ಸೂಟರ್ ಪೇಟೆಯ ನಿವಾಸಿ ಕುಮಾರ್ ಅವರ ಪತ್ನಿ ಸುಮಾ ಎನ್. (24) ಎಂದು ಗುರುತಿಸಲಾಗಿದೆ.
ಸುಮಾ ಅವರು ಸೋಮವಾರ ಬೆಳಿಗ್ಗೆ ಕರ್ತವ್ಯಕ್ಕೆ ಹಾಜರಾಗಲು ಮನೆಯಿಂದ ಹೊರಟಿದ್ದರು, ಆದರೆ ಅವರು ಕೆಲಸದ ಸ್ಥಳವನ್ನು ತಲುಪಿಲ್ಲ. ಅವರ ಪತಿ ಕುಮಾರ್ ಅವರು ಸುಮಾ ಅವರಿಗೆ ಕರೆ ಮಾಡಲು ಪ್ರಯತ್ನಿಸಿದಾಗ, ಅವರ ಮೊಬೈಲ್ ಸ್ವಿಚ್ ಆಫ್ ಆಗಿತ್ತು. ನಂತರ ಸಂಬಂಧಿಕರು ಮತ್ತು ಸ್ನೇಹಿತರ ಬಳಿ ವಿಚಾರಿಸಿದರೂ ಯಾವುದೇ ಮಾಹಿತಿ ಲಭ್ಯವಾಗದ ಕಾರಣ, ಕುಮಾರ್ ಅವರು ಪಾಂಡೇಶ್ವರ ಪೊಲೀಸ್ ಠಾಣೆಯಲ್ಲಿ ನಾಪತ್ತೆ ದೂರು ದಾಖಲಿಸಿದ್ದಾರೆ.
ಸುಮಾ ಅವರು ಸುಮಾರು 5 ಅಡಿ ಎತ್ತರ, ಮಧ್ಯಮ ಮೈಕಟ್ಟು ಮತ್ತು ಗೋಧಿ ಬಣ್ಣದ ಮೈಕಟ್ಟು ಹೋಂದಿದ್ದಾರೆ. ಅವರು ಕೊನೆಯದಾಗಿ ಕಪ್ಪು ಪ್ಯಾಂಟ್ ಮತ್ತು ಕಪ್ಪು ಉದ್ದ ತೋಳಿನ ಶರ್ಟ್ ಧರಿಸಿದ್ದರು. ಅವರು ಕನ್ನಡ, ತುಳು ಮತ್ತು ಹಿಂದಿ ಭಾಷೆಗಳಲ್ಲಿ ಮಾತನಾಡುತ್ತಾರೆ ಎಂದು ಪೊಲೀಸರು ತಿಳಿಸಿದ್ದಾರೆ.



